ಕುಣಿಗಲ್: ರಾಜಕೀಯ ಕ್ಷೇತ್ರ ಸೇರಿದಂತೆ ಎಲ್ಲಾ ಕ್ಷೇತ್ರಗಳೂ ಕಲುಷಿತಗೊಂಡಿವೆ, ರಾಜಕೀಯ ಕ್ಷೇತ್ರವಂತೂ ಯಾರೂ ನಿರೀಕ್ಷೆ ಮಾಡಲಾರದಷ್ಟು ಕಲುಷಿತಗೊಂಡಿದ್ದು ತತ್ವ, ಸಿದ್ದಾಂಗ ರೂಢಿಸಿಕೊಂಡವರು ಕ್ಷೇತ್ರದಿಂದ ನಿವೃತ್ತಿಯಾಗುವಂತಹ ವಾತವರಣ ನಿರ್ಮಾಣವಾಗಿದೆ ಎಂದು ಮಾಜಿ ಸಚಿವ ಡಿ.ನಾಗರಾಜಯ್ಯ ಹೇಳಿದರು.
ಪಟ್ಟಣದಲ್ಲಿ ಜನ್ಮಭೂಮಿ ನಾಡುನುಡಿ ಸಂರಕ್ಷಣಾ ವೇದಿಕೆ ಹಮ್ಮಿಕೊಂಡಿದ್ದ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾಡು, ನುಡಿಯ ಬಗ್ಗೆ ಸಂಘಟಿತಗೊಂಡು ಹೋರಾಟ ಮಾಡುತ್ತಿದ್ದ ಸಂಘಟನೆಗಳು ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ಪರಿಣಾಮಕಾರಿ ಹೋರಾಟ ನಡೆಸಿಕೊಂಡು ಬಂದಿದ್ದು ಇತ್ತೀಚಿನ ದಿನಗಳಲ್ಲಿ ಹೋರಾಟ ಅಂದರೆ ಜನ ಬೇರೆ ರೀತಿ ನೋಡವಂತಾಗಿರುವುದು ಖೇದಕರ, ರಾಜಕೀಯ ರಂಗ ಕಲುಷಿತಗೊಳ್ಳಲು ಮತದಾರರೆ ಕಾರಣವಾಗಿದ್ದು ಮತ ಚಲಾವಣೆ ವೇಳೆಯಲ್ಲಿ ನಡೆಯುವ ವ್ಯಾಪಕ ಭ್ರಷ್ಟಾಚಾರ ನಂತರ ಅವರು ಯಾವುದೆ ಕೆಲಸ ಕಾರ್ಯಗಳಿಗೆ ಅವರೆ ಹಣ ಕೊಟ್ಟು ಮಾಡಿಸಿಕೊಳ್ಳುವ ಸ್ಥಿತಿಗೆ ಬಂದಿದೆ, ಮತದಾರರು ಜಾಗೃತರಾಗದ ಹೊರತು ಏನು ಮಾಡಲಾಗದು ಎಂದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಜೇಶ್ ಗೌಡ ಮಾತನಾಡಿ, ನಾಡು, ನುಡಿ, ನೆಲ ಹಾಗೂ ಜಲದ ಸಂರಕ್ಷಣೆಗೆ ಕನ್ನಡಪರ ಸಂಘಟನೆಗಳ ಸತತ ಹೋರಾಟದ ಪರಿಣಾಮಕಾರಿಯಾಗಿದೆ, ಕನ್ನಡಪರ ಸಂಘಟನೆಗಳ ಹೋರಾಟವೂ ಸರ್ಕಾರಕ್ಕೂ ಕೆಲ ಸಂದಭದಲ್ಲಿ ಕಣ್ಣು ತೆರೆಸುವ ಮಟ್ಟದಲ್ಲಿ ನಡೆಯುತ್ತಿರುವುದರಿಂದ ಹಲವು ಸಮಸ್ಯೆಗೆ ಪರಿಹಾರ ಕಂಡು ಕೊಳ್ಳುವಂತಾಗಿದೆ, ಸಂಘಟನೆಗಳು ಸಾಮಾಜಿಕ ಸಮಸ್ಯೆಗೆ ಬದ್ಧವಾಗಿ ಜನಪರವಾಗಿ ಕಾರ್ಯ ನಿರ್ವಹಿಸಬೇಕಿದೆ ಎಂದರು.
ಕಿತ್ತನಾಗಮಂಗಲ ಅರೆಶಂಕರ ಮಠದ ಸಿದ್ದರಾಮ ಚೈತನ್ಯ ಸ್ವಾಮೀಜಿ, ಗೌಡತಿ ಸೇನೆಯ ರೇಣುಕಮ್ಮ, ಜನ್ಮಭೂಮಿ ಕಾವಲು ಪಡೆಯ ವಿಜಯಲಕ್ಷ್ಮೀ, ಪುರಸಭೆ ಸದಸ್ಯರಾದ ಮಂಜುಳಮ್ಮ, ಅರುಣಕುಮಾರ, ರಂಗಸ್ವಾಮಿ, ಮಾಜಿ ಸದಸ್ಯ ಇ.ಮಂಜು, ಕರವೇ ಅಧ್ಯಕ್ಷ ಮಂಜುನಾಥ, ಕಸಾಪ ಅಧ್ಯಕ್ಷ ರಮೇಶ್, ವೇದಿಕೆ ಅಧ್ಯಕ್ಷ ಶಿವಣ್ಣ, ಪದಾಧಿಕಾರಿಗಳು ಇದ್ದರು. ಪಟ್ಟಣದ ಖ್ಯಾತ ವೈದ್ಯರಾದ ಡಾ.ಚಿಕ್ಕಯಾಲಕ್ಕಯ್ಯ, ಡಾ.ಶೈಲೇಶ್ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಯಿತು.
Comments are closed.