ಸಕಾರಾತ್ಮಕವಾಗಿ ಬದುಕು ಸ್ವೀಕರಿಸಿ: ಕರ್ಜಗಿ

67

Get real time updates directly on you device, subscribe now.


ತುಮಕೂರು: ಶಿಕ್ಷಣ ಆತ್ಮವಿಶ್ವಾಸ ಹೆಚ್ಚಿಸಬೇಕು, ಗಳಿಸುವ ಪದವಿಗಳು ನಮ್ಮಲ್ಲಿ ಆತ್ಮಸ್ಥೈರ್ಯ ತುಂಬಬೇಕು, ಆತ್ಮವಿಶ್ವಾಸದಿಂದ, ತಿಳುವಳಿಕೆಯಿಂದ ಮಾತ್ರ ದೇಶ ಕಟ್ಟಲು ಯುವ ಪೀಳಿಗೆಗೆ ಸಾಧ್ಯ ಎಂದು ಬೆಂಗಳೂರಿನ ಅಕಾಡೆಮಿ ಫಾರ್ ಕ್ರಿಯೇಟಿವ್ ಟೀಚಿಂಗ್ ಅಧ್ಯಕ್ಷ ಡಾ.ಗುರುರಾಜ ಕರ್ಜಗಿ ಹೇಳಿದರು.
ತುಮಕೂರು ವಿಶ್ವ ವಿದ್ಯಾಲಯದ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಘಟಕ, ವಿದ್ಯಾರ್ಥಿ ಕ್ಷೇಮಪಾಲನ ಘಟಕ ಮತ್ತು ಯೋಜನೆ, ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಮಂಡಳಿ ಘಟಕಗಳ ವತಿಯಿಂದ ಆಯೋಜಿಸಿದ್ದ ಪ್ರಥಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳ ಸ್ವಾಗತ ಅನಿಕೇತನ ಮತ್ತು ಪ್ರೇರಣಾ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬದುಕಿನಲ್ಲಿ ಸಮಸ್ಯೆ, ಕಷ್ಟದ ಪರಿಸ್ಥಿತಿ ಬಂದರೂ ಕೂಡ ನಮ್ಮೊಳಗೆ ಬೆಳಗುತ್ತಿರುವ ಆತ್ಮವಿಶ್ವಾಸ ಎಂದಿಗೂ ಕುಂದಬಾರದು, ಕಷ್ಟ ಎದುರಿಸುವ, ಸಕಾರಾತ್ಮಕವಾಗಿ ಬದುಕು ಸ್ವೀಕರಿಸುವ ಆಶಾವಾದಿಗಳಾಗಬೇಕು, ಅಂತಹ ಶಿಕ್ಷಣದ ಅವಶ್ಯಕತೆ ಇದೆ, ತಲೆಗೆ ತುಂಬುವ ಬದಲು ಹೃದಯದ ಆಳಕ್ಕೆ ಮುಟ್ಟುವ ಶಿಕ್ಷಣ, ಮೌಲ್ಯಗಳನ್ನು ವಿದ್ಯಾರ್ಥಿಗಳಿಗೆ ಕಲಿಸಬೇಕು, ಜ್ಞಾನ ಪ್ರಧಾನ ಸಮಾಜವನ್ನು ಶಿಕ್ಷಕರು ಕಟ್ಟಬೇಕು, ಆಗ ನಕಾರಾತ್ಮಕತೆಗೆ ಅವಕಾಶವಿರುವುದಿಲ್ಲ ಎಂದರು.

ಮೌಲ್ಯಗಳನ್ನು ಆಚರಿಸುವ, ಬಿತ್ತುವ ಶಿಕ್ಷಕ ಮಾದರಿಯಾಗುತ್ತಾನೆ, ಮಹನೀಯರ ಬದುಕನ್ನುಅವರ ತತ್ವಾದರ್ಶಗಳ ನೆಲೆಯಲ್ಲಿ ಅಳೆಯುತ್ತೇವೆ, ಮನುಷ್ಯ ಜೀವಿಗಳನ್ನೊರೆತು ಪಡಿಸಿ ಭೂಮಿಯ ಮೇಲೆ ಎಲ್ಲಕ್ಕೂ ಬೆಲೆಯಿದೆ, ನಾವು ಮಾಡುವ ಸಮಾಜಮುಖಿ ಕಾರ್ಯಗಳಿಂದ ನಾಯಕರಾಗಬಹುದು, ನೀತಿ ಮೌಲ್ಯಗಳ ಚೌಕಟ್ಟಿನಡಿಯಲ್ಲಿ ಬದುಕಿದವರನ್ನು ಸಮಾಜ ಎಂದಿಗೂ ಮರೆಯುವುದಿಲ್ಲ ಎಂದು ತಿಳಿಸಿದರು.
ವಿದ್ಯಾವಂತರಾಗಿ, ಉದ್ಯೋಗ ಪಡೆದು ಬದುಕು ರೂಪಿಸಿಕೊಳ್ಳುತ್ತೇವೆ, ಸಂಪಾದಿಸುತ್ತೇವೆ, ನಮ್ಮ ಸಂಪಾದನೆಯ ಶೇ.10 ರಷ್ಟು ಸಮಾಜಕ್ಕಾಗಿ ಕೊಡುವ ಮನೋಧರ್ಮ, ಮತ್ತೊಬ್ಬರ ಕಣ್ಣಿರು ಒರೆಸುವ ಮನಸ್ಥಿತಿ ಇದ್ದಾಗ ಮಾತ್ರ ಬದುಕು ಸಾರ್ಥಕ, ಸಹಾಯ, ಶಿಕ್ಷಣ, ಮೌಲ್ಯ, ಧರ್ಮ, ಮನುಷ್ಯತ್ವ ಬದುಕನ್ನು ಅರಳಿಸುವ ಕಿರಣಗಳು, ವಿದ್ಯಾರ್ಥಿ ಜೀವನದ ಅಭ್ಯಾಸಗಳು ಮನೋಧರ್ಮ ಆಗಬೇಕು ಎಂದು ಹೇಳಿದರು.

ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಸ್ವಾಮಿ ಜಪಾನಂದಜೀ ಮಾತನಾಡಿ, ದೇಶ ಮುಂದುವರೆಸಿಕೊಂಡು ಹೋಗುವ ಮನಸ್ಥೈರ್ಯ ವಿದ್ಯಾರ್ಥಿಗಳಲ್ಲಿ ಮೂಡಬೇಕು, ಭವಿಷ್ಯ ಭಾರತವೇ ನೀವುಗಳು, ಮಹಾನ್ ಚೇತನರ ಭವಿಷ್ಯವನ್ನು ಸುಂದರವಾಗಿ ರೂಪಿಸಿದ ಉಪಾಧ್ಯಾಯರು ಎಂದಿಗೂ ಜೀವಂತ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ, ವಿದ್ಯಾರ್ಥಿಗಳ ಸಲುವಾಗಿ ಅನಿಕೇತನ ಆಯೋಜಿಸಿದ್ದೇವೆ, ಹೊಸದಾಗಿ ನಮ್ಮ ವಿವಿಗೆ ಹೆಜ್ಜೆ ಇಟ್ಟಿರುವ ಭವಿಷ್ಯ ಉಜ್ವಲವಾಗಿಸಲು ಇಂತಹ ಮಹನೀಯರ ಮಾತುಗಳ ಅವಶ್ಯಕತೆ ಇದೆ, ಶಿಕ್ಷಕರು ಪ್ರತಿಪಾದಿಸುವ ಮೌಲ್ಯಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳುತ್ತಾರೆ, ಶಿಕ್ಷಕರ ಬದುಕು ವಿದ್ಯಾರ್ಥಿಗಳಿಗೆ ಮಾದರಿ ಆಗಬೇಕು ಎಂದು ಹೇಳಿದರು.

ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶೆ ರತ್ನಕಲಾ ಮಾತನಾಡಿ, ಕೀರ್ತಿಗಾಗಿ ಬದುಕುವ ಬದಲು ಸಮಾಜಕ್ಕೆ ಸೇವೆ ಸಲ್ಲಿಸಿ, ಆಗ ಮಾತ್ರ ನಿಮ್ಮ ಶಿಕ್ಷಣಕ್ಕೆ ಮೌಲ್ಯ ಬರುವುದು ಎಂದರು.

ತುಮಕೂರು ವಿವಿಯ ಕುಲಸಚಿವೆ ನಾಹಿದಾ ಜಮ್ ಜಮ್, ಪರೀಕ್ಷಾಂಗ ಕುಲಸಚಿವ ಡಾ.ಪ್ರಸನ್ನಕುಮಾರ್.ಕೆ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಘಟಕದ ನಿರ್ದೇಶಕ ಪ್ರೊ.ಬಸವರಾಜ.ಜಿ, ಐಕ್ಯೂಎಸಿ ಘಟಕದ ನಿರ್ದೇಶಕ ಪ್ರೊ.ರಮೇಶ್.ಬಿ, ಪಿಎಂಇಬಿ ಘಟಕದ ನಿರ್ದೇಶಕ ಪ್ರೊ.ಬಿ.ಟಿ.ಸಂಪತ್ಕುಮಾರ್, ವಿವಿ ಉದ್ಯೋಗಾಧಿಕಾರಿ ಡಾ.ಪರಶುರಾಮ.ಕೆ.ಜಿ, ಸಹಾಯಕ ಪ್ರಾಧ್ಯಾಪಕ ಡಾ.ಸಿಬಂತಿ ಪದ್ಮನಾಭ.ಕೆ.ವಿ, ಸ್ನಾತಕೋತ್ತರ ವಿಭಾಗಗಳ ಅಧ್ಯಾಪಕರು ಹಾಗೂ ಪ್ರಥಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!