ಮಕ್ಕಳಿಗೆ ನೈತಿಕತೆಯ ಪಾಠ ಅಗತ್ಯ: ನ್ಯಾ.ನೂರುನ್ನಿಸಾ

84

Get real time updates directly on you device, subscribe now.


ತುಮಕೂರು: ಶೈಕ್ಷಣಿಕ ವ್ಯಾಸಂಗಕ್ಕೆಂದು ಹೋಗುವ ಮಕ್ಕಳು ಕೆಲವೊಂದು ಅಪರಾಧ ಪ್ರಕರಣಗಳಿಗೆ ಸಿಲುಕಿ ಇಡೀ ಜೀವನವನ್ನು ನರಕ ಮಾಡಿಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ ತಿಳಿಸಿದರು.
ತುಮಕೂರಿನ ಅನನ್ಯ ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿರುವ ಮೂರು ದಿನಗಳ ವಿವಿಧ ತರಬೇತಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಪಿಯು ಹಂತದವರೆಗಿನ ವಿದ್ಯಾರ್ಥಿಗಳು ತುಂಬಾ ಎಚ್ಚರಿಕೆಯಿಂದ ಇರಬೇಕು, ಈ ಅವಧಿಯಲ್ಲಿ ಪ್ರೀತಿಸಿ ವಿವಾಹವಾಗುವ ಮತ್ತು ಪೋಕ್ಸೋ ಪ್ರಕರಣಗಳಿಗೆ ಸಿಲುಕುವ ಅಪಾಯ ಇರುತ್ತದೆ ಎಂದು ಎಚ್ಚರಿಸಿದರು.

ತುಮಕೂರು ಜಿಲ್ಲೆಯಲ್ಲಿ 135 ಮಂದಿ ಪೋಕ್ಸೋ ಪ್ರಕರಣಗಳಿಗೆ ಸಿಲುಕಿ ಜೈಲಿನಲ್ಲಿದ್ದಾರೆ, 45 ಗರ್ಭಾವಸ್ಥೆಯ ಪ್ರಕರಣಗಳಿವೆ, 10 ವರ್ಷಗಳ ಆರು ಪ್ರಕರಣಗಳಿವೆ, 12 ಪ್ರಕರಣಗಳಲ್ಲಿ ಸಂಬಂಧಿಕರಿಂದಲೇ ಕೃತ್ಯ ನಡೆದಿರುವ ಆತಂಕಕಾರಿ ಸಂಗತಿಗಳಿವೆ, ಇವೆಲ್ಲವನ್ನೂ ನೋಡುತ್ತಾ ಹೋದರೆ ನಮ್ಮ ಸಮಾಜ ಎತ್ತ ಸಾಗಿದೆ, ನಮ್ಮ ಸಂಸ್ಕೃತಿ ಎಲ್ಲಿಗೆ ಹೋಗಿದೆ ಎಂಬ ಆತಂಕ ಉಂಟಾಗುತ್ತದೆ, ಶಾಲಾ ಕಾಲೇಜುಗಳಲ್ಲಿ, ಮನೆಗಳಲ್ಲಿ ಮಕ್ಕಳಿಗೆ ನೈತಿಕತೆಯ ಪಾಠ ಮತ್ತು ಕಾನೂನಿನ ದುಷ್ಪರಿಣಾಮಗಳ ಎಚ್ಚರಿಕೆ ನೀಡದೆ ಹೋದರೆ ಮುಂದಿನ ದಿನಗಳು ಮತ್ತಷ್ಟು ಕೆಟ್ಟದಾಗಲಿವೆ, ಈಗಿನಿಂದಲೇ ಎಚ್ಚೆತ್ತುಕೊಂಡು ಮಕ್ಕಳು ಹಾದಿ ತಪ್ಪದಂತೆ ಗಮನ ಹರಿಸಬೇಕಿದೆ ಎಂದರು.

18 ವರ್ಷದ ಒಳಗಿನ ಹೆಣ್ಣು ಮಕ್ಕಳು ಒಪ್ಪಿ ವಿವಾಹವಾದರೂ ಅಪರಾಧವಾಗುತ್ತದೆ, ಬಾಲ್ಯ ವಿವಾಹ ಹಾಗೂ ಪೋಕ್ಸೋ ಪ್ರಕರಣಗಳಿಗೆ ಸಿಲುಕಿದರೆ ಅದರಿಂದ ಹೊರಬರುವುದು ತುಂಬಾ ಕಷ್ಟ, ಈ ಅವಧಿಯಲ್ಲಿ ಶೈಕ್ಷಣಿಕ ವ್ಯಾಸಂಗವೂ ಇಲ್ಲದಂತಾಗಿ ಇಡೀ ಬದುಕು ನಶ್ವರವಾಗುತ್ತದೆ, ಈ ಎಲ್ಲಾ ದುಷ್ಪರಿಣಾಮಗಳ ಬಗ್ಗೆ ಈಗಿನಿಂದಲೇ ತಿಳವಳಿಕೆ ಹೇಳಬೇಕು, ಓದುವ ಅವಧಿಯಲ್ಲಿ ಪ್ರೀತಿ- ಪ್ರೇಮದ ಹಂಗಿಗೆ ಬೀಳದೆ ಎಚ್ಚರಿಕೆಯಿಂದ ಇರುವಂತೆ ಗಮನ ಹರಿಸಬೇಕು ಎಂದರು.

ಹೆಣ್ಣು ಭ್ರೂಣ ಹತ್ಯೆ ಸಮಾಜಕ್ಕೆ ಕಂಟಕಪ್ರಾಯ, ಇದರಿಂದಾಗಿ ಸಮಾಜದಲ್ಲಿ ಸಾಮಾಜಿಕ ಅಸಮತೋಲನ ಹೆಚ್ಚಾಗಿದೆ, ಹಣದ ಆಸೆಗೆ ಕೆಲವು ಆಸ್ಪತ್ರೆಗಳು ಭ್ರೂಣ ಹತ್ಯೆ ಪಾಪ ಮಾಡಿಕೊಂಡು ಬಂದಿವೆ, ಇದು ಕಾನೂನಿನ ಪ್ರಕಾರ ಅಪರಾಧವಾಗಿದ್ದು, ಜೈಲು ಶಿಕ್ಷೆ ಖಚಿತ ಎಂದರು.

ತುಮಕೂರು ನಗರ ಸಾಂತ್ವನ ಕೇಂದ್ರದ ಸಲಹೆಗಾರ ಸಾ.ಚಿ.ರಾಜಕುಮಾರ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಳದಿಂದ ಹದಿಹರೆಯದವರು ಹಾದಿ ತಪ್ಪುತ್ತಿದ್ದಾರೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಪೋಕ್ಸೋ ಕಾಯ್ದೆಯ ಅಸ್ತ್ರಕ್ಕೆ ಸಿಲುಕಿ ಬಹಳಷ್ಟು ವಿದ್ಯಾರ್ಥಿಗಳು ತಮ್ಮ ಜೀವನವನ್ನೇ ನರಕ ಮಾಡಿಕೊಳ್ಳುತ್ತಿದ್ದಾರೆ, ಯಾವುದು ತಪ್ಪು, ಯಾವುದು ಸರಿ ಎಂಬ ವಿವೇಚನೆಗೆ ಮನಸ್ಸನ್ನು ಓರೆ ಹೆಚ್ಚದೆ ಮಾಡುವ ಕೃತ್ಯಗಳಿಂದಾಗಿ ಅಪರಾಧಿಗಳಾಗಿ ನಿಲ್ಲುವಂತಹ ಪರಿಸ್ಥಿತಿ ಎದುರಾಗುತ್ತಿದೆ, ಈ ಬಗ್ಗೆ ಎಚ್ಚರಿಕೆ ಅಗತ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಅನನ್ಯ ಇನಿಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಅಧ್ಯಕ್ಷ ವಿಶ್ವನಾಥ್ ಮಾತನಾಡಿ ತಂದೆ ತಾಯಿ ಕಷ್ಟಪಟ್ಟು ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರೆ, ನನ್ನ ಮಗ ಸಾಧನೆ ಮಾಡಲಿ ಎಂಬುದು ಅವರ ಆಸೆಯಾಗಿರುತ್ತದೆ, ಆದರೆ ಕಲಿಯಲು ಬರುವ ಬಹಳಷ್ಟು ವಿದ್ಯಾರ್ಥಿಗಳು ಪೋಷಕರ ಕಷ್ಟಗಳನ್ನು ಅರ್ಥ ಮಾಡಿಕೊಳ್ಳುವುದಿಲ್ಲ, ಅವರು ಮಾಡುವ ಸಣ್ಣ ತಪ್ಪುಗಳು ಇಡೀ ಕುಟುಂಬವನ್ನು ಬಾಧಿಸುತ್ತವೆ, ಈ ಹಿನ್ನೆಲೆಯಲ್ಲಿ ಒಬ್ಬ ವಿದ್ಯಾರ್ಥಿಯನ್ನು ಶೈಕ್ಷಣಿಕ ದೃಷ್ಟಿಯಿಂದ ಹಾಗೂ ಪರಿಪೂರ್ಣ ವ್ಯಕ್ತಿತ್ವ ರೂಢಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.

ಆಡಳಿತ ಮಂಡಳಿ ಸದಸ್ಯರು, ಆಪ್ತ ಸಮಾಲೋಚಕರೂ ಆದ ಸಿ.ಸಿ.ಪಾವಟೆ, ಟ್ರಸ್ಟಿಗಳಾದ ಹೆಚ್.ಎನ್.ಚಂದ್ರಶೇಖರ್, ಡಾ.ಹರೀಶ್, ಪ್ರಾಂಶುಪಾಲ ಡಾ.ವಿಶ್ವಾಸ್, ಅನಂತಲಕ್ಷ್ಮಿ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!