ತುಮಕೂರು: ಶ್ರೀ ಸಿದ್ಧಾರ್ಥ ಆಕಾಡೆಮಿ ಆಫ್ ಹೈಯರ್ ಎಜುಕೇಷನ್ (ಸಾಹೇ) ವಿಶ್ವವಿದ್ಯಾಲಯವು ಇದೇ ನವೆಂಬರ್ 29ರಂದು 12ನೇ ವರ್ಷದ ಘಟಿಕೋತ್ಸವನ್ನು ನಗರದ ಅಗಲಕೋಟೆಯಲ್ಲಿರುವ ಶಿಕ್ಷಣ ಭೀಷ್ಮ ಡಾ.ಎಚ್.ಎಮ್.ಗಂಗಾಧರಯ್ಯ ಸ್ಮಾರಕ ಭವನದಲ್ಲಿ ಬೆಳಗ್ಗೆ 10.30ಕ್ಕೆ ಆಯೋಜಿಸಲಾಗಿದೆ ಎಂದು ಸಾಹೇ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ.ಕೆ.ಬಿ.ಲಿಂಗೇಗೌಡ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಹೇ ವಿಶ್ವವಿದ್ಯಾಲಯದ 12ನೇ ಘಟಿಕೋತ್ಸವದಲ್ಲಿ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕೋರ್ಸ್ಗಳ ಒಟ್ಟು 1003 ಮಂದಿಗೆ ಪದವಿ ಪ್ರದಾನ ಮಾಡಲಾಗುವುದು, ಇವರಲ್ಲಿ 5 ಮಂದಿ ತಜ್ಞರಿಗೆ ಫೆಲೋಶಿಪ್ ಕೊಡಲಾಗುವುದು, 27 ಮಂದಿ ಪಿ ಎಚ್ ಡಿ ಪದವಿ ಸ್ವೀಕರಿಸಲಿದ್ದಾರೆ, ವೈದ್ಯಕೀಯದಲ್ಲಿ 2, ದಂತ ವೈದ್ಯಕೀಯದಲ್ಲಿ 3, ಮತ್ತು ಇಂಜಿನಿಯರಿಂಗ್ ನಲ್ಲಿ 7 ಮಂದಿ ಸೇರಿದಂತೆ ಒಟ್ಟು 12 ಮಂದಿಗೆ ಚಿನ್ನದ ಪದಕ ನೀಡಲಾಗುತ್ತಿದೆ ಎಂದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕೇರಳದ ತಿರುವನಂತಪುರಂನ ಸಂಸತ್ ಸದಸ್ಯ ಡಾ.ಶಶಿ ತರೂರ್ ಆಗಮಿಸಲಿದ್ದಾರೆ, ಸಾಹೇ ಕುಲಾಧಿಪತಿ ಸವ್ಯಸಾಚಿ ಡಾ.ಜಿ.ಪರಮೇಶ್ವರ ಪದವಿ ಪ್ರದಾನ ಮಾಡಲಿದ್ದಾರೆ, 11 ವರ್ಷಗಳಿಂದ ಸ್ಥಗಿತಗೊಂಡಿದ್ದ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ಈ ಬಾರಿ ನೀಡಲಾಗುತ್ತಿದ್ದು, ಅಮೆರಿಕದ ಫ್ರೋರಿಡಾ ಇಂಟರ್ ನ್ಯಾಷನಲ್ ಯೂನಿವರ್ಸಿಟಿಯ ಪ್ರೊಫೆಸರ್ ಡಾ.ಸೀತಾರಾಮ ಎಸ್.ಅಯ್ಯಂಗಾರ ಅವರಿಗೆ ನೀಡುತ್ತಿರುವುದು ವಿಶೇಷ, ಡಾ.ಸೀತಾರಾಮ ಎಸ್.ಅಯ್ಯಂಗಾರ ಅವರು ನೊಬೆಲ್ ಪ್ರಶಸ್ತಿ ಪಡೆಯುವ ಮಟ್ಟಿಗೆ ಅವರು ಸಾಧನೆ ಮಾಡಿದ್ದಾರೆ, ಕಂಪ್ಯೂಟರ್ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಹಾಗೂ ನಾಸಾ ಮತ್ತು ರಕ್ಷಣಾ ವಲಯ ಕ್ಷೇತ್ರದಲ್ಲಿಯೂ ಹಲವಾರು ಸಂಶೋಧನೆ ಮಾಡಲು ನೆರವಾಗಿದ್ದಾರೆ ಎಂದು ತಿಳಿಸಿದರು.
ಕುಲಸಚಿವ ಡಾ.ಎಮ್.ಝೆಡ್.ಕುರಿಯನ್ ಮಾತನಾಡಿ, ಬೇರೆ ವಿಶ್ವವಿದ್ಯಾಲಯಗಳಲ್ಲಿ ಕೇವಲ ರ್ಯಾಂಕ್ ವಿಜೇತರು ಮತ್ತು ಟಾಪರ್ಸ್ ಗಳಿಗೆ ಮಾತ್ರ ಘಟಿಕೋತ್ಸವದಲ್ಲಿ ಪದವಿ ಪ್ರದಾನ ನೀಡಲಾಗುವುದು ಆದರೆ ಸಾಹೇ ವಿಶ್ವವಿದ್ಯಾಲಯದಲ್ಲಿ ಪದವಿ ಮುಗಿಸಿದ ಎಲ್ಲ ವಿದ್ಯಾರ್ಥಿಗಳಿಗೂ ಪದವಿ ಪ್ರದಾನ ಮಾಡಲಾಗುವುದು, ಅಲ್ಲದೇ ಬೆಸ್ಟ್ ಔಟ್ ಗೋಯಿಂಗ್ ಸ್ಟೂಡೆಂಟ್ಸ್ ಎಂಬ ವಿಶೇಷ ಪ್ರಶಸ್ತಿ ಕೂಡ ನೀಡಲಾಗುವುದು, ಪದವಿ ಪಡೆದ ಎಲ್ಲಾ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬ ಸಮೇತ ಸುಮಾರು 5 ಸಾವಿರಕ್ಕೂ ಹೆಚ್ಚು ಮಂದಿಗೆ ವ್ಯವಸ್ಥೆ ಮಾಡಲಾಗಿದೆ, ಸಾಹೇ ವಿವಿ ಉಪಕುಲಪತಿ ಡಾ.ಲಿಂಗೇಗೌಡ ಅವರು ಸಾಹೇ ವಿಶ್ವವಿದ್ಯಾಲಯದ ಪ್ರಗತಿನೋಟ ವರದಿ ಮಂಡಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಸಾಣಿಕೊಪ್ಪ.ಟಿ, ದಂತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಪ್ರವೀಣ್ ಕುಡುವ, ಸಾಹೇ ಕುಲಾಧಿಪತಿಗಳ ಸಲಹೆಗಾರ ವಿವೇಕ ವೀರಯ್ಯ, ಸಾಹೇ ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗದ ನಿಯಂತ್ರಕ ಡಾ.ಗುರುಶಂಕರ್.ಜಿ, ಘಟಿಕೋತ್ಸವದ ಮೇಲ್ವಿಚಾರಕರು ಮತ್ತು ಉಪಕುಲಸಚಿವ ಡಾ.ಸುದೀಪ್ ಕುಮಾರ್, ಸಹಾಯಕ ಕುಲಸಚಿವ ಡಾ.ಆರ್.ಪ್ರಕಾಶ್ ಸೇರಿದಂತೆ ಸಾಹೇ ಆಡಳಿತ ಸಿಬ್ಬಂದಿ ವರ್ಗ ಇದ್ದರು.
Comments are closed.