ಮಧುಗಿರಿ: ಹಳ್ಳಿಗಾಡಿನ ಗ್ರಾಮೀಣ ಭಾಗದ ಮುಗ್ಧ ಜನರಿಂದಲೇ ಇಂದು ಕನ್ನಡ ಭಾಷೆ ಉಳಿದುಕೊಂಡಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.
ಪಟ್ಟಣದ ಕನ್ನಡ ಭವನದಲ್ಲಿ ಕರ್ನಾಟಕ ಗಡಿ ನಾಡು ಅಭಿವೃದ್ಧಿ ಪ್ರಾಧಿಕಾರ, ಸಾರಥಿ ಮಾಧ್ಯಮ ಸಂಪನ್ಮೂಲ ಸಂಸ್ಥೆ, ಶ್ರೀರಾಮಕೃಷ್ಣ ಸೇವಾಶ್ರಮ, ಜನಮುಖಿ ಸಾಹಿತ್ಯ ಸಂಘಟನೆ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಗಡಿನಾಡು ಸಾಹಿತ್ಯ ಸಂಚಲನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಇಂದಿಗೂ ಕನ್ನಡ ಭಾಷೆ ಜೀವನದ ಭಾಷೆಯಾಗಿದೆ, ಗ್ರಾಮೀಣ ಭಾಗದ ಹಳ್ಳಿಗಾಡಿನ ಮಗ್ಧ ಜನರಿಂದಾಗಿ ಇಂದು ಕನ್ನಡ ಉಳಿದುಕೊಂಡಿದೆ, ಅನ್ಯ ಭಾಷೆಯ ವಿರೋಧಿಗಳಲ್ಲ, ಆದರೆ ಕನ್ನಡ ನಮ್ಮ ಮಾತೃ ಭಾಷೆ, ಕನ್ನಡ ಭಾಷೆ ಮರೆತರೆ ನಮ್ಮ ತಾಯಿ ಮರೆತಂತೆ, ಎಲ್ಲಾ ಭಾಷೆಯ ಪದಗಳು ಕನ್ನಡದಲ್ಲಿದ್ದು, ಇವು ನಮ್ಮ ಭಾಷೆಯ ಸಂಪತನ್ನು ಹೆಚ್ಚಿಸಿದೆ ಎಂದರು.
ವಿದ್ಯಾರ್ಥಿಗಳು ಗುಣಮಟ್ಟದ ವಿದ್ಯೆ ಕಲಿಯಬೇಕು, ಸಮಾಜದಲ್ಲಿ ಗೌರವ ಗಳಿಸಬೇಕು, ವಿದ್ಯೆಯಿಂದ ಮಾತ್ರ ವಿದ್ಯಾರ್ಥಿಗಳ ಬದುಕು ಹಸನಾಗಲಿದೆ, ವಿದ್ಯೆ ಸಾಧಕರ ಸ್ವತ್ತೇ ಹೊರತು ಸೋಮಾರಿಗಳ ಸ್ವತ್ತಲ್ಲ, ಮಕ್ಕಳು ದೇಶದ ಆಸ್ತಿಯಾಗಿ ಪರಿವರ್ತನೆಯಾಗಬೇಕು ಎಂದರು.
ಸಾಹಿತಿ ಬರಗೂರು ರಾಮಚಂದ್ರಪ್ಪನವರು ಮಧುಗಿರಿಯಲ್ಲಿ ರಾಜ್ಯ ಮಟ್ಟದ ಗಡಿನಾಡು ಕನ್ನಡ ಸಮ್ಮೇಳನ ಆಯೋಜಿಸಬೇಕು ಎಂದು ಮನವಿ ಮಾಡಿದ್ದು, ಮುಂದಿನ ದಿನಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.
ಸಾಹಿತಿ ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ಮಾತನಾಡಿ 10ನೇ ಶತಮಾನದಿಂದಲೂ ಕನ್ನಡ ಸವಾಲುಗಳನ್ನು ಎದುರಿಸಿಕೊಡೇ ಬಂದಿದೆ, ಕನ್ನಡ ಭಾಷೆಗೆ ಸವಾಲುಗಳಿವೆಯೇ ಹೊರತು ಸಾವಿಲ್ಲ, ಭಾಷೆ ಉಳಿಸುವವರು ಜನ ಸಾಮಾನ್ಯರು, ಭಾಷೆ ಉಳಿಸಬೇಕಾದರೆ ಭಾಷೆಯನ್ನಾಡುವ ಜನರನ್ನು ಉಳಿಸಿಕೊಂಡಾಗ ಅವರೆ ಭಾಷೆ ಉಳಿಸುತ್ತಾರೆ, ಜನರಿಗೆ ಜೀವನದ ಭದ್ರತೆ ನೀಡಬೇಕು, ಕನ್ನಡದಿಂದ ಬದುಕುವ ವಾತಾವರಣ ನಿರ್ಮಿಸಬೇಕು, ಆಗ ನಮ್ಮವರೇ ಕನ್ನಡ ಉಳಿಸುತ್ತಾರೆ, ರಾಜ್ಯದಲ್ಲಿ 52 ಗಡಿ ತಾಲೂಕುಗಳಿದ್ದು, ಪಾವಗಡ, ಮಧುಗಿರಿ, ಕೋಲಾರ ಗಡಿ ಜಿಲ್ಲೆಯಲ್ಲಿ ಒಂದೇ ಒಂದು ತೆಲುಗು ಭಾಷೆಯ ಶಾಲೆಯಿಲ್ಲ ಎಂಬುದು ಗಮನಾರ್ಹ, ಆಂಗ್ಲ ಭಾಷೆಗೆ ಕನ್ನಡ ಭಾಷೆಯ ಅರ್ಧದಷ್ಟೂ ಇತಿಹಾಸವಿಲ್ಲ, ರಾಜ್ಯದ ಸಚಿವಾಲಯಗಳಲ್ಲಿ ಇತರೆ ರಾಜ್ಯಗಳಿಗಿಂತಲೂ ಕಡಿಮೆ ಇಂಗ್ಲಿಷ್ ಭಾಷೆ ಬಳಸಲಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜಕೀಯ ನಾಯಕತ್ವ ನಿಯಂತ್ರಿಸುವ ಶಕ್ತಿ ಆರ್ಥಿಕ ನಾಯಕತ್ವಕ್ಕಿದೆ, ಬಡವರಿಗೆ ಸವಲತ್ತು ನೀಡಿದರೆ ಬಿಟ್ಟಿ ಭಾಗ್ಯ ಎಂದು ಕೆಲವರು ಹಂಗಿಸುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪಾವಗಡ ರಾಮಕೃಷ್ಣ ಆಶ್ರಮದ ಸ್ವಾಮಿ ಜಪಾನಂದ ಮಹಾರಾಜ್ ಮಾತನಾಡಿ, ಕನ್ನಡದ ಭಾಷೆಯಲ್ಲಿ ಹೃದಯದ ಸಂವಾದವಿದೆ, ನಮ್ಮ ಭಾಷೆ, ನೆಲ, ಜಲ ಸುರಕ್ಷಿತವಾಗಿ ಸಂರಕ್ಷಣೆ ನಮ್ಮ ಜವಾಬ್ದಾರಿ, ಮನುಷ್ಯನ ಅಂತರಂಗ ತಿಳಿದುಕೊಳ್ಳುವ ಏಕೈಕ ಭಾಷೆ ಕನ್ನಡ, ರಾಜ್ಯದಲ್ಲಿ ಕನ್ನಡ ಭಾಷೆ ಉಳಿದಿರುವುದು ಗ್ರಾಮೀಣ ಭಾಗದ ಜನರಿಂದಲೇ, ಯುವ ಜನತೆ ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ನನಗೆ ಸಂತಸ ತಂದಿದೆ ಎಂದರು.
ಮಧುಗಿರಿ ಕೊರಟಗೆರೆ, ಪಾವಗಡ, ಶಿರಾ ತಾಲೂಕಿನ ಮಧ್ಯ ಭಾಗದಲ್ಲಿದ್ದು, ಎಲ್ಲರಿಗೂ ಅನುಕೂಲವಾಗಲಿ ಎಂಬ ಉದ್ದೇಶದಿಂದ ಮಧುಗಿರಿಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ, ಮಧುಗಿರಿಯ ಜನತೆ ಮಧುವಿನಷ್ಟೇ ಸವಿಯುಳ್ಳವರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ತುಮಕೂರು ವಿಶ್ವ ವಿದ್ಯಾಲಯದ ಕುಲಸಚಿವೆ ನಹಿದಾ ಜಮ್ ಜಮ್, ತಹಶೀಲ್ದಾರ್ ಸಿಬ್ಗತ್ ವುಲ್ಲಾ, ಕಸಾಪ ಕಾರ್ಯದರ್ಶಿ ಎಂ.ಎಸ್.ಶಂಕರನಾರಾಯಣ, ರಂಗಧಾಮಯ್ಯ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಮುನೀಂದ್ರ ಕುಮಾರ್, ವಕೀಲರ ಸಂಘದ ಅಧ್ಯಕ್ಷ ಪಿ.ಸಿ ಕೃಷ್ಣಾರೆಡ್ಡಿ, ಡಿ.ವೈ.ಎಸ್.ಪಿ ರಾಮಚಂದ್ರಪ್ಪ, ಡಿಡಿಪಿಐ ಮಂಜುನಾಥ್, ಸಾರಥಿ ಮಾಧ್ಯಮ ಸಮೂಹ ಸಂಸ್ಥೆಯ ಡಿ.ಎಸ್.ಶಮಂತ, ಕವಿಯತ್ರಿ ಶೈಲಾ ನಾಗರಾಜ್, ಸಾಹಿತಿ ಲಕ್ಷ್ಮಣ ದಾಸ್, ಲತಾ ನಾರಾಯಣ್, ವೀಣಾ ಶ್ರೀನಿವಾಸ್, ಬಿಇಓ ಹನುಮಂತನಾಯಪ್ಪ, ಮಲನ ಮೂರ್ತಿ, ಕಸಾಪ ಸಂಘಟನಾ ಕಾರ್ಯದರ್ಶಿ ಎ.ರಾಮಚಂದ್ರಪ್ಪ, ಉಪನ್ಯಾಸಕ ಎನ್.ಮಹಾಲಿಂಗೇಶ್ ಇತರರು ಇದ್ದರು.
Comments are closed.