ತುಮಕೂರು: ಖಾಸಗಿ ಅನುದಾನ ರಹಿತ ಶಾಲೆಗಳ ಸಮಸ್ಯೆ ನಿವಾರಣೆಗೆ ಸರ್ಕಾರಗಳು ಸರಿಯಾದ ಪ್ರಯತ್ನ ಮಾಡಲಿಲ್ಲ, ಅವೈಜ್ಞಾನಿಕ ಕಾನೂನು, ನಿಯಮಗಳ ಮೂಲಕ ಸಮಸ್ಯೆಗಳನ್ನು ಸರ್ಕಾರ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ ಎಂದು ಖಾಸಗಿ ಅನುದಾನ ರಹಿತ ಶಾಲೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ ಹೇಳಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿಯ ಆಗ್ನೇಯ ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ತಾವು ಸ್ಪರ್ಧೆ ಮಾಡುವುದಾಗಿ ಇಂಗಿತ ವ್ಯಕ್ತಪಡಿಸಿ, ಶಿಕ್ಷಣ ಕೇತ್ರದಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾದ ಯಾರೊಬ್ಬರೂ ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಿಲ್ಲ, ಈ ಕಾರಣದಿಂದ ಒಕ್ಕೂಟದ ಪ್ರತಿನಿಧಿಯಾಗಿ ತಾವು ಚುನವಣೆಗೆ ಸ್ಪರ್ಧಿಸಲು ಒಕ್ಕೂಟದ ಸಭೆಯಲ್ಲಿ ಒಮ್ಮತದಿಂದ ತೀರ್ಮಾನ ಮಾಡಲಾಗಿದೆ ಎಂದು ಹೇಳಿದರು.
ಹಲವು ವರ್ಷಗಳಿಂದ ಖಾಸಗಿ ಶಾಲೆ ಶಿಕ್ಷಕರು, ಆಡಳಿತ ಮಂಡಳಿಗಳು ನೋವು ಉಂಡಿವೆ, ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳ ಸಮಸ್ಯೆಗಳ ಬಗ್ಗೆ ಯಾವ ವಿಧಾನ ಪರಿಷತ್ ಸದಸ್ಯರು ಸ್ಪಂದಿಸಲಿಲ್ಲ, ಕೋವಿಡ್ ಸಂಕಷ್ಟ ಕಾಲದಲ್ಲಿ ಟೀಚರ್ಸ್ ವೆಲ್ಫೇರ್ ಫಂಡ್ ಬಳಸಿ ಕಷ್ಟಕ್ಕೆ ನೆರವಾಗಿರಿ ಎಂದು ಒಕ್ಕೂಟದಿಂದ ಮನವಿ ಮಾಡಿದರೂ ಅದರಲ್ಲಿ ಕೇವಲ ಬಿಡಿಗಾಸು ಬಳಸಲಾಯಿತು, ನಮ್ಮ ವಿವಿಧ ಸಮಸ್ಯೆಗಳ ಬಗ್ಗೆ ಕಲಾಪದಲ್ಲಿ ಚರ್ಚೆ ಮಾಡಲು ಮನವಿ ಮಾಡಿದರೂ ವಿಧಾನಪರಿಷತ್ ಸದಸ್ಯರು ನಿರ್ಲಕ್ಷ ಮಾಡಿದರು, ಇವರು ನಮ್ಮ ಸಮಸ್ಯೆಗೆ ಸ್ಪಂದಿಸುವುದಿಲ್ಲ, ನಮ್ಮ ನೋವಿನ ಧ್ವನಿಯಾಗಲು ನಮ್ಮ ಪ್ರತಿನಿಧಿ ಇರಬೇಕು ಎಂಬ ಕಾರಣಕ್ಕೆ ನಾನು ಪಕ್ಷೇತ್ರಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದರು.
ಇಷ್ಟು ವರ್ಷಗಳಿಂದ ರಾಜ್ಯದಲ್ಲಿ ಸರಿಯಾದ ಶಿಕ್ಷಣ ನೀತಿ ಜಾರಿಯಾಗಲಿಲ್ಲ, ಬಜೆಟ್ ನಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಆದ್ಯತೆ ಎಂದು ಹೇಳುವ ಸರ್ಕಾರಗಳು ಶಿಕ್ಷಣಕ್ಕೆ ಅಂತಹ ಮಹತ್ವ ಕೊಡುವಲ್ಲಿ ವಿಫಲವಾಗಿವೆ, ಶಿಕ್ಷಣದ ಮಹತ್ವ ಹಾಗೂ ಚಿಂತನೆಯ ಕಾಳಜಿ ಇಲ್ಲದವರಿಂದ ಇಂದು ಶಿಕ್ಷಣ ಕ್ಷೇತ್ರ ಸಂಕಷ್ಟಕ್ಕೆ ಸಿಲುಕಿದೆ ಎಂದು ಲೋಕೇಶ್ ತಾಳಿಕಟ್ಟೆ ಹೇಳಿದರು.
ತಾವು ಶಿಕ್ಷಕನಾಗಿ, ಶಿಕ್ಷಣ ಸಂಸ್ಥೆ ಕಟ್ಟಿ ಅದರ ಕಷ್ಟಗಳನ್ನು ಅನುಭವಿಸುತ್ತಿರುವುದರಿಂದ ಈ ಕ್ಷೇತ್ರದ ಪೂರ್ಣ ಸಮಸ್ಯೆಯ ಅರಿವಿದೆ ಎಂದು ಹೇಳಿದರು.
ರುಪ್ಸಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ್, ಉಮಾಪತಯ್ಯ, ಮುಖಂಡರಾದ ಚಂದ್ರಕಾಂತ ಭಂಡಾರಿ, ಗೋವಿಂದರಾಜು ಇತರರು ಭಾಗವಹಿಸಿದ್ದರು.
Comments are closed.