ಹೊಯ್ಸಲಕಟ್ಟೆ ಗ್ರಾಪಂ ವ್ಯಾಪ್ತಿಯಲ್ಲಿ ನೀರಿಗೆ ಬರ- ಶಾಶ್ವತ ನೀರು ಪೂರೈಕೆಗೆ ಮನವಿ

ಜೀವ ಜಲಕ್ಕಾಗಿ ಹಳ್ಳಿ ಜನರ ಪರದಾಟ

458

Get real time updates directly on you device, subscribe now.

ಹುಳಿಯಾರು: ಜಿಲ್ಲಾಧಿಕಾರಿಗಳೇ ನಾವು ಹನಿ ಹನಿ ನೀರಿಗೂ ಹಾಹಾಕಾರ ಎದುರಿಸುತ್ತಿದ್ದೇವೆ, ಕೈ ಮುಗಿದು ಕೇಳ್ಕೋತ್ತೀವಿ ಜೀವ ಉಳಿಸಿಕೊಳ್ಳಲು ನೀರು ಕೊಡಿ, ನೀವೇನಾದ್ರೂ ಕೈ ಬಿಟ್ರೆ ನಮಗೆ ಸಾವೆ ಗತಿ, ಇದು ಹುಳಿಯಾರು ಹೋಬಳಿ ಹೊಯ್ಸಲಕಟ್ಟೆ ಗ್ರಾಮ ಪಂಚಾಯ್ತಿಯ ನೀರಿನ ಸಮಸ್ಯೆ ಎದುರಿಸುತ್ತಿರುವ ಐದಾರು ಹಳ್ಳಿಗಳ ನಿವಾಸಿಗಳ ಮನವಿಯಾಗಿದೆ.
ಹೊಯ್ಸಲಕಟ್ಟೆ ಗ್ರಾಮ ಪಂಚಾಯ್ತಿಯ ಕಲ್ಲೇನಹಳ್ಳಿಯಲ್ಲಿ ಮೊದಲು ನೀರಿನ ಸಮಸ್ಯೆ ಆರಂಭವಾಯಿತು. ಸರಿಸುಮಾರು 300 ಮನೆಗಳ ಒಂದೂವರೆ ಸಾವಿರಕ್ಕೂ ಹೆಚ್ಚು ಜನಸಂಖ್ಯೆಯುಳ್ಳ ಇಲ್ಲಿಗೆ ನೀರು ಪೂರೈಸುತ್ತಿದ್ದ 2 ಕೊಳವೆಬಾವಿಗಳ ಅಂತರ್ಜಲವು ಕಳೆದ 3 ತಿಂಗಳ ಹಿಂದೆ ಬರಿದಾಯಿತು. ಅಂದು ಪಂಚಾಯ್ತಿ ತಕ್ಷಣ ಸ್ಪಂದಿಸಿ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಮುಂದಾಯಿತು. ಸತತ ಮೂರ್ನಾಲ್ಕು ತಿಂಗಳು ಟ್ಯಾಂಕರ್ನಲ್ಲಿ ನೀರು ಹೊಡೆದ ಪರಿಣಾಮ ಆ ಕೊಳವೆಬಾವಿಯಲ್ಲೂ ಈಗ ಅಂತರ್ಜಲ ಕಡಿಮೆಯಾಗಿದೆ. ದುರಾದೃಷ್ಟವಶಾತ್ ಅಂತರ್ಜಲ ಬರಿದಾದರೆ ಮುಂದೇನು ಗತಿ ಎನ್ನುವ ಪ್ರಶ್ನೆ ಇಲ್ಲಿನ ಜನರನ್ನು ಕಾಡುತ್ತಿದೆ.
ಇದೇ ಪಂಚಾಯ್ತಿಯ ಇನ್ನೂರೈವತ್ತು ಮನೆಯ ಗ್ರಾಮವಾದ ನುಲೇನೂರಿನಲ್ಲೂ ಕಳೆದ 1 ತಿಂಗಳಿಂದ ನೀರಿನ ಹಾಹಾಕಾರ ಶುರುವಾಗಿದೆ. ಮೊದಲು ಇಲ್ಲಿದ್ದ ಕೊಳವೆಬಾವಿಗಳಲ್ಲಿ ಅಂತರ್ಜಲ ಕಡಿಮೆಯಾಯಿತು. ಆಗ ಕೊಳವೆಬಾವಿಗೆ ಹೆಚ್ಚುವರಿ ಲೆಂತ್ ಬಿಟ್ಟ ಪರಿಣಾಮ ಒಂದಷ್ಟು ದಿನ ಅಷ್ಟೋ ಇಷ್ಟೋ ನೀರು ಬಂತು. ಈಗ ಸಂಪೂರ್ಣ ಅಂತರ್ಜಲ ಬರಿದಾಗಿ ಹನಿನೀರು ಬರದಂತಾಗಿದೆ, ಹಾಗಾಗಿ ಪಂಚಾಯ್ತಿಯಿಂದ ಟ್ಯಾಂಕರ್ ಮೂಲಕ ಇಲ್ಲಿಗೂ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ ಪಂಚಾಯ್ತಿಯಲ್ಲಿನ ಹಣದ ಸಮಸ್ಯೆಯಿಂದಾಗಿ ವಾರಕ್ಕೊಮ್ಮೆ ಮಾತ್ರ ಟ್ಯಾಂಕರ್ ನೀರು ಕೊಡುತ್ತಿದ್ದು ಈ ನೀರು ಏನಕ್ಕೂ ಸಾಲದಾಗಿದೆ.
ಇನ್ನು ಈ ಪಂಚಾಯ್ತಿಯ ಬೆಂಚಿಹಟ್ಟಿ ಗ್ರಾಮದಲ್ಲೂ ನೀರಿನ ಸಮಸ್ಯೆಯಿದ್ದು ಒಂದೂವರೆ ಕಿ.ಮೀ ದೂರದಿಂದ ನೀರನ್ನು ಹೊತ್ತು ತರುವ ಅನಿವಾರ್ಯತೆ ಸೃಷ್ಟಿಯಾಗಿದೆ. ಅಲ್ಲದೆ ತಿಮ್ಮಪ್ಪನಹಟ್ಟಿ ಹಾಗೂ ಜಯಚಂದ್ರ ನಗರದಲ್ಲೂ ನೀರಿನ ಅಭಾವವಿದ್ದು ಈ ಗ್ರಾಮಗಳಿಗೆ ಏಳೆಂಟು ನೂರು ಮೀಟರ್ ದೂರದ ಕೊಳವೆಬಾವಿಯಿಂದ ಪೈಪ್ ಲೈನ್ ಮಾಡಿ ನೀರು ಸರಬರಾಜು ಮಾಡಲಾಗುತ್ತಿತ್ತು, ಈಗ ಈ ಕೊಳವೆಬಾವಿಯಲ್ಲಿ ಅಂತರ್ಜಲ ಕಡಿಮೆಯಾಗಿದ್ದು ಟ್ಯಾಂಕರ್ ಮೂಲಕ ನೀರು ಪೂರೈಕೆ ಅನಿವಾರ್ಯವಾಗಿದೆ, ಆದರೆ ಪಂಚಾಯ್ತಿಯ ಹಣದ ಸಮಸ್ಯೆಯಿಂದ ಟ್ಯಾಂಕರ್ ಸಪ್ಲೈಯ್ ಆರಂಭವಾಗದೆ ಇಲ್ಲಿನ ಜನ ನೀರಿಗೆ ಪರದಾಡುವಂತಾಗಿದೆ.
ನೀರಿನ ಸಮಸ್ಯೆಗಳಿರುವ ಗ್ರಾಮದ ನಿವಾಸಿಗಳು ರೈತರು ಮತ್ತು ಕೂಲಿ ಕಾರ್ಮಿಕರಾಗಿದ್ದಾರೆ. ಟ್ಯಾಂಕರ್ ಮೂಲಕ ನೀರು ಸರಬರಾಜು ಸ್ಥಗಿತವಾದರೆ ಅಕ್ಕಪಕ್ಕದ ಜಮೀನುಗಳ ಮಾಲೀಕರಿಂದ ಕಾಡಿಬೇಡಿ ನೀರು ತರಬೇಕಿದೆ. ಹಗಲಿನ ವೇಳೆ ನೀರು ತರಲೋದರೆ ಕೂಲಿ ಇಲ್ಲ, ಕೂಲಿಗೋದರೆ ನೀರಿಲ್ಲ ಎನ್ನುವ ಪರಿಸ್ಥಿತಿ ಎದುರಿಸಬೇಕಿದೆ. ಇನ್ನು ತ್ರೀಪೆಸ್ ಕರೆಂಟ್ ಮಧ್ಯರಾತ್ರಿ ಇದ್ದಾಗ ವಿಷಜಂತು, ಕಾಡುಪ್ರಾಣಿಗಳ ಭಯದಲ್ಲೂ ನೀರು ತರುವ ಅನಿವಾರ್ಯತೆ ಇದೆ. ಅಲ್ಲದೆ ಈ ಹಳ್ಳಿಗಳಲ್ಲಿ ಕೋಳಿ, ಕುರಿ, ಮೇಕೆ, ಹಸು, ನಾಯಿಗಳಿದ್ದು ಇವೆಲ್ಲಕ್ಕೂ ನೀರು ಪೂರೈಸುವುದು ರೈತರಿಗೆ ಸವಾಲಾಗಿ ಪರಿಣಮಿಸಿದೆ. ಬೇಸಿಗೆಯ ಆರಂಭದ ದಿನಗಳಲ್ಲೆ ಸಮಸ್ಯೆ ಮಿತಿಮೀರಿದ್ದು ಮುಂದಿನ ದಿನಗಳನ್ನು ಹೇಗೆ ಎದುರಿಸುವುದು ಎನ್ನುವ ಆತಂಕ ಇಲ್ಲಿನ ನಿವಾಸಿಗಳದಾಗಿದೆ.
ಟ್ಯಾಂಕರ್ ನೀರಿನ ಬಿಲ್ ಪಾವತಿಸಿಲ್ಲ
ಕಲ್ಲೇನಹಳ್ಳಿ ನೀರಿನ ಸಮಸ್ಯೆ ಹೆಚ್ಚಾದಾಗ ಮಾಸಿಕ 25 ಸಾವಿರ ರೂ. ನಂತೆ ಟ್ಯಾಂಕರ್ ಮೂಲಕ ಸರಬರಾಜಿಗೆ ಪಂಚಾಯ್ತಿಯಿಂದ ಖಾಸಗಿ ಗುತ್ತಿಗೆ ನೀಡಲಾಗಿತ್ತು. ಖಾಸಗಿಯವರ ಕೊಳವೆ ಬಾವಿಯ ನೀರು ಈಗ ಕಡಿಮೆಯಾಗಿದ್ದು ಮತ್ತೆ ಹೆಚ್ಚುವರಿ ಲೆಂತ್ ಬಿಡಬೇಕಿದೆ. ಆದರೆ ಪಂಚಾಯ್ತಿಯಿಂದ 1 ತಿಂಗಳ ಹಣ ಮಾತ್ರ ನೀಡಿದ್ದು ಇನ್ನೂ 2 ತಿಂಗಳ ಹಣ ಬಾಕಿಯಿದೆ. ಬಾಕಿ ಹಣ ಕೊಟ್ಟರೆ ಕೊಳವೆಬಾವಿಗೆ ಲೆಂತ್ ಬಿಡಿಸಿ ನೀರು ಸರಬರಾಜು ಮಾಡುತ್ತೇನೆ, ಇಲ್ಲವಾದರೆ ನಿಲ್ಲಿಸುತ್ತೇನೆಂದು ಗುತ್ತಿಗೆದಾರರು ಹೇಳುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹೊಸ ಕೊಳವೆಬಾವಿ ಕೊರೆಸಿ ಶಾಶ್ವತವಾಗಿ ನೀರಿನ ಸಮಸ್ಯೆ ಪರಿಹರಿಸುವುದು ಹೇಗೆಂದು ತಿಳಿಯದಾಗಿದೆ.
-ಮಂಜುನಾಥ್, ಗ್ರಾಪಂ ಸದಸ್ಯರು, ಕಲ್ಲೇನಹಳ್ಳಿ

ಹೊಸ ಕೊಳವೆ ಬಾವಿ ಕೊರೆಸಿ
ನುಲೇನೂರು ಗ್ರಾಮದ ನೀರಿನ ಸಮಸ್ಯೆ ನಿವಾರಣೆಗೆ ಶಕ್ತಿ ಮೀರಿ ಪಂಚಾಯ್ತಿಯಿಂದ ಸ್ಪಂದಿಸುತ್ತಿದ್ದೇವೆ. ಆದರೆ ಹಳ್ಳಿಹಳ್ಳಿಯಲ್ಲೂ ನೀರಿನ ಸಮಸ್ಯೆ ಇದ್ದು ಎಲ್ಲಾ ಹಳ್ಳಿಗೂ ಟ್ಯಾಂಕರ್ ಮೂಲಕ ನೀರು ಪೂರೈಸಲು ಪಂಚಾಯ್ತಿಯಲ್ಲಿ ಹಣವಿಲ್ಲ. ಅಧ್ಯಕ್ಷ ಚಿಕ್ಕಣ್ಣ ಅವರ ಸ್ಪಂದನೆಯಿಂದ ಈಗ ವಾರಕ್ಕೊಮ್ಮೆಯಾದರೂ ನೀರು ಬರುತ್ತಿದೆ. ಆದರೆ ಇದು ತಾತ್ಕಾಲಿಕ ವ್ಯವಸ್ಥೆಯಾಗಿದ್ದು ಶಾಶ್ವತ ಪರಿಹಾರಕ್ಕೆ ಹೊಸ ಕೊಳವೆಬಾವಿ ಕೊರೆಸಲೇಬೇಕಿದೆ, ಆದರೆ ಇಷ್ಟು ಹಣ ಪಂಚಾಯ್ತಿಯಲ್ಲಿಲ್ಲ, ಹಾಗಾಗಿ ಕೊಳವೆಬಾವಿಗೆ ವಿಶೇಷ ಅನುದಾನ ಬಿಡುಗಡೆ ಮಾಡಬೇಕಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಇತ್ತ ಗಮನ ಹರಿಸುವ ಅಗತ್ಯವಿದೆ.
-ಸುಧಾಕರ್, ಗ್ರಾಪಂ ಸದಸ್ಯರು, ನುಲೇನೂರು.

15 ನೇ ಹಣಕಾಸಿನ ದುಡ್ಡು ಬಳಸಲು ಸೂಚನೆ
ನೀರಿನ ಸಮಸ್ಯೆ ನಿವಾರಣೆಗೆ ಟಾಸ್ಕ್ ಫೂರ್ಸ್ಗೆ ಇನ್ನೂ ಹಣ ಬಿಡುಗಡೆಯಾಗಿಲ್ಲ. ಹಾಗಾಗಿ 15 ನೇ ಹಣಕಾಸಿನಲ್ಲಿ ಲಭ್ಯವಿರುವ ಹಣದಲ್ಲಿ ಶೇ.50 ರಷ್ಟು ಹಣ ಬಳಕೆಗೆ ಪಂಚಾಯ್ತಿಗಳಿಗೆ ಸೂಚನೆ ನೀಡಲಾಗಿದೆ. ನುಲೇನೂರು ಹಾಗೂ ಬೆಂಚಿಹಟ್ಟಿ ಗ್ರಾಮಗಳಿಗೆ ಹೊಸ ಬೋರ್ ಕೊರೆಸಲು ಪಾಯಿಂಟ್ ಸಹ ಮಾಡಲಾಗಿದೆ. ಆದರೆ ಪಿಡಿಓ ಮತ್ತು ಸದಸ್ಯರ ಸಾಮರಸ್ಯ ಕೊರತೆಯಿಂದ ಇನ್ನೂ ಕೊಳವೆಬಾವಿ ಕೊರೆದಿಲ್ಲ. ಇನ್ನು ಕಲ್ಲೇನಹಳ್ಳಿಿಗೆ ಸರಬರಾಜು ಮಾಡಿರುವ ನೀರಿನ ಬಾಕಿ ಹಣ ಪಾವತಿಸಲು ಪಿಡಿಓಗೆ ಸೂಚಿಸಲಾಗಿದೆಯಲ್ಲದೆ ಗುತ್ತಿಗೆದಾರರಿಗೆ ಟ್ಯಾಂಕರ್ ನೀರು ಸರಬರಾಜು ನಿಲ್ಲಿಸದಂತೆ ಖುದ್ದು ನಾನೇ ಮನವಿ ಮಾಡಿದ್ದೇನೆ.
-ಡಿ.ಆರ್.ಹನುಮಂತರಾಜು, ಪ್ರಭಾರ ಇಓ, ಚಿಕ್ಕನಾಯಕನಹಳ್ಳಿ.

ಹುಳಿಯಾರು ಪಟ್ಟಣದ ಜಾಮೀಯಾ ಮಸೀದಿಯ ಪ್ರಾರಂಭೋತ್ಸವದಲ್ಲಿ ಭಾಗಿಯಾದ ಜಿಪಂ ಸದಸ್ಯ ವೈ.ಸಿ.ಸಿದ್ದರಾಮಯ್ಯ ಅವರನ್ನು ಮುಸ್ಲಿಂ ಬಾಂಧವರು ಸನ್ಮಾನಿಸಿ ಗೌರವಿಸಿದರು. ಪಪಂ ಸದಸ್ಯ ಸಿದ್ಧಿಕ್, ಹಾರೂನ್ ಷರೀಪ್, ಶಾಮಿಲ್ ಆರ್, ಜಹೀರ್, ಸಲೀಂ, ಸಕ್ಲೇನ್ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!