ಇತಿಹಾಸ ಪ್ರಸಿದ್ದ ಗೂಳೂರು ಗಣಪತಿ ಪ್ರತಿಷ್ಠಾಪನೆ

ಭಕ್ತರ ದರ್ಶನಕ್ಕೆ ವಿದ್ಯುಕ್ತ ಚಾಲನೆ- ನೂರಾರು ಭಕ್ತರಿಂದ ಪೂಜೆ ಸಲ್ಲಿಕೆ

96

Get real time updates directly on you device, subscribe now.


ತುಮಕೂರು: ಇತಿಹಾಸ ಪ್ರಸಿದ್ದ ಗೂಳೂರು ಮಹಾ ಗಣಪತಿ ಮೂರ್ತಿಯನ್ನು ಬಲಿಪಾಡ್ಯಮಿಯಂದು ವಿವಿಧ ಧಾರ್ಮಿಕ ವಿಧಿ ವಿಧಾನ ಹಾಗೂ ಸಂಪ್ರದಾಯದೊಂದಿಗೆ ಪ್ರತಿಷ್ಠಾಪಿಸಿದ್ದು, ಒಂದು ತಿಂಗಳ ಕಾಲ ಭಕ್ತರಿಗೆ ಇತಿಹಾಸ ಪ್ರಸಿದ್ದ ಗಣೇಶಮೂರ್ತಿಯ ದರ್ಶನ ಭಾಗ್ಯ ದೊರೆಯಲಿದೆ.
ಐತಿಹಾಸಿಕ ಹಿನ್ನೆಲೆ ಹೊಂದಿರುವ ಗೂಳೂರು ಮಹಾ ಗಣಪತಿಯನ್ನು ಬಲಿಪಾಢ್ಯಮಿ ದಿನ ಪ್ರತಿಷ್ಠಾಪಿಸುವ ಮೂಲಕ ವಿಶೇಷ ಪೂಜಾ ಕೈಂಕರ್ಯದೊಂದಿಗೆ ಭಕ್ತರ ದರ್ಶನಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.
ಕಾರ್ತಿಕ ಮಾಸದಲ್ಲಿ 1 ತಿಂಗಳ ಕಾಲ ಈ ಬೃಹತ್ ಮಹಾಗಣಪತಿಗೆ ಪ್ರತಿನಿತ್ಯ ವಿಶೇಷ ಪೂಜಾ ಕೈಂಕರ್ಯ ನೆರವೇರಲಿದ್ದು, ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಪ್ರತಿ ವರ್ಷದಂತೆ ಈ ವರ್ಷವೂ ಬಲಿಪಾಡ್ಯಮಿ ದಿನದಂದು ಗಣೇಶಮೂರ್ತಿಗೆ ವಿಶೇಷ ಪೂಜೆಯೊಂದಿಗೆ ಕಣ್ಣುಧರಿಸಲಾಯಿತು, ಗಣೇಶ ಮೂರ್ತಿಯ ವಿಶೇಷ ಪೂಜಾ ಕೈಂಕರ್ಯ ಇನ್ನು ಒಂದು ತಿಂಗಳ ಕಾಲ ಪ್ರತಿನಿತ್ಯ ನೆರವೇರಲಿದೆ.
ಈ ಬೃಹತ್ ಗಣೇಶ ಮೂರ್ತಿಗೆ ವಿಶೇಷ ಐತಿಹ್ಯವಿದ್ದು, 1 ತಿಂಗಳ ಕಾಲ ಗ್ರಾಮದ ಪ್ರತಿಯೊಂದು ಮನೆಯವರು ನಿತ್ಯ ವಿಶೇಷ ಪೂಜೆ ಸಲ್ಲಿಸುವ ಮೂಲಕ ಭಕ್ತಿ ಸಮರ್ಪಿಸುವರು, ಪ್ರತಿದಿನ ರಾತ್ರಿ 9 ಗಂಟೆಗೆ ಮಹಾ ಮಂಗಳಾರತಿ ನಡೆಯಲಿದೆ, 18 ಕೋಮಿನವರು ಗೂಳೂರು ಗಣಪನಿಗೆ ವಿವಿಧ ಸೇವೆ ಸಲ್ಲಿಸಲಿದ್ದಾರೆ.
ಗಣೇಶ ಚೌತಿ ಸಂದರ್ಭದ ಬದಲು ಕಾರ್ತಿಕ ಮಾಸದಲ್ಲಿ ಗೂಳೂರಿನಲ್ಲಿ ಗಣೇಶ ಉತ್ಸವ ನಡೆಯುವುದು ವಿಶೇಷವೆನಿಸಿದೆ, ಆಯುಧಪೂಜೆ, ವಿಜಯದಶಮಿ ಹೊತ್ತಿಗೆ ಮೂರ್ತಿ ಒಂದು ಆಕಾರಕ್ಕೆ ಬರಲಿದ್ದು, ಆ ಸಂದರ್ಭದಲ್ಲಿ ಅದರ ನಾಬಿಯೊಳಗೆ ಚಿಕ್ಕ ಗಣಪತಿ ಕೂರಿಸಲಾಗುವುದು, ಕಾರ್ತಿಕ ಪಾಡ್ಯ ಪ್ರಾರಂಭವಾಗುವ ವೇಳೆಗೆ ಸರ್ವಾಲಂಕಾರ ಭೂಷಿತನಾಗಿ ರೂಪುಗೊಂಡು ಬಲಿಪಾಡ್ಯಮಿಯಿಂದ ಭಕ್ತರಿಗೆ ದರ್ಶನ ಭಾಗ್ಯ ಪ್ರಾಪ್ತಿಯಾಗುತ್ತಿದೆ.

ಎರಡು ದಿನ ಜಾತ್ರೆ
ಬಲಿಪಾಢ್ಯಮಿಯಂದು ಪ್ರತಿಷ್ಠಾಪಿಸಿರುವ ಐತಿಹಾಸಿಕ ಪ್ರಸಿದ್ದ ಗೂಳೂರು ಮಹಾ ಗಣಪತಿಯ ವಿಸರ್ಜನಾ ಮಹೋತ್ಸವ ಡಿ.16 ಮತ್ತು 17 ರಂದು ಅದ್ದೂರಿಯಾಗಿ ನಡೆಯಲಿದೆ ಎಂದು ಗೂಳೂರು ಶ್ರೀ ಮಹಾ ಗಣಪತಿ ಭಕ್ತ ಮಂಡಳಿ ಅಧ್ಯಕ್ಷ ಹಾಗೂ ಜಿಪಂ ಮಾಜಿ ಸದಸ್ಯ ಜಿ.ಎಸ್. ಶಿವಕುಮಾರ್ ತಿಳಿಸಿದರು.
ಎರಡು ದಿನಗಳ ಕಾಲ ಜಾತ್ರಾ ಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ಜರುಗಲಿದ್ದು, ಡೊಳ್ಳು ಕುಣಿತ, ಕೀಲು ಕುದುರೆ ಸೇರಿದಂತೆ ವಿವಿಧ ಜಾನಪದ ಕಲಾ ಮೇಳದೊಂದಿಗೆ ಗ್ರಾಮ ರಾಜಬೀದಿಗಳಲ್ಲಿ ಗಣೇಶಮೂರ್ತಿಯ ಅದ್ದೂರಿ ಮೆರವಣಿಗೆ ನಡೆಯಲಿದೆ ಎಂದರು.
ಬಲಿಪಾಡ್ಯಮಿ ದಿನದಿಂದ ಒಂದು ತಿಂಗಳ ಕಾಲ ಇತಿಹಾಸ ಪ್ರಸಿದ್ದ ಗಣಪತಿ ಮೂರ್ತಿ ದರ್ಶನ ಪಡೆಯಲು ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ, ಪ್ರತಿನಿತ್ಯ ಪೂಜಾ ಕೈಂಕರ್ಯ ನೆರವೇರಲಿದ್ದು, ಸುಗಮ ಸಂಗೀತ, ಪೌರಾಣಿಕ ನಾಟಕ ಸೇರಿದಂತೆ ವಿವಿಧ ಮನರಂಜನಾ ಕಾರ್ಯಕ್ರಮ ನೆರವೇರಲಿವೆ ಎಂದು ಹೇಳಿದರು.

ದೇಶದಲ್ಲೆಡೆ ಗಣಪತಿ ಹಬ್ಬದಂದು ಗಣಪತಿ ಪ್ರತಿಷ್ಠಾಪಿಸಿ ಸ್ವಲ್ಪ ದಿನ ಪೂಜೆ ಮಾಡಿ ನಂತರ ವಿಸರ್ಜನೆ ಮಾಡುತ್ತಾರೆ, ಆದರೆ ಗೂಳೂರಿನ ಗಣಪತಿಯ ಇತಿಹಾಸವೇ ಬೇರೆ, ಗಣಪತಿ ಚತುರ್ಥಿಯಂದು 18 ಕೋಮಿನ ಜನಾಂಗದವರು ಹೋಗಿ ಗೂಳೂರು ಕೆರೆಯಲ್ಲಿ ಮಣ್ಣನ್ನು ತಂದು ಮೂರ್ತಿ ಮಾಡಲು ಪ್ರಾರಂಭ ಮಾಡಲಾಗುತ್ತದೆ, ಬಲಿಪಾಢ್ಯಮಿಯಂದು ಮುಂಜಾನೆ ಶುಭ ಲಗ್ನದಲ್ಲಿ ಗಣಪತಿ ವಿಗ್ರಹಕ್ಕೆ ಕಣ್ಣುಧಾರೆ ಮಾಡಲಾಯಿತು ಎಂದು ಮಾಹಿತಿ ನೀಡಿದರು.
ಡಿ.16 ರಂದು ರಾತ್ರಿ 18 ಕೋಮಿನ ಜನರ ಸಮ್ಮುಖದಲ್ಲಿ ಗಣೇಶ ಮೂರ್ತಿಯನ್ನು ದೇವಾಲಯದಿಂದ ಹೊರ ತಂದು ಗ್ರಾಮದ ಪ್ರಮುಖ ಬೀದಿಗಳಲ್ಲಿ ಅದ್ದೂರಿ ಮೆರವಣಿಗೆ ನಡೆಸಲಾಗುವುದು, ಡಿ.17 ರಂದು ಸಂಜೆ 5 ಗಂಟೆಯ ನಂತರ ಗೂಳೂರು ಕೆರೆಯಲ್ಲಿ ವೈಭವಯುತವಾಗಿ ವಿಸರ್ಜಿಸಲಾಗುವುದು, ಒಂದು ತಿಂಗಳ ಕಾಲ ಗಣೇಶ ಮೂರ್ತಿಯ ದರ್ಶನೋತ್ಸವಕ್ಕೆ ಜಿಲ್ಲೆ, ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದಲೂ ಭಕ್ತಾದಿಗಳು ಬರುತ್ತಾರೆ ಎಂದು ತಿಳಿಸಿದರು.

ಅರ್ಚಕ ಶಿವಕುಮಾರ ಶಾಸ್ತ್ರಿ ಮಾತನಾಡಿ, ಗೌರಿ ಗಣೇಶ ಹಬ್ಬದಿಂದ ನಿರಂತರವಾಗಿ ಸ್ವಾಮಿಯನ್ನು ಸಿದ್ಧಪಡಿಸಿ ಬಲಿಪಾಢ್ಯಮಿಯಂದು ಕಣ್ಣುಧರಿಸಿ ಪೂಜಾ ಕೈಂಕರ್ಯ ಆರಂಭವಾಗಿದ್ದು, ಒಂದು ತಿಂಗಳ ಕಾಲ ಪ್ರತಿನಿತ್ಯ ಭಕ್ತಾದಿಗಳ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದರು.

Get real time updates directly on you device, subscribe now.

Comments are closed.

error: Content is protected !!