ಒಂದು ವಾರ ರಾಷ್ಟ್ರೀಯ ಸಹಕಾರ ಸಪ್ತಾಹ

ತುಮಕೂರಿನಲ್ಲಿ ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿಕೆ

60

Get real time updates directly on you device, subscribe now.


ತುಮಕೂರು: ಸಹಕಾರಿ ಮಹಾ ಮಂಡಳದ ವತಿಯಿಂದ 70ನೇ ರಾಷ್ಟ್ರೀಯ ಸಹಕಾರ ಸಪ್ತಾಹ ಪಂಡಿತ ಜವಹರ್ ಲಾಲ್ ನೆಹರು ಅವರ ಜನ್ಮದಿನವಾದ ನವೆಂಬರ್ 14 ರಿಂದ ಒಂದು ವಾರಗಳ ಕಾಲ ನಡೆಯಲಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನವೆಂಬರ್ 14 ರಂದು ಶಿವಮೊಗ್ಗದಲ್ಲಿ ಆರಂಭವಾಗುವ ಸಪ್ತಾಹದ ಕಾರ್ಯಕ್ರಮಗಳು ನವೆಂಬರ್ 15 ರಂದು ರಾಯಚೂರು, ನ.16 ರಂದು ಕಲ್ಲಘಟಗಿ, 17 ರಂದು ಶಿರಸಿ, 18 ರಂದು ಮಂಗಳೂರು, 19 ಬೆಂಗಳೂರು ಮತ್ತು 20 ರಂದು ಬಿಜಾಪುರದಲ್ಲಿ ನಡೆಯಲಿದೆ, ಒಂದೊಂದು ದಿನ ಒಂದೊಂದು ವಿಚಾರದ ಬಗ್ಗೆ ಸಹಕಾರ ಕ್ಷೇತ್ರದ ತಜ್ಞರು ಕಾರ್ಯಕ್ರಮಕ್ಕೆ ಬರುವ ಪ್ರೇಕ್ಷಕರಿಗೆ ಮತ್ತು ಸಹಕಾರಿ ಕ್ಷೇತ್ರದ ಸದಸ್ಯರಿಗೆ ಸಹಕಾರಿ ಆಂದೋಲನದ ಬಗ್ಗೆ ಮಾಹಿತಿ ನೀಡಲಿದ್ದಾರೆ, ನವೆಂಬರ್ 20 ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಸಹಕಾರಿ ರತ್ನ ಪ್ರಶಸ್ತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಿತರಿಸಲಿದ್ದಾರೆ ಎಂದರು.

ರಾಜ್ಯ ಸಹಕಾರಿ ಮಹಾಮಂಡಳ ಹಾಗೂ ಸ್ಥಳೀಯ ಸಹಕಾರಿ ಸಂಸ್ಥೆಗಳ ಮೂಲಕ ನಡೆಯುವ ಈ ಕಾರ್ಯಕ್ರಮಕ್ಕೆ ಸಹಕಾರ ಇಲಾಖೆ ಮೊದಲಿನಿಂದಲೂ ಸಹಕರಿಸುತ್ತಾ ಬಂದಿದೆ, ಅದರಂತೆ ಈ ಬಾರಿಯೂ ಸಹಕಾರ ನೀಡಲಿದೆ, ಸಹಕಾರಿ ಎಂಬುದು ರಾಜ್ಯ ವಲಯದಲ್ಲಿ ಬರುವ ವಿಚಾರವಾಗಿದೆ, 1950 ಸಹಕಾರಿ ಕಾಯ್ದೆಯಂತೆ ಎಲ್ಲಾ ಸಹಕಾರಿ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ, ಕೇಂದ್ರದಲ್ಲಿ ಒಂದು ಬಹುರಾಜ್ಯ ಕಾಯ್ದೆ ಇದೆ, ಕೇಂದ್ರ ಸರಕಾರ ಏನೇ ಸಹಕಾರಿ ಕೇತ್ರಕ್ಕೆ ತಿದ್ದುಪಡಿ ತಂದರೂ ಕೇಂದ್ರ ಕಾಯ್ದೆಗೆ ಮಾತ್ರ ತರಲು ಸಾಧ್ಯ ಎಂದರು.

97ನೇ ಸಂವಿಧಾನ ತಿದ್ದುಪಡಿಯ ಮೂಲಕ ಕೆಲ ಮಾರ್ಪಾಡುಗಳನ್ನು ಮಾಡಿದ್ದಾರೆ, ಅದರಂತೆ ಸಹಕಾರಿ ಕಾಯ್ದೆ- 1950 ರಲ್ಲಿ ಕೆಲ ಬದಲಾವಣೆ ಮಾಡಿಕೊಳ್ಳಬೇಕಾಗಿದೆ, ಆದರೆ ಈ ವಿಚಾರ ಸುಪ್ರಿಂಕೋರ್ಟ್ನಲ್ಲಿದೆ, ಹಾಗಾಗಿ ತಿದ್ದುಪಡಿ ಅನ್ವಯ ಯಾವ ವಿಚಾರಗಳನ್ನು ತೆಗೆದುಕೊಳ್ಳಬೇಕು, ಯಾವ ವಿಚಾರಗಳನ್ನು ಬಿಡಬೇಕು ಎಂಬುದನ್ನು ಕೂಲಂಕುಷವಾಗಿ ಚರ್ಚಿಸಿ ತೀರ್ಮಾನ ಕೈಗೊಳ್ಳಲು ಮಾಜಿ ಸಚಿವ ಲಕ್ಷ್ಮಣ ಸವದಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ, ಇದರಲ್ಲಿ ಜಿ.ಟಿ.ದೇವೇಗೌಡ, ಕೆ.ಷಡಕ್ಷರಿ, ಹೆಬ್ಬಾರ್, ಎಸ್.ಅರ್.ಪಾಟೀಲ್, ಆರ್.ರಾಜೇಂದ್ರ, ರಾಜೇಂದ್ರಕುಮಾರ್ ಇದ್ದು ಅವರು ನೀಡಿದ ವರದಿಯ ಮೇಲೆ ಯಾವುದನ್ನು ಜರೂರಾಗಿ ತರಬೇಕು ಎಂಬುದನ್ನು ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಿ ಜಾರಿಗೆ ತರಲು ಪ್ರಯತ್ನಿಸುವುದಾಗಿ ತಿಳಿಸಿದರು.

ಶೀಘ್ರದಲ್ಲಿಯೇ ಜಾತಿ ಗಣತಿ ವರದಿಯನ್ನು ಸರಕಾರ ಸ್ವೀಕರಿಸಲಿದೆ, ಅದನ್ನು ಸಾರ್ವಜನಿಕರ ಚರ್ಚೆಗೆ ಬಿಡಲಾಗುವುದು, ಅಲ್ಲಿ ಬರುವ ಸಾರ್ವಜನಿಕ ಅಭಿಪ್ರಾಯ ಪರಿಗಣಿಸಿ ಯಾವುದನ್ನು ಬಿಡಬೇಕು, ಯಾವುದನ್ನು ತೆಗೆದುಕೊಳ್ಳಬೇಕು ಎಂದು ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು, ವರದಿ ಬಂದಾಕ್ಷಣ ಒಪ್ಪಬೇಕೆಂಬ ನಿಯಮವಿಲ್ಲ, ಬಿಹಾರದಲ್ಲಿ ಬಿಡುಗಡೆಯಾಯಿತು,ಯಾವ ಜನರಿಗೆ ತೊಂದರೆಯಾಯಿತು, ಹಾಗಾಗಿ ಕಾಂತರಾಜು ವರದಿ ವಿರೋಧಿ ಸುವುದರಲ್ಲಿ ಅರ್ಥವಿಲ್ಲ, ವರದಿ ಸಾರ್ವಜನಿಕ ಚರ್ಚೆಗೆ ಬರದೆ ಅದು ಸರಿಯಿಲ್ಲ,ಇದು ಸರಿಯಿಲ್ಲ ಎಂದು ಹೇಳುವುದು ನ್ಯಾಯವಲ್ಲ, ಮೊದಲು ವರದಿ ಓದಿ ನಂತರ ಅದನ್ನು ಒಪ್ಪಿಕೊಳ್ಳುವುದು ಬಿಡುವುದರ ಬಗ್ಗೆ ಚರ್ಚೆ ನಡೆಸೋಣ ಎಂದು ಸಲಹೆ ನೀಡಿದರು.

ಲೋಕಸಭೆಗೆ ಸ್ಪರ್ಧಿಸಲು ಇಚ್ಚೆ ಇದೆ
ನಾನು ಸಹ ಈ ಬಾರಿ ಲೋಕಸಭೆಗೆ ಸ್ಪರ್ಧಿಸಲು ಇಚ್ಚಿಸಿದ್ದೇನೆ, ಲೋಕಸಭೆಯನ್ನು ಒಮ್ಮೆ ನೋಡುವ ಆಸೆಯಿದೆ, ಹೈಕಮಾಂಡ್ ಒಪ್ಪಿ ಟಿಕೆಟ್ ನೀಡದರೆ ಸ್ಪರ್ಧಿಸುತ್ತೇನೆ, ಮುದ್ದಹನುಮೇಗೌಡ ಕಾಂಗ್ರೆಸ್ ಗೆ ಬರುವ ಬಗ್ಗೆ ನನ್ನ ಬಳಿಯೂ ಕೆಲವರು ಚರ್ಚೆ ನಡೆಸಿದ್ದಾರೆ, ಹಾಗೆಯೇ ಡಾ.ಜಿ.ಪರಮೇಶ್ವರ್ ಹತ್ತಿರವೂ ಕೆಲವರು ಪ್ರಾಸ್ತಾಪಿಸಿದ್ದಾರೆ ಎನ್ನಲಾಗಿದೆ, ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ಕಾಂಗ್ರೆಸ್ ಸೇರುವ ವಿಚಾರ ಗೊತ್ತಿಲ್ಲ, ಐದು ರಾಜ್ಯಗಳ ಚುನಾವಣೆ ನಂತರ ಮತ್ತಷ್ಟು ಬದಲಾವಣೆ ಸಾಧ್ಯತೆ ಇದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!