ತುಮಕೂರು: ಹಾಲಿನ ದರ ಕಡಿತ ಮಾಡಿರುವ ತುಮುಲ್ ಕ್ರಮ ಖಂಡಿಸಿ ಮಲ್ಲಸಂದ್ರದಲ್ಲಿರುವ ತುಮಕೂರು ಹಾಲು ಒಕ್ಕೂಟದ ಎದುರು ಕರ್ನಾಟಕ ರಾಜ್ಯ ರೈತ ಸಂಘ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿ,ತುಮುಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.
ಈ ವೇಳೆ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ತುಮಕೂರು ಜಿಲ್ಲೆಯ 10 ತಾಲೂಕುಗಳನ್ನು ಬರವೆಂದು ಘೋಷಿಸಿದೆ, ಕೃಷಿ ಎಂಬುದು ರೈತರಿಗೆ ಲಾಭದಾಯಕವಲ್ಲದಾಗಿದೆ, ಹಾಗಾಗಿ ರೈತರು ಹೈನುಗಾರಿಕೆ ನಂಬಿ ಬದುಕುತಿದ್ದಾರೆ, ಬೇಸಿಗೆಯಲ್ಲಿ ಹಾಲಿನ ಅವಕ ಹೆಚ್ಚಾಗಿದೆ ಎಂಬ ನೆಪವೊಡ್ಡಿ ಹಾಲಿನ ದರವನ್ನು 2 ರೂ. ಕಡಿತಗೊಳಿಸಿದೆ, ಅಲ್ಲದೆ ಪಶು ಆಹಾರದ ದರವನ್ನು ಕೆಜಿಗೆ ಎರಡು ರೂ. ಹೆಚ್ಚಳ ಮಾಡಿದೆ, ಇದರಿಂದ ರೈತರಿಗೆ ಒಟ್ಟಿಗೆ ಒಂದು ಲೀಟರ್ ಗೆ 4 ರೂ. ನಷ್ಟವಾಗಿದೆ, ಇದನ್ನು ಸರಕಾರದ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ, ಹಾಗಾಗಿ ಡಿಸೆಂಬರ್ 04 ರವರೆಗೆ ಕಾಲಾವಕಾಶ ನೀಡಿದ್ದು, ಕಡಿತ ಮಾಡಿರುವ ಹಾಲಿನ ದರ ಮರು ಸ್ಥಾಪನೆ ಮತ್ತು ಪಶು ಆಹಾರದ ದರ ಕಡಿತ ಮಾಡದಿದ್ದರೆ ಚಳಿಗಾಲದ ಅಧಿವೇಶನದ ವೇಳೆ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದರು.
ತುಮಕೂರು ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಜಿ.ಶ್ರೀನಿವಾಸ್ ಮನವಿ ಸ್ವೀಕರಿಸಿ ಮಾತನಾಡಿ, ರೈತ ಸಂಘ ಸಲ್ಲಿಸಿರುವ ಮನವಿಯನ್ನು ರಾಜ್ಯ ಸರಕಾರಕ್ಕೆ ಮತ್ತು ಕೆಎಂಎಫ್ಗೆ ಪತ್ರಬರೆದು, ಅಲ್ಲಿಂದ ಬರುವ ಸೂಚನೆಗಳ ಅನ್ವಯ ಸಭೆ ನಡೆಸಿ ಸೂಕ್ತ ತೀರ್ಮಾನ ಕೈಗೊಂಡು ರೈತರಿಗೆ ಅನುಕೂಲವಾಗುವ ರೀತಿ ಆದೇಶ ಹೊರಡಿಸಲಾಗುವುದು, ಬರಗಾಲದ ಹಿನ್ನೆಲೆಯಲ್ಲಿ ರೈತರಿಗೆ ಮೇವು ಬೆಳೆದುಕೊಳ್ಳಲು ಈಗಾಗಲೇ ಜಿಲ್ಲಾಡಳಿತ ಮೇವಿನ ಬೀಜ ವಿತರಿಸಿದೆ, ಹಾಗೆಯೇ ನಾವು ಕೂಡ ರೈತರಿಗೆ ವಿತರಿಸಲು ವ್ಯವಸ್ಥೆ ಮಾಡಿದ್ದೇವೆ, ಶೀಘ್ರದಲ್ಲಿಯೇ ಮೇವಿನ ಬೀಜ ಕೊಡುವುದಾಗಿ ಎಂದು ಭರವಸೆ ನೀಡಿದರು.
ಹಾಲಿನ ಪ್ರೋತ್ಸಾಹ ಧನವನ್ನು ಆಗಸ್ಟ್ವರೆಗೆ ನೀಡಲಾಗಿದೆ, ಅದು ನೇರವಾಗಿಯೇ ರೈತರ ಖಾತೆಗಳಿಗೆ ಹೋಗುವುದರಿಂದ ತೊಂದರೆಯಿಲ್ಲ, ನಂತರದ ಬಾಕಿಯನ್ನು ಶೀಘ್ರವೇ ಬಿಡುಗಡೆ ಮಾಡುವ ನೀರಿಕ್ಷೆ ಇದೆ ಎಂದ ವ್ಯವಸ್ಥಾಪಕ ನಿರ್ದೇಶಕರು, ಪ್ರತಿವರ್ಷ ಬೇಸಿಗೆ ಸಂದರ್ಭದಲ್ಲಿ ಹಾಲಿನ ಆವಕ ಹೆಚ್ಚಾಗುವುದರಿಂದ ಬೆಲೆ ಕಡಿಮೆ ಮಾಡುವುದು ಸಂಪ್ರದಾಯದಂತೆ ನಡೆದುಕೊಂಡು ಬಂದಿದೆ, ಮಳೆ ಇಲ್ಲದ ಕಾರಣ ಪಶು ಆಹಾರದ ಕಚ್ಚಾವಸ್ತುವಿನ ಬೆಲೆ ಹೆಚ್ಚಳದಿಂದ ಪಶು ಆಹಾರದ ಬೆಲೆ ಹೆಚ್ಚಳವಾಗಿದೆ, ಹಾಲಿನ ಕೆನೆ ಜಿಡ್ಡಿನ ಅಂಶದ ಆಧಾರದ ಮೇಲೆ ಸರಕಾರ ನೀಡುವ ಪ್ರೋತ್ಸಾಹ ಧನ ನಿಂತಿದೆ, ತುಮುಲ್ ಯಾವಾಗಲು ರೈತೆರೊಂದಿಗೆ ಇದೆ, ಗುಣಮಟ್ಟದ ಹಾಲು ನೀಡಿ, ಒಳ್ಳೆಯ ಲಾಭ ಪಡೆಯುವಂತೆ ಸಲಹೆ ನೀಡಿದರು.
ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆಂಕೆರೆ ಸತೀಶ್, ತುಮಕೂರು ಜಿಲ್ಲಾ ಕಾರ್ಯಾಧ್ಯಕ್ಷ ಕೆ.ಎಸ್.ಧನಂಜಯ ಆರಾಧ್ಯ, ಮಹಿಳಾ ಅಧ್ಯಕ್ಷೆ ಶಿವರತ್ನಮ್ಮ, ತಾಲೂಕು ಅಧ್ಯಕ್ಷ ನಾಗೇಂದ್ರ, ಸಣ್ಣದ್ಯಾಮೇಗೌಡ, ಮಲ್ಲಿಕಾರ್ಜುನಯ್ಯ, ಸಿದ್ದರಾಜು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
Comments are closed.