ತುಮಕೂರು: ವಿವಿಧ ಇಲಾಖೆ ಅಧಿಕಾರಿಗಳಿಂದ ಆಗುತ್ತಿರುವ ಕಿರುಕುಳ ಖಂಡಿಸಿ ಜಿಲ್ಲೆಯ ಅರ್ಥ್ ಮೂವರ್ಸ್ ವಾಹನ ಮಾಲೀಕರು ನಗರದಲ್ಲಿ ಮೌನ ಮೆರವಣಿಗೆ ಮೂಲಕ ಪ್ರತಿಭಟನೆ ನಡೆಸಿದರು.
ಬಿಜಿಎಸ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಪಾದಯಾತ್ರೆಯಲ್ಲಿ ತೆರಳಿದ ಅರ್ಥ್ ಮೂವರ್ಸ್ ವಾಹನಗಳ ಮಾಲೀಕರು, ಚಾಲಕರು, ತಮ್ಮ ಸಮಸ್ಯೆ ನಿವಾರಣೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಜಿಲ್ಲಾ ಅರ್ಥ್ ಮೂವರ್ಸ್ ಸಂಘದ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಸಂಘದ ಸದಸ್ಯರೂ ಆದ ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಬ್ಬಾಕ ರವಿಶಂಕರ್ ಮಾತನಾಡಿ, ರೈತರ ಕೃಷಿ ಚಟುವಟಿಕೆಗಳ ಕೆಲಸಗಳಲ್ಲಿ ತೊಡಗುವ ಅರ್ಥ್ ಮೂವರ್ಸ್, ಟಿಪ್ಪರ್ ವಾಹನಗಳನ್ನು ಅಧಿಕಾರಿಗಳು ರಸ್ತೆಯಲ್ಲಿ ಅಡ್ಡಗಟ್ಟಿ ಮನಸೋ ಇಚ್ಚೆ ದಂಡ ವಿಧಿಸುವ ಪ್ರಕರಣ ಹೆಚ್ಚಾಗಿವೆ, ಅಧಿಕಾರಿಗಳ ಇಂತಹ ಧೋರಣೆಯಿಂದ ವಾಹನಗಳ ಮಾಲೀಕರು ನಿತ್ಯ ಕಿರುಕುಳ ಅನುಭವಿಸುತ್ತಿದ್ದಾರೆ, ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ, ಕಿರುಕುಳ ತಪ್ಪಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ವಾಹನ ಮಾಲೀಕರಿಗೆ ಅಧಿಕಾರಿಗಳು ನೀಡುವ ಅನಗತ್ಯ ಕಿರುಕುಳ ತಪ್ಪದಿದ್ದರೆ ಅರ್ಥ್ ಮೂವರ್ಸ್, ಟಿಪ್ಪರ್ ಲಾರಿಗಳನ್ನು ತಂದು ಜಿಲ್ಲಾಧಿಕಾರಿ ಕಚೇರಿ ಎದುರು ನಿಲ್ಲಿಸಿ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು, ಸರ್ಕಾರದ ಇಲಾಖೆಗಳ ಕೆಲಸಗಳಿಗೆ ನಿಯಮಾನುಸಾರ ರಾಯಲ್ಟಿ ಪಾವತಿಸಿ ಅನುಮತಿ ಪಡೆಯಲಾಗುತ್ತದೆ, ಆದರೆ ರೈತರ ಕೃಷಿ ಸಂಬಂಧಿತ ಕೆಲಸ ನಿರ್ವಹಿಸಲು ರಿಯಾಯಿತಿ ನೀಡಬೇಕು, ನಿಗದಿತ ಕೆಲಸಗಳಿಗೆ ಅನುಮತಿ ಪಡೆಯಲು ಇಲಾಖೆಗಳಿಂದ ವಿಳಂಬವಾಗುತ್ತಿದೆ, ಇಂತಹ ಸಮಸ್ಯೆ ನಿವಾರಣೆಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಕೋರಿದರು.
ಜಿಲ್ಲಾ ಅರ್ಥ್ ಮೂವರ್ಸ್ ವಾಹನಗಳ ಸಂಘದ ಜಿಲ್ಲಾಧ್ಯಕ್ಷ ಧರ್ಮಪಾಲ್.ಎಂ. ಮಾತನಾಡಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರು ತುಮಕೂರಿನಲ್ಲಿ ಸಿಗುವ ಮಣ್ಣಿಗೂ ಬಳ್ಳಾರಿಯಲ್ಲಿ ಸಿಗುವ ಮೈನ್ಸ್ ಮಣ್ಣಿಗೂ ಒಂದೇ ರೀತಿಯ ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ, ಇದನ್ನು ಅಧಿಕಾರಿಗಳು ಕೈಬಿಡಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಮುಖಂಡ ಎಸ್.ಪಿ.ಚಿದಾನಂದ್ ಮಾತನಾಡಿ, ಇಲ್ಲಿನ ಎಲ್ಲಾ ಮಾಲೀಕರು ಬ್ಯಾಂಕ್ ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದು ಒಡವೆ, ಮನೆ ಅಡವಿಟ್ಟು ವಾಹನ ಖರೀದಿರುತ್ತಾರೆ, ಇಂತಹ ಸಂಕಷ್ಟದಲ್ಲಿರುವ ಅಥ್ ಮೂವರ್ಸ್ ವಾಹನ ಮಾಲೀಕರು ಜೀವನ ನಿರ್ವಹಣೆ ಮಾಡಲು ಸಂಕಟಪಡುತ್ತಿರುವ ಸ್ಥಿತಿಯಲ್ಲಿ ಅಧಿಕಾರಿಗಳ ಕಿರುಕುಳ ಗಾಯದ ಮೇಲೆ ಬರೆ ಎಳೆದಂತಾಗಿದೆ, ಇಂತಹ ಕಿರುಕುಳಕ್ಕೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ವಿನಂತಿ ಮಾಡಿದರು.
ಅರ್ಥ್ ಮೂವರ್ಸ್ ವಾಹನ ಮಾಲೀಕರ ಸಂಘದ ಅಧ್ಯಕ್ಷ ತಿರುಮಲಯ್ಯ ಮಾತನಾಡಿ, ರೈತರ ಜಮೀನಿಗೆ ಮಣ್ಣು ಸಾಗಿಸುವುದು, ಕೃಷಿ ಜಮೀನಿನಲ್ಲಿ ಹಳ್ಳ ದಿಣ್ಣೆ ಸಮತಟ್ಟು ಮಾಡುವಂತಹ ಕೆಲಸಗಳಿಗೆ ವಾಹನ ಬಳಸುವಾಗಲೂ ಅಧಿಕಾರಿಗಳು ದಂಡ ವಿಧಿಸುತ್ತಾರೆ, ಇದು ರೈತರಿಗೆ ಹಾಗೂ ವಾಹನ ಮಾಲೀಕರಿಗೆ ಮಾಡುವ ಅನ್ಯಾಯವಾಗಿದೆ, ಈ ಬಗ್ಗೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಕೋರಿದರು.
ಮನವಿ ಪತ್ರ ಸ್ವೀಕರಿಸಿದ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರು, ಅರ್ಥ್ ಮೂವರ್ಸ್ ಮಾಲೀಕರು ನಿಯಮಗಳನ್ನು ಪಾಲನೆ ಮಾಡಿ, ಉಳಿದ ಸಮಸ್ಯೆಗಳ ನಿವಾರಣೆಗೆ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು.
ಪ್ರತಿಭಟನೆಯಲ್ಲಿ ತುಮಕೂರು ಜಿಲ್ಲಾ ಅರ್ಥ್ ಮೂವರ್ಸ್ ವಾಹನಗಳ ಸಂಘದ ಉಪಾಧ್ಯಕ್ಷ ಸಿ.ಟಿ.ತಿರುಮಲಯ್ಯ, ಸಂಘದ ಖಜಾಂಚಿ ಶಿವಕುಮಾರ್, ರಾಜೇಶ್, ಮುಖಂಡರಾದ ಬಿ.ಎಸ್.ನಾಗೇಶ್, ಶಿವಣ್ಣ, ಸುನಿಲ್, ರುದ್ರೇಶ್, ಮಂಜು ಇತರರು ಭಾಗವಹಿಸಿದ್ದರು.
Comments are closed.