ಹುಳಿಯಾರು: ಚುನಾವಣೆ ಮಾಡದೆ ತನ್ನ ಆಡಳಿತ ಮಂಡಳಿ ರಚನೆ ಮಾಡಿಕೊಳ್ಳುವ ವಿಎಸ್ಎಸ್ಎನ್ ಗಳಿಗೆ ಡಿಸಿಸಿ ಬ್ಯಾಂಕ್ ನಿಂದ 5 ಲಕ್ಷ ರೂ. ಪ್ರೋತ್ಸಾಹ ಧನ ನೀಡಲಾಗುವುದು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಘೋಷಿಸಿದರು.
ಹುಳಿಯಾರು ಸಮೀಪದ ಹಂದನಕೆರೆ ಹೋಬಳಿಯ ದೊಡ್ಡಎಣ್ಣೇಗೆರೆಯ ಕೃಷಿ ಪತ್ತಿನ ಸಹಕಾರ ಸಂಘ ನೂತನವಾಗಿ ನಿರ್ಮಿಸಿರುವ ಗೋದಾಮು ಕಟ್ಟಡ ಉದ್ಘಾಟಿಸಿ ಮಾತನಾಡಿ, ಚುನಾವಣೆ ನೆಪದಲ್ಲಿ 5 ವರ್ಷ ಉಳಿಸಿ ಕೂಡಿಟ್ಟಿದ್ದ ಹಣವನ್ನು ಪ್ರಿಟಿಂಗ್, ಪೊಲೀಸ್, ಊಟ, ಆಫಿಸರ್ ಹೀಗೆ ಏನೇನೋ ಲೆಕ್ಕ ಕೊಟ್ಟು ಖಾಲಿ ಮಾಡುವುದೂ ಅಲ್ಲದೆ ಮತ್ತೆ ಸಾಲ ತೋರಿಸುತ್ತಿದ್ದಾರೆ, ಹೀಗೆ ಅನಗತ್ಯವಾಗಿ ಚುನಾವಣೆ ನಡೆದು ಸಂಸ್ಥೆಗೆ ಹೆಚ್ಚು ಆರ್ಥಿಕ ನಷ್ಟ ಆಗುವುದನ್ನು ತಪ್ಪಿಸಲು ಈ ಉಡುಗೊರೆ ಕೊಡುತ್ತಿರುವುದಾಗಿ ತಿಳಿಸಿದರು.
ಒಂದು ಗ್ರಾಮಕ್ಕೆ ಆಸ್ಪತ್ರೆ, ಶಾಲೆ, ಸಹಕಾರ ಸಂಘ ಇರಬೇಕು ಎನ್ನುವ ಮಹಾತ್ಮ ಗಾಂಧೀಜಿಯವರ ಆಶಯದಂತೆ ಗ್ರಾಮ ಪಂಚಾಯ್ತಿಗೊಂದು ಸೊಸೈಟಿ ಮಾಡಬೇಕೆಂದು ಈಗಾಗಲೇ ತೀರ್ಮಾನ ಮಾಡಲಾಗಿದ್ದು ಡಿಸೆಂಬರ್ ಒಳಗಾಗಿ ಮಾಡುವಂತೆ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ಸಹ ನೀಡಲಾಗಿದೆ, ಆದಷ್ಟು ಒಳ್ಳೆಯವರನ್ನೇ ಪ್ರೊಮೊಟರ್ಸ್ಗಳನ್ನು ಮಾಡಲು ತಿಳಿಸಲಾಗಿದೆ ಎಂದರು.
ತಾಲೂಕು ಬರಪೀಡಿತ ಪ್ರದೇಶವೆಂದು ಘೋಷಣೆಯಾಗಿದ್ದು ದನ ಕರುಗಳಿಗೆ ಮೇವಿನ ಕೊರತೆಯಾಗಬಾರದೆಂದು ಕೊಳವೆ ಬಾವಿ ಉಳ್ಳವರಿಗೆ ಮೇವಿನ ಬೀಜದ ಕಿಟ್ಗಳನ್ನು ವಿತರಿಸಲಾಗುತ್ತಿದೆ, ಇನ್ನೂ ಹೆಚ್ಚು ಬೇಡಿಕೆ ಬಂದರೆ ಎಷ್ಟಾದರೂ ಸರಿ ಸರ್ಕಾರ ಕೊಡಲು ಸಿದ್ಧ, ಅಲ್ಲದೆ ರೈತರು ಹೆಚ್ಚು ಮೇವು ಬೆಳೆದರೆ ಸರ್ಕಾರವೇ ಉತ್ತಮ ಬೆಲೆ ಕೊಟ್ಟು ಖರೀದಿಸಿ ಅಗತ್ಯವುಳ್ಳ ರೈತರಿಗೆ ಪುಕ್ಕಟ್ಟೆ ಕೊಡಲಾಗುವುದು ಎಂದು ತಿಳಿಸಿದರು.
ಸಿದ್ಧರಾಮಯ್ಯ ಅವರ ಅನ್ನಭಾಗ್ಯ ಯೋಜನೆ ಜಾರಿಯಲ್ಲಿರುವುದರಿಂದ ಬರ ಬಂದಿದ್ದರೂ ಜನರಿಗೆ ಅನ್ನದ ಕೊರತೆ ಇಲ್ಲ, ಅನ್ನಭಾಗ್ಯ ಯೋಜನೆ ಪುಣ್ಯದ ಕಾರ್ಯ, ಸಿದ್ಧರಾಮಯ್ಯ ಅವರು ಈ ಯೋಜನೆಯನ್ನು ಕಾಂಗ್ರೆಸ್ ನವರಿಗೆ ಮಾತ್ರ ಕೊಡಲಿಲ್ಲ, ಕುರುಬರಿಗೆ ಮಾತ್ರ ಕೊಡಲಿಲ್ಲ, ರಾಜ್ಯದ ಬಡವರು ಹಸಿವಿನಿಂದ ಇರಬಾರದು ಎಂದು ಕೊಟ್ಟಿದ್ದಾರೆ, ಇದನ್ನೂ ಸಹ ಅನೇಕರು ಸಿದ್ಧರಾಮಯ್ಯ ಮನೆಯಿಂದ ಕೊಟ್ಟಿದ್ದಾರಾ, ಸರ್ಕಾರದಲ್ಲವೇ ಎಂದು ಟೀಕಿಸುತ್ತಿದ್ದಾರೆ, ಅಂತಹವರಿಗೆ ಕೇಳುವುದೇನೆಂದರೆ ಹಿಂದೆಯೂ ಮುಖ್ಯಮಂತ್ರಿಗಳಿದ್ದರಲ್ಲ ಅವರೇನು ಮನೆಯಿಂದ ತಂದು ಕೊಡುತ್ತಿದ್ದರ, ಅವರೇ ಅನ್ನಭಾಗ್ಯ ಯೋಜನೆ ಮಾಡಬಹುದಿತ್ತಲ್ಲ, ಯಾಕೆ ಮಾಡಲಿಲ್ಲ ಎಂದರು.
ಸಂಘದ ಅಧ್ಯಕ್ಷ ಬಿ.ಪಿ.ಚೇತನ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು, ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿ ರಾಜ್ ಕುಮಾರ್, ಗ್ರಾಪಂ ಅಧ್ಯಕ್ಷೆ ತಾಯಮ್ಮ ನರಸಿಂಹಯ್ಯ, ಸಹಕಾರ ಸಂಘಗಳ ಉಪ ನಿಬಂಧಕ ಎಚ್.ಮೂರ್ತಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀಧರ್, ಸಹಾಯಕ ಉಪ ನಿಬಂಧಕ ದಿಲೀಪ್ ಕುಮಾರ್, ಸಹಕಾರ ಅಭಿವೃದ್ಧಿ ಅಧಿಕಾರಿ ಟಿ.ಶ್ರೀನಿವಾಸ್, ಮೇಲ್ವಿಚಾರಕ ಎಸ್.ಆರ್.ರಂಗಸ್ವಾಮಿ, ವ್ಯವಸ್ಥಾಪಕ ಸಿ.ಕೆ.ಸುಧಾಕರ್ ಸೇರಿದಂತೆ ಅನೇಕರು ಹಾಜರಿದ್ದರು.
ಶಿವಕುಮಾರ್ ಮಾಧುಸ್ವಾಮಿ ಕಡೆ ಇದ್ದಿಯೋ?
ಹತ್ತನ್ನೆರಡು ವರ್ಷಗಳ ಹಿಂದೆ ದೊಡ್ಡಎಣ್ಣೇಗೆರೆಯ ಸಹಕಾರ ಸಂಘದ ಕಾರ್ಯಕ್ರಮಕ್ಕೆ ಬಂದಿದ್ದ ಸಂದರ್ಭವನ್ನು ಸಚಿವ ಕೆ.ಎನ್.ರಾಜಣ್ಣ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸುತ್ತಾ ಆಗ ಶಿವಕುಮಾರ್ ನೀನೆ ಅಧ್ಯಕ್ಷನಾಗಿದ್ದೆ ಅಲ್ವೆ ಎಂದು ಪ್ರಶ್ನಿಸಿದರಲ್ಲದೆ ಈಗ ಯಾರ ಕಡೆ ಇದ್ದಿಯಾ? ಮಾಧುಸ್ವಾಮಿ ಕಡೆಯೋ ಎಂದು ಕೇಳಿದರು, ಅದಕ್ಕೆ ಶಿವಕುಮಾರ್ ಅವರು ಕಿರಣ್ಕುಮಾರ್ ಕಡೆ ಇದ್ದೀನಿ ಸಾರ್ ಎಂದರು, ಓ ಆಗ ಮಾಧುಸ್ವಾಮಿ ಕಡೆ ಇದ್ದೆ, ಈಗ ಕಿರಣ್ ಕುಮಾರ್ ಕಡೆ ಇದ್ದಿಯಾ ಅಂದ್ರೆ ನಮ್ಮ ಕಡೆ ಇದ್ದಿಯಾ ಅಂತಾಯ್ತು ಎಂದರಲ್ಲದೆ ಸುಮ್ನೆ ಕೇಳ್ದೆ ನಾವು ಸಹಕಾರಿಗಳು ನಮಗೆ ಪಕ್ಷ ಜಾತಿ ಇಲ್ಲ, ರೈತರ ಕಷ್ಟಕ್ಕೆ ಸ್ಪಂದಿವುದಷ್ಟೆ ನಮ್ಮ ಆದ್ಯ ಕರ್ತವ್ಯ ಎಂದರು.
Comments are closed.