ತುಮಕೂರು: ತಾಜಾ ತರಕಾರಿ ಹಾಗೂ ಸೊಪ್ಪು ದೇಹಕ್ಕೆ ಅತ್ಯಂತ ಪೌಷ್ಟಿಕಾಂಶ ಒದಗಿಸುವ ಪದಾರ್ಥಗಳಾಗಿದ್ದು, ಮಕ್ಕಳು ವಾರದಲ್ಲಿ 2 ರಿಂದ 3 ಬಾರಿ ಸೊಪ್ಪು, ತರಕಾರಿ ಸೇವಿಸುವುದರಿಂದ ರಕ್ತಹೀನತೆ ಉಂಟಾಗುವುದಿಲ್ಲ, ಇದರಿಂದ ಮಕ್ಕಳಲ್ಲಿ ಕಲಿಕಾಸಕ್ತಿ ಹೆಚ್ಚುತ್ತದೆ, ಆದ್ದರಿಂದ ಎಲ್ಲರೂ ಪೌಷ್ಠಿಕಾಂಶವುಳ್ಳ ಆಹಾರ ಸೇವಿಸಬೇಕೆಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಮಕ್ಕಳಲ್ಲಿ ಅರಿವು ಮೂಡಿಸಿದರು.
ನಗರದ ಎಂಪ್ರೆಸ್ ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಶಾಲಾ ಮತ್ತು ಸಾಕ್ಷರತಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ರಕ್ತಹೀನತೆ ಮುಕ್ತ ಪೌಷ್ಟಿಕ ಕರ್ನಾಟಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳು ಸರಿಯಾಗಿ ಊಟ ಸೇವಿಸದೆ ಇರುವ ಕಾರಣ ರಕ್ತಹೀನತೆ ಉಂಟಾಗುತ್ತದೆ, ಸರಿಯಾದ ಸಮಯಕ್ಕೆ ಉಪಹಾರ ಸೇವಿಸದ ಮಕ್ಕಳಲ್ಲಿ ಅದರಲ್ಲೂ ಹೆಣ್ಣು ಮಕ್ಕಳಲ್ಲಿ ಅಸಿಡಿಟಿ ಉಂಟಾಗಿ ಆರೋಗ್ಯ ಹದಗೆಡುತ್ತದೆ, ಕಲಿಕೆಯಲ್ಲಿ ನಿರಾಸಕ್ತರಾಗುತ್ತಾರೆ, ಅದರಲ್ಲೂ ಹೆಣ್ಣು ಮಕ್ಕಳು ಹೆಚ್ಚು ರಕ್ತಹೀನತೆಗೆ ಒಳಪಡುತ್ತಾರೆ, ಹಾಗಾಗಿ ಮಕ್ಕಳು ಸೇರಿದಂತೆ ಎಲ್ಲರೂ ಪೌಷ್ಠಿಕವಾದ ಆಹಾರ ಸೇವಿಸಬೇಕೆಂದು ಹೇಳಿದರು.
ಕಾರ್ಯಕ್ರಮದ ಅಂಗವಾಗಿ ಜಿಲ್ಲೆಯಾದ್ಯಂತ ಪಿಯು ಹಾಗೂ ಪದವಿ ಕಾಲೇಜಿನ ಸುಮಾರು 57 ಸಾವಿರ ಮಕ್ಕಳಿಗೆ ರಕ್ತ ಪರೀಕ್ಷೆ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ 10ನೇ ತರಗತಿಯೊಳಗಿನ ಮಕ್ಕಳಿಗೆ ರಕ್ತ ಪರೀಕ್ಷೆ ಮಾಡಲಾಗುವುದು, ಇದರಿಂದ ಅನಿಮಿಯ ಇರುವ ಮಕ್ಕಳನ್ನು ಗುರುತಿಸಿ ಅವರಿಗೆ ಕಬ್ಬಿಣಾಂಶದ ಮಾತ್ರೆ, ಸಿರಫ್, ಫಾಲಿಕ್ ಆಸಿಡ್ ಮಾತ್ರೆಗಳನ್ನು ವಿತರಿಸಲಾಗುವುದು ಎಂದು ತಿಳಿಸಿದರು.
ಬೇಯಿಸಿದ ತರಕಾರಿ, ಹಸಿ ತರಕಾರಿ, ಸೊಪ್ಪು, ಹಣ್ಣು ಸೇವಿಸುವುದರಿಂದ ಕೆಂಪು ರಕ್ತ ಕಣಗಳು ಹೆಚ್ಚುತ್ತವೆ, ಹೆಣ್ಣು ಮಕ್ಕಳು ಮಾಸಿಕ ಋತು ಸ್ರಾವದಿಂದ ರಕ್ತ ಹೀನತೆಯಿಂದ ಬಳಲುತ್ತಾರೆ, ಕೆಂಪು ರಕ್ತ ಕಣಗಳು ಹೆಚ್ಚಿದ್ದಷ್ಟು ದೇಹ ಲವಲವಿಕೆಯಿಂದ ಇರುತ್ತದೆ, ಆದುದರಿಂದ ಮಕ್ಕಳು ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಸರಿಯಾದ ಸಮಯಕ್ಕೆ ಊಟ, ತಿಂಡಿ ಸೇವಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಜುನಾಥ್ ಇಂದಿನ ದಿನಗಳಲ್ಲಿ ಮಕ್ಕಳಲ್ಲಿ ತುಂಬಾ ರಕ್ತಹೀನತೆ ಕಂಡು ಬರುತ್ತಿದೆ, ಎಲ್ಲರಲ್ಲೂ ಹಿಮೋಗ್ಲೋಬಿನ್ ಎಷ್ಟಿದೆ ಎಂಬುದನ್ನು ಕಂಡು ಹಿಡಿದು ಅದಕ್ಕೆ ಚಿಕಿತ್ಸೆ ನೀಡಲು ಒಂದೇ ಬಾರಿಗೆ ಇಡೀ ದೇಶದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಆರ್ಸಿಹೆಚ್ ಅಧಿಕಾರಿ ಡಾ.ಮೋಹನ್ ಮಾತನಾಡಿ, ಅನಿಮಿಯ ಪೌಷ್ಟಿಕ ಕರ್ನಾಟಕ ಕಾರ್ಯಕ್ರಮವನ್ನು ಈಗಾಗಲೇ ನವೆಂಬರ್ 22 ರಂದು ರಾಜ್ಯ ಮಟ್ಟದಲ್ಲಿ ಮುಖ್ಯಮಂತ್ರಿಗಳು ಚಾಲನೆ ನೀಡಿದ್ದಾರೆ, ಈ ದಿನ ತುಮಕೂರಿನಲ್ಲಿ ವಿದ್ಯುಕ್ತವಾಗಿ ಚಾಲನೆ ನೀಡಲಾಗಿದೆ, ಇದೇ ರೀತಿ ಪ್ರತಿ ತಾಲ್ಲೂಕಿನಲ್ಲಿಯೂ ರಕ್ತ ಪರೀಕ್ಷೆ ಕಾರ್ಯಕ್ರಮ ಆಯೋಜಿಸಲಾಗುವುದು, ಈ ಕಾರ್ಯಕ್ರಮದ ಅಂಗವಾಗಿ ಎಲ್ಲಾ ಮಕ್ಕಳಿಗೂ ಹಿಮೋಗ್ಲೋಬಿನ್ ಪ್ರಮಾಣ ಎಷ್ಟಿದೆ ಎಂಬುದನ್ನು ಪರೀಕ್ಷಿಸಿ ಇದಕ್ಕೆ ಸಂಬಂಧಿಸಿದ ಚಿಕಿತ್ಸೆ ನೀಡಲಾಗುವುದು, ಮೊದಲ ಹಂತದಲ್ಲಿ 50ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಹಿಮೋಗ್ಲೋಬಿನ್ ಪರೀಕ್ಷೆ ಮಾಡಲಾಗುತ್ತಿದ್ದು, ನಂತರದಲ್ಲಿ ಎಲ್ಲಾ ಶಾಲೆಗಳಲ್ಲಿಯೂ ಈ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಜಿ.ಪ್ರಭು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಶ್ರೀಧರ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಗಂಗಾಧರ್ ಸೇರಿದಂತೆ ಶಾಲಾ- ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.
Comments are closed.