ತುಮಕೂರು: ತುಮಕೂರಿನ ಹೆಚ್ ಎಂ ಟಿ ಜಾಗದಲ್ಲಿ ತಲೆ ಎತ್ತಿರುವ ಇಸ್ರೋ ಸಂಸ್ಥೆ, ತನ್ನ ಪ್ರಪೊನೆಂಟ್ ಟ್ಯಾಂಕ್ ಉತ್ಪಾದನಾ ಘಟಕ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, 2024ರ ಮಾರ್ಚ್ ಅಥವಾ ಏಪ್ರಿಲ್ ನಲ್ಲಿ ತನ್ನ ಉತ್ಪಾದನೆ ಆರಂಭಿಸಲಿದೆ ಎಂದು ಮಾಜಿ ಸಂಸದ ಎಸ್.ಪಿ.ಮುದ್ದಹನುಮೇ ಗೌಡ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರಕಾರ ಸ್ಥಾಪಿಸಿದ ನವರತ್ನ ಕಂಪನಿಗಳಲ್ಲಿ ಒಂದಾದ ಹೆಚ್ ಎಂ ಟಿಯನ್ನು ಮಾಜಿ ಸಂಸದ ದಿ.ಕೆ.ಲಕ್ಕಪ್ಪ ಅವರು ತುಮಕೂರಿನಲ್ಲಿ ಆರಂಭಿಸಿದ್ದರು, ಆದರೆ ಅನಿವಾರ್ಯ ಕಾರಣಗಳಿಂದ ಹೆಚ್ಎಂ ಟಿ ಮುಚ್ಚುವ ಸಂದರ್ಭ ಸಂಸದನಾಗಿದ್ದ ನಾನು ಸದರಿ ಜಾಗವನ್ನು ಖಾಸಗಿಯವರಿಗೆ ನೀಡುವ ಬದಲು ಸರಕಾರವೇ ತನ್ನ ಒಂದು ಉದ್ಯಮ ಪ್ರಾರಂಭಿಸುವಂತೆ ಒತ್ತಡ ಹೇರಿದ ಪರಿಣಾಮ 2019ರಲ್ಲಿ ಹೆಚ್ಎಂಟಿ ಜಾಗದಲ್ಲಿ ಇಸ್ರೋ ಆರಂಭಗೊಂಡಿದ್ದು ಇತಿಹಾಸ ಎಂದರು.
ತುಮಕೂರಿನಲ್ಲಿ ಇಸ್ರೋ ಆರಂಭವಾದ ಅಂದಿನಿಂದ ಉಪಗ್ರಹ ಉಡಾವಣೆಗೆ ಅಗತ್ಯವಾಗಿದ್ದ, ಇದುವರೆಗೂ ಹೊರದೇಶಗಳಿಂದ ಆಮದು ಮಾಡಿಕೊಳ್ಳತಿದ್ದ ಐಟಿಪಿಎಫ್ (ಇಂಟಿಗ್ರೆಟೆಡ್ ಟೈಟಾನಿಯಂ ಅಲೈ ಪ್ರಪೋನೆಂಟ್ ಟ್ಯಾಂಕ್) ನಿರ್ಮಾಣಕ್ಕೆ ಅಗತ್ಯವಿರುವ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಿಸಿ ಮುಕ್ತಾಯಗೊಳಿಸಿದೆ, ಮುಂದೆ ಚಂದ್ರಯಾನ-03 ಮತ್ತು ಇನ್ನಿತರ ಉಪಗ್ರಹಗಳ ಉಡಾಯನಕ್ಕೆ ಅಗತ್ಯವಿರುವ ಐಟಿಪಿಎಫ್ ಟ್ಯಾಂಕರ್ಗಳನ್ನು ತುಮಕೂರಿನಲ್ಲಿ ಉತ್ಪಾದಿಸಿ ಬಳಕೆ ಮಾಡುವುದಲ್ಲದೆ ವಿದೇಶಗಳಿಗೂ ರಫ್ತು ಮಾಡುವ ಅವಕಾಶವಿದೆ, ಇದರಿಂದ ಸ್ಥಳೀಯರಿಗೆ ಉದ್ಯೋಗ ಸಹ ದೊರೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಚಂದ್ರಯಾನ-03 ಯಶಸ್ವಿಯಾದ ಹಿನ್ನೆಲೆಯಲ್ಲಿ ಇಸ್ರೊ ಅಧ್ಯಕ್ಷ ಎಸ್.ಸೋಮನಾಥ್ ಅವರನ್ನು ಅಭಿನಂದಿಸಲು ತೆರಳಿದ್ದ ವೇಳೆ ತುಮಕೂರು ಜಿಲ್ಲೆಯ ಜನತೆಯ ಪರವಾಗಿ ತುಮಕೂರು ಇಸ್ರೋ ಘಟಕದಲ್ಲಿ ಆದಷ್ಟು ಬೇಗ ಉತ್ಪಾದನೆ ಆರಂಭಿಸುವಂತೆ ಅವರಿಗೆ ಮನವಿ ಸಲ್ಲಿಸಲಾಗಿತ್ತು, ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಇಸ್ರೋ ಅಧ್ಯಕ್ಷರು 2024ರ ಮಾರ್ಚ್ ಅಥವಾ ಏಪ್ರಿಲ್ ನಲ್ಲಿ ಐಟಿಪಿಎಫ್ ಘಟಕ ತನ್ನ ಉತ್ಪಾದನೆ ಆರಂಭಿಸಲಿದೆ ಎಂದು ಭರವಸೆ ನೀಡಿದ್ದಾರೆ, ಜಿಲ್ಲೆಯ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಗೆ ಕೊಡುಗೆ ಹೆಚ್ ಎಂ ಟಿ ಯಂತಹದ್ದೇ ಮತ್ತೊಂದು ಸಂಸ್ಥೆ ಕಾರ್ಯಾರಂಭ ಮಡುವುದರಿಂದ ಜಿಲ್ಲೆ ಮತ್ತಷ್ಟು ಅಭಿವೃದ್ಧಿ ಹೊಂದಲಿದೆ ಎಂಬ ಆಶಾಭಾವನೆ ವ್ಯಕ್ತಪಡಿಸಿದರು.
ಲೋಕಸಭೆಗೆ ಬಿಜೆಪಿಯಿಂದ ಸ್ಪರ್ಧೆ
ನಾನು ಈ ಬಾರಿಯ ಲೋಕಸಭಾ ಚುನಾವಣೆಗೆ ಸ್ಪರ್ಧಿಸಬೇಕೆಂಬುದು ಜಿಲ್ಲೆಯ ಜನತೆಯ ಆಶಯವಾಗಿದೆ, ಕಳೆದ ಚುನಾವಣೆಯಲ್ಲಿ ನನಗೆ ಟಿಕೆಟ್ ದೊರೆಯದಿದ್ದರೂ ಕ್ಷೇತ್ರದ ಜನರ ಸಂಪರ್ಕದಲ್ಲಿಯೇ ಇದ್ದೇನೆ, ಅವರ ಕಷ್ಟ ಸುಖಗಳಿಗೆ ಸ್ಪಂದಿಸಿ ಕೆಲಸ ಮಾಡಿದ್ದೇನೆ, ಜನರ ಆಶಯವನ್ನು ಬಿಜೆಪಿ ಪಕ್ಷದ ವರಿಷ್ಠರ ಗಮನಕ್ಕೂ ತಂದಿದ್ದೇನೆ, ನನಗೆ ಬಿಜೆಪಿ ಟಿಕೆಟ್ ದೊರೆಯುವ ಸಾಧ್ಯತೆ ಇದೆ, ಹಾಗಾಗಿ ಮತ್ತೊಮ್ಮೆ ತುಮಕೂರು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದೇನೆ ಎಂದು ಮಾಜಿ ಸಂಸದ ಮುದ್ದಹನುಮೇಗೌಡ ತಿಳಿಸಿದರು.
ನಾನು ಕಾಂಗ್ರೆಸ್ ಅಥವಾ ಜೆಡಿಎಸ್ ಪಕ್ಷಕ್ಕೆ ಹೋಗುತ್ತೇನೆ ಎಂಬುದು ಸುಳ್ಳು, ಈ ಬಗ್ಗೆ ನಾನು ಯಾರನ್ನು ಭೇಟಿಯಾಗಿಲ್ಲ, ಅವರು ಯಾರು ನನ್ನನ್ನು ಭೇಟಿಯಾಗಿಲ್ಲ, ಇದೆಲ್ಲಾ ಊಹಾಪೋಹ, ಇದಕ್ಕೆ ಕ್ಷೇತ್ರದ ಜನತೆ ಮನ್ನಣೆ ನೀಡಬಾರದು ಎಂದು ಮುದ್ದಹನುಮೇಗೌಡ ಮುಂದಾಗಬಹುದಾದ ಘಟನೆಗಳನ್ನು ಊಹಿಸಿಕೊಂಡು ರಾಜಕಾರಣ ಮಾಡಲಾಗದು ಎಂದರು.
ಈ ವೇಳೆ ಮುಖಂಡರಾದ ವಿಜಯಕುಮಾರ್, ಪಿ ಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಚಿಕ್ಕೇಗೌಡ ಮತ್ತಿತರರು ಇದ್ದರು.
Comments are closed.