ತುಮಕೂರು: ಜ್ಞಾನದ ಜೊತೆ ಮನೋ ವಿಕಾಸಕ್ಕಾಗಿ ಯೋಗಾಭ್ಯಾಸ ಎಲ್ಲರಿಗೂ ಅವಶ್ಯಕವಾಗಿದೆ, ಪಠ್ಯ ಚಟುವಟಿಕೆ, ಗ್ರಂಥಾಲಯ ಬಳಕೆ ಹಾಗೂ ಕ್ರೀಡೆ ಮಾನಸಿಕ, ದೈಹಿಕ ಆರೋಗ್ಯ ವೃದ್ಧಿಸುತ್ತದೆ ಎಂದು ತುಮಕೂರು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಹೇಳಿದರು.
ತುಮಕೂರು ವಿಶ್ವ ವಿದ್ಯಾಲಯದ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ವತಿಯಿಂದ ಆಯೋಜಿಸಿದ್ದ 2023- 24ನೇ ಸಾಲಿನ ಅಂತರ ಕಾಲೇಜು ಪುರುಷರ ಮತ್ತು ಮಹಿಳೆಯರ ಯೋಗ ಸ್ಪರ್ಧೆ ಉದ್ಘಾಟಿಸಿ ಮಾತನಾಡಿ, ಈ ಸಾಲಿನಿಂದ ತುಮಕೂರು ವಿವಿಯ ವಾರ್ಷಿಕ ಕ್ರೀಡಾ ಬಜೆಟ್ 1 ಕೋಟಿ 70 ಲಕ್ಷಕ್ಕೆ ಏರಿದೆ, ವಿವಿಯ, ವಿವಿಗೆ ಒಳಪಡುವ ಎಲ್ಲಾ ಸಂಯೋಜಿತ ಕಾಲೇಜುಗಳ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ತೋರಿಸಬೇಕು, ಅವಶ್ಯಕವಾದ ಎಲ್ಲಾ ಸೌಲಭ್ಯ, ಸೌಕರ್ಯಗಳನ್ನು ಒದಗಿಸಲು ವಿವಿ ಸಿದ್ಧವಾಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳ ಕ್ರೀಡಾಭ್ಯಾಸಕ್ಕಾಗಿ ವಿವಿಯ ಪಕ್ಕದಲ್ಲಿರುವ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಲಭ್ಯವಿರುವ 40 ಕೊಠಡಿಗಳ ಬಳಕೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ, ಸಂಯೋಜಿತ ಕಾಲೇಜುಗಳಲ್ಲಿ ಕ್ರೀಡಾ ಶುಲ್ಕದ ಶೇ.25 ರಷ್ಟು ಹಣವನ್ನುಕ್ರೀಡೆಗೆ ಸಂಬಂಧಪಟ್ಟ ಚಟುವಟಿಕೆಗಳಿಗಾಗಿ ಬಳಸಬೇಕೆಂದು ಈಗಾಗಲೇ ತಿಳಿಸಿದ್ದೇವೆ ಎಂದರು.
ಬೆಂಗಳೂರಿನ ಆಚಾರ್ಯಯೋಗ ಯೂತ್ ಕ್ಲಬ್ ನ ಕಾರ್ಯದರ್ಶಿ ಎಂ.ರಾಜೇಶ್ ಆಚಾರಿ ಮಾತನಾಡಿ, ಯೋಗಾಭ್ಯಾಸದಿಂದ ಆರೋಗ್ಯ ವೃದ್ಧಿಯಾಗುತ್ತದೆ, ಯೋಗ ಸ್ಪರ್ಧೆಗಳಲ್ಲಿ ವಿಶ್ವ ವಿದ್ಯಾಲಯದ ಮಟ್ಟದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿದ್ದರೆ ಕ್ರೀಡಾ ಖೋಟಾದಲ್ಲಿ ಉದ್ಯೋಗಾವಕಾಶ ಇವೆ, ಉತ್ತಮ ವೃತ್ತಿ ಜೀವನ ನಿರ್ಮಾಣವಾಗುತ್ತದೆ, ಯೋಗವು ಮಹತ್ವಪೂರ್ಣ ಜೀವನ ರೂಪಿಸುತ್ತದೆ ಎಂದು ತಿಳಿಸಿದರು.
2023-24ನೇ ಸಾಲಿನ ಅಂತರ ಕಾಲೇಜು ಪುರುಷರ ಮತ್ತು ಮಹಿಳೆಯರ ಯೋಗ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪುರುಷರ ವಿಭಾಗದ ಯೋಗ ಸ್ಪರ್ಧೆಯಲ್ಲಿ ಹೆಬ್ಬೂರಿನ ಜಿ ಎಫ್ ಜಿ ಸಿ ಕಾಲೇಜಿನ ಅನಿಲ್ ಕುಮಾರ್.ಎನ್. ಪ್ರಥಮ ಸ್ಥಾನ, ವಿವಿ ವಿಜ್ಞಾನ ಕಾಲೇಜಿನ ಕುಮಾರ ಮಹಂತೇಶ ಯಂಕಾಚಿ ದ್ವಿತೀಯ ಸ್ಥಾನ, ರೋಹಿತ್.ಎಚ್. ತೃತೀಯ ಸ್ಥಾನ, ವಿವಿ ಕಲಾ ಕಾಲೇಜಿನ ಪಿ.ಲಲ್ಲೂ ಪ್ರಸಾದ್ ನಾಲ್ಕನೆ ಸ್ಥಾನ, ವಿವಿ ವಿಜ್ಞಾನ ಕಾಲೇಜಿನ ಮುರುಗೇಶ ಬಸವರಾಜ ದೇವಾರೆಡ್ಡಿ ಐದನೇ ಸ್ಥಾನ, ಮಂಜುನಾಥ ಆರಾಧ್ಯಆರನೇ ಸ್ಥಾನ ಪಡೆದುಕೊಂಡರು.
ಮಹಿಳಾ ವಿಭಾಗದಲ್ಲಿ ವಿವಿ ವಿಜ್ಞಾನ ಕಾಲೇಜಿನ ಅರ್ಪಿತಾ.ವಿ. ಪ್ರಥಮ ಸ್ಥಾನ, ಆರ್.ತನುಶ್ರೀ ದ್ವಿತೀಯ ಸ್ಥಾನ, ಜಿ ಎಫ್ ಜಿ ಸಿ ಹೆಬ್ಬೂರಿನ ಮಹಾಲಕ್ಷ್ಮೀ.ಬಿ. ತೃತೀಯ ಸ್ಥಾನ, ವಿವಿ ವಿಜ್ಞಾನ ಕಾಲೇಜಿನ ರಕ್ಷಿತಾ.ಬಿ. ನಾಲ್ಕನೇ ಸ್ಥಾನ, ತುಮಕೂರಿನ ಜಿ ಎಫ್ ಜಿ ಸಿ ಕಾಲೇಜಿನ ಸಂಜನಾ.ಎಚ್.ಆರ್. ಐದನೇ ಸ್ಥಾನ, ವಿವಿ ವಿಜ್ಞಾನ ಕಾಲೇಜಿನ ಸಂಚಿತಾ ಆರನೇ ಸ್ಥಾನ ಪಡೆದುಕೊಂಡರು.
ವಿವಿಯ ವಿಜ್ಞಾನ ಕಾಲೇಜಿನ ಪುರುಷರ ತಂಡ ಹಾಗೂ ಮಹಿಳೆಯರ ತಂಡ ಗರಿಷ್ಠ ಪ್ರಶಸ್ತಿ ಪಡೆದುಕೊಂಡು ಸಮಗ್ರ ಛಾಂಪಿಯನ್ ಶಿಪ್ ಪ್ರಶಸ್ತಿಗೆ ಭಾಜನರಾದರು. ವಿವಿ ಕುಲಸಚಿವೆ ನಾಹಿದಾ ಜಮ್ ಜಮ್ ಪ್ರಶಸ್ತಿ ಪ್ರದಾನ ಮಾಡಿದರು.
ಕ್ರೀಡಾ ವಿಭಾಗದ ನಿರ್ದೇಶಕ ಡಾ.ಎ.ಎಂ.ಮಂಜುನಾಥ್, ಸಹಾಯಕ ನಿರ್ದೇಶಕಿ ಶ್ವೇತ.ಓ.ಎಸ್, ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ಸಂಘಟನಾ ಅಧ್ಯಕ್ಷ ಡಾ.ಸೋಮಶೇಖರ್, ರಾಧ, ಯೋಗೇಶ್ ಭಾಗವಹಿಸಿದ್ದರು.
Comments are closed.