ತುಮಕೂರು: ಇಂದಿನ ಯುವ ಪೀಳಿಗೆಯ ವಿದ್ಯಾರ್ಥಿಗಳು ಡಾ.ಬಿ.ಆರ್.ಅಂಬೇಡ್ಕರ್ ರಚಿಸಿರುವ ಸಂವಿಧಾನದಲ್ಲಿರುವ ಹಕ್ಕು ಮತ್ತು ಕರ್ತವ್ಯಗಳನ್ನು ಅಧ್ಯಯನ ಮಾಡಿ ತಿಳಿದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಕರೆ ನೀಡಿದರು.
ನಗರದ ಎಂಪ್ರೆಸ್ ಕಾಲೇಜು ಸಭಾಂಗಣದಲ್ಲಿ ನಡೆದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತುಮಕೂರು ವಿಶ್ವವಿದ್ಯಾಲಯ, ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರ ವಿಶೇಷ ಘಟಕ, ಗಿರಿಜನ ಉಪಯೋಜನೆ, ಎಂಪ್ರೆಸ್ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಓದು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎಲ್ಲಾ ಇಲಾಖೆಗಳು ಪ್ರತಿನಿತ್ಯ ಆಡಳಿತ ನಡೆಯುತ್ತಿರುವುದು ಬಿ.ಆರ್.ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನ ಆಧಾರಿತ ಎಂದರಲ್ಲದೆ, ನಮ್ಮ ದೇಶದ ಸಂವಿಧಾನ ಬೃಹತ್ ಸಂವಿಧಾನವಾಗಿದೆ ಎಂದು ಹೇಳಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಭಾರತ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಿದ ನಂತರ ಪ್ರಪಂಚದ ಹಲವಾರು ದೇಶಗಳ ಸಂವಿಧಾನ ಅಧ್ಯಯನ ಮಾಡಿ, ನಮ್ಮ ದೇಶದ ಅಭಿವೃದ್ಧಿಗೆ ಪೂರಕವಾಗುವ ರೀತಿಯಲ್ಲಿ ಸಂವಿಧಾನವನ್ನು ರಚಿಸಿದ್ದಾರೆ ಎಂದರು.
ಸಂವಿಧಾನದಲ್ಲಿ ರಾಜ್ಯಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳಿಗೆ ಪ್ರತ್ಯೇಕವಾದ ಕಾಯ್ದೆ ಕಾನೂನು ರೂಪಿಸಲಾಗಿದೆ, ಪ್ರಜಾಪ್ರಭುತ್ವದ ಮೂರು ಆಧಾರದ ಸ್ಥಂಭಗಳಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದು ಹೇಳಿದರು.
ಭಾರತ ದೇಶದಲ್ಲಿ ಯಾವುದೇ ಜಾತಿ, ಮತ, ಪಂಥ, ಧರ್ಮದವರೆ ಆಗಿರಲಿ ಎಲ್ಲರಿಗೂ ಸಮಾನವಾದ ಮತದಾನದ ಹಕ್ಕನ್ನು ಸಂವಿಧಾನದಲ್ಲಿ ನೀಡಲಾಗಿದೆ ಎಂದು ಹೇಳಿದರು.
ತುಮಕೂರು ವಿಶ್ವ ವಿದ್ಯಾಲಯ ಕುಲಪತಿ ಪ್ರೊ.ವೆಂಕಟೇಶ್ವರಲು ಮಾತನಾಡಿ, ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನದಿಂದಾಗಿ ತುಮಕೂರು ವಿಶ್ವವಿದ್ಯಾಲಯದಲ್ಲಿ ಪ್ರಸಕ್ತ ಸಾಲಿನಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ವಿಭಾಗಳಲ್ಲಿ ಶೇಕಡಾ 70 ರಷ್ಟು ವಿದ್ಯಾರ್ಥಿನಿಯರು ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ವಿಶ್ವನಾಯಕರಾಗಿ ಗುರುತಿಸಿಕೊಂಡವರು, ಅವರನ್ನು ಒಂದು ಜಾತಿ ಅಥವಾ ಒಂದು ಧರ್ಮಕ್ಕೆ ಸೀಮಿತ ಮಾಡಬಾರದು ಎಂದು ಹೇಳಿದರು.
ತುಮಕೂರು ವಿ ವಿ ಕುಲಸಚಿವೆ ನಹಿದಾ ಜಮ್ ಜಮ್ ಪ್ರಾಸ್ತಾವಿಕವಾಗಿ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನದಿಂದ ಪೋಷಕರು ತಮ್ಮ ಮಕ್ಕಳನ್ನು ಶಾಲಾ ಕಾಲೇಜುಗಳಿಗೆ ಶಿಕ್ಷಣ ಪಡೆಯಲು ನೆಮ್ಮದಿಯಿಂದ ಕಳುಹಿಸಬಹುದಾಗಿದೆ. ಯಾವುದೇ ಜಾತಿ, ಮತ, ಪಂಥ, ಬೇಧ ಭಾವವಿಲ್ಲದೆ ಇಂದು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ ಎಂದರು.
ಅಂದಿನ ಕಾಲದಲ್ಲಿದ್ದ ಅನ್ಯಾಯ, ಅಸ್ಪಶ್ಯತೆ, ಶೋಷಣೆಯ ವಿರುದ್ದ ಹಲವಾರು ಹೋರಾಟಗಳನ್ನು ಮಾಡುವುದರ ಮೂಲಕ ಎಲ್ಲಾ ವರ್ಗದ ಜನರಿಗೂ ನ್ಯಾಯವನ್ನು ಒದಗಿಸುವ ಕೆಲಸ ಮಾಡಿದ್ದಾರೆ. ಇವುಗಳನ್ನೆಲ್ಲಾ ಅರಿತ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಇವುಗಳ ನಿಮೂರ್ಲನೆಗಾಗಿ ವಿಶೇಷ ಕಾಯ್ದೆ ಕಾನೂನುಗಳನ್ನು ರಚಿಸಿ ಕೊಟ್ಟಿದ್ದಾರೆ ಎಂದು ತಿಳಿಸಿದರು.
ಮಹಾತ್ಮ ಗಾಂಧೀಜಿ, ಡಾ.ಬಿ.ಆರ್.ಅಂಬೇಡ್ಕರ್, ಭಗತ್ ಸಿಂಗ್, ಸುಭಾಷ್ ಚಂದ್ರಬೋಸ್ ಇವರೆಲ್ಲರೂ ವಿಶ್ವ ನಾಯಕರು, ಇವರ ಬಗ್ಗೆ ಅಧ್ಯಯನ ಮಾಡದೆ ಒಂದು ಜಾತಿಗೆ ಸೀಮಿತ ಮಾಡಬಾರದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಂಪ್ರೆಸ್ ಬಾಲಕಿಯರ ಕಾಲೇಜಿನ ಪ್ರಾಂಶುಪಾಲ ಹೆಚ್.ಎ.ಮಲ್ಲಯ್ಯ, ತುಮಕೂರು ವಿಶ್ವವಿದ್ಯಾಲಯ ಐಕ್ಯೂಎಸಿ ನಿರ್ದೇಶಕ ಪ್ರೊ.ಬಿ.ರಮೇಶ್, ಕೆಂಚಮಾರಯ್ಯ.ಹೆಚ್, ಪ್ರೊ.ಶಶಿಕುಮಾರ್.ಎಸ್, ಡಾ.ಮಹಾಲಿಂಗ.ಕೆ, ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರ ಸಂಯೋಜಕ ಡಾ.ಚಿಕ್ಕಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್, ಡಾ.ಲಕ್ಷ್ಮೀರಂಗಯ್ಯ.ಕೆ.ಎನ್. ಮತ್ತಿತರರು ಇದ್ದರು.
Comments are closed.