ಕುಡಿವ ನೀರಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ

ಅಧಿಕಾರಿಗಳಿಗೆ ಸಹಕಾರ ಸಚಿವ ಕೆ.ಎನ್.ರಾಜಣ್ಣ ಸೂಚನೆ

89

Get real time updates directly on you device, subscribe now.


ಮಧುಗಿರಿ: ತಾಲೂಕಿನಲ್ಲಿ ಕುಡಿಯುವ ನೀರು, ಜಾನುವಾರುಗಳ ಮೇವಿಗೆ ತೊಂದರೆಯಾಗದಂತೆ ಅಧಿಕಾರಿಗಳು ಮೊದಲ ಆದ್ಯತೆ ನೀಡಬೇಕೆಂದು ಹಾಸನ ಉಸ್ತುವಾರಿ ಸಚಿವ ಹಾಗೂ ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.
ಪಟ್ಟಣದ ತಾಲೂಕು ಪಂಚಾಯತಿ ಸಭಾಂಗಣಾದಲ್ಲಿ ಆಯೋಜಿಸಿದ್ದ ಬರಗಾಲದ ಹಿನ್ನೆಲೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಗ್ರಾಮಾಂತರ ಭಾಗದಲ್ಲಿನ ಕ್ಯಾತಗೊಂಡನ ಹಳ್ಳಿ, ಹೊಸಕೆರೆ, ನೀರಕಲ್ಲು ಸೇರಿದಂತೆ ಒಟ್ಟು ಐದು ಕಡೆ ನೀರಿನ ಅಭಾವ ಉಂಟಾಗಿದ್ದು ಪಿಡಿಓಗಳು ಕೂಡಲೇ ಕ್ರಮ ವಹಿಸಿ ವಾಟರ್ ಮ್ಯಾನ್ ಗಳ ಜೊತೆ ಸಮಾಲೋಚನೆ ಸಭೆ ನಡೆಸಿ ನೀರಿನ ನಿಯಂತ್ರಣಕ್ಕೆ ಮುಂದಾಗಬೇಕು ಎಂದರು.

ಕಾರ್ಮಿಕ ಇಲಾಖೆ ಹಾಗೂ ತಹಸೀಲ್ದಾರ್ ಜಂಟಿ ಕಾರ್ಯಾಚರಣೆ ನಡೆಸಿ ಮಕ್ಕಳ ದುಡಿಮೆಗೆ ಹಚ್ಚದಂತೆ ನೋಡಿ ಕೊಳ್ಳಬೇಕು, ಶಿಕ್ಷಣದಿಂದ ವಂಚಿತರಾಗಿರುವ ಮಕ್ಕಳನ್ನು ಗುರುತಿಸಿ ಪೋಷಕರ ಮನವೊಲಿಸಿ ಮತ್ತೆ ಶಾಲೆಗೆ ದಾಖಲು ಮಾಡುವುದು ಹಾಗೂ ವಿದ್ಯಾರ್ಥಿಗಳ ಶೇ.100 ರಷ್ಟು ಹಾಜರಾತಿ ಇರುವಂತೆ ನೋಡಿಕೊಳ್ಳಬೇಕು, ಕುಡಿಯುವ ನೀರು , ಶಿಥಿಲವಾಗಿರುವ ಕಟ್ಟಡ, ಶೌಚಾಲಯವಿಲ್ಲದ ಶಾಲೆಗಳ ಮಾಹಿತಿ ಒದಗಿಸುವುದು ಹಾಗೂ ಕಸ್ತೂರಿ ಬಾ ವಸತಿ ಶಾಲೆಯಲ್ಲಿ ಸಮಸ್ಯೆ ಹೆಚ್ಚಿದ್ದು ಸಮಸ್ಯೆ ಬಗೆ ಹರಿಸುವುದು ಬಿಇಓ ಕರ್ತವ್ಯವಾಗಿದೆ ಎಂದರು.

ತಾಲ್ಲೂಕಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರ ವಸತಿ ನಿಲಯಗಳಿಗೆ ಸಂಬಂಧಪಟ್ಟ ಸಾಹಾಯಕ ನಿರ್ದೇಶಕರು ವಾರಕೊಮ್ಮೆ ಕಡ್ಡಾಯವಾಗಿ ಭೇಟಿ ನೀಡಿ ಅಲ್ಲಿನ ಊಟದ ವ್ಯವಸ್ಥೆಯ ಜೊತೆಗೆ ವಸತಿ ಶಾಲೆಯ ಪೀಠೋಪಕರಣ ಹಾಗೂ ಗ್ರಂಥಾಲಯ, ನಿಗದಿತ ಆಹಾರ ವಿತರಣಾ ಪಟ್ಟಿಯ ಪ್ರಕಾರವೇ ವಿದ್ಯಾರ್ಥಿಗಳಿಗೆ ಊಟ ನೀಡಬೇಕು, ಲೋಕೋಪಯೋಗಿ ಇಲಾಖೆ ವತಿಯಿಂದ 25 ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು ಆದಷ್ಟೂ ಬೇಗ ಆರಂಭಿಸ ಬೇಕು, ಎಲ್ಲಾ ಪಂಚಾಯತಿಗಳಲ್ಲಿ ಹಳೆಯ ಮತ್ತು ರಿಪೇರಿಗೆ ಬಂದಿರುವ ಮೋಟಾರ್ ಪಂಪ್ ಗಳನ್ನು ಮುಖ್ಯ ಕಚೇರಿಯಲ್ಲಿಯೇ ಸಂಗ್ರಹಿಸಿ ಇಡಬೇಕೆಂದರು.
ಅಧಿಕಾರಿಗಳು ಕಚೇರಿಯಲ್ಲಿ ಇರದೆ ಜನರ ಸಮಸ್ಯೆ ಆಲಿಸುವ ಸಲುವಾಗಿ ಅವರ ಬಳಿಯೇ ತೆರಳಿ ಸಮಸ್ಯೆ ಬಗೆ ಹರಿಸಲು ಮುಂದಾಗ ಬೇಕು, ಸಾರ್ವಜನಿಕ ಆಸ್ಪತ್ರೆಯಲ್ಲಿ 7 ಜನ ವೈದ್ಯರ ಕೊರತೆ ಇದೆ ಎಂದು ಆಡಳಿತಾಧಿಕಾರಿ ಗಂಗಾಧರ್ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಆದಷ್ಟೂ ಬೇಗ ವೈದ್ಯರ ನೇಮಕ ಮಾಡುವಂತೆ ಸಂಬಂಧಪಟ್ಟ ಸಚಿವರು ಹಾಗೂ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದರು.

ಸಾರ್ವಜನಿಕ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಇಂದಿರಾ ಕ್ಯಾಂಟಿನ್ ಆಹಾರದ ಪೊಟ್ಡಣಗಳನ್ನು ರೋಗಿಗಳಿಗೆ ನೀಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದು ಆಡಳಿತಾಧಿಕಾರಿ ಗಮನ ಹರಿಸಿ ಯಾವುದೇ ಸಮಸ್ಯೆ ಉದ್ಬವವಾಗದಂತೆ ನೋಡಿಕೊಳ್ಳಿ ಎಂದು ಸೂಚಿಸಿದರು.
ಬಾಲ ಕಾರ್ಮಿಕರನ್ನು ಪತ್ತೆ ಹಚ್ಚಲು ವಿಶೇಷವಾಗಿ ಪೋಲಿಸ್ ತಂಡ ರಚಿಸುವಂತೆ ಡಿವೈ ಎಸ್ ಪಿ ರಾಮಚಂದ್ರಪ್ಪ ಅವರಿಗೆ ಸೂಚಿಸಿದರು.

ತಾಪಂ ಎಡಿಓ ಮಧುಸೂಧನ್, ಬಿಇಓ ಹನುಮಂತರಾಯಪ್ಪ, ಉಪ ವಲಯ ಅರಣ್ಯಾಧಿಕಾರಿ ಮುತ್ತುರಾಜ್, ಸುರೇಶ್, ಶಿವಣ್ಣ, ಜಯರಾಮಯ್ಯ, ಡಾ.ಗಂಗಾಧರ್, ವಿಜಯಪ್ರಸಾದ್, ರಾಜಗೋಪಾಲ್, ಮಂಜುನಾಥ್, ಲೋಕೇಶ್ವರಪ್ಪ, ಶ್ರೀಕಾಂತ್, ಹನುಮಂತರಾಯಪ್ಪ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!