ನಾಗರಿಕರಿಗೆ ಸರ್ಕಾರದ ಸೇವೆ ತಲುಪಿಸಿ

ಸಕಾಲದಲ್ಲಿ ಸಾರ್ವಜನಿಕ ಅರ್ಜಿ ವಿಲೇ ಮಾಡಿ: ಜಿ.ಪ್ರಭು

114

Get real time updates directly on you device, subscribe now.


ತುರುವೇಕೆರೆ: ಸಾರ್ವಜನಿಕರು ಕಚೇರಿಗೆ ತಮ್ಮ ಅಹವಾಲುಗಳನ್ನು ಸಲ್ಲಿಸಲು ಬಂದಾಗ ಅಧಿಕಾರಿಗಳು ಅವರಿಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಸಕಾಲದಲ್ಲಿ ಅರ್ಜಿಗಳನ್ನು ವಿಲೇವಾರಿ ಮಾಡಿದಾಗ ಮಾತ್ರ ಆಡಳಿತ ವ್ಯವಸ್ಥೆಯ ಮೇಲೆ ಜನರಿಗೆ ನಂಬಿಕೆ ಬರುತ್ತದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಪ್ರಭು ಹೇಳಿದರು.
ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ತುರುವೇಕೆರೆ ಪಟ್ಟಣದ ಮಾಸ್ಟರ್ ಕೆ.ಹಿರಣ್ಣಯ್ಯ ಬಯಲು ರಂಗಮಂದಿರ ಸಭಾಂಗಣದಲ್ಲಿ ತಾಲ್ಲೂಕು ಮಟ್ಟದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ಕಾರದ ಎಲ್ಲಾ ಸೇವೆಗಳು ನಾಗರಿಕರಿಗೆ ತಲುಪಬೇಕು, ಆದರೆ ಕೆಲವು ಇಲಾಖೆಗಳಲ್ಲಿ ಇಂದಿಗೂ ಜನರಿಗೆ ಸೇವೆ ಸಿಗದೆ ಸಮಸ್ಯೆಗಳಿವೆ, ಹೋಬಳಿ ಹಾಗೂ ತಾಲ್ಲೂಕು ಮಟ್ಟದಲ್ಲಿ ಬಗೆಹರಿಯದ ಸಮಸ್ಯೆಗಳನ್ನು ಜಿಲ್ಲಾ ಮಟ್ಟದ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ಹೇಳಿದರು.
ಸರ್ಕಾರದ ಆದೇಶದನ್ವಯ ಜನತಾ ದರ್ಶನ ಕಾರ್ಯಕ್ರಮ ಮಾಡುವುದರ ಮೂಲಕ ಸಾರ್ವಜನಿಕರು ತಮ್ಮ ಕೆಲಸ ಕಾರ್ಯ ಬಿಟ್ಟು ಪದೇ ಪದೆ ಕಚೇರಿಗಳಿಗೆ ಓಡಾಟ ಮಾಡುವುದನ್ನು ತಪ್ಪಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ, ಜನರ ಸಮಸ್ಯೆ ಆಲಿಸಿ ಅವುಗಳಿಗೆ ಸ್ಥಳದಲ್ಲಿಯೇ ಪರಿಹಾರವನ್ನು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ನೀಡಲಿದ್ದಾರೆ ಎಂದು ಹೇಳಿದರು.

ತುಮಕೂರು ನಗರ ಹಾಗೂ ಕುಣಿಗಲ್ ತಾಲ್ಲೂಕಿನ ಹುಲಿಯೂರು ದುರ್ಗದಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಸ್ವೀಕೃತಿಯಾದ ಅರ್ಜಿಗಳ ಪೈಕಿ ಹೆಚ್ಚು ಕಂದಾಯ ಇಲಾಖೆ ಮತ್ತು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಬಂದಿವೆ, ಕಂದಾಯ ಇಲಾಖೆಗೆ ಸಂಬಂಧಿಸಿದ ಪೋಡಿ, ಹದ್ಬಸ್ತು, ದುರಸ್ಥಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಅರ್ಜಿಗಳು ಸ್ವಿಕೃತಿಯಾಗಿವೆ, ಆರ್ಡಿಪಿಆರ್ ಇಲಾಖೆಗೆ 11ಇ ಖಾತೆ ಮಾಡಿಕೊಡುವುದರ ಕುರಿತು ಅರ್ಜಿಗಳು ಬಂದಿವೆ ಎಂದು ಹೇಳಿದರು.
ತಾಲ್ಲೂಕಿನ ಎಲ್ಲಾ ಗ್ರಾಮಗಳಲ್ಲಿ ಮೂಲಭೂತ ಅಭಿವೃದ್ಧಿ ಕಾಮಗಾರಿಗಳಾದ ರಸ್ತೆ, ಚರಂಡಿ, ಶೌಚಾಲಯ ನಿರ್ಮಾಣ ಮಾಡಿಕೊಡಬೇಕೆಂದು ಅರ್ಜಿಗಳನ್ನು ಸಲ್ಲಿಸಿದರೆ ಅವುಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಿ ಅವುಗಳಿಗೆ ನಿಮ್ಮ ಹಂತದಲ್ಲಿಯೇ ಪರಿಹಾರ ಕಂಡುಕೊಳ್ಳಬೇಕು ಎಂದು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಹೇಳಿದರು.

ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ ಮಾತನಾಡಿ, ಸಾರ್ವಜನಿಕರು ನೀಡುವ ಅಹವಾಲುಗಳನ್ನು ಆಯಾ ಇಲಾಖೆಗೆ ನೀಡಿರುವ ಐಪಿಜಿಆರ್ ಎಸ್ ಮೂಲಕ ಆನ್ ಲೈನ್ ನಲ್ಲಿ ನೋಂದಣಿ ಮಾಡಿಕೊಂಡು ಅವರಿಗೆ ಸ್ವೀಕೃತಿ ನೀಡಲಾಗುವುದು, ಅರ್ಜಿ ಯಾವ ಹಂತದಲ್ಲಿ ಇದೆ ಎಂದು ಆನ್ಲೈನ್ ಮೂಲಕ ಪರಿಶೀಲಿಸಬಹುದು ಎಂದು ಹೇಳಿದರು.
ಸಾರ್ವಜನಿಕರಿಂದ ಸ್ವಿಕೃತಿಯಾದ ಅರ್ಜಿಯನ್ನು ನಿಗದಿತ ಸಮಯದೊಳಗೆ ವಿಲೇವಾರಿ ಮಾಡಬೇಕು, ಇಲ್ಲವಾದರೆ ಅದಕ್ಕೆ ಹಿಂಬರಹ ಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ರೈತರು ಬರ ಪರಿಹಾರ ಹಣಕ್ಕಾಗಿ ಕಡ್ಡಾಯವಾಗಿ ಫ್ರೂಟ್ ತಂತ್ರಾಂಶದಲ್ಲಿ ಬೆಳೆ ವಿವರ ನೋಂದಣಿ ಮಾಡಿಕೊಳ್ಳಬೇಕು, ನೋಂದಣಿ ಮಾಡಿಕೊಂಡಿರುವ ರೈತರ ಖಾತೆಗೆ ನೇರವಾಗಿ ಹಣ ಜಮೆ ಮಾಡಲಾಗುವುದು ಎಂದು ಹೇಳಿದರು.
ಜನತಾ ದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ತುರುವೇಕೆರೆ ತಾಲ್ಲೂಕಿನ ರೈತರು ತಮ್ಮ ಕಂದಾಯ ಅಥವಾ ಇತರೆ ಇಲಾಖೆಗಳಿಗೆ ಸಂಬಂಧಿಸಿದ ಕೆಲಸ ಕಾರ್ಯಕ್ಕಾಗಿ ಸುಮಾರು 75 ಕಿ.ಮೀ. ದೂರದಲ್ಲಿರುವ ತುಮಕೂರು ನಗರಕ್ಕೆ ಹೋಗಬೇಕಾದ ಅನಿವಾರ್ಯತೆ ಇದೆ, ಆದರೆ ಜಿಲ್ಲಾ ಮಟ್ಟದ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ತಮ್ಮ ಅಹವಾಲು ಸ್ವೀಕರಿಸಿ ಸೂಕ್ತ ಪರಿಹಾರ ನೀಡುವರು, ಆದ್ದರಿಂದ ನಾಗರಿಕರು ತಮ್ಮ ಅರ್ಜಿಗಳನ್ನು ಸಂಬಂಧಪಟ್ಟ ಕೌಂಟರ್ಗಳಲ್ಲಿ ಸಲ್ಲಿಸಿ ಸ್ವಿಕೃತಿ ಪಡೆಯಬೇಕು ಎಂದು ಹೇಳಿದರು.
ತಾಲ್ಲೂಕು ಮಟ್ಟದ ಅಧಿಕಾರಿಗಳ ಕಚೇರಿಗೆ ರೈತರು ತಮ್ಮ ಸಮಸ್ಯೆ ಹೇಳಲು ಬಂದಾಗ ಸರಿಯಾಗಿ ಸ್ಪಂದಿಸಬೇಕು, ತಾಲ್ಲೂಕಿನಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ತರಗತಿಗಳಿಗೆ ತೆರಳಲು ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಿ ಕೊಡಬೇಕೆಂದು ಹೇಳಿದರು.

ತಾಲ್ಲೂಕಿನಲ್ಲಿ ಕೆಲವರಿಗೆ ಇನ್ನೂ ಭೂಮಿ ಮಂಜೂರಾತಿ ಆಗಿರುವುದಿಲ್ಲ, ಆದರೆ ಆಗಲೇ ಅವರಿಗೆ ಖಾತೆ ಮಾಡಿಕೊಟ್ಟಿದ್ದಾರೆ, ಇದನ್ನು ತನಿಖೆ ಮಾಡಬೇಕೆಂದು ಈಗಾಗಲೇ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದೇನೆ, ಅಧಿಕಾರಿಗಳು ತಮ್ಮ ಸೇವಾವಧಿಯಲ್ಲಿ ಜನಪರವಾಗಿ ಉತ್ತಮ ಆಡಳಿತ ನೀಡಿದ್ದೇ ಆದರೆ ನೀವು ವೃತ್ತಿಯಿಂದ ಬೇರೆ ಕಡೆ ವರ್ಗಾವಣೆಯಾದರೂ ನಿಮ್ಮ ಸೇವೆಯನ್ನು ಜನರು ಸ್ಮರಿಸುತ್ತಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಸಪ್ತಶ್ರೀ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಮಂಟೇಸ್ವಾಮಿ, ರೇಷ್ಮೆ ಇಲಾಖೆ ಉಪ ನಿರ್ದೇಶಕ ಬಾಲಕೃಷ್ಣಪ್ಪ, ತಹಶೀಲ್ದಾರ್ ರೇಣುಕುಮಾರ್, ತಾಲ್ಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಶಿವರಾಜಯ್ಯ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!