ಸರ್ಕಾರ ಬರ ಪರಿಹಾರ ಹಣ ಬಿಡುಗಡೆ ಮಾಡಲಿ

62

Get real time updates directly on you device, subscribe now.


ತುಮಕೂರು: ಬರಗಾಲದಿಂದ ಜಿಲ್ಲೆಯ 10 ತಾಲೂಕುಗಳಲ್ಲಿ ಸುಮಾರು 2500 ಕೋಟಿ ರೂ. ನಷ್ಟ ಸಂಭವಿಸಿದ್ದು, ಸರಕಾರ ಕೂಡಲೇ ಇಷ್ಟು ಹಣವನ್ನು ಬರ ಪರಿಹಾರ ಮತ್ತು ಆ ಸಂಬಂಧಿತ ಕಾಮಗಾರಿಗಳಿಗೆ ಬಿಡಗುಡೆ ಮಾಡಬೇಕೆಂದು ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ ಒತ್ತಾಯಿಸಿದ್ದಾರೆ.
ನಗರದ ಜಿಲ್ಲಾಧಿಕಾರಿಗಳಿಗೆ ಜೆಡಿಎಸ್ ಪಕ್ಷದವತಿಯಿಂದ ಹಮ್ಮಿಕೊಂಡಿದ್ದ ಬರ ಅಧ್ಯಯನ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿ ಮಾತನಾಡಿ, ಜಿಲ್ಲೆಯ ಕೊರಟಗೆರೆ ತಾಲೂಕಿನಲ್ಲಿ 197.44 ಕೋಟಿ, ಪಾವಗಡದಲ್ಲಿ 304.77 ಕೋಟಿ, ತಿಪಟೂರಿನಲ್ಲಿ 160.36 ಕೋಟಿ, ಚಿಕ್ಕನಾಯಕನ ಹಳ್ಳಿ ತಾಲೂಕಿನಲ್ಲಿ 190.14 ಕೋಟಿ, ತುಮಕೂರಿನಲ್ಲಿ 119.14 ಕೋಟಿ, ಕುಣಿಗಲ್ ತಾಲೂಕಿನಲ್ಲಿ 214.35 ಕೋಟಿ, ಮಧುಗಿರಿ ತಾಲೂಕಿನಲ್ಲಿ 211.95 ಕೋಟಿ, ಗುಬ್ಬಿ ತಾಲೂಕಿನಲ್ಲಿ 70 ಕೋಟಿ ಹಾಗೂ ತುರುವೇಕೆರೆ ತಾಲೂಕಿನ 123.51 ಕೋಟಿ ರೂ. ಸೇರಿ ಒಟ್ಟು 1987.51 ಕೋಟಿ ರೂ. ನಷ್ಟ ಸಂಭವಿಸಿದೆ, ಸರಕಾರ ನೆಪ ಮಾತ್ರ ಪರಿಹಾರ ನೀಡದೆ ಬೆಳೆ ಕಳೆದುಕೊಂಡ ರೈತರಿಗೆ ವೈಜ್ಞಾನಿಕ ಪರಿಹಾರದ ಜೊತೆಗೆ ದುಡಿಯುವ ಕೈಗಳಿಗೆ ಕೂಲಿ ದೊರೆಯಲು ಎಂ ಎನ್ ಆರ್ ಇಜಿಎ ಕಾಮಗಾರಿ ಹೆಚ್ಚಿಸಬೇಕೆಂದು ಆಗ್ರಹಿಸಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಆಂಜನಪ್ಪ ಮಾತನಾಡಿ, ಜಿಲ್ಲೆಯಲ್ಲಿ ಸುಮಾರು 2000 ಕೋಟಿ ರೂ. ಗಳಿಗೆ ಹೆಚ್ಚಿನ ನಷ್ಟ ಉಂಟಾಗಿದ್ದರೂ ಕೇಂದ್ರ ಸರಕಾರಕ್ಕೆ 117 ಕೋಟಿ ರೂ. ಪರಿಹಾರ ಕೇಳಲಾಗಿದೆ, ಇದು ಅತ್ಯಂತ ಅವೈಜ್ಞಾನಿಕ, ಅಧಿಕಾರಿಗಳು ನೀಡಿದ ಅಂಕಿ ಅಂಶವನ್ನೇ ಶಾಸಕರು, ಸಚಿವರು ಪರಾಮರ್ಶಿಸದೆ ಕೇಂದ್ರಕ್ಕೆ ಕಳುಹಿಸಲಾಗಿದೆ, ಹಾಗಾಗಿ ಸರಕಾರ ಕೂಡಲೇ ತನ್ನ ಸಚಿವರು, ಶಾಸಕರು ಮೂಲಕ ಮತ್ತೊಂದು ವರದಿ ತರಿಸಿಕೊಂಡು ಕೇಂದ್ರಕ್ಕೆ ಮತ್ತೊಂದು ಪ್ರಸ್ತಾವನೆ ಸಲ್ಲಿಸುವಂತೆ ಮನವಿ ಮಾಡಿದರು.
ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ರಾಜ್ಯ ಸರಕಾರ ಬರ ಪರಿಹಾರದ ವಿಚಾರದಲ್ಲಿ ಕೇಂದ್ರದ ಕಡೆ ಮುಖ ಮಾಡಿ ಕುಳಿತಿದೆ, ಬರದ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಬೆಲೆಯಲ್ಲಿಯೂ ಸಾಕಷ್ಟು ಹೆಚ್ಚಳವಾಗಿದ್ದರೂ ರೂರಲ್ ಎಂಪ್ಲಾಯಿಮೆಂಟ್ ಕೂಲಿ ಹೆಚ್ಚಳ ಮಾಡಿಲ್ಲ, ಈಗ ನೀಡುತ್ತಿರುವ 330 ರೂ. ಕೂಲಿಗೆ ಆಳುಗಳು ಸಿಗುವುದು ಕಷ್ಟ, ಹಾಗಾಗಿ ಕೂಲಿ ಹೆಚ್ಚಳ ಮಾಡಬೇಕು, ಹಾಗೆಯೇ ಗ್ಯಾರಂಟಿಗಳನ್ನು ಬದಿಗಿಟ್ಟು ಜನರ ಸಂಕಷ್ಟಕ್ಕೆ ಸ್ಪಂದಿಸಬೇಕು, ಕೊಬ್ಬರಿಗೆ ಘೋಷಣೆ ಮಾಡಿದ್ದ 1250 ರೂ. ಪ್ರೋತ್ಸಾಹ ಧನ ಇದುವರೆಗೂ ಒಬ್ಬ ರೈತರಿಗೂ ತಲುಪಿಲ್ಲ, ಇದೊಂದು ಮೋಸದ ಘೋಷಣೆಯಾಗಿದೆ ಎಂದು ಆರೋಪಿಸಿದರು.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ, ಬರ ಪರಿಹಾರ ಕಾಮಗಾರಿ ಕೈಗೊಳ್ಳಲು ಜಿಲ್ಲಾಡಳಿತಕ್ಕೆ 34 ಕೋಟಿ ರೂ. ಅನುದಾನ ಸರಕಾರದಿಂದ ಬಿಡುಗಡೆಯಾಗಿದೆ, ಇದರಲ್ಲಿ ಮೊದಲು ಮೇವಿನ ಬೆಳೆ ಬೆಳೆಯು ಆದ್ಯತೆ ನೀಡಿ ಒಂದು ತಾಲೂಕಿಗೆ 100 ಜನ ನೀರಾವರಿ ಇರುವ ರೈತರನ್ನು ಗುರುತಿಸಿ ಅವರಿಗೆ ಮೇವಿನ ಕಿಟ್ ವಿತರಿಸಲಾಗಿದೆ, ಅಲ್ಲದೆ ಎಲ್ಲಾ ಆರ್ ಓ ಪ್ಲಾಂಟ್ ಗಳ ರಿಪೇರಿಗೆ ಸೂಚನೆ ನೀಡಲಾಗಿದೆ, ಎಂಎನ್ಆರ್ ಜಿಎ ಮೂಲಕ ಹೆಚ್ಚು ಜನರಿಗೆ ಉದ್ಯೋಗ ಒದಗಿಸಲು ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದು ಜೆಡಿಎಸ್ ಮುಖಂಡರಿಗೆ ವಿವರಿಸಿದರು.

ಈ ವೇಳೆ ಮಾಜಿ ಶಾಸಕರಾದ ಸುಧಾಕರ್ ಲಾಲ್, ಕೆ.ಎಂ.ತಿಮ್ಮರಾಯಪ್ಪ, ಜೆಡಿಎಸ್ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು, ಪಾಲಿಕೆ ಉಪಮೇಯರ್ ಟಿ.ಕೆ.ನರಸಿಂಹಮೂರ್ತಿ, ಸದಸ್ಯರಾದ ಹೆಚ್.ಡಿ.ಕೆ.ಮಂಜುನಾಥ್, ಧರಣೇಂದ್ರ ಕುಮಾರ್, ಎ.ಶ್ರೀನಿವಾಸ್, ಮುಖಂಡ ರಾದ ಕೆ.ಟಿ.ಶಾಂತರಾಜು, ರಂಗನಾಥ್, ಹೆಚ್.ಟಿ.ಬಾಲಕೃಷ್ಣ, ಮುದಿಮಡು ರಂಗಸ್ವಾಮಿ, ನಗರ ಅಧ್ಯಕ್ಷ ವಿಜಯಗೌಡ, ಮೆಡಿಕಲ್ ಮಧು, ತಾಹೀರಾ ಭಾನು, ಲೀಲಾವತಿ ಮತ್ತಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!