ಕುಣಿಗಲ್: ತಾಲೂಕಿನಾದ್ಯಂತ ಕೆರೆ, ಸ್ಮಶಾನ, ಶಾಲೆ, ರಸ್ತೆ ಒತ್ತುವರಿ ಗುರುತಿಸಿ, ಸಂರಕ್ಷಣೆ ಮಾಡುವ ಕೆಲಸ ತುರ್ತಾಗಿ ಆಗಬೇಕಿದೆ, ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ವಹಿಸಬೇಕೆಂದು ಸಂಸದ ಡಿ.ಕೆ.ಸುರೇಶ್ ಹೇಳಿದರು.
ಹುತ್ರಿದುರ್ಗ ಹೋಬಳಿಯ ಯಲಿಯೂರು ಗ್ರಾಮ ಪಂಚಾಯಿತಿ ಸೇರಿದಂತೆ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿದ್ದ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿ, ಮುಂದಿನ ಪೀಳಿಗೆಯ ಉತ್ತಮ ಭವಿಷ್ಯಕ್ಕೆ ನಾವು ಕೆರೆ, ಶಾಲೆ, ರಸ್ತೆ, ಸ್ಮಶಾನ ಸೇರಿದಂತೆ ಸಾರ್ವಜನಿಕ ಪ್ರದೇಶದ ಒತ್ತುವರಿ ಗುರುತಿಸಿ ತೆರವುಗೊಳಿಸಬೇಕಿದೆ, ರಾಮನಗರದ ಐದು ತಾಲೂಕಿನಲ್ಲೂ ಕೆರೆ ಒತ್ತುವರಿ ಗುರುತಿಸಿ ಸಂರಕ್ಷಣೆ ಕಾರ್ಯಕ್ಕೆ ಕ್ರಮ ಕೈಗೊಳ್ಳಲಾಗಿದೆ, ತಾಲೂಕಿನಲ್ಲೂ ಈ ನಿಟ್ಟಿನಲ್ಲಿ ತಹಶೀಲ್ದಾರ್, ತಾಪಂ ಇಒ, ಸರ್ವೇ ಇಲಾಖೆಯವರು ಕ್ರಮ ಕೈಗೊಳ್ಳಬೇಕು, ತಹಶೀಲ್ದಾರ್, ತಾಪಂ ಇಒ ಕಾನೂನಿನ ಚೌಕಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಲ್ಲಿ ಜನತೆಯ ಸಮಸ್ಯೆ ಬಗೆ ಹರಿಯುತ್ತದೆ, ಜನತೆಯ ಸಮಸ್ಯೆಗೆ ಸ್ಪಂದಿಸಿ, ಜನಪರ ಆಡಳಿತ ನೀಡುವುದು ಕಾಂಗ್ರೆಸ್ ಸರ್ಕಾರದ ಪ್ರಥಮ ಆದ್ಯತೆಯಾಗಿದ್ದು ಆಯಕಟ್ಟಿನ ಅಧಿಕಾರಿಗಳು ಜನರ ಸಮಸ್ಯೆಗೆ ಸ್ಪಂದಿಸಬೇಕು ಎಂದರು.
ತಹಶೀಲ್ದಾರ್ ಕೇವಲ ವಿಎ, ಆರ್ ಐ ಮಾತು ಕೇಳಿಕೊಂಡು ಕುಳಿತರೆ ಆಗದು, ಗ್ರಾಮಗಳ ಮಟ್ಟದಲ್ಲಿ ಐದು ಗ್ರಾಮಕ್ಕೊಂದರಂತೆ ಕಂದಾಯ ಅದಾಲತ್ ನಿರಂತರವಾಗಿ ನಡೆಸುವ ಮೂಲಕ ಜನರ ವಿಶೇಷವಾಗಿ ಗ್ರಾಮಾಂತರ ಪ್ರದೇಶದ ಜನರ ಸಮಸ್ಯೆ ಬಗೆಹರಿಸಬೇಕು, ಸರ್ಕಾರದ ವಿದ್ಯುತ್ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ವಿಶೇಷ ಯೋಜನೆ ರೂಪಿಸಿದ್ದು ತಾಲೂಕಿನ 14 ವಿದ್ಯುತ್ ವಿತರಣಾ ಉಪ ಕೇಂದ್ರಗಳ ಪೈಕಿ 10 ಉಪ ಕೇಂದ್ರದ ವ್ಯಾಪ್ತಿಯಲ್ಲಿ ರೈತರು ಸೇರಿದಂತೆ ಖಾಸಗಿಯವರಿಂದ ಸೋಲಾರ್ ಪಾರ್ಕ್ ಸ್ಥಾಪನೆಗೆ ಯೋಜನೆ ರೂಪಿಸಿದ್ದು ಒಂದು ಕೇಂದ್ರದಿಂದ 5 ರಿಂದ 10 ಮೆ. ವ್ಯಾಟ್ ವಿದ್ಯುತ್ ಉತ್ಪಾದಿಸಿ ಆ ಉಪ ಕೇಂದ್ರದ ಮೂಲಕ ರೈತರಿಗೆ ಹಗಲಿನಲ್ಲೆ ಪೂರ್ತಾ ವಿದ್ಯುತ್ ಸರಬರಾಜು ಮಾಡಲಾಗುವುದು, ಯಲಿಯೂರು ಗ್ರಾಪಂ ವ್ಯಾಪ್ತಿಯಲ್ಲಿ 11 ಎಕರೆ ಜಾಗ ಗುರುತಿಸಿ ನಿವೇಶನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಶೀಘ್ರದಲ್ಲಿ ಅರ್ಹರಿಗೆ ನಿವೇಶನ ವಿತರಣೆ ಮಾಡಲಾಗುವುದು, ಪಕ್ಷಾತೀತವಾಗಿ ಜನರ ಸಮಸ್ಯೆ ಬಗೆಹರಿಸಿ ಎಲ್ಲರ ಅಭಿವೃದ್ಧಿ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕ್ರಮಕೈಗೊಳ್ಳುತ್ತಿದೆ ಎಂದರು.
ಶಾಸಕ ಡಾ.ರಂಗನಾಥ್ ಮಾತನಾಡಿ, ತಾಲೂಕು ಮಟ್ಟದ ಅಧಿಕಾರಿಗಳು ಸರ್ಕಾರದ ಗ್ಯಾರಂಟಿ ಯೋಜನೆಯಿಂದ ವಂಚಿತವಾಗಿರುವ ಅರ್ಹರನ್ನು ಗುರುತಿಸಿ ಅವರಿಗೆ ಯೋಜನೆ ತಲುಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸಬೇಕು, ಗೃಹ ಜ್ಯೋತಿ ಯೋಜನೆಯಡಿಯಲ್ಲಿ ಇನ್ನು ಬಹಳಷ್ಟು ಮಂದಿಗೆ ಸವಲತ್ತು ಸಿಕ್ಕಿಲ್ಲ, ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಇರುವ ತಾಂತ್ರಿಕ ತೊಂದರೆ ಬಗಹರಿಸಿ ಯೋಜನೆ ನೆರವು ಸಿಗುವಂತೆ ಮಾಡಬೇಕು, ಗ್ರಾಮ ಪಂಚಾಯಿತಿಯಲ್ಲಿ ಸಿಗುವ ಯೋಜನೆಗಳು ಜನತೆಗೆ ವಿಳಂಬವಾಗದ ರೀತಿಯಲ್ಲಿ ತಲುಪಿಸಲು ಅಧಿಕಾರಿಗಳು ಶ್ರಮಿಸಬೇಕೆಂದರು.
ಗ್ರಾಮಸ್ಥರು ಯಲಿಯೂರು ಗ್ರಾಪಂ ಪಿಡಿಒ ಸಂಜೆ ವೇಳೆಗೆ ಬರುತ್ತಾರೆ, ಇವರಿಂದ ಗ್ರಾಮದ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ, ನರೇಗಾ ಯೋಜನೆಯಡಿಯಲ್ಲಿ ಕಾಮಗಾರಿ ಮಾಡದೆ ಬಿಲ್ ನೀಡಿದ್ದಾರೆ, ಗ್ರಾಪಂನ ಇತರೆ ದಾಖಲೆಗಳ ಅಧಿಕಾರ ಪಡೆಯದೆ ಕೇವಲ ಹಣ ಸೆಳೆಯುವ ಅಧಿಕಾರ ಮಾತ್ರ ಪಡೆದಿದ್ದಾರೆ, ಹೀಗಾಗಿ ಖಾಯಂ ಪಿಡಿಒ ನಿಯೋಜಿಸಿ, ಪ್ರಬಾರ ಪಿಡಿಒ ಬೇರೆಡೆ ಕಳಿಸಿ ಎಂದು ಅಹವಾಲು ಸಲ್ಲಿಸಿದ್ದು, ವೇದಿಕೆಯಲ್ಲೆ ಅಸಮಧಾನ ವ್ಯಕ್ತಪಡಿಸಿದರು, ಸಂಸದರು ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಜರುಗಿಸುವಂತೆ ಇಒಗೆ ಸೂಚನೆ ನೀಡಿದರು, ತಹಶೀಲ್ದಾರ್ ವಿಶ್ವನಾಥ್, ತಾಪಂ ಇಒ ಜೋಸೆಫ್, ಗ್ರಾಪಂ ಅಧ್ಯಕ್ಷ ಮಹಮದ್ ಜಹೀರ್, ಉಪಾಧ್ಯಕ್ಷೆ ನಾಗವೇಣಿ, ಸದಸ್ಯರಾದ ನಾರಾಯಣ, ಮಂಜುನಾಥ, ವಸಂತಕುಮಾರ, ಪ್ರಮುಖರಾದ ಇಪ್ಪಾಡಿ ವಿಶ್ವನಾಥ, ಹೊನ್ನೇಗೌಡ, ಗಂಗಶಾನಯ್ಯ, ನಾರಾಯಣ, ಕೋಘಟ್ಟ ರಾಜಣ್ಣ, ಬೇಗೂರು ನಾರಾಯಣ, ರಂಗಣ್ಣಗೌಡ ಇತರರು ಇದ್ದರು.
Comments are closed.