ತುಮಕೂರು: ಕೊಬ್ಬರಿಗೆ ವೈಜ್ಞಾನಿಕ ಬೆಂಬಲ ಬೆಲೆ ನಿಗದಿ, ತೆಂಗು ಮತ್ತು ಅದರ ಉಪ ಉತ್ಪನ್ನಗಳ ಮಾರುಕಟ್ಟೆಗೆ ಪ್ರೋತ್ಸಾಹ, ಸರಕಾರಿ ಹಾಸ್ಟೆಲ್, ಬಿಸಿಯೂಟದಲ್ಲಿ ಕೊಬ್ಬರಿ ಎಣ್ಣೆ ಬಳಕೆ ಇನ್ನಿತರ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಭಾರತೀಯ ಕಿಸಾನ್ ಸಂಘ- ಕರ್ನಾಟಕ ಪ್ರದೇಶ ವತಿಯಿಂದ ಪಾದಯಾತ್ರೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ನಗರದ ಸರಕಾರಿ ಜೂನಿಯರ್ ಕಾಲೇಜು ಮೈದಾನದಿಂದ ಹೊರಟ ಭಾರತೀಯ ಕಿಸಾನ್ ಸಂಘದ ಪಾದಯಾತ್ರೆ, ಬಿ.ಹೆಚ್.ರಸ್ತೆ ಮೂಲಕ ಟೌನಹಾಲ್ ತಲುಪಿ ಕೆಲಕಾಲ ಮಾನವ ಸರಪಳಿ ನಿರ್ಮಿಸಿದರು, ನಂತರ ಅಶೋಕ ರಸ್ತೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ತಲುಪಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ರೈತರ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಬೆಳ್ಳಾವೆ ಶ್ರೀಕಾರದೇಶ್ವರ ಮಠದ ಕಾರದ ವೀರಬಸವ ಸ್ವಾಮೀಜಿ, ಕೊಬ್ಬರಿ ತುಮಕೂರು ಸೇರಿದಂತೆ ಮಧ್ಯ ಕರ್ನಾಟಕದ ಸುಮಾರು 12 ಜಿಲ್ಲೆಗಳ ಪ್ರಮುಖ ವಾಣಿಜ್ಯ ಬೆಳೆ, ಕಳೆದ ವರ್ಷ ಕ್ವಿಂಟಾಲ್ ಗೆ 18 ಸಾವಿರ ಇದ್ದ ಬೆಲೆ ಈ ವರ್ಷ 8 ಸಾವಿರಕ್ಕೆ ಕುಸಿದಿದೆ, ಸರಕಾರ ನೀಡುತ್ತಿರುವ 11,730 ರೂ. ಬೆಂಬಲ ಬೆಲೆ ಯಾವುದಕ್ಕೂ ಸಾಲದಾಗಿದೆ, ಕೊಬ್ಬರಿ ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ, ಸರಕಾರ ಕೂಡಲೇ ಕೊಬ್ಬರಿ ಬೆಲೆ ಹೆಚ್ಚಿಸಬೇಕು, ಹಾಗೆಯೇ ಸರಕಾರ ನಡೆಸುವ ಹಾಸ್ಟೆಲ್ ಗಳು, ಮಧ್ಯಾಹ್ನದ ಬಿಸಿಯೂಟದಲ್ಲಿ ಕೊಬ್ಬರಿ ಎಣ್ಣೆ ಬಳಸುವ ಮೂಲಕ ಕೊಬ್ಬರಿಗೆ ಪ್ರೋತ್ಸಾಹ ನೀಡಬೇಕು, ಅಡುಗೆಗೆ ಕಲಬೆರಕೆ ಎಣ್ಣೆ ಬಳಸುವ ಬದಲು ನೈಸರ್ಗಿಕ ವಿಧಾನದಿಂದ ತೆಗೆದ ಕೊಬ್ಬರಿ ಎಣ್ಣೆ ಬಳಕೆ ಮಾಡುವುದರಿಂದ ರೈತರಿಗೂ ಉತ್ತಮ ಬೆಲೆ ಸಿಗಲಿದೆ, ಅಲ್ಲದೆ ಜನರನ್ನು ಸಹ ರೋಗದಿಂದ ಮುಕ್ತಗೊಳಿ ಸಬಹುದು, ಈ ನಿಟ್ಟಿನಲ್ಲಿ ಸರಕಾರ ಚಿಂತನೆ ನಡೆಸಬೇಕೆಂದು ಒತ್ತಾಯಿಸಿದರು.
ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ವಿಜಯಕುಮಾರ್ ಮಾತನಾಡಿ, ಸರಕಾರವೇ ನಿಗದಿ ಪಡಿಸಿದ ಕೃಷಿ ಬೆಲೆ ಆಯೋಗ ಕ್ವಿಂಟಾಲ್ ಕೊಬ್ಬರಿಗೆ 16,750 ರೂ. ಖರ್ಚಾಗುತ್ತದೆ ಎಂದು ವರದಿ ನೀಡಿದ್ದರೂ ಸರಕಾರ ನೀಡುತ್ತಿರುವ ಬೆಂಬಲ ಬೆಲೆ ಅದಕ್ಕಿಂತಲೂ ಕಡಿಮೆ ಇದೆ, ಹಾಗಾಗಿ ಕೊಬ್ಬರಿಗೆ ವೈಜ್ಞಾನಿಕ ಬೆಂಬಲ ಬೆಲೆ ನೀಡಬೇಕೆಂಬುದು ನಮ್ಮ ಆಗ್ರಹವಾಗಿದೆ, ಅಲ್ಲದೆ ಕೂಡಲೇ ಕೊಬ್ಬರಿಗೆ ಖರೀದಿ ಕೇಂದ್ರಗಳನ್ನು ತೆರೆದು ಬೆಂಬಲ ಬೆಲೆಯಲ್ಲಿ ಕೊಬ್ಬರಿ ಖರೀದಿ ಆರಂಭಿಸಿದರೆ ಹೆಚ್ಚಿನ ಅನುಕೂಲ ರೈತರಿಗೆ ಆಗಲಿದೆ, ತೆಂಗಿನಿಂದ ಉತ್ಪನ್ನವಾಗುವ ನೀರಾ ಹಾಗೂ ಇತರೆ ವಸ್ತುಗಳನ್ನು ಅಬಕಾರಿ ಕಾಯ್ದೆಯಿಂದ ಹೊರಗಿಟ್ಟು ಪಡಿತರ ಅಂಗಡಿಗಳ ಮೂಲಕ ಜನರಿಗೆ ಕೊಬ್ಬರಿ ಉತ್ಪನ್ನ ವಿತರಿಸುವಂತೆ ಮಾಡಿದರೆ ರೈತರಿಗೆ ಹೆಚ್ಚಿನ ಅನುಕೂಲ ವಾಗಲಿದೆ ಎಂದರು.
ಗುಬ್ಬಿ ತಾಲೂಕು ಗೊಲ್ಲಹಳ್ಳಿಯ ಶ್ರೀಸಿದ್ದಲಿಂಗೇಶ ಮಹಾ ಸಂಸ್ಥಾನದ ವಿಭವ ವಿದ್ಯಾ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಭಾರತೀಯ ಸಮಾಜದಲ್ಲಿ ಕೃಷಿ ಮತ್ತು ಋಷಿ ಪರಂಪರೆ ಉತ್ಕೃಷ್ಟವಾದವು, ಭಾರತದ ಬೆಳವಣಿಗೆಯಲ್ಲಿ ಕೃಷಿಕರ ಪಾತ್ರ ಬಹಳ ದೊಡ್ಡದಿದೆ, ಆದರೆ ಇತ್ತೀಚಿನ ದಿನಗಳಲ್ಲಿ ಕೃಷಿ ಲಾಭದಾಯಕವಲ್ಲ ಎಂಬ ಕಾರಣಕ್ಕೆ ಯುವ ಜನರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ, ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ರೈತರ ನೆರವಿಗೆ ಬರಬೇಕು, ಕೊಬ್ಬರಿ ಎಣ್ಣೆ ಮನುಷ್ಯನಿಗೆ ಅತ್ಯಂತ ಅವಶ್ಯಕವಾದ ವಸ್ತುವಾಗಿದೆ, ಇದರ ಬಗ್ಗೆ ಇರುವ ತಪ್ಪು ಅಭಿಪ್ರಾಯ ಬದಿಗಿಟ್ಟು ಎಲ್ಲರೂ ಕೊಬ್ಬರಿ ಬಳಸುವಂತೆ ಪ್ರೋತ್ಸಾಹಿಸಬೇಕು ಎಂದರು.
ಪಾದಯಾತ್ರೆಯಲ್ಲಿ ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ವಿಜಯಕುಮಾರ್, ಜಿಲ್ಲಾ ಕಾರ್ಯದರ್ಶಿ ಶ್ರೀಧರ್, ಪ್ರಾಂತ ಕಾರ್ಯದರ್ಶಿ ಸಂತೋಷ್, ಗಂಗಾಧರ ಸ್ವಾಮಿ, ಜಿಲ್ಲಾ ಕೋಶಾಧ್ಯಕ್ಷ ಮಹಾಲಿಂಗಪ್ಪ, ಜಿಲ್ಲಾ ಮಹಿಳಾ ಪ್ರಮುಖ ನವೀನ್ ಸದಾಶಿವಯ್ಯ, ಜಿಲ್ಲಾ ಉಪಾಧ್ಯಕ್ಷ ಡಾ.ಮೋಹನ್, ತಾಲೂಕು ಅಧ್ಯಕ್ಷರಾದ ಸಿದ್ದಲಿಂಗಪ್ಪ, ಶಿವನಂಜಪ್ಪ, ಆನಂದ್, ಹೇಮಣ್ಣ, ಚಂದ್ರಶೇಖರ್, ಜಗದೀಶ್, ಕುಮಾರ್, ಪ್ರವೀಣ್, ಮನೋಹರ್, ದಿನೇಶ್ ಪುಟ್ಟಸ್ವಾಮಿ, ನಾರಾಯಣ ಸ್ವಾಮಿ ಇತರರು ಭಾಗವಹಿಸಿದ್ದರು.
Comments are closed.