ಕನ್ನಡ ಬಾವುಟಕ್ಕೆ ಅಪಮಾನ- ಕ್ರಮಕ್ಕೆ ಆಗ್ರಹ

90

Get real time updates directly on you device, subscribe now.


ತುಮಕೂರು: ನಗರದ ವಿವಿಧೆಡೆ ಕನ್ನಡ ಪರ ಸಂಘಟನೆಗಳು ಹಾಗೂ ಆಟೋ ಚಾಲಕರ ಸಂಘಗಳು ಹಾರಿಸಿದ್ದ ಕನ್ನಡ ಭಾವುಟಗಳನ್ನು ಕಿತ್ತು ಚರಡಿಗೆ ಎಸೆದಿರುವ ನಗರ ಪಾಲಿಕೆಯ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಹಾಗೂ ಕನ್ನಡಪರ ಸಂಘಟನೆಗಳು ಮತ್ತು ಕ್ರೀಡಾ ಚಟುವಟಿಕೆಗಾಗಿ ಪ್ರದರ್ಶಿಸುವ ಫ್ಲೆಕ್ಸ್ ಮತ್ತು ಬ್ಯಾನರ್ ಗಳನ್ನು ವಿಧಿಸುವ ಶುಲ್ಕ ವಿನಾಯಿತಿ ನೀಡಬೇಕೆಂದು ಆಗ್ರಹಿಸಿ ಧನಿಯಕುಮಾರ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳ ಒಕ್ಕೂಟದ ಮುಖಂಡರು, ಆಟೋ ಚಾಲಕರು ನಗರ ಪಾಲಿಕೆ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಈ ವೇಳೆ ಮಾತನಾಡಿದ ಧನಿಯಕುಮಾರ್, ನಗರದ ಭದ್ರಮ್ಮ ವೃತ್ತ ಹಾಗೂ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಆವರಣದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಕನ್ನಡಪರ ಸಂಘಟನೆಗಳು ಮತ್ತು ಆಟೋ ಚಾಲಕರು ಕನ್ನಡ ಭಾವುಟ ಹಾರಿಸಿ, ಕನ್ನಡ ರಾಜೋತ್ಸವ ಕಾರ್ಯಕ್ರಮ ಮಾಡಿದ್ದಾರೆ, ಇದು ನಮ್ಮ ಜೇಬಿನಿಂದ ದುಡ್ಡು ಖುರ್ಚು ಮಾಡಿ ಮಾಡಿರುವ ಕಾರ್ಯಕ್ರಮ, ಚಂದಾ ಎತ್ತಿಲ್ಲ, ಹೀಗಿದ್ದರೂ ಹಾಕಿರುವ ಫ್ಲೆಕ್ಸ್ಗಳಿಗೆ ದಂಡ ವಿಧಿಸಲಾಗಿದೆ, ಅಲ್ಲದೆ ಎರಡು ಕಡೆ ಹಾರಿಸಿರುವ ಕನ್ನಡ ಭಾವುಟವನ್ನು ನಗರಪಾಲಿಕೆ ಸಿಬ್ಬಂದಿ ಕಿತ್ತು ಚರಂಡಿಗೆ ಎಸೆದಿದ್ದಾರೆ, ಇದು ಖಂಡನೀಯ ಎಂದರು.

ಮೈಸೂರು ರಾಜ್ಯವನ್ನು ಕರ್ನಾಟಕವೆಂದು ನಾಮಕರಣ ಮಾಡಿದ ಐವತ್ತನೇ ವರ್ಷದ ನೆನಪಿಗಾಗಿ ಸರಕಾರವೇ ಇಡೀ ವರ್ಷ ಕನ್ನಡ ಸಂಭ್ರಮದ ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸುವಂತೆ ಕರೆ ನೀಡಿದೆ, ಆದರೆ ತುಮಕೂರು ಮಹಾ ನಗರ ಪಾಲಿಕೆಯ ಅಧಿಕಾರಿಗಳು ಕನ್ನಡಪರ ಸಂಘಟನೆಗಳ ಜನರನ್ನು ಮಲಮಕ್ಕಳಂತೆ ಕಾಣುತ್ತಿದ್ದಾರೆ, ಆಯುಕ್ತರು ಕನ್ನಡ ಬಾವುಟ ಕಿತ್ತು ಚರಂಡಿಗೆ ಎಸೆದಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು, ಹಾಗೆಯೇ ಕನ್ನಡ ರಾಜ್ಯೋತ್ಸವ ಫ್ಲೆಕ್ಸ್ ಮತ್ತು ಬ್ಯಾನರ್ ಪ್ರದರ್ಶನಕ್ಕೆ ವಿನಾಯಿತಿ ನೀಡಬೇಕು, ಇಲ್ಲದಿದ್ದರೆ ತುಮಕೂರು ಬಂದ್ ಗೆ ಕರೆ ನೀಡುವುದಾಗಿ ತಿಳಿಸಿದರು.

ನಗರದಲ್ಲಿ ಆಂಗ್ಲ ಭಾಷಾ ನಾಮಫಲಕಗಳು ರಾರಾಜಿಸುತ್ತಿದ್ದೆವೆ, ನಿಯಮದ ಪ್ರಕಾರ ಅವರಿಗೆ ದಂಡ ವಿಧಿಸಲು ಅವಕಾಶ ವಿದೆ, ಆದರೆ ಇದುವರೆಗೂ ದಂಡ ವಿಧಿಸಿಲ್ಲ, ಆದರೆ ಕನ್ನಡಪರ ಸಂಘಟನೆಗಳು ಹಾಕಿರುವ ಬ್ಯಾನರ್, ಫ್ಲೆಕ್ಸ್ ಕಿತ್ತು ಹಾಕಿ ಬ್ರಿಟಿಷ್ ಅಧಿಕಾರಿಗಳಂತೆ ವರ್ತಿಸುತ್ತಿದ್ದಾರೆ, ಫ್ಲೆಕ್ಸ್ ಹಾಕಲು ಅನುಮತಿ ಪಡೆದಿದ್ದರೂ ಪ್ರತ್ಯೇಕವಾಗಿ ಬಾವುಟ ಹಾರಿಸಲು ಅನುಮತಿ ಅಗತ್ಯ ಎಂದು ದಂಡ ವಿಧಿಸುತ್ತಿದ್ದಾರೆ ಎಂದು ಕನ್ನಡಪರ ಸಂಘಟನೆಗಳ ಮುಖಂಡರು ಆಯುಕ್ತರ ಮುಂದೆ ತಮ್ಮ ಅಳಲು ತೋಡಿಕೊಂಡರು.

ವಿಷಯ ತಿಳಿದು ಆಯುಕ್ತರ ಕಚೇರಿಗೆ ಬಂದ ಮೇಯರ್ ಪ್ರಭಾವತಿ ಸುಧೀಶ್ವರ್, ಪಾಲಿಕೆಯ ಅಧಿಕಾರಿಗಳ ನಡೆ ಖಂಡನೀಯ, ಕನ್ನಡಪರ ಸಂಘಟನೆಗಳಿಗೆ ಯಾವುದೇ ಆದಾಯವಿಲ್ಲ, ಆಟೋ ಚಾಲಕರು ತಮ್ಮ ಸ್ವಂತ ದುಡಿಮೆಯಲ್ಲಿ ಒಂದಷ್ಟು ಹಣ ಕೂಡಿಟ್ಟು ಕನ್ನಡ ರಾಜ್ಯೋತ್ಸವ ಆಚರಿಸುತ್ತಾರೆ, ಹಾಗಾಗಿ ಕನ್ನಡಪರ ಸಂಘಟನೆಗಳು ಹಾಕುವ ಫ್ಲೆಕ್ಸ್ಗಳನ್ನು ಕಮರ್ಷಿಯಲ್ ಎಂದು ಪರಿಗಣಿಸದೆ ವಿನಾಯಿತಿ ನೀಡಿದರೆ ನಾಡು ನುಡಿಗೆ ನಾವು ಒಂದು ರೀತಿ ಸಹಕಾರ ನೀಡಿದಂತಾ ಗುತ್ತದೆ ಎಂದರು.
ಈ ವೇಳೆ ಕನ್ನಡಪರ ಸಂಘಟನೆಗಳ ಒಕ್ಕೂಟ ಮುಖಂಡರಾದ ರಂಗಸ್ವಾಮಿ, ಆನಂದ್, ಸೋಮಣ್ಣ, ಶಂಕರ್, ರಕ್ಷಿತ್ ಕರಿಮಣಿ, ಕನ್ನಡ ಪ್ರಕಾಶ್ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!