ಪತ್ರಕರ್ತರ 25 ಮಕ್ಕಳಿಗೆ ತಲಾ 1 ಲಕ್ಷ ರೂ. ಸ್ಕಾಲರ್

ಸಮಾಜ ಸೇವಾರತ್ನ ಪ್ರಶಸ್ತಿ ಪುರಸ್ಕೃತ ಡಾ.ಪರಮೇಶ್ವರ್ ಘೋಷಣೆ

142

Get real time updates directly on you device, subscribe now.


ತುಮಕೂರು: ಪತ್ರಕರ್ತರ ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯಬೇಕು, ಈ ನಿಟ್ಟಿನಲ್ಲಿ ಪ್ರತಿ ವರ್ಷ ಜಿಲ್ಲೆಯ 25 ಪತ್ರಕರ್ತರ ಮಕ್ಕಳಿಗೆ ಪ್ರತಿ ಮಗುವಿಗೆ ತಲಾ ಒಂದು ಲಕ್ಷ ರೂ. ನಂತೆ ಸ್ಕಾಲರ್ ಶಿಪ್ ನೀಡಲಾಗುವುದು ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತುಮಕೂರು ಜಿಲ್ಲಾ ಘಟಕ ವತಿಯಿಂದ ನಗರದ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಂಘದ ವಾರ್ಷಿಕ ದತ್ತಿ ಪ್ರಶಸ್ತಿಗಳ ಪ್ರದಾನ, ಕ್ಷೇಮಾಭಿವೃದ್ಧಿ ನಿಧಿಗೆ ದೇಣಿಗೆ ನೀಡಿದವರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ತುಮಕೂರಿನ ಅಭಿವೃದ್ಧಿಗಾಗಿ ಹಲವಾರು ಜನರು ದುಡಿದಿದ್ದಾರೆ, ಆದರೆ ಇಂದು ನನಗೆ ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಸಮಾಜ ಸೇವಾರತ್ನ ಪ್ರಶಸ್ತಿ ನೀಡಿ ಮತ್ತಷ್ಟು ಜವಾಬ್ದಾರಿ ಹೆಚ್ಚು ಮಾಡಿದ್ದಾರೆ, ನನಗೆ ಈ ಪ್ರಶಸ್ತಿ ಕೊಟ್ಟಿರುವುದಕ್ಕೆ ನಾನು ನಿಮಗೆ ಆಭಾರಿಯಾಗಿದ್ದೇನೆ, ನಿಮ್ಮ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲು ಮತ್ತಷ್ಟು ಉತ್ತೇಜನ ಸಿಕ್ಕಿದಂತಾಗಿದೆ ಎಂದರು.

ತುಮಕೂರು ತಾಲ್ಲೂಕಿನ ಗೊಲ್ಲಹಳ್ಳಿ ಕುಗ್ರಾಮದಲ್ಲಿ ಜನಿಸಿದವನು, ಅಂದಿನ ಕಾಲದಲ್ಲಿದ್ದ ಜಾತಿ ವ್ಯವಸ್ಥೆ, ಮೌಢ್ಯ ಆಚರಣೆಗಳನ್ನೆಲ್ಲ ನಾನು ಖುದ್ದಾಗಿ ನೋಡಿದ್ದೇನೆ, ಆ ಆಚರಣೆಗಳೆಲ್ಲ ಇಂದು ಕಡಿಮೆಯಾಗಿವೆ, ವಿನೋಬಾ ಭಾವೆ ಅವರ ಆಶಯದಂತೆ ಚಿತ್ರಕಲಾ ಶಿಕ್ಷಕರಾಗಿದ್ದ ನಮ್ಮ ತಂದೆಯವರು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಬೇಕು ಎಂಬ ಉದ್ದೇಶದಿಂದ ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಪ್ರಾರಂಭಿಸಿದ್ದರು ಎಂದು ಸ್ಮರಿಸಿದರು.
ಪತ್ರಕರ್ತರ ಜೀವನ ತುಂಬಾ ಕಠಿಣ ಮತ್ತು ಸಂಕಷ್ಟದಿಂದ ಕೂಡಿದೆ, ಇದನ್ನೆಲ್ಲಾ ಸಮರ್ಥವಾಗಿ ಎದುರಿಸುವ ಮೂಲಕ ಪತ್ರಕರ್ತರು ಸಮಾಜದ ಆಗು ಹೋಗುಗಳನ್ನು ಮತ್ತು ಜನರ ಸಮಸ್ಯೆಗಳನ್ನು ಸಮಾಜದ ಮುಂದೆ ವಸ್ತು ಸ್ಥಿತಿಯ ನೈಜತೆಯನ್ನು ಸಮಾಜದ ಮುಂದೆ ತರುವ ಕೆಲಸ ಮಾಡುತ್ತಿದ್ದಾರೆ, ಯಾರದೇ ಅಡಚಣೆಗಳಿಗೂ ಹೆದರದೆ ಆ ಸುದ್ದಿಯನ್ನು ಹೇಳುವವನು ನಿಜವಾದ ಪತ್ರಕರ್ತ ಎಂದರು.

ಇಂದು ಪತ್ರಿಕೋದ್ಯಮ ಕ್ಷೇತ್ರ ತುಂಬಾ ಬದಲಾಗಿದೆ, ಯಾವುದೇ ಒಂದು ಸುದ್ದಿಯನ್ನು ಕೆಲವೇ ನಿಮಿಷಗಳಲ್ಲಿ ತಂತ್ರಜ್ಞಾನ ಬಳಸಿಕೊಂಡು ಟಿವಿಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತಿದೆ, ಮಾಧ್ಯಮ ಕ್ಷೇತ್ರ ಇಂದು ಬಹಳ ಸವಾಲುಗಳ ಮಧ್ಯೆ ನಿಂತಿದೆ, ಮಾಧ್ಯಮ ಕ್ಷೇತ್ರದಲ್ಲಿ ಪತ್ರಕರ್ತರು ಸುದ್ದಿಯನ್ನು ಕೆಲವೇ ನಿಮಿಷಗಳಲ್ಲಿ ಕೊಡುತ್ತಿದ್ದಾರೆ, ಹಾಗೆ ಪತ್ರಕರ್ತರು ತಮ್ಮ ಜೀವನದಲ್ಲಿ ಬೆಳೆಯಬೇಕು ಎಂದರು.

ಚಿ.ನಿ.ಪುರುಷೋತ್ತಮ್ ಅವರು ಸತತ ಎರಡನೇ ಬಾರಿಗೂ ಅಧ್ಯಕ್ಷರಾಗಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವುದರ ಮೂಲಕ ತುಂಬಾ ಯಶಸ್ವಿಯಾಗಿ ಸಂಘವನ್ನು ಮುನ್ನಡೆಸುತ್ತಿದ್ದಾರೆ, ನಾನು ರಾಜಕೀಯ ಕ್ಷೇತ್ರಕ್ಕೆ ಬಂದಿರುವುದು ಸಮಾಜ ಸೇವೆ ಮಾಡುವುದಕ್ಕೆ, ಹಾಗೆ ಹೊರಟ್ಟಿ ಅವರು ಹುಬ್ಬಳ್ಳಿ ಶಿಕ್ಷಕರ ಕ್ಷೇತ್ರದಿಂದ ಸತತವಾಗಿ 8ನೇ ಬಾರಿಗೆ ವಿಧಾನ ಪರಿಷತ್ ಗೆ ಆಯ್ಕೆಯಾಗಿದ್ದಾರೆ ಎಂದು ಹೇಳಿದರು.
ವಿಧಾನ ಪರಿಷತ್ ಸಭಾಪತಿ ಬಸವರಾಜು ಹೊರಟ್ಟಿ ಅವರು ಸಮಾಜ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಿರುವುದು ನನಗೆ ತುಂಬಾ ಸಂತೋಷವಾಗಿದೆ ಎಂದರು.

ತುಮಕೂರು ನಗರ ವ್ಯಾಪ್ತಿಯಲ್ಲಿ ಪತ್ರಕರ್ತರಿಗೆ ನಿವೇಶಗಳನ್ನು ನೀಡಲು ಜಾಗ ಗುರುತಿಸಲಾಗುವುದು ಹಾಗೂ ಪತ್ರಕರ್ತರು ಸ್ವಲ್ಪ ಮಟ್ಟಿಗೆ ಹಣ ಪಾವತಿ ಮಾಡಿ ನಿವೇಶನ ಪಡೆಯಬೇಕು ಎಂದು ಹೇಳಿದರು.
ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನವನ್ನು ತುಮಕೂರು ಜಿಲ್ಲೆಯಲ್ಲಿ ಮಾಡಲು ಆತಿಥ್ಯ ಕೊಟ್ಟರೆ ದೊಡ್ಡಮಟ್ಟದಲ್ಲಿ ಕಾರ್ಯಕ್ರಮ ಮಾಡುತ್ತೇವೆ ಎಂದು ಹೇಳಿದರು.
ಇತ್ತೀಚೆಗೆ ಇಸ್ರೇಲ್ ಯುದ್ಧಭೂಮಿಗೆ ಪತ್ರಕರ್ತರು ತೆರಳಿ ಅಲ್ಲಿನ ವಾಸ್ತವ ಸಂಗತಿಯನ್ನು ಜನರಿಗೆ ತೋರಿಸುವ ಕೆಲಸ ಮಾಡುತ್ತಿದ್ದಾರೆ, ಯುದ್ಧಭೂಮಿಯಲ್ಲಿ ಬಾಂಬ್ ದಾಳಿಗಳು ನಿರಂತರವಾಗಿ ನಡೆಯುತ್ತಿದ್ದರೂ ಅದಕ್ಕೆಲ್ಲ ಜಗ್ಗದೆ, ತಮ್ಮ ಜೀವನ ಪಣಕ್ಕಿಟ್ಟು ವರದಿ ಮಾಡುವುದು ಒಂದು ದೊಡ್ಡ ಸಾಧನೆ ಎಂದು ಹೇಳಿದರು.

ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಮಾತನಾಡಿ, ಪತ್ರಿಕಾ ಬಳಗದವರು ಯಾವುದೇ ಭೇದ ಭಾವ ಮಾಡದೆ ನೀಡುವ ಪ್ರಶಸ್ತಿ ತುಂಬಾ ಶ್ರೇಷ್ಠವಾದದ್ದು, ಸಮಾಜದ ಅಂಕು- ಡೊಂಕುಗಳನ್ನು ಸರಿಪಡಿಸುವ ಕೆಲಸವನ್ನು ಪತ್ರಕರ್ತರು ಮಾಡುತ್ತಿದ್ದಾರೆ, ದೇಶದಲ್ಲಿ ಪತ್ರಿಕಾ ರಂಗವು ನಾಲ್ಕನೇ ಅಂಗವಾಗಿ ಗುರುತಿಸಿಕೊಂಡಿದೆ, ಪತ್ರಿಕಾ ರಂಗದಲ್ಲಿ ಸೇವೆ ಮಾಡುವುದು ಉತ್ತಮ ಸೇವೆಯಾಗಿದೆ, ಪರಮೇಶ್ವರ್ ಅವರು ಸರಳ ಸಜ್ಜನ ರಾಜಕಾರಣಿ, ಪತ್ರಕರ್ತರ ಸಂಘಕ್ಕೆ ದತ್ತಿ ನಿಧಿಯನ್ನು ನಾನು ನೀಡುತ್ತೇನೆ, ಆದರೆ ಅದನ್ನು ನನ್ನ ತಾಯಿಯ ಸವಿ ನೆನಪಿಗಾಗಿ ಮಹಿಳಾ ಪತ್ರಕರ್ತರಿಗೆ ನೀಡಬೇಕು ಎಂದು ಮನವಿ ಮಾಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ್ ಪ್ರಾಸ್ತಾವಿಕವಾಗಿ ಮಾತನಾಡಿ, ಪರಮೇಶ್ವರ್ ಅವರು ತುಮಕೂರು ಜಿಲ್ಲೆಯ ಸಜ್ಜನ ರಾಜಕಾರಣಿ, ಶಿಕ್ಷಣ, ಆರೋಗ್ಯ, ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ, ಗ್ರಾಮೀಣ ಮಟ್ಟದಲ್ಲಿ ಪ್ರತಿಯೊಬ್ಬರೂ ಶಿಕ್ಷಣ ಪಡೆಯಬೇಕು ಎನ್ನುವ ಉದ್ದೇಶದಿಂದ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯನ್ನು ಅವರ ತಂದೆ ಪ್ರಾರಂಭಿಸಿದ್ದರು, ಅದನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಹಾ ನಗರ ಪಾಲಿಕೆ ಮೇಯರ್ ಪ್ರಭಾವತಿ, ಮಾಜಿ ಎಂ ಎಸ್ ಸಿ ಹುಲಿನಾಯ್ಕರ್, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿಪಂ ಸಿಇಒ ಜಿ.ಪ್ರಭು, ಎಸ್ ಪಿ ಅಶೋಕ್.ಕೆ.ವಿ, ಮಹಾನಗರ ಪಾಲಿಕೆ ಆಯುಕ್ತೆ ಅಶ್ವಿಜ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!