ಶಿರಾ: ಗ್ರಾಮೀಣ ಪ್ರದೇಶದಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ 6 ರಿಂದ 12ನೇ ತರಗತಿವರೆಗೆ ಆದರ್ಶ ಶಾಲೆ ಪ್ರಾರಂಭಿಸಲು ಮಂಜೂರಾತಿಗೆ ಸರಕಾರಕ್ಕೆ ಮನವಿ ಮಾಡಲಾಗಿದ್ದು, ಶೀಘ್ರವಾಗಿ ಹಸಿರು ನಿಶಾನೆ ದೊರೆಯುವ ಭರವಸೆ ಇದೆ ಎಂದು ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ.ಗೌಡ ಹೇಳಿದರು.
ತಾಲೂಕಿನ ಗೋಪಿಕುಂಟೆ ಗ್ರಾಮದ ಗೇಟ್ನಲ್ಲಿ ನೂತನ ಆದರ್ಶ ಶಾಲೆ ಪ್ರಾರಂಭಿಸಲು ಬೇಕಾದ ಸ್ಥಳ ಪರಿಶೀಲನೆ ಮಾಡಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಪ್ರತಿವಂತ ವಿದ್ಯಾರ್ಥಿಗಳಿದ್ದು ಅವರಿಗೆ ಉತ್ತಮ ಗುಣಮಟ್ಟದ ವಿದ್ಯಾಭ್ಯಾಸ ನೀಡಿದರೆ ರಾಷ್ಟ್ರಮಟ್ಟದಲ್ಲಿ ಉನ್ನತ ಹುದ್ದೆಗಳನ್ನು ಪಡೆಯಲು ಸಾಧ್ಯವಾಗುತ್ತದೆ, ಆದ್ದರಿಂದ ಗ್ರಾಮ ಪಂಚಾಯಿತಿಗೆ ಒಂದರಂತೆ ಆದರ್ಶ ಶಾಲೆ ತೆರೆಯುವ ಉದ್ದೇಶ ಹೊಂದಲಾಗಿದೆ. ಪ್ರಾರಂಭಿಕವಾಗಿ ಗೋಪಿಕುಂಟೆ ಗೇಟ್ ಬಳಿ ಈಗಾಗಲೇ ಶಾಲೆಗೆ ಅಗತ್ಯವಿರುವ 3 ಎಕರೆ ಜಮೀನು ಕಾಯ್ದಿರಿಸಿದ್ದು, ಹೊಸಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ 10 ಹಳ್ಳಿಗಳ ವಿದ್ಯಾರ್ಥಿಗಳಿಗೆ ಆಂಗ್ಲ ಭಾಷೆ ಶಿಕ್ಷಣದೊಂದಿಗೆ ಗುಣ ಮಟ್ಟದ ಶಿಕ್ಷಣ ನೀಡಲು ಆದರ್ಶ ಶಾಲೆ ಮಾದರಿಯಾಗಲಿದೆ, ಸರಕಾರ ಈ ಶಾಲೆ ಮಂಜೂರು ಮಾಡಿದ ನಂತರ ದೂರದ ಗ್ರಾಮಗಳಿಂದ ಶಾಲೆಗೆ ಬರಲು ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ನನ್ನ ಸ್ವಂತ ಹಣದಲ್ಲಿ ಬಸ್ನ ವ್ಯವಸ್ಥೆ ಕಲ್ಪಿಸುತ್ತೇನೆ ಎಂದು ತಿಳಿಸಿದರು.
ಪಟ್ಟನಾಯಕನಹಳ್ಳಿ ಗ್ರಾಮದಲ್ಲಿ ಇರುವ ಸರಕಾರಿ ಪದವಿ ಪೂರ್ವ ಕಾಲೇಜು ಈಗ ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಿ ಬದಲಾವಣೆಯಾಗಿದೆ, 50 ವರ್ಷಗಳ ಇತಿಹಾಸವಿರುವ ಈ ಶಾಲೆಯಲ್ಲಿ ಓದಿದ ಲಕ್ಷಾಂತರ ವಿದ್ಯಾರ್ಥಿಗಳು ಡಾಕ್ಟರ್, ಇಂಜಿನಿಯರ್, ಶಿಕ್ಷಕ, ಕಮಿಷನರ್, ಪೊಲೀಸ್ ಸೇರಿದಂತೆ ಉನ್ನತ ಹುದ್ದೆ ಅಲಂಕರಿಸಿದ್ದು, ಈ ಶಾಲೆ ಹೆಚ್ಚು ಮಹತ್ವ ನೀಡಿದೆ, ಈ ನಿಟ್ಟಿನಲ್ಲಿ ಶಾಲೆಯ ಮೂಲಭೂತ ಸೌಚಭ್ಯ ಸೇರಿದಂತೆ ಗ್ರಂಥಾಲಯ, ಕಂಪ್ಯೂಟರ್ ಲ್ಯಾಬ್, ಹೆಚ್ಚುವರಿ ಕೊಠಡಿ ಸೇರಿದಂತೆ ಎಲ್ಲಾ ಸೌಲಭ್ಯ ನೀಡುವ ಉದ್ದೇಶದಿಂದ 2 ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅತಿಶೀಘ್ರದಲ್ಲಿ ಅನುದಾನ ಬಿಡುಗಡೆಯಾಗಲಿದೆ ಎಂದರು.
ಈ ಸಂದರ್ಭದಲ್ಲಿ ಪಟ್ಟನಾಯಕನಹಳ್ಳಿ ಸರಕಾರಿ ಪ.ಪೂ. ಕಾಲೇಜಿನ ಉಪನ್ಯಾಸಕರು, ಶಿಕ್ಷಕರು ಹಾಜರಿದ್ದರು.
ಗ್ರಾಮೀಣ ಪ್ರದೇಶದಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ: ಚಿದಾನಂದ್
Get real time updates directly on you device, subscribe now.
Comments are closed.