ಕುಣಿಗಲ್: ರಾಜ್ಯದಲ್ಲಿನ ಬರ ನಿರ್ವಹಣೆಗೆ ರಾಜ್ಯಸರ್ಕಾರ ಕೇಂದ್ರ ಸಕಾರದ ಮೇಲೆ ಆರೋಪ ಮಾಡುವುದರಲ್ಲೆ ಕಾಲ ಕಳೆಯುವ ಬದಲು ಇರುವ ಸಂಪನ್ಮೂಲ ಕ್ರೂಢೀಕರಿಸಿ ತುರ್ತಾಗಿ ರೈತರ ನೆರವಿಗೆ ಬರಬೇಕಿದೆ ಎಂದು ಮಾಜಿ ಸಚಿವ ಡಿ.ನಾಗರಾಜಯ್ಯ ಹೇಳಿದರು.
ತಾಲೂಕಿನ ಯಡಿಯೂರು ಹೋಬಳಿಯಲ್ಲಿ ಜೆಡಿಎಸ್ ವತಿಯಿಂದ ಹಮ್ಮಿಕೊಳ್ಳಲಾಗಿರುವ ಬರ ಅಧ್ಯಯನದಲ್ಲಿ ತುರುವೇಕೆರೆ ಶಾಸಕರೊಂದಿಗೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ನಷ್ಟವಾಗಿರುವ ರೈತರ ಅಹವಾಲು ಆಲಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ತಾಲೂಕು ಸೇರಿದಂತೆ ರಾಜ್ಯದ ಬಹುತೇಕ ಕಡೆಗಳಲ್ಲಿ ಬರ ಘೋಷಣೆಯಾಗಿದೆ, ರಾಜ್ಯಸರ್ಕಾರ ಬರ ಘೋಷಣೆ ಮಾಡಿ ಅದಕ್ಕೆ ತಕ್ಕಂತೆ ಕಾರ್ಯತಂತ್ರ, ಪರಿಹಾರ ಕಾರ್ಯಕ್ರಮ ಕೈಗೊಳ್ಳದೆ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡಿಕೊಂಡು ಕಾಲ ಕಳೆಯುತ್ತಿದೆ, ತುರ್ತಾಗಿ ಮೇವು ಕೇಂದ್ರ ಸ್ಥಾಪಿಸುವ ಜೊತೆಯಲ್ಲಿ ಬೆಳೆ ನಷ್ಟದಿಂದ ಕಂಗಾಲಾಗಿರುವ ರೈತನ ನೆರವಿಗೆ ಧಾವಿಸಬೇಕಿದೆ, ಆದರೆ ರಾಜ್ಯಸರ್ಕಾರ ಈ ಕ್ರಮ ಕೈಗೊಳ್ಳದೆ ದೋಷಾರೋಪಣೆಯಲ್ಲಿ ಕಾಲ ಕಳೆಯುತ್ತಿದೆ, ತಾಲೂಕನ್ನು ಪ್ರತಿನಿಧಿಸುವ ಶಾಸಕ, ಸಂಸದರು ಬರ ನಿರ್ವಹಣೆ ನಿಟ್ಟಿನಲ್ಲಿ ಯಾವುದೇ ಅಗತ್ಯ ಕ್ರಮ ಕೈಗೊಲ್ಲ, ಭಾದಿತ ಜನರ ನೆರವಿಗೆ ಬಾರದೆ ಇರುವುದು ಖಂಡನೀಯ, ದೊಡ್ಡಕೆರೆಯಲ್ಲಿ ನೀರಿದ್ದರೂ ಅಚ್ಚುಕಟ್ಟು ಪ್ರದೇಶಕ್ಕೆ 17ವರ್ಷ ದಿಂದ ಬೆಳೆಗೆ ನೀರು ಬಿಟ್ಟಿಲ್ಲ, ಕೆರೆ, ಕಾಲುವೆ ನಿರ್ವಹಣೆಗೆ ಬಂದಂದತಹ ನೂರು ಕೋಟಿ ಅನುದಾನವನ್ನು ಕಾಲುವೆ ಅಭಿವೃದ್ಧಿಗೊಳಿಸಿದೆ ರಸ್ತೆಗಳ ಅಭಿವೃದ್ಧಿ ನೆಪದಲ್ಲಿ ಅನುದಾನ ಪೋಲು ಮಾಡಿದ್ದಾರೆ, ಇದರಿಂದಾಗಿ ಕೆರೆಯಲ್ಲಿ ನೀರಿದ್ದರೂ ಅಚ್ಚುಕಟ್ಟುದಾರರು ಬೆಳೆ ಬೆಳೆಯಲಾರದೆ ಪರದಾಡುತ್ತಿದ್ದಾರೆ, ನಾಲೆ ಅಭಿವೃದ್ಧಿಗೆ ಬರುವ ಅನುದಾನವನ್ನು ರಸ್ತೆಗೆ ಹಾಕುವ ಮೂಲಕ ಶಾಸಕರು ಅನುದಾನ ಪೋಲು ಮಾಡುತ್ತಿದ್ದು, ಬೇರೆ ಇಲಾಖೆಯ ಹಣವೂ ಬರುವುದರಿಂದ ನಾಲೆ ಕಾಮಗಾರಿಗೆ ಬರುವ ಅನುದಾನ ನಾಲೆಗೆ ವ್ಯಯಿಸಿ ರೈತರಿಗೆ ನೀರು ಕೊಡಲು ಕ್ರಮ ಕೈಗೊಳ್ಳಬೇಕೆಂದರು.
ತುರುವೇಕೆರೆ ಶಾಸಕ ಕೃಷ್ಣಪ್ಪ ಮಾತನಾಡಿ, ಬರ ನಿರ್ವಹಣೆಯಲ್ಲಿ ಜಿಲ್ಲಾಡಳಿತ ವಿಫಲವಾಗಿದೆ, ಜಿಲ್ಲಾ ಉಸ್ತುವಾರಿ ಸಚಿವರು ಇದುವರೆಗೂ ಯಾವುದೆ ತಾಲೂಕಿನಲ್ಲಿ ಬರ ಪರಿಸ್ಥಿತಿ ಪರಿಶೀಲನೆ ಮಾಡಿಲ್ಲ, ಮಾಜಿ ಪ್ರಧಾನಿ ದೇವೇಗೌಡರ ಸೂಚನೆ ಮೇರೆಗೆ ಜೆಡಿಎಸ್ ವತಿಯಿಂದ ಬರ ಅಧ್ಯಯನ ನಡೆಸಿ ವರದಿ ಸಿದ್ಧಪಡಿಸಿ ಪ್ರಧಾನಿಗಳ ಗಮನ ಸೆಳೆದು ಅನುದಾನ ಮಂಜೂರಿಗೆ ಯತ್ನಿಸಲಾಗುವುದು, ರಾಜ್ಯ ಸರ್ಕಾರದ ಸಚಿವರು, ಅಧಿಕಾರಿಗಳು ಸಮಗ್ರ ಬರಸ್ಥಿತಿಯ ವರದಿ ನೀಡದೆ ಸಾವಿರಾರು ಕೋಟಿ ಅನುದಾನ ನೀಡುವಂತೆ ಕೇಂದ್ರಕ್ಕೆ ಕೇಳುತ್ತಿರುವುದರಲ್ಲಿ ಅರ್ಥ ಇಲ್ಲ, ವರದಿ ನೀಡದೆಯೆ ಬರ ಅನುದಾನ ಕೇಳುತ್ತಿರುವ ಕಾಂಗ್ರೆಸ್ ನ ಸರ್ಕಾರದ ನಡೆ ಖಂಡನೀಯ, ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುತ್ತಾ ರಾಜ್ಯಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳುವುದು ಸರಿಯಲ್ಲ, ಕೂಡಲೆ ರಾಜ್ಯ ಸರ್ಕಾರ ಬರ ನಿರ್ವಹಣೆ ನಿಟ್ಟಿನಲ್ಲಿ ಜನ, ಜಾನುವಾರುಗಳ ಸಮಸ್ಯೆಗೆ ಸ್ಪಂದಿಸಬೇಕು, ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿದ್ದಾಗ ಕೆಂದ್ರದ ನೆರವಿಲ್ಲದೆ ರೈತರ ಸಾವಿರಾರು ಕೋಟಿ ರೂ. ಸಾಲ ಮನ್ನ ಮಾಡಿದ್ದರು, ಇವರಿಗೆ ಇಚ್ಚಾಶಕ್ತಿ ಕೊರತೆ ಎಂದರು.
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಗಂಗಣ್ಣ, ತಾಲೂಕು ಜೆಡಿಎಸ್ ಅಧ್ಯಕ್ಷ ಜಗದೀಶ್, ಪ್ರಮುಖರಾದ ರಮೇಶ್, ಪ್ರಕಾಶ್, ಶಾಂತಕುಮಾರ್, ನಾಗರಾಜ, ಶ್ರೀನಿವಾಸ್, ಯಡಿಯೂರು ದೀಪು ಇತರರು ಇದ್ದರು.
Comments are closed.