ತುಮಕೂರು: ಸಂತ ಶ್ರೇಷ್ಠ ಕನಕದಾಸರ 536ನೇ ಜಯಂತಿಯನ್ನು ನವೆಂಬರ್ 30 ರಂದು ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಕಡ್ಡಾಯವಾಗಿ ಆಚರಿಸಬೇಕೆಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ನವೆಂಬರ್ 30 ರಂದು ಶಾಲೆಗಳಲ್ಲಿ ಕನಕ ಜಯಂತಿ ಏರ್ಪಡಿಸಿ ಕನಕದಾಸರ ಪರಿಚಯ, ಅವರ ತತ್ವ ಸಿದ್ಧಾಂತ, ಆದರ್ಶಗಳ ಬಗ್ಗೆ ಮಕ್ಕಳಿಗೆ ತಿಳಿಸಬೇಕು, ಜಯಂತಿ ಕಡ್ಡಾಯ ಆಚರಣೆ ಕುರಿತು ಎಲ್ಲಾ ಶಾಲೆಗಳಿಗೆ ಸುತ್ತೋಲೆ ಹೊರಡಿಸಬೇಕೆಂದು ತುಮಕೂರು ಹಾಗೂ ಮಧುಗಿರಿ ಡಿಡಿಪಿಐಗಳಿಗೆ ನಿರ್ದೇಶನ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನವೆಂಬರ್ 30 ರಂದು ಬೆಳಗ್ಗೆ 10.30 ಗಂಟೆಗೆ ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜಿಲ್ಲಾ ಮಟ್ಟದ ಕನಕದಾಸರ ಜಯಂತ್ಯುತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಜಿಲ್ಲಾ ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕೆಂದು ಸೂಚನೆ ನೀಡಿದರು.
ಕನಕದಾಸರ ಜಯಂತ್ಯುತ್ಸವದ ಅಂಗವಾಗಿ 5 ಮಂದಿ ಸಾಧಕರನ್ನು ಸನ್ಮಾನಿಸಿ ಗೌರವಿಸಲು ಉಪ ವಿಭಾಗಾಧಿಕಾರಿಗಳ ಅಧ್ಯಕ್ಷತೆಯ ಸಮಿತಿಯಲ್ಲಿ ಅರ್ಹರನ್ನು ಗುರುತಿಸಿ ಜಿಲ್ಲಾಡಳಿತದ ಗಮನಕ್ಕೆ ತರಬೇಕೆಂದು ಹಾಗೂ ಕನಕದಾಸರ ವಿಚಾರಧಾರೆಗಳ ಬಗ್ಗೆ ಉಪನ್ಯಾಸ ಏರ್ಪಡಿಸಬೇಕೆಂದು ಸಮಿತಿ ಸದಸ್ಯರಿಗೆ ತಿಳಿಸಿದರು.
ವೇದಿಕೆ ಕಾರ್ಯಕ್ರಮದ ಮುನ್ನ ನಗರದ ಶಿರಾ ಗೇಟ್ ಕನಕ ವೃತ್ತದ ಬಳಿಯಿಂದ ಪ್ರಮುಖ ರಸ್ತೆಗಳಲ್ಲಿ ಏರ್ಪಡಿಸಿರುವ ಕನಕದಾಸರ ಭಾವಚಿತ್ರ ಮೆರವಣಿಗೆಯಲ್ಲಿ ಸಾಂಸ್ಕೃತಿಕ ಕಲಾ ತಂಡಗಳು ಪಾಲ್ಗೊಳ್ಳುವ ವ್ಯವಸ್ಥೆ ಮಾಡಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್ ಗೆ ಸೂಚಿಸಿದರು.
ಸಭೆಯಲ್ಲಿ ಶ್ರೀಗುರುರೇವಣಸಿದ್ದೇಶ್ವರ ಮಠದ ಪೀಠಾಧಿಪತಿ ಬಿಂದುಶೇಖರ ಒಡೆಯರ್ ಮಹಾ ಸ್ವಾಮಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ. ಪ್ರಭು, ನಗರ ಡಿ ವೈ ಎಸ್ ಪಿ ಕೆ.ಆರ್.ಚಂದ್ರಶೇಖರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಶ್ರೀಧರ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಂಜನಪ್ಪ, ಜಂಟಿ ಕೃಷಿ ನಿರ್ದೇಶಕ ಎನ್.ರಮೇಶ್, ರೇಷ್ಮೆ ಉಪ ನಿರ್ದೇಶಕ ಬಾಲಕೃಷ್ಣ, ಹಿರಿಯ ಪತ್ರಕರ್ತ ಎಸ್.ನಾಗಣ್ಣ, ಸಮುದಾಯದ ವಿವಿಧ ಮುಖಂಡರು, ಅಧಿಕಾರಿಗಳು ಹಾಜರಿದ್ದರು.
Comments are closed.