ಕುಣಿಗಲ್: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆಗಳಿಂದ ತುಮಕೂರಿಗೆ ವ್ಯಾಸಂಗಕ್ಕೆ ತೆರಳುವ ಸಾವಿರಾರು ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ ವ್ಯವಸ್ಥೆ ಇಲ್ಲದೆ ಇರುವುದನ್ನು ಖಂಡಿಸಿದ ವಿದ್ಯಾರ್ಥಿಗಳು, ತುಮಕೂರು, ಮೈಸೂರು ಕಡೆ ತೆರಳುವ ಬಸ್ ಗಳನ್ನು ತಡೆದು ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಲ್ಲಿ ಶುಕ್ರವಾರ ಬೆಳಗ್ಗೆ ಪ್ರತಿಭಟನೆ ನಡೆಸಿದರು.
ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆಯಿಂದ ಸರಿ ಸುಮಾರು ಎರಡುವರೆ ಸಾವಿರ ವಿದ್ಯಾರ್ಥಿಗಳು ಹೆಚ್ಚಿನ ವ್ಯಾಸಂಗಕ್ಕೆ ಜಿಲ್ಲಾ ಕೇಂದ್ರ ತುಮಕೂರಿಗೆ ಹೋಗುತ್ತಿದ್ದಾರೆ, ಬೆಳಗ್ಗೆ ಏಳುವರೆಯಿಂದ ಒಂಭತ್ತು ಗಂಟೆ ಅವಧಿಯಲ್ಲಿ ತುಮಕೂರು ಕಡೆಯಿಂದ ಮೂರುವರೆಯಿಂದ ಐದು ಗಂಟೆ ಅವಧಿಯಲ್ಲಿ ಸಮರ್ಪಕ ಬಸ್ಗಳು ಇಲ್ಲದೆ ವಿದ್ಯಾರ್ಥಿಗಳು ಜೀವದ ಹಂಗು ತೊರೆದು ಫುಟ್ ಬೋರ್ಡ್ ಮೇಲೆ ಹಾಗೂ ನಿಂತುಕೊಂಡೆ ಪ್ರಯಾಣ ಮಾಡಬೇಕಿದೆ, ಈ ಬಗ್ಗೆ ವಿದ್ಯಾರ್ಥಿಗಳು ಕಳೆದ ಕೆಲವಾರು ತಿಂಗಳಲ್ಲಿ ಹಲವಾರು ಪ್ರತಿಭಟನೆ ನಡೆಸಿದ್ದರೂ ಯಾವುದೇ ಪ್ರಯೋಜನವಾಗದ ಕಾರಣ ಶುಕ್ರವಾರವೂ ಸಮರ್ಪಕ ಬಸ್ ಬರದೆ ಇರುವುದು, ವಿದ್ಯಾರ್ಥಿ, ವಿದ್ಯಾರ್ಥಿನಿಯರ ತಾಳ್ಮೆ ಕಳೆದುಕೊಳ್ಳುವಂತಾಯಿತು, ಸಾರಿಗೆ ಸಂಸ್ಥೆ ಅಸಮರ್ಪಕ ವ್ಯವಸ್ಥೆ ಖಂಡಿಸಿದ ವಿದ್ಯಾರ್ಥಿಗಳು ಏಕಾಏಕಿ ದಿಡೀರ್ ಪ್ರತಿಭಟನೆಗೆ ಇಳಿದರಲ್ಲದೆ ತುಮಕೂರು, ಮೈಸೂರು ಮಾರ್ಗದ ಬಸ್ ಗಳನ್ನು ತಡೆದು ಪ್ರತಿಭಟಿಸಿದರು. ‘
ಇದರಿಂದ ಈ ಮಾರ್ಗದ ಪ್ರಯಾಣಿಕರು ಪರದಾಡುವಂತಾಗಿ ವಿದ್ಯಾರ್ಥಿಗಳೊಂದಿಗೆ ವಾಗ್ವಾದಕ್ಕೆ ಇಳಿದರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಣ್ಣಗೌಡ ಆಗಮಿಸಿ ಶಾಸಕರೊಂದಿಗೆ ಚರ್ಚಿಸಿ ಹೆಚ್ಚುವರಿ ಬಸ್ ಬಿಡುವ ಬಗ್ಗೆ ಮನವರಿಕೆ ಮಾಡಿದರೂ ಬಗ್ಗದ ವಿದ್ಯಾರ್ಥಿಗಳು ಪ್ರತಿ ಸಾರಿಯೂ ಸುಳ್ಳು ಹೇಳಿ ತಪ್ಪಿಸಿಕೊಳ್ಳು ತ್ತಿದ್ದು ಶಾಶ್ವತ ಪರಿಹಾರಕ್ಕೆ ಪಟ್ಟುಹಿಡಿದರು.
ಘಟಕ ವ್ಯವಸ್ಥಾಪಕ ಮಂಜುನಾಥ ಮುಂದೆ ಈರೀತಿ ಆಗದಂತೆ ಕ್ರಮ ವಹಿಸುವುದಾಗಿ ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿದರು. ಈವೇಳೆ ವಿದ್ಯಾರ್ಥಿಗಳು ಮುಖ್ಯರಸ್ತೆಗೆ ಆಗಮಿಸಿ ಧರಣಿಗೆ ಮುಂದಾದರು, ಸಿಪಿಐ ನವೀನ್ ಗೌಡ ಆಗಮಿಸಿ ಧರಣಿನಿರತ ವಿದ್ಯಾರ್ಥಿಗಳು ಹಾಗೂ ಘಟಕ ವ್ಯವಸ್ಥಾಪಕರೊಂದಿಗೆ ಚರ್ಚಿಸಿ ದಿನಾಲೂ ಮೂರು ಬಸ್ ಗಳನ್ನು ಹೆಚ್ಚುವರಿಯಾಗಿ ಒಡಿಸುವುದಾಗಿ ಹೇಳಿ ಶುಕ್ರವಾರವೆ ಮೂರು ಬಸ್ ವ್ಯವಸ್ಥೆ ಮಾಡಿದ್ದರಿಂದ ವಿದ್ಯಾರ್ಥಿಗಳು ಪ್ರತಿಭಟನೆ ಹಿಂಪಡೆದರು.
Comments are closed.