ತುಮಕೂರು: ಗ್ರಂಥಾಲಯಗಳು ವಿದ್ಯಾರ್ಥಿಗಳ ಪಾಲಿಗೆ ಅಕ್ಷರ ದೇಗುಲವಿದ್ದಂತೆ, ಈ ದೇಗುಲದಲ್ಲಿ ಸತತವಾಗಿ ಅಧ್ಯಯನ ಮಾಡುವ ಮೂಲಕ ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳುವಂತೆ ಪಾಲಿಕೆ ಆಯುಕ್ತರಾದ ಅಶ್ವಿಜ ಕರೆ ನೀಡಿದರು.
ನಗರದ ಕೇಂದ್ರ ಗ್ರಂಥಾಲಯ ಆವರಣದಲ್ಲಿರುವ ಸಭಾಂಗಣದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆ, ಗ್ರಂಥಾಲಯ ಸಪ್ತಾಹ-2023ರ ಅಂಗವಾಗಿ ನ.14 ರಿಂದ 20ರವರಗೆ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳ ಬಹುಮಾನ ವಿತರಣೆ ಹಾಗೂ ಗ್ರಂಥಾಲಯ ಸಪ್ತಾಹದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸರ್ಕಾರ ಆರ್ ಡಿ ಪಿ ಆರ್ ಮೂಲಕ ಗ್ರಾಮೀಣ ಭಾಗದಲ್ಲಿ ಲೈಬ್ರರಿ ತೆರೆದು ಮಕ್ಕಳಿಗೆ ಅಧ್ಯಯನಕ್ಕೆ ಅವಕಾಶ ಕಲ್ಪಿಸಿದೆ, ಅದೇ ರೀತಿ ತುಮಕೂರು ನಗರದಲ್ಲಿ ಪ್ರಾಯೋಗಿಕವಾಗಿ ಪಾಲಿಕೆಯ ಅನುದಾನದಲ್ಲಿಯೇ ಈಗಿರುವ 8-9 ಗ್ರಂಥಾಲಯಗಳ ಜೊತೆಗೆ ಪ್ರತಿ ವಾರ್ಡ್ನಲ್ಲಿ ಗ್ರಂಥಾಲಯ ತೆರೆದು ಆಸಕ್ತರಿಗೆ ಮನೆ ಬಾಗಿಲಲ್ಲಿಯೇ ಓದಲು ಅವಕಾಶ ಕಲ್ಪಿಸಲು ಮುಂದಾಗಿದೆ, ಈ ನಿಟ್ಟಿನಲ್ಲಿ ಶೀಘ್ರವೇ ಪಾಲಿಕೆ ಸಭೆಯಲ್ಲಿ ಚರ್ಚೆ ನಡೆಸಿ ಟಾಟಾ ಕಲಿಕಾ ಸಂಸ್ಥೆಯ ಸಹಯೋಗದಲ್ಲಿ ಹಳೆಯ ಗ್ರಂಥಾಲಯಗಳ ನವೀಕರಣದ ಜೊತೆಗೆ, ಹೊಸ ಗ್ರಂಥಾಲಯ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು.
ಸ್ಮಾರ್ಟ್ ಸಿಟಿ ಅಡಿಯಲ್ಲಿ ಇಡೀ ದೇಶದಲ್ಲಿ ಅತ್ಯುತ್ತಮ ಗ್ರಂಥಾಲಯ ನಿರ್ಮಾಣ ಮಾಡಿದ್ದು, ಎಲ್ಲಾ ರೀತಿಯ ಅಧ್ಯಯನಕ್ಕೂ ಅವಕಾಶವಿದೆ, ಪ್ರತಿ ಶನಿವಾರ, ಭಾನುವಾರ ನಿಮಗೋಸ್ಕರ ನಾನು ಲೈಬ್ರರಿಗೆ ಬರಲು ಸಿದ್ಧ, ನೀವು ಬಂದರೆ ಸಂವಾದ ನಡೆಸಬಹುದು ಎಂದು ವಿದ್ಯಾರ್ಥಿಗಳಿಗೆ ಆಹ್ವಾನ ನೀಡಿದ ಅವರು, ದೇಶ ಸುತ್ತು, ಕೋಶ ಓದು ಎಂಬ ಗಾದೆಯಿದೆ, ನಾವು ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸುವಾಗ ಈ ಗಾದೆ ಅಕ್ಷರಶಃ ನಮಗೆ ಸಹಕಾರಿಯಾಯಿತು ಎಂದರು.
ಶಾಲಾ ಕಾಲೇಜು ದಿನಗಳಲ್ಲಿ ಸಮಯ ಕಳೆಯಲು ಲೈಬ್ರರಿಗೆ ಹೋಗುತ್ತಿದ್ದ ನಮಗೆ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸುವಾಗ ದಿನದ 9- 12 ಗಂಟೆಗಳ ಕಾಲ ಗ್ರಂಥಾಲಯಗಳಲ್ಲಿ ಅಧ್ಯಯನದಲ್ಲಿ ತೊಡಗಬೇಕಾಯಿತು, ನಿರಂತರವಾಗಿ ಗ್ರಂಥಾಲಯದಲ್ಲಿ ಕುಳಿತು ಓದಿದ ಪರಿಣಾಮ ಯುಪಿಎಸ್ಸಿ ಪರೀಕ್ಷೆ ಪಾಸು ಮಾಡಿ ಇಂದು ನಿಮ್ಮ ಮುಂದೆ ಐಎಎಸ್ ಅಧಿಕಾರಿಯಾಗಿ ನಿಂತಿದ್ದೇನೆ ಎಂದ ಅವರು ನನ್ನ ಜೀವನದಲ್ಲಿ ಗ್ರಂಥಾಲಯ ಅತೀ ಮಹತ್ವದ ಪಾತ್ರ ನಿರ್ವಹಿಸಿದೆ, ನಿಮ್ಮ ಜೀವನದ ಒಂದು ಭಾಗವಾಗಿ ಗ್ರಂಥಾಲಯ ಬಳಸಿಕೊಳ್ಳಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೇಯರ್ ಪ್ರಭಾವತಿ ಸುಧೀಶ್ವರ್ ಮಾತನಾಡಿ, ವಿದ್ಯೆ ಕದಿಯಲಾಗದ ಸಂಪತ್ತು, ಅದಕ್ಕೆ ದೊಡ್ಡವರು ದುಡ್ಡೇ ದೊಡ್ಡಪ್ಪ ವಿದ್ಯೆ ಅದರಪ್ಪ ಎಂಬ ಮಾತು ಹೇಳಿದ್ದಾರೆ, ಸ್ಮಾರ್ಟ್ಸಿಟಿ ವತಿಯಿಂದ ಸುಮಾರು 29 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಡಿಜಿಟಲ್ ಲೈಬ್ರರಿ ತೆರೆಯಲಾಗಿದೆ, ಇಲ್ಲಿ ಓದುವುದರ ಜೊತೆಗೆ ಆಡಿಯೋ ಮೂಲಕವೂ ಕೇಳಬಹುದು, ಗ್ರಂಥಾಲಯಗಳನ್ನು ತೆರೆದರೆ ಲಕ್ಷಾಂತರ ವಿದ್ವಾಂಸರು ಸೃಷ್ಟಿಯಾಗುತ್ತಾರೆ ಎಂಬ ಡಾ.ಬಿ.ಆರ್.ಅಂಬೇಡ್ಕರ್ ಅವರ ಮಾತನ್ನು ನಾವೆಲ್ಲರೂ ಪಾಲಿಸಬೇಕಾಗಿದೆ, ಸೋಲೆ ಗೆಲುವಿನ ಮೆಟ್ಟಿಲು, ಹಾಗಾಗಿ ಗ್ರಂಥಾಲಯ ಸಪ್ತಾಹದ ಅಂಗವಾಗಿ ನಡೆದಿರುವ ಸ್ಪರ್ಧೆಗಳಲ್ಲಿ ವಿಜೇತರು ಖುಷಿಯಾಗಿರಿ, ಸೋತವರು ಮುಂದಿನ ಬಾರಿ ಗೆಲುವು ನಿಮ್ಮದಾಗಿಸಲು ಶ್ರಮ ಪಡಿ ಎಂದು ಸಲಹೆ ನೀಡಿದರು.
ಸಾರ್ವಜನಿಕ ಇಲಾಖೆಯ ಉಪ ನಿರ್ದೇಶಕಿ ಸರೋಜಮ್ಮ.ಎಂ. ಮಾತನಾಡಿ, ಯುವ ಜನರಲ್ಲಿ ಓದುವ ಹವ್ಯಾಸ ಬೆಳೆಸುವ ನಿಟ್ಟಿನಲ್ಲಿ ಸರಕಾರ ಗ್ರಂಥಾಲಯ ಸಪ್ತಾಹ ಆಚರಿಸಿಕೊಂಡು ಬರುತ್ತಿದೆ, ಮಕ್ಕಳಲ್ಲಿ ಓದಿನ ಆಸಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ವಿವಿಧ ಸ್ಪರ್ಧೆ ಮೂಲಕ ಅವರನ್ನು ಗ್ರಂಥಾಲಯಗಳತ್ತ ಸೆಳೆಯುವ ಪ್ರಯತ್ನ ಇದಾಗಿದೆ, ದೇವನೂರು ಮಹದೇವ್ ಹೇಳುವಂತೆ ಎದೆಗೆ ಬಿದ್ದ ಅಕ್ಷರ, ಭೂಮಿಗೆ ಬಿದ್ದ ಬೀಜ ಒಂದಿಲೊಂದು ದಿನ ಫಲ ಕೊಡುತ್ತದೆ, ಹಾಗಾಗಿ ಮೊಬೈಲ್ ಮೋಹಕ್ಕೆ ಒಳಗಾಗಿರುವ ಯುವ ಜನರು ಕ್ಷಣಿಕ ಮಾಹಿತಿಯನ್ನೇ ಜ್ಞಾನವೆಂದು ಬೀಗದೆ, ಶಾಶ್ವತ ಜ್ಞಾನ ನೀಡುವ ಪುಸ್ತಕಗಳನ್ನು ಓದುವತ್ತ ಗಮನ ಹರಿಸಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಂಥಪಾಲಕ ಹೆಚ್.ಡಿ.ಬಸವರಾಜು, ಚಂದ್ರಣ್ಣ ಎಸ್. ಸೇರಿದಂತೆ ಗ್ರಂಥಾಲಯ ಸಿಬ್ಬಂದಿ ಹಾಜರಿದ್ದರು. ಇದೇ ವೇಳೆ ಗ್ರಂಥಾಲಯ ಸಪ್ತಾಹ ಅಂಗವಾಗಿ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು, ಮಕ್ಕಳಿಂದ ಗಾಯನ ನಡೆಯಿತು.
Comments are closed.