ಗುಬ್ಬಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಶಾಖೆ ಗುಬ್ಬಿ ಮತ್ತು ತಾಲೂಕು ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಗುಬ್ಬಿ ತಾಲೂಕು ತಹಶೀಲ್ದಾರ್ ಮತ್ತು ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ವಿರುದ್ಧ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ದಲಿತ ಮುಖಂಡರ ಮೇಲೆ ನಿಂದನೆ ಮಾಡುವುದು ಮತ್ತು ಆರೋಪಿಸುವುದು ಇತ್ತೀಚೆಗೆ ಸರ್ವೇ ಸಾಮಾನ್ಯವಾಗಿದೆ, ದಲಿತರ ಹಕ್ಕು ಕಾಯ್ದೆಗಳ ಬಗ್ಗೆ ಕಾನೂನಾತ್ಮಕವಾಗಿ ಚರ್ಚಿಸಲು ಬಂದಾಗ ಈ ಅಧಿಕಾರಿಗಳು ನಮ್ಮನ್ನು ದಲಿತರು ಎನ್ನುವ ಕಾರಣದಿಂದ ಉದಾಸೀನ ಮಾಡುತ್ತಾರೆ ಎಂದು ಆರೋಪಿಸಿದ ಅವರು ತಾಲೂಕು ಸಮಾಜ ಕಲ್ಯಾಣ ಅಧಿಕಾರಿಗಳೊಂದಿಗೆ ತಾಲೂಕು ದಲಿತ ಮುಖಂಡರು ಕಾನೂನಿನ ಸವಲತ್ತನ್ನು ಕೇಳಲು ಹೋಗಿದ್ದ ಸಂದರ್ಭದಲ್ಲಿ ನಮ್ಮನ್ನು ನಿಂದಿಸಿದ್ದಲ್ಲದೆ ದೂರು ನೀಡುತ್ತಾರೆ, ಈ ವಿಚಾರವಾಗಿ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳನ್ನು ಭೇಟಿ ಮಾಡಿ ನಮಗಾದ ನೋವು ಹೇಳಿಕೊಂಡಾಗ ಈ ವಿಚಾರ ಬಗೆಹರಿಸುವಲ್ಲಿ ನಿರ್ಲಕ್ಷ್ಯ ವಹಿಸಿರುವುದು ನಮಗೆ ಬೇಸರ ತಂದಿದೆ ಎಂದು ತಿಳಿಸಿದ್ದಾರೆ.
ಗುಬ್ಬಿ ತಾಲೂಕು ಕಸಬಾ ಹೋಬಳಿ ಜಿ.ಹೊಸಹಳ್ಳಿ ಗ್ರಾಮದ ದಲಿತ ಮುಖಂಡ ರವೀಶ್ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ತಹಶೀಲ್ದಾರರನ್ನು ಭೇಟಿ ಮಾಡಿ 120 ದಲಿತ ಕುಟುಂಬದ ಮನೆಗಳಿದ್ದು ಸಾರ್ವಜನಿಕ ಸ್ಮಶಾನಕ್ಕಾಗಿ ಸರ್ವೇ ನಂಬರ್ 28 ರಲ್ಲಿ 1.10 ಕುಂಟೆ ಜಮೀನನ್ನು ಸಾರ್ವಜನಿಕ ಸ್ಮಶಾನಕ್ಕಾಗಿ ಅಳತೆ ಮಾಡಿ ಹದ್ದು ಬಸ್ತು ಮಾಡಿ ಮತ್ತು ಗ್ರಾಮ ಪಂಚಾಯಿತಿಗೆ ಹಸ್ತಾಂತರ ಮಾಡಲು ಸುಮಾರು ನಾಲ್ಕು ವರ್ಷಗಳಿಂದ ತಾಲೂಕು ತಹಶೀಲ್ದಾರ್ ಕಚೇರಿಗೆ ಅಲೆದಾಟ ನಡೆಸಿ ನಮಗೆ ಸಾರ್ವಜನಿಕ ಸ್ಮಶಾನ ಗುರುತಿಸಿ ಕೊಡಿ ಎಂದು ಕೇಳಲು ಹೋದ ದಲಿತ ಮುಖಂಡರಿಗೆ ಏಕ ವಚನದಲ್ಲಿ ನಿಂದಿಸಿ ನಿಮ್ಮ ಮನೆಯಂಗಳದಲ್ಲಿ ಶವ ಸಂಸ್ಕಾರ ಮಾಡಿಕೊಳ್ಳಿ ಎಂದು ಕಠೋರವಾಗಿ ಏರು ಧ್ವನಿಯಲ್ಲಿ ಮಾತನಾಡಿ ದಲಿತ ಮುಖಂಡನನ್ನು ಕೆಲಸಕ್ಕೆ ಬಾರದವನು, ಇಂಥವರನ್ನು ಕಚೇರಿಗೆ ಬಿಟ್ಟುಕೊಳ್ಳುವುದಿಲ್ಲ ಎಂದು ದಲಿತ ಸಮುದಾಯಕ್ಕೆ ನೋವು ಉಂಟು ಮಾಡಿದ್ದಾರೆ, ಹಾಗಾಗಿ ಈ ಇಬ್ಬರು ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು ಎಂದು ಪ್ರತಿಭಟನೆ ಮಾಡಿದರು.
ಪ್ರತಿಭಟನೆ ಸ್ಥಳಕ್ಕೆ ಉಪ ವಿಭಾಗದಿಕಾರಿ ಗೌರವ್ ಕುಮಾರ್ ಶೆಟ್ಟಿ ಭೇಟಿ ನೀಡಿ ಮನವಿ ಪಡೆದು ನಿಮ್ಮ ಸಮಸ್ಯೆ ಬಗೆ ಹರಿಸುವುದಾಗಿ ಪ್ರತಿಭಟನಾಕಾರರಿಗೆ ಮಾಹಿತಿ ನೀಡಿದರು.
ಪ್ರತಿಭಟನೆಯಲ್ಲಿ ದಲಿತ ಮುಖಂಡರಾದ ನಾಗರಾಜು, ನರಸಿಂಹ ಮೂರ್ತಿ, ಚೇಳೂರು ಶಿವನಂಜಪ್ಪ, ಈಶ್ವರಯ್ಯ, ನಟರಾಜು, ಶಿವಸ್ವಾಮಿ, ರಾಜಣ್ಣ, ರೈತ ಸಂಘದ ಲೋಕೇಶ್, ವಿಜಯಕುಮಾರ್, ಉಮೇಶ್, ಯೋಗೇಶ್, ದಲಿತ ಗಂಗಣ್ಣ, ಮಧು ಇನ್ನಿತರರು ಭಾಗವಹಿಸಿದ್ದರು.
Comments are closed.