ತುಮಕೂರು: ಒಂದೇ ಕುಟುಂಬದ ಐವರು ಆತ್ಮಹತ್ಯೆಗೆ ಶರಣಾಗಿರುವ ಹಿನ್ನೆಲೆಯಲ್ಲಿ ನಗರದ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಭೇಟಿ ನೀಡಿ ಮೃತದೇಹ ವೀಕ್ಷಿಸಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಶವಾಗಾರದಲ್ಲಿ ಪತಿ, ಪತ್ನಿ ಹಾಗೂ ಮೂವರು ಮಕ್ಕಳ ಮೃತ ದೇಹಗಳನ್ನು ನೋಡಿ ಮರುಗಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಶವಾಗಾರದ ಬಳಿ ರೋಧಿಸುತ್ತಿದ್ದ ಮೃತರ ತಂದೆ, ತಾಯಿ ಹಾಗೂ ಸಹೋದರನಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಘಟನೆ ನಿಜಕ್ಕೂ ಬಹಳ ನೋವು ತರುವ ಸಂಗತಿ, ಆತ್ಮಹತ್ಯೆಗೆ ಶರಣಾಗಿರುವ ಈ ಕುಟುಂಬದವರು ಮಾಡಿದ ಸಾಲ ತೀರಿಸಲು ಆಗಿಲ್ಲ, ಸಾಲ ನೀಡಿದ್ದವರು ಸಾಲ ಕಟ್ಟುವಂತೆ ಒತ್ತಾಯ ಮಾಡುತ್ತಿದ್ದರು, ಸಾಲ ಕಟ್ಟಲು ಆಗದೆ ಮಾನಸಿಕವಾಗಿ ನೊಂದು ಕಿರುಕುಳ ನೀಡುತ್ತಿದ್ದವರ ಹೆಸರನ್ನು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಡೆತ್ ನೋಟ್ ನಲ್ಲಿ ಉಲ್ಲೇಖಿಸಿರುವವರನ್ನು ಈಗಾಗಲೇ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದರು.
ಪತಿ, ಪತ್ನಿ ಹಾಗೂ ಮೂವರು ಮಕ್ಕಳು ಆತ್ಮಹತ್ಯೆ ಬಹಳ ನೋವಿನ ಸಂಗತಿ, ಇವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದರು.
ಸಿಎಂ ಜತೆ ಚರ್ಚಿಸಿ ಪರಿಹಾರ
ಸಾಲದ ಶೂಲಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರವನ್ನು ಮುಖ್ಯಮಂತ್ರಿಗಳಿಗೆ ತಿಳಿಸಿ ಅವರೊಂದಿಗೆ ಚರ್ಚಿಸುತ್ತೇನೆ, ನಂತರ ಅವರ ಆದೇಶದಂತೆ ಕುಟುಂಬಕ್ಕೆ ಪರಿಹಾರ ನೀಡುವ ಸಂಬಂಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಮೀಟರ್ ಬಡ್ಡಿ ವಿರುದ್ಧ ಕ್ರಮ
ಜಿಲ್ಲೆಯಲ್ಲಿ ಮೀಟರ್ ಬಡ್ಡಿ ದಂಧೆ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ, ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಎಲ್ಲಾದರೂ ಮೀಟರ್ ಬಡ್ಡಿ ದಂಧೆ ನಡೆಸುತ್ತಿರುವುದು ಕಂಡು ಬಂದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
1.50 ರಿಂದ 2 ಲಕ್ಷ ರೂ. ಕಡಿಮೆ ಸಾಲದ ಹಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವುದು ಸಾಮಾನ್ಯ ಸಂಗತಿಯಲ್ಲ, ಈ ಪ್ರಕರಣದ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಲಾಗುವುದು, ತನಿಖೆಯ ನಂತರ ಸತ್ಯಾಂಶ ಬೆಳಕಿಗೆ ಬರಲಿದೆ ಎಂದರು.
ಅಮಾಯಕರಿಗೆ ಸಾಲ ಕೊಟ್ಟು ಬಡ್ಡಿ ಪಡೆಯುವವರ ಸಂಖ್ಯೆ ಜಾಸ್ತಿಯಾಗುತ್ತಿದೆ, ತನಿಖೆಯ ನಂತರ ಎಲ್ಲಾ ವಿಚಾರಗಳು ಬಯಲಿಗೆ ಬರಲಿವೆ ಎಂದ ಅವರು, ಇಂತಹ ಹೃದಯ ವಿದ್ರಾವಕ ಘಟನೆ ಮತ್ತೆ ಮರುಕಳಿಸಬಾರದು, ಇಂತಹ ಘಟನೆ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಆತ್ಮಹತ್ಯೆಗೆ ಶರಣಾಗಿರುವ ಮಕ್ಕಳಾದ ಹಜೀರಾ ಸೆಂಟ್ ಮೇರಿಸ್ ಶಾಲೆಯಲ್ಲಿ 10ನೇ ತರಗತಿ, ಆರ್ಯಭಾರತಿ ಹೈಸ್ಕೂಲ್ ನಲ್ಲಿ ಮಹಮದ್ ಶುಭಾನ್ 7ನೇ ತರಗತಿ, ಹಾಗೂ ಮಹಮದ್ ಮುನೀರ್ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಈ ಸಂದರ್ಭದಲ್ಲಿ ಶಾಸಕ ಜ್ಯೋತಿ ಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿಪಂ ಸಿಇಓ ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್.ಕೆ.ವಿ, ಪಾಲಿಕೆ ಆಯುಕ್ತೆ ಅಶ್ವಿಜಾ, ಅಡಿಷನಲ್ ಎಸ್ಪಿ ವಿ.ಮರಿಯಪ್ಪ, ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ.ವೀಣಾ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ಮತ್ತಿತರರು ಇದ್ದರು.
Comments are closed.