ತುಮಕೂರು: ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಶ್ರೀದೇವಿ ಶಿಕ್ಷಣ ಸಮೂಹ ಸಂಸ್ಥೆಗಳ ಸಂಸ್ಥಾಪಕ ಡಾ.ಎಂ.ಆರ್.ಹುಲಿನಾಯ್ಕರ್ ಅವರ ಅಮೃತ ಮಹೋತ್ಸವ ಹಾಗೂ ಅವರ ಆತ್ಮಕಥನ ಅಂತರಂಗದ ಅವಲೋಕನ ಕೃತಿ ಬಿಡುಗಡೆ ಇದೇ ನ.25ರ ಶನಿವಾರ ಬೆಳಗ್ಗೆ 11ಕ್ಕೆ ತುಮಕೂರಿನ ಲಿಂಗಾಪುರ ರಸ್ತೆಯ ಶ್ರೀದೇವಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ಜರುಗಲಿದೆ ಎಂದು ಅಮೃತ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಟಿ.ಆರ್.ಆಂಜಿನಪ್ಪ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ಮಾಹಿತಿ ಹಂಚಿಕೊಂಡು ಡಾ.ಹುಲಿನಾಯ್ಕರ್ ಶಿಕ್ಷಣ, ಆರೋಗ್ಯ, ಧಾರ್ಮಿಕ, ರಾಜಕೀಯ ಕ್ಷೇತ್ರದಲ್ಲಿ ತುಮಕೂರು ಜಿಲ್ಲೆ ಮಾತ್ರ ವಲ್ಲದೆ ರಾಜ್ಯಾದ್ಯಂತ ತಮ್ಮದೇ ಕೊಡುಗೆಗಳ ನೀಡಿದ್ದಾರೆ, ಹಿಂದುಳಿದ ಹಾಲುಮತ ಸಮುದಾಯದ ಸಂಸ್ಕಾರವಂತ ಕುಟುಂಬದಲ್ಲಿ ಹುಟ್ಟಿ ವೃತ್ತಿ ಬದುಕಿಗಾಗಿ ಉತ್ತರ ಕರ್ನಾಟಕದಿಂದ ದಕ್ಷಿಣ ಕರ್ನಾಟಕಕ್ಕೆ ಬಂದು ಕಲ್ಪತರು ನಾಡು ತುಮಕೂರಿನಲ್ಲಿ ನೆಲೆ ನಿಂತು ಸಮಾಜಮುಖಿಯಾಗಿ ಸಾಧನೆ ಮಾಡುತ್ತಿರುವುದು ನಾವೆಲ್ಲರೂ ಹೆಮ್ಮೆಪಡುವ ಸಂಗತಿ ಎಂದರು.
ಅಜಾತ ಶತ್ರುವಿನಂತಹ ವ್ಯಕ್ತಿತ್ವದ ಡಾ.ಹುಲಿನಾಯ್ಕರ್ ಅವರ ಸಾರ್ಥಕ ಐದು ದಶಕದ ಸಾರ್ವಜನಿಕ ಸೇವೆ ಪರಿಗಣಿಸಿ ಅವರಿಗೆ 75ನೇ ವರ್ಷವಾಗಿರುವ ಈ ಸಂದರ್ಭದಲ್ಲಿ ಅಮೃತ ಮಹೋತ್ಸವ ಸಮಾರಂಭದ ಮೂಲಕ ಗೌರವ ಸಮರ್ಪಣೆ ಮಾಡಬೇಕೆಂದು ಅವರ ಅಭಿಮಾನಿಗಳು, ಹಿತೈಷಿಗಳು, ಪಕ್ಷಾತೀತವಾಗಿ ರಾಜಕೀಯ ಗಣ್ಯರು, ಮುಖಂಡರು, ಸಂಘ ಸಂಸ್ಥೆಗಳ ಪ್ರಮುಖರು, ಡಾಕ್ಟರ್ ಕುಟುಂಬದವರು, ಶ್ರೀದೇವಿ ಸಮೂಹ ಎಲ್ಲರೂ ಒಡಗೂಡಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಅಭೂತಪೂರ್ವ ಅಮೃತ ಮಹೋತ್ಸವ ಕಾರ್ಯಕ್ರಮದ ಸಾನಿಧ್ಯವನ್ನು ಕಾಗಿನೆಲೆ ಕನಕ ಗುರುಪೀಠದ ಅಧ್ಯಕ್ಷ ನಿರಂಜನಾನಂದಾಪುರಿ ಸ್ವಾಮೀಜಿ ವಹಿಸಲಿದ್ದು, ಉದ್ಘಾಟನೆಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೆರವೇರಿಸುತ್ತಿದ್ದಾರೆ, ಲೇಖಕರು, ಹಿರಿಯ ಪತ್ರಕರ್ತ ಡಾ.ಕೆ.ಆರ್.ಕಮಲೇಶ್ ನಿರೂಪಣೆಯ ಅಂತರಂಗದ ಅವಲೋಕನ ಆತ್ಮಕಥನವನ್ನು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಬಿಡುಗಡೆ ಮಾಡಲಿದ್ದು, ಸಹಕಾರ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಅವರು ಅಭಿನಂದನಾ ನುಡಿಗಳಾಡುವರು, ಕೃತಿಯ ಮೊದಲ ಗೌರವ ಪ್ರತಿಯನ್ನು ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಸ್ವೀಕರಿಸಲಿದ್ದು, ವಿಜಯವಾಣಿ ಸಹಾಯಕ ಸಂಪಾದಕ ರುದ್ರಣ್ಣ ಹರ್ತಿಕೋಟೆ ಎರಡನೇ ವಾರ್ಷಿಕ ವಿಶೇಷ ಸಂಚಿಕೆ ಬಿಡುಗಡೆ ಗೊಳಿಸುವರು, ಖ್ಯಾತ ಸಾಹಿತಿ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್ ಕೃತಿ ಕುರಿತು ಮಾತನಾಡುವರು, ಅಧ್ಯಕ್ಷ ತೆಯನ್ನು ಸಮಿತಿ ಅಧ್ಯಕ್ಷ ಎಸ್.ನಾಗಣ್ಣ ವಹಿಸುವರು ಎಂದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ಎಸ್.ನಾಗಣ್ಣ, ಜಿಪಂ ಮಾಜಿ ಅಧ್ಯಕ್ಷ ವೈ.ಎಚ್.ಹುಚ್ಚಯ್ಯ, ಪಾಲಿಕೆ ಮೇಯರ್ ಪ್ರಭಾವತಿ ಸುಧೀಶ್ವರ್, ಉಪ ಮೇಯರ್ ಟಿ.ಕೆ.ನರಸಿಂಹಮೂರ್ತಿ, ಟೂಡಾ ಮಾಜಿ ಅಧ್ಯಕ್ಷ ರೆಡ್ಡಿ ಚಿನ್ನಯಲ್ಲಪ್ಪ, ಆಡಿಟರ್ ಸುಲ್ತಾನ್, ಪಾಲಿಕೆ ಸದಸ್ಯರಾದ ನಯಾಜ್ ಅಹಮದ್, ಫರೀದಾ ಬೇಗಂ, ಸಿ.ಎನ್.ರಮೇಶ್, ಶ್ರೀನಿವಾಸ್, ಲಕ್ಷ್ಮಿನರಸಿಂಹರಾಜು, ಮಲ್ಲಿಕಾರ್ಜುನಯ್ಯ ಹಾಗೂ ವಾಸುದೇವ್, ಡಿ.ಎಂ.ಸತೀಶ್, ಎನ್.ಮಧುಕರ್ ಇತರರು ಇದ್ದರು.
Comments are closed.