ಕನ್ನಡ ರಥ ಮೆರವಣಿಗೆಗೆ ಹಿರೇಮಠಶ್ರೀ ಚಾಲನೆ

151

Get real time updates directly on you device, subscribe now.


ತುಮಕೂರು: ನಾಡು, ನುಡಿ ಉತ್ಸವಗಳಲ್ಲಿ ಹೊಸ ಮುಖಗಳ ಸೇರ್ಪಡೆಯಾಗಬೇಕು, ಕನ್ನಡ ನೆಲ, ಜಲ, ಭಾಷೆಯ ಹೋರಾಟ ಕೆಲವರಿಗೆ ಸಿಮೀತ ಎನ್ನುವಂತಾಗಬಾರದು, ನಾಡು, ನುಡಿಯ ವಿಚಾರದಲ್ಲಿ ಅಭಿಮಾನ ಎಲ್ಲರಲ್ಲಿಯೂ ಮೂಡಬೇಕು ಎಂದು ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.
ನಗರದ ಟೌನ್ ಹಾಲ್ ಮುಂಭಾಗದಲ್ಲಿ ಕನ್ನಡ ಸಾಂಸ್ಕೃತಿಕ ವೇದಿಕೆಯಿಂದ ಆಯೋಜಿಸಿರುವ ಕನ್ನಡ ರಾಜೋತ್ಸವ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಕನ್ನಡ ರಥ ಮೆರವಣಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರತಿ ರಾಜೋತ್ಸವ ಹಾಗೂ ಕನ್ನಡಪರ ಹೋರಾಟದ ಸಂದರ್ಭದಲ್ಲಿಯೂ ಕೆಲವರು ಮಾತ್ರವೇ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ, ಆದರೆ ಲಾಭವನ್ನು ಎಲ್ಲರೂ ಪಡೆಯುತ್ತಾರೆ, ಹಾಗಾಗಿ ಹೊಸಬರು ಈ ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದರು.

ಕನ್ನಡ ನಮ್ಮ ಅಸ್ಮಿತೆ.ಪ್ರತಿರಾಜ್ಯದ ಜನರಿಗೆ ಅವರ ಭಾಷೆಯ ಬಗ್ಗೆ ಇರುವ ಅಭಿಮಾನದಂತೆ ಕನ್ನಡಿಗರು ತಮ್ಮ ಭಾಷೆಯ ಬಗ್ಗೆ ಗೌರವ ಬೆಳೆಸಿಕೊಳ್ಳಬೇಕು, ಕನ್ನಡ ಎಂದರೆ ಹಿಂಜರಿಕೆ ಬಿಟ್ಟು ಕನ್ನಡವನ್ನು ಆಡಳಿತ ಭಾಷೆಯ ಜೊತೆಗೆ, ವ್ಯವಹಾರಿಕ ಭಾಷೆಯಾಗಿಯೂ ಬೆಳೆಸಲು ನಾವೆಲ್ಲರೂ ಪಣ ತೊಡಬೇಕಾಗಿದೆ, ಗುಜರಾತ್ ಇನ್ನಿತರ ಕಡೆಗಳಿಗೆ ಹೋದರೆ ಅಲ್ಲಿ ಹಿಂದಿಗಿಂತ, ಗುಜರಾತಿ ಭಾಷೆಯೇ ಹೆಚ್ಚು ಪ್ರಾಮುಖ್ಯತೆ ಪಡೆದಿದೆ, ಅದೇ ರೀತಿ ಕನ್ನಡ ನಾಡಿನಲ್ಲಿ ಕನ್ನಡ ಭಾಷೆಗೆ ಹೆಚ್ಚಿನ ಪ್ರಾಶಸ್ತ್ಯ ದೊರೆಯುವಂತೆ ನಾವೆಲ್ಲರೂ ನಮ್ಮ ನಡೆ, ನುಡಿಗಳಲ್ಲಿ ಕನ್ನಡವನ್ನು ಅಳವಡಿಸಿಕೊಳ್ಳೋಣ ಎಂದರು.

ಬೆಳ್ಳಾವಿಯ ಶ್ರೀಕಾರದೇಶ್ವರ ಮಠದ ಕಾರದ ವೀರಬಸವ ಸ್ವಾಮೀಜಿ ಮಾತನಾಡಿ, ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವ ಭೌಮ, ಕನ್ನಡಿಗರು ಪ್ರತಿಯೊಂದಕ್ಕೂ ಇನ್ನೊಬ್ಬರನ್ನು ಬೇಡುವಂತಹ ಸ್ಥಿತಿ ನಿರ್ಮಾಣವಾಗಬಾರದು, ಇಂದು ಕನ್ನಡ ಸಾಂಸ್ಕೃತಿಕ ವೇದಿಕೆಯವರು ಇಲ್ಲೊಂದು ದೇವಲೋಕ ಸೃಷ್ಟಿಸಿದ್ದಾರೆ, ಶಿವಪಾರ್ವತಿ ಸೇರಿದಂತೆ ಎಲ್ಲಾ ದೇವಾನು ದೇವತೆಗಳ ಚಿತ್ರಗಳನ್ನು ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳ ಮೂಲಕ ನಗರದ ಬೀದಿಗಳಲ್ಲಿ ಉತ್ಸವ ನಡೆಸಿ, ಹೊಸ ಚೈತನ್ಯ ತಂದಿದ್ದಾರೆ, ಇವರ ಎಲ್ಲಾ ಕಾರ್ಯಕ್ರಮ ಯಶಸ್ವಿಯಾಗಲೆಂದರು.
ಕನ್ನಡಸೇನೆಯ ಜಿಲ್ಲಾಧ್ಯಕ್ಷ ಧನಿಯಕುಮಾರ್ ಮಾತನಾಡಿ, ಕನ್ನಡ ನಾಡು, ನುಡಿಯ ವಿಚಾರದಲ್ಲಿ ಜಿಲ್ಲಾಡಳಿತ ಮತ್ತು ಅಧಿಕಾರಿಗಳು ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ, ರಾಜಕೀಯ ಸಮಾರಂಭಗಳ ರೀತಿ ಕನ್ನಡ ರಾಜೋತ್ಸವ ಸಮಾರಂಭಕ್ಕೆ ಹಾಕುವ ಫ್ಲೆಕ್ಸ್ ಮತ್ತು ಬ್ಯಾನರ್ ಗಳಿಗೂ ಅನುಮತಿ ಪಡೆಯಲು ಹಣ ನೀಡಬೇಕಾಗಿದೆ, ಇದು ನಿಜಕ್ಕೂ ಖಂಡನೀಯ, ಪಾಲಿಕೆಯೇ ತಮ್ಮ ವ್ಯಾಪ್ತಿಯಲ್ಲಿ ಹಾಕುವ ಪ್ಲಕ್ಸ್ ಮತ್ತು ಬ್ಯಾನರ್ ಗಳಿಗೆ ಹಣ ಪಾವತಿಸಿ, ಕಾರ್ಯಕ್ರಮಗಳ ಯಶಸ್ವಿಗೆ ಸಹಕರಿಸಬೇಕೆಂದು ಒತ್ತಾಯಿಸಿದರು.

ಮುಖಂಡ ಧನಿಯಕುಮಾರ್ ಮಾತನಾಡಿ, ಕನ್ನಡ ಶಾಲೆಗಳು ಇಂದು ಮುಚ್ಚುತ್ತಿವೆ, ಇದಕ್ಕೆ ಪ್ರಮುಖ ಕಾರಣ, ಆಡಳಿತ ಭಾಷೆಯಾಗಿರುವ ಕನ್ನಡ ಅನ್ನದ ಭಾಷೆಯೂ ಆಗಬೇಕು, ಇದು ಅಕ್ಷರಶಃ ಜಾರಿಗೆ ಬರಬೇಕೆಂದರೆ ಮೊದಲು ಸರಕಾರಿ ಕೆಲಸಗಳಿಗೆ ಅರ್ಜಿ ಸಲ್ಲಿಸುವವರು ಕಡ್ಡಾಯವಾಗಿ ಕನ್ನಡ ಶಾಲೆಯಲ್ಲಿಯೇ ಕಲಿತಿರಬೇಕೆಂಬ ನಿಯಮ ಅಳವಡಿಸಿದರೆ ಕನ್ನಡ ಶಾಲೆಗಳು ತಾವಾಗಿಯೇ ಉನ್ನತ್ತಿಗೆ ಬರಲಿವೆ, ಅಲ್ಲದೆ ತ್ರಿಭಾಷಾ ಸೂತ್ರದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ಸಿಗಬೇಕೆಂಬುದು ನಮ್ಮ ಆಗ್ರಹವಾಗಿದೆ, ಕನ್ನಡ ಬಾವುಟ ಕಟ್ಟಿದರೆ ದಂಡ ಹಾಕುವ ಬದಲು, ಅಂಗಡಿ ಮುಂಗಟ್ಟುಗಳಲ್ಲಿ ಕನ್ನಡ ನಾಮಫಲಕ ಪ್ರಕಟಿಸದವರಿಗೆ ಮೊದಲು ದಂಡ ವಿಧಿಸಲಿ ಎಂದರು.
ಕನ್ನಡ ಸಾಂಸ್ಕೃತಿಕ ವೇದಿಕೆಯ ಕನ್ನಡ ಪ್ರಕಾಶ್, ಜಿಲ್ಲಾಧ್ಯಕ್ಷ ರಾಮಣ್ಣ, ಬಾಬಣ್ಣ, ಸತ್ಯಮಂಗಲ ಜಗದೀಶ್, ರಾಕೇಶ್, ಪ್ರದೀಪ್ ಇನ್ನಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!