ತುಮಕೂರು: ವೀರ ವನಿತೆ ಒನಕೆ ಓಬವ್ವ ಅವರ ಜೀವನ ಸ್ವಾಮಿ ನಿಷ್ಠೆ, ಧೈರ್ಯ ಮತ್ತು ತ್ಯಾಗಗಳ ಸಂಗಮ ಎಂದು ತುಮಕೂರು ಉಪ ವಿಭಾಗಾಧಿಕಾರಿ ಗೌರವ್ ಕುಮಾರ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.
ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾ ನಗರ ಪಾಲಿಕೆ, ಟೂಡಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಇವುಗಳ ಸಹಕಾರದಲ್ಲಿ ಹಮ್ಮಿಕೊಂಡಿದ್ದ ಒನಕೆ ಓಬವ್ವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಓರ್ವ ಮಹಿಳೆಯಲ್ಲಿ ಈ ಎಲ್ಲಾ ಗುಣ ಅಡಗಿರುವುದು ಅಪರೂಪ, ಹಾಗಾಗಿ ಒನಕೆ ಓಬವ್ವ ಮಹಿಳೆಯರಿಗೆ ಸ್ಪೂರ್ತಿಯಾಗಿದ್ದಾರೆ ಎಂದರು.
ಹದಿನೆಂಟನೇ ಶತಮಾನದಲ್ಲಿ ರಾಷ್ಟ್ರೀಯತೆಯ ಪರಿಕಲ್ಪನೆಯೇ ಇಲ್ಲದ ಕಾಲದಲ್ಲಿ, ತಾನು ಬಾಳಿ, ಬದುಕುತ್ತಿರುವ ಕೋಟೆಗೆ ಧಕ್ಕೆಯಾಗುತ್ತಿದೆ ಎಂಬುದನ್ನು ಅರಿತ ಓಬವ್ವ, ತನ್ನ ಕೈಗೆ ಸಿಕ್ಕ ಒನಕೆಯನ್ನೇ ಆಯುಧವನ್ನಾಗಿ ಮಾಡಿಕೊಂಡು, ಇಡೀ ಹೈದರಾಲಿಯ ಸೈನ್ಯದ ರುಂಡವನ್ನು ಚೆಂಡಾಡಿದ ಆ ಘಟನೆ ನಿಜಕ್ಕೂ ಮೈನವಿರೇಳಿಸುವಂತಹದ್ದು, ಕೇವಲ ಛಲವಾದಿ ಯಲ್ಲದೆ ಎಲ್ಲಾ ಸಮುದಾಯಗಳಿಗೆ ಮಹಿಳೆಯರು ಮತ್ತು ಪುರುಷರಿಗೆ ಸ್ಪೂರ್ತಿ ನೀಡುವಂತಹ ವಿಚಾರ, ಇದನ್ನು ಅರಿತೇ ಸರಕಾರ 2021ರಲ್ಲಿ ನಾವೆಲ್ಲರೂ ಚಿಕ್ಕಂದಿನಲ್ಲಿ ಕೇಳಿ, ಹಾಡಿ ಬೆಳೆದಂತಹ ಕನ್ನಡ ನಾಡಿನ ವೀರ ರಮಣಿಯ ಗಂಡು ಬೀಡಿನ ವೀರ ರಾಣಿಯ ಚರಿತೆಯನ್ನು ಯುವ ಜನತೆಗೆ ಪರಿಚಯಿಸುವ ನಿಟ್ಟಿನಲ್ಲಿ ಓಬವ್ವ ಜಯಂತಿ ಆಚರಿಸಿಕೊಂಡು ಬರುತ್ತಿದೆ ಎಂದು ಗೌರವಕುಮಾರ್ ಶೆಟ್ಟಿ ನುಡಿದರು.
ಸಿದ್ದಗಂಗಾ ಮಹಿಳಾ ಪ್ರಥಮದರ್ಜೆ ಕಾಲೇಜಿನ ನಿವೃತ್ತ ಕನ್ನಡ ಉಪನ್ಯಾಸಕಿ ಡಾ.ಬಿ.ಎಸ್.ಮಂಜುಳ ಮಾತನಾಡಿ, ಒನಕೆ ಓಬವ್ವ ಮಹಿಳಾ ಸಬಲೀಕರಣದ ಸಂಕೇತ, ಪ್ರತಿ ಗಂಡಸಿನ ಯಶಸ್ಸಿನ ಹಿಂದೆ ಓರ್ವ ಮಹಿಳೆ ಇರುತ್ತಾಳೆ ಎಂಬುದಕ್ಕೆ ಒನಕೆ ಓಬವ್ವ ಸಾಕ್ಷಿಯಾಗಿದ್ದು, ಆಹಾರ ಪದಾರ್ಥಗಳನ್ನು ಪುಡಿ ಮಾಡಲು ಬಳಸುವ ಒನಕೆಯನ್ನೇ ಆಯುಧವನ್ನಾಗಿಸಿ ಇಡೀ ಶತೃ ಸೈನ್ಯವನ್ನು ಸದೆ ಬಡಿದ ಕಥೆ ನಿಜಕ್ಕೂ ನಮಗೆಲ್ಲರಿಗೂ ಸ್ಪೂರ್ತಿ ನೀಡುವಂತಹದ್ದು, ಕುಣಗಲ್ ಪುಟ್ಟಣ ಅವರು ಇತಿಹಾಸದ ಪುಟಗಳಲ್ಲಿ ಮರೆಯಾಗಿದ್ದ ಓಬವ್ವನ ವೀರ ಸಾಹಸವನ್ನು ಒಂದು ಹಾಡಿನ ಮೂಲಕ ಜನತೆಯ ಮುಂದಿಡುವ ಮೂಲಕ ಶತ ಶತಮಾನಗಳ ಕಾಲ ಜನರ ಮನಸ್ಸಿನಲ್ಲಿ ಉಳಿಯುವಂತೆ ಮಾಡಿದ್ದಾರೆ, ಅಲ್ಲದೆ ಸಾಂದರ್ಭಿಕವಾಗಿ ಎದುರಾಗುವ ಕಷ್ಟಗಳಿಗೆ ಅಂಜಿ ಓಡಿ ಹೋಗದೆ ಧೈರ್ಯವಾಗಿ ಎದುರಿಸಿ ನಿಂತರೆ ಗೆಲುವು ನಮ್ಮದೆ ಎಂಬ ಸಂದೇಶ ಸಹ ಒನಕೆ ಓಬವ್ವ ಕಥೆಯಿಂದ ನಾವೆಲ್ಲರೂ ಕಲಿಯಬಹುದಾಗಿದೆ ಎಂದರು.
ಶ್ರೀಸಿದ್ದಾರ್ಥ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಮಹೇಶ್ ಕುಮಾರ್ ವಿಶೇಷ ಉಪನ್ಯಾಸ ನೀಡಿ, ಒನಕೆ ಓಬವ್ವಳದ್ದು ಬಹುಮುಖ ಪ್ರತಿಭೆ, ಒಳ್ಳೆಯ ಚಿತ್ರ ಕಲಾವಿದೆಯಾಗಿ ಪಾಳೇಗಾರರಿಂದಲೇ ಪ್ರಶಂಸೆಗೆ ಒಳಗಾದ ಮಹಿಳೆ, ತನ್ನ ಜೀವದ ಹಂಗು ತೊರೆದು ಕೋಟೆ ರಕ್ಷಿಸಿದ ಓಬವ್ವಳನ್ನು ಪಾಳೇಗಾರರು ನಿನಗೆ ಏನು ಬೇಕು ಕೇಳು ಕೊಡಲು ಸಿದ್ಧ ಎಂದು ಮನವಿ ಮಾಡಿದರೂ ಹಣ, ಆಸ್ತಿ, ಒಡವೆ, ವಸ್ತ್ರ ಕೇಳದೆ ಕೋಟೆಯಲ್ಲಿ ನಡೆಯುವ ಶುಭ ಸಮಾರಂಭಗಳಿಗೆ ನನಗೆ ಒಂದು ವೀಳ್ಯ ಬರಬೇಕು ಎಂಬಷ್ಟೇ ಬೇಡಿಕೆ ಮುಂದಿಟ್ಟು ತನ್ನ ಸಮುದಾಯದ ಗೌರವ ಹೆಚ್ಚಿಸಿದ್ದಾಳೆ, ಇಂತಹ ಧೀಮಂತ ವ್ಯಕ್ತಿತ್ವದ ಒನಕೆ ಓಬವ್ವ ಇಡೀ ಮನುಕುಲಕ್ಕೆ ಮಾದರಿ ಎಂದರು.
ಇದೇ ವೇಳೆ ಛಲವಾದಿ ಸಮುದಾಯದ ಹಿರಿಯರಾದ ಲೇಪಾಕ್ಷಯ್ಯ, ವೀರಮ್ಮ, ಪುಟ್ಟಮಾರಕ್ಕ, ಚಿತ್ರ ಕಲಾವಿದ ಮಂಜುನಾಥ್ ಅವರಿಗೆ ಒನಕೆ ಓಬವ್ವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ತಹಶೀಲ್ದಾರ್ ಸಿದ್ದೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್, ಮೇಲ್ವಿಚಾರಕ ಸುರೇಶ್ ಕುಮಾರ್, ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಮಂಜುನಾಥ್, ಆದಿಜಾಂಭವ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಜಯರಾಮಯ್ಯ, ಬಿಇಓ ರಂಗದಾಸಪ್ಪ, ಡಯಟ್ ಪ್ರಿನ್ಸಿಪಾಲ್ ಮಂಜುನಾಥ್, ಜಿಲ್ಲಾ ಛಲವಾದಿ ಮಹಾಸಭಾ ಅಧ್ಯಕ್ಷ ಸಿ.ಭಾನುಪ್ರಕಾಶ್, ಹೆಗ್ಗೆರೆ ಕೃಷ್ಣಪ್ಪ, ಛಲವಾದಿ ಮಹಾಸಭಾ ರಾಜ್ಯ ಸಮಿತಿ ಜಂಟಿ ಕಾರ್ಯದರ್ಶಿ ನಾಗೇಶ್.ಟಿ.ಆರ್, ದಲಿತ ಛಲವಾದಿ ಮಹಾಸಭಾ ಅಧ್ಯಕ್ಷ ಡಾ.ಪಿ.ಚಂದ್ರಪ್ಪ, ಕಲಾವಿದ ಕಂಬದ ರಂಗಯ್ಯ, ಛಲವಾದಿ ಶೇಖರ್, ಸಿದ್ದಲಿಂಗಪ್ಪ ಗೌಡಿಹಳ್ಳಿ ಸೇರಿದಂತೆ ಹಲವರು ಹಾಜರಿದ್ದರು.
Comments are closed.