ಕುಣಿಗಲ್: ಪಟ್ಟಣದಿಂದ ತುಮಕೂರು ಕಡೆಗೆ ವ್ಯಾಸಂಗಕ್ಕೆ ತೆರಳುವ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಸಾಧ್ಯ ಇರುವ ಎಲ್ಲಾ ಕ್ರಮ ಕೈಗೊಳ್ಳಲಾಗುವುದು, ವಿದ್ಯಾರ್ಥಿಗಳ ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸಲು ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ ಎಂದು ಶಾಸಕ ಡಾ.ರಂಗನಾಥ್ ಹೇಳಿದರು.
ಶುಕ್ರವಾರ ಪಟ್ಟಣದ ಸಾರಿಗೆ ಸಂಸ್ಥೆ ಬಸ್ನಿಲ್ದಾಣದಲ್ಲಿ ತುಮಕೂರು ಕಡೆಗೆ ತೆರಳುವ ವಿದ್ಯಾರ್ಥಿಗಳ ಅನುಕೂಲಕ್ಕೆ ಮೂರು ಬಸ್ ಸಂಚಾರ ಉದ್ಘಾಟಿಸಿ ಮಾತನಾಡಿ, ಶಕ್ತಿ ಯೋಜನೆಯು ದಿನದಿಂದ ದಿನಕ್ಕೆ ಜನತೆಗೆ ಹತ್ತಿರವಾಗುತ್ತಿದ್ದು ಈಗಾಗಲೆ ಒಂದು ಕೋಟಿಗೂ ಹೆಚ್ಚು ಮಹಿಳೆಯರು ಪ್ರಯಾಣ ಮಾಡಿದ್ದಾರೆ, ಮಹಿಳಾ ಸ್ವಾವಲಂಬನೆ ನಿಟ್ಟಿನಲ್ಲಿ ಯೋಜನೆ ಉಪಕಾರಿಯಾಗಿದ್ದು, ಅಗತ್ಯತೆಗೆ ಅನುಗುಣವಾಗಿ ಸರ್ಕಾರವೂ ಪೂರಕ ಕ್ರಮ ಕೈಗೊಳ್ಳುತ್ತಿದೆ, ಈ ಮಧ್ಯೆ ಸಹಜವಾಗಿ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿರುವುದ ಮನಗಂಡು ಸಾರಿಗೆ ಸಚಿವರೊಂದಿಗೆ ಚರ್ಚಿಸಿ ಐದು ಬಸ್, ಎಂಟು ಸಿಬ್ಬಂದಿಯನ್ನು ಹೆಚ್ಚುವರಿ ನೇಮಕ ಮಾಡಿಸಿದ್ದು ಇದರಡಿಯಲ್ಲು ಅತ್ಯಂತ ದಟ್ಟಣೆ ಇರುವ ತುಮಕೂರು ಮಾರ್ಗಕ್ಕೆ ಮೂರು ಬಸ್ಸು ಶಾಶ್ವತವಾಗಿ ಹಾಕಲಾಗಿದೆ, ವಿದ್ಯಾರ್ಥಿಗಳ ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸಲು ಯತ್ನಿಸಲಾಗುತ್ತಿದೆ ಎಂದರು.
ಶಾಸಕರ ಬಳಿ ಸಮಸ್ಯೆ ತೋಡಿಕೊಂಡ ವಿದ್ಯಾರ್ಥಿಗಳು, ಬೆಳಗ್ಗೆ ಬಸ್ಸುಗಳು ಇರುವುದಿಲ್ಲ, ಅಧಿಕಾರಿಗಳು 10, 15 ನಿಮಿಷಕ್ಕೊಮ್ಮೆ ಬಸ್ಸು ಎನ್ನುತ್ತಾರೆ, ಆದರೆ ಇಲ್ಲಿ ಬಸ್ಸುಗಳೆ ಇರುವುದಿಲ್ಲ, ತುಮಕೂರಿನಿಂದ ಬರುವಾಗ ಮೈಸೂರು ಕಡೆ ಹೋಗುವ ಬಸ್ಸುಗಳ ಸಿಬ್ಬಂದಿ ಕುಣಿಗಲ್ ಗೆ ಹತ್ತಿಸುವುದೆ ಇಲ್ಲ, ನಮ್ಮನ್ನು ದ್ವಿತೀಯ ದರ್ಜೆ ನಾಗರಿಕನ್ನಾಗಿ ನೋಡುತ್ತಾರೆ, ಬಸ್ ಪಾಸ್ ದುಡ್ಡು ಕಟ್ಟಿದ್ದರೂ ನಮಗೇಕೆ ತೊಂದರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು, ಸ್ಥಳಕ್ಕಾಗಮಿಸಿದ ವಿದ್ಯಾರ್ಥಿನಿಯರು ಉದ್ಘಾಟನೆಗೆ ಮಾತ್ರ ಬಸ್ಸುಗಳ ಸಂಚಾರ ಸೀಮಿತವಾಗದೆ ದಿನಾಲೂ ಬಸ್ಸುಗಳ ಸಂಚಾರ ನಿರ್ವಹಿಸಬೇಕೆಂದು ಮನವಿ ಮಾಡಿ ಶಾಸಕರಿಗೆ ಧನ್ಯವಾದ ಅರ್ಪಿಸಿದರು.
ಘಟಕ ವ್ಯವಸ್ಥಾಪಕ ಮಂಜುನಾಥ, ಏಳುವರೆಯಿಂದ ಎಂಟುವರೆ ವೇಳೆಯಲ್ಲಿ ಹತ್ತು ನಿಮಿಷಕ್ಕೊಂದು ಬಸ್ಸು ಇದೆ, ಉಳಿದಂತೆ 15 ನಿಮಿಷಕ್ಕೊಂದು ಬಸ್ಸು ಇದೆ, ಸಂಚಾರ ದಟ್ಟಣೆ ಮೇರೆಗೆ ಅಗತ್ಯ ಬಸ್ಸುಗಳ ನಿಯೋಜಿಸಲು ಬಸ್ಸು, ಸಿಬ್ಬಂದಿ ಕೊರತೆ ನಡುವೆ ಶಕ್ತಿಮೀರಿ ಶ್ರಮಿಸಲಾಗುತ್ತಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಣ್ಣಗೌಡ, ಮುಖಂಡರಾದ ಮೋಹನ್, ಚಂದು ಇತರರು ಇದ್ದರು.
Comments are closed.