ಕುಣಿಗಲ್: ಸರ್ಕಾರದ ಗ್ಯಾರಂಟಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪುತ್ತಿಲ್ಲ, ಸಂಬಂಧಪಟ್ಟ ಇಲಾಖಾಧಿಕಾರಿಗಳು ಯೋಜನೆಯಿಂದ ವಂಚಿತವಾಗಿರುವ ಅರ್ಹರನ್ನು ಗುರುತಿಸಿ ಯೋಜನೆ ಸವಲತ್ತು ತಲುಪುವಂತೆ ಮಾಡಬೇಕು ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದರು.
ಸೋಮವಾರ ತಾಲೂಕಿನ ಹುಲಿಯೂರು ದುರ್ಗ ಹೋಬಳಿಯ ಹಳೆಊರು ಗ್ರಾಮದಲ್ಲಿ ಹಳೆಊರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನ ಸಂಪಕರ್ಪ ಸಭೆಯಲ್ಲಿ ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿ ಮಾತನಾಡಿ, ತಾಲೂಕಿನಲ್ಲಿ 58,437 ಅರ್ಹ ಕುಟುಂಬದ ಯಜಮಾನಿ ಯರು ಗೃಹಲಕ್ಷ್ಮೀಯೋಜನೆಗೆ ಅರ್ಹರಿದ್ದು ಸುಮಾರು 50 ಸಾವಿರ ಮಂದಿ ಮಾತ್ರ ಯೋಜನೆಯ ಸವಲತ್ತು ಪಡೆಯುತ್ತಿದ್ದಾರೆ, ಬಾಕಿ ಇರುವ ಅರ್ಹರಿಗೆ ಯೋಜನೆ ತಲುಪಿಸಲು ಇಲಾಖಾಧಿಕಾರಿಗಳು ಕ್ರಮ ವಹಿಸಿ ಡಿಸೆಂಬರ್ 30 ರೊಳಗೆ ಸವಲತ್ತು ಸಿಗುವಂತೆ ಮಾಡಬೇಕು, ಇಲ್ಲವಾದಲ್ಲಿ ಅಧಿಕಾರಿಗಳನ್ನೆ ಹೊಣೆ ಮಾಡಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಹಳೇಊರು ಪಿಡಿಒ ಜನರ ಸಮಸ್ಯೆಗೆ ಸ್ಪಂದಿಸಿ ಕೆಲಸ ಮಾಡಬೇಕು, ಪುನಹ ಜನತೆಯಿಂದ ದೂರು ಬಂದಲ್ಲಿ ಅದರ ಪರಿಣಾಮ ಎದುರಿಸಬೇಕಾಗುತ್ತದೆ, ಅರ್ಹ ನಿವೇಶನ ರಹಿತರಿಗೆ ನಿವೇಶನ ಕೊಡಿಸಲು ತಾಲೂಕಿನಾದ್ಯಂತ ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಭೂಮಿ ಗುರುತಿಸಿ ಕ್ರಮ ವಹಿಸುವಂತೆ ಶಾಸಕರು, ತಹಶೀಲ್ದಾರ್ ಗೆ ಸೂಚಿಸಿದ್ದು, ಅಧಿವೇಶನ ಮುಗಿದ ನಂತರ ಪ್ರತಿ ಗ್ರಾಪಂ ಗೂ 60 ರಿಂದ 70 ಮನೆ ಮಂಜೂರಿಗೆ ಕ್ರಮ ಕೈಗೊಂಡಿದ್ದು ಅರ್ಹರಿಗೆ ಮನೆ ಮಂಜೂರು ಮಾಡಲಾಗುವುದು, ರಸ್ತೆ, ಮೋರಿ ನಿರ್ಮಾಣಕ್ಕೆ ಬೇಡಿಕೆ ಇದ್ದು ಮುಂದಿನ ದಿನಗಳಲ್ಲಿ ತಾಲೂಕಿನಾದ್ಯಂತ ನೂರು ಕೋಟಿ ವೆಚ್ಚದಲ್ಲಿ ರಸ್ತೆ, ಮೋರಿ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು, ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಹೆಚ್ಚಿನ ದೂರುಗಳಿದ್ದು ಇವುಗಳನ್ನು ಶಾಸಕರು, ತಹಶೀಲ್ದಾರ್ ಕುಳಿತು ಬಗೆಹರಿಸಿಕೊಡಬೇಕು ಎಂದರು.
ತಾಲೂಕಿನ ನೀರಾವರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಲಿಂಕ್ ಕೆನಾಲ್ ಕಾಮಗಾರಿಗೆ ಎಲ್ಲಾ ಅಗತ್ಯ ಪ್ರಕ್ರಿಯೆ ಪೂರ್ಣಗೊಂಡಿದ್ದು ಜನವರಿಗೆ ಟೆಂಡರ್ ಪ್ರಕ್ರಿಯೆ ನಡೆಸಿ ಫೆಬ್ರವರಿಯಲ್ಲಿ ಕಾಮಗಾರಿ ಆರಂಭಕ್ಕೆ ಕ್ರಮಕೈಗೊಳ್ಳಲಾಗುವುದು ಎಂದರು.
ಶಾಸಕ ಡಾ.ರಂಗನಾಥ್ ಮಾತನಾಡಿ, ತಾಲೂಕಿನ ಸಮಗ್ರ ಅಭಿವೃದ್ಧಿ ನಿಟ್ಟಿನಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಡಿಸಿಎಂ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್ ನೇತೃತ್ವದಲ್ಲಿ ಹಲವಾರು ಜನಪರ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ, ಮಂಗಳಾ ಲಿಂಕ್ ಕೆನಾಲ್ ಕಾಮಗಾರಿ ಅರ್ಧದಷ್ಟು ಪೂರ್ಣಗೊಂಡಿದೆ, ಹುಲಿಯೂರು ದುರ್ಗ ಹೋಬಳಿಯ ಸಮಗ್ರ ನೀರಾವರಿ ಸಮಸ್ಯೆ ಪರಿಹಾರ ಮಾಡುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಹಳೆಊರು ಗ್ರಾಪಂ ಅಧ್ಯಕ್ಷ ಉಮೇಶ್, ಉಪಾಧ್ಯಕ್ಷೆ ಉಷಾ, ಸದಸ್ಯರಾದ ಬೀಚನಹಳ್ಳಿ ಶ್ರೀನಿವಾಸ, ಪುಟ್ಟಮ್ಮ, ಲಕ್ಷ್ಮಮ್ಮ, ಆನಂದ, ಮರಿಶೆಟ್ಟಿ, ತಹಶೀಲ್ದಾರ್ ವಿಶ್ವನಾಥ್, ತಾಪಂ ಇಒ ಜೋಸೆಫ್, ಪಿಡಿಒ ನಾಗರಾಜ್, ಸಿಪಿಐ ಮಾದ್ಯನಾಯಕ್, ಹುಲಿಯೂರು ದುರ್ಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟರಾಮು ಇತರರು ಇದ್ದರು.
Comments are closed.