ಕುಣಿಗಲ್: ಪಟ್ಟಣದಲ್ಲಿ ಹಾದು ಹೋಗಿರುವ ಹಳೆ ರಾಷ್ಟ್ರೀಯ ಹೆದ್ದಾರಿ 48 ನ್ನು ಸುಮಾರು 21 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಗೊಳಿಸಿದ್ದರೂ ಹೆದ್ದಾರಿಯಲ್ಲಿ ಸಮರ್ಪಕ ನಿಯಮ ಪಾಲನೆ ಮಾಡದ ಕಾರಣ ದಿನಾಲೂ ಪಾದಚಾರಿಗಳು, ಶಾಲಾ ವಿದ್ಯಾರ್ಥಿಗಳು ಜೀವಭಯದಲ್ಲಿ ಸಂಚರಿಸುವಂತಾಗಿದೆ.
2008ರಲ್ಲಿ ಅಂದಿನ ಶಾಸಕ ಬಿ.ಬಿ.ರಾಮಸ್ವಾಮಿ ಗೌಡರ ಕಾಳಜಿಯಿಂದಾಗಿ ಪಟ್ಟಣದಲ್ಲಿ ಹಾದು ಹೋಗಿದ್ದ ಹಳೆ ರಾಷ್ಟ್ರೀಯ ಹೆದ್ದಾರಿ 48 ಅಗಲೀಕರಣ ಗೊಳಿಸಲಾಯಿತು, ನಂತರ ಹೆದ್ದಾರಿಯು ಪಟ್ಟಣದ ಹೊರ ವಲಯಕ್ಕೆ ಸ್ಥಳಾಂತರಗೊಂಡು ಹೆದ್ದಾರಿಯು ಯಾವುದೇ ಇಲಾಖೆ ವಶಕ್ಕೆ ಬಾರದೆ ಅಭಿವೃದ್ಧಿಯಾಗದೆ ನೆನೆಗುದಿಗೆ ಬೀಳುವಂತಾಯಿತು, ಸಂಸದ ಡಿ.ಕೆ.ಸುರೇಶ್, ಹಿಂದಿನ ಶಾಸಕ ಡಿ.ನಾಗರಾಜಯ್ಯ ಹಾಗೂ ಹಾಲಿ ಶಾಸಕ ಡಾ.ರಂಗನಾಥ್ ಕಾಳಜಿಯಿಂದ ಹೆದ್ದಾರಿಯ ಅರ್ಧ ಭಾಗ ರಾಜ್ಯ ಹೆದ್ದಾರಿಯಾಗಿಯೂ ಮತ್ತರ್ಧ ಭಾಗ ಜಿಲ್ಲಾ ಮುಖ್ಯ ಹೆದ್ದಾರಿಯಾಗಿ ಘೋಷಣೆಯಾಗಿ, ರಾಜ್ಯ ಹೆದ್ದಾರಿ ನಿಗಮದ ವಿವಿಧ ಅನುದಾನದಿಂದ ಹೆದ್ದಾರಿ ಅಗಲೀಕರಣಗೊಂಡಿತು, ಹೆದ್ದಾರಿ ಅಗಲೀಕರಣಗೊಂಡರೂ ಪಾದಚಾರಿಗೆಳಿಗೆ ಇದರ ಪ್ರಯೋಜನ ಸಿಗದಂತಾಗಿ ಪಾದಚಾರಿಗಳು ಹೆದ್ದಾರಿಯಲ್ಲೆ ಜೀವ ಭಯದಿಂದ ಚಲಿಸುವ ವಾತಾವರಣ ನಿರ್ಮಾಣವಾಗಿದೆ, ಹೆದ್ದಾರಿಯು ಲೋಕೋಪಯೋಗಿ ಇಲಾಖೆ ವಶದಲ್ಲಿ ಇದ್ದರೆ ನಿರ್ವಹಣೆ ಪುರಸಭೆಯದ್ದಾಗಿದೆ, ಇನ್ನು ರಸ್ತೆ ಸಂಚಾರ ನಿರ್ವಹಣೆ ಪೊಲೀಸ್ ಇಲಾಖೆಯದ್ದಾಗಿದ್ದು ಮೂರು ಇಲಾಖೆಗಳು ಪರಸ್ಪರ ಹೊಂದಾಣಿಕೆ ಇಲ್ಲದೆ ಪಾದಚಾರಿಗಳು, ಶಾಲಾ ಮಕ್ಕಳು ಪರದಾಡುವಂತಾಗಿದೆ, ಇತ್ತೀಚೆಗೆ ನಡೆದ ಲೋಕಾಯುಕ್ತ ಎಸ್ಪಿಯವರ ಸಭೆಯಲ್ಲಿ ವಿಷಯ ಪ್ರಸ್ತಾಪವಾಗಿದ್ದು ಲೋಕೋಪಯೋಗಿ ಇಲಾಖೆ ಮಾರ್ಕಿಂಗ್ ಮಾಡಿ ಕೊಟ್ಟಲ್ಲಿ ಅಗತ್ಯ ಕ್ರಮ ಎಂದು ಪುರಸಭೆ ಅಧಿಕಾರಿಗಳು ಹೇಳಿದ್ದರು.
ಒಂದು ತಿಂಗಳಿನಿಂದಲೂ ಲೋಕೋಪಯೋಗಿ ಇಲಾಖೆ ಕುಂಟು ನೆಪ ಹೇಳುತ್ತಾ ರಸ್ತೆ ಮಾರ್ಕಿಂಗ್ ನಿಧಾನ ಗತಿಯಲ್ಲಿ ಮಾಡುತ್ತಿದೆ, ಪಟ್ಟಣದಲ್ಲಿ ಹಾದು ಹೋಗಿರುವ ಹೆದ್ದಾರಿಗೆ ಹೊಂದಿಕೊಂಡಂತೆ ಒಂದು ಡಿಗ್ರಿ ಕಾಲೇಜು ಸೇರಿದಂತೆ ಪ್ರೌಢಶಾಲೆ, ಹಿರಿಯ, ಕಿರಿಯ ಪ್ರಾಥಮಿಕ 12 ಶಾಲೆಗಳಿದ್ದು ಎಲ್ಲಾ ಶಾಲೆಯ ಸುಮಾರು ಆರರಿಂದ ಏಳು ಸಾವಿರ ಮಕ್ಕಳು ಶಾಲೆಗೆ ಬಂದು ಹೋಗಿ ಮಾಡುತ್ತಾರೆ, ಹೆದ್ದಾರಿ ಹಾಗೂ ರಸ್ತೆ ಬದಿಯಲ್ಲೆ ವಾಹನಗಳು, ಬೈಕ್ ಗಳು ನಿಲ್ಲುವ ಕಾರಣ ಮಕ್ಕಳು ಸೇರಿದಂತೆ ಪಾದಾಚಾರಿಗಳು ರಸ್ತೆಯಲ್ಲೆ ಸಂಚರಿಸುವಂತಾಗಿದೆ, ಬೈಕ್ ಸವಾರರು ಸೇರಿದಂತೆ ಕೆಲ ಕಾರು, ಲಾರಿಗಳು ವೇಗವಾಗಿ ಸಂಚರಿಸುವ ಕಾರಣ ಶಾಲಾ ಮಕ್ಕಳು, ಪಾದಚಾರಿಗಳು ಜೀವ ಭಯದಲ್ಲೆ ರಸ್ತೆ ದಾಟುವ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ, ಇತ್ತೀಚೆಗೆ ಶಾಸಕರು ರಸ್ತೆಗೆ ಭೇಟಿ ನೀಡಿ ಹೆದ್ದಾರಿ ಸೇರಿದಂತೆ ಇತರೆ ಮುಖ್ಯರಸ್ತೆಗಳ ಸುಗಮ ಸಂಚಾರಕ್ಕೆ ಸಭೆ ನಡೆಸುವುದಾಗಿ ಹೇಳಿ ಹೋದವರು ಇನ್ನು ಕ್ರಮಕ್ಕೆ ಮುಂದಾಗಿಲ್ಲ, ಇತ್ತ ಮೂರು ಇಲಾಖೆಯ ಅಧಿಕಾರಿಗಳ ನಡುವೆ ಸಮನ್ವಯತೆ ಕೊರತೆಯಿಂದ ಹೆದ್ದಾರಿ ಇದ್ದರೂ ಪಾದಾಚಾರಿಗಳ ಬಳಕೆಗೆ ಅಡಚಣೆಯಾಗಿದೆ, ಹೆದ್ದಾರಿಯಲ್ಲಿ ಯಾವುದೇ ಶಾಲಾ ಮಕ್ಕಳು, ಪಾದಚಾರಿಗಳಿಗೆ ಅನಾಹುತವಾಗುವ ಮುನ್ನ ಸಂಬಂಧಪಟ್ಟ ಇಲಾಖಾಧಿಕಾರಿಗಳು ಅಗತ್ಯ ಕ್ರಮ ಕೈಗೊಂಡು ಹೆದ್ದಾರಿಯ ಬದಿಯಲ್ಲಿ ಪಾದಚಾರಿಗಳು, ಶಾಲಾ ಮಕ್ಕಳು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಮಕ್ಕಳ ಪೋಷಕರ ಬೇಡಿಕೆಯಾಗಿದ್ದು ಅಧಿಕಾರಿಗಳು ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವರೆ ಎಂದು ಕಾದು ನೋಡಬೇಕಿದೆ.
Comments are closed.