ವಿದ್ಯೆಗೆ ಸಮನಾದುದು ಯಾವುದೂ ಇಲ್ಲ: ಕೆಎನ್ಆರ್

90

Get real time updates directly on you device, subscribe now.


ಮಧುಗಿರಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರಥಮ ವರ್ಷದ ಪದವಿಯ ವಿದ್ಯಾರ್ಥಿಗಳಿಗೆ ಲ್ಯಾಪ್ ಟ್ಯಾಪ್ ವಿತರಿಸುವ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು, ಸರ್ಕಾರ ನೀಡದಿದ್ದಲ್ಲಿ ನನ್ನ ಕ್ಷೇತ್ರದಲ್ಲಿ ನನ್ನ ಸ್ವಂತ ಖರ್ಚಿನಿಂದ ನೀಡಲಾಗುವುದು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಪ್ರೊ.ಮುನೀಂದ್ರ ಕುಮಾರ್ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಬ್ದುಲ್ ಕಲಾಂರವರ ಮಾತಿನಂತೆ ಯುವಕರು ಕನಸು ಕಂಡು ಗುರಿ ತಲುಪಿದಾಗ ಮಾತ್ರ ಯಶಸ್ಸು ಸಾಧ್ಯ, ಕಾಲೇಜಿನಲ್ಲಿ ಮಕ್ಕಳು ಶಿಸ್ತು ಬದ್ದವಾಗಿ ಇದ್ದಾಗ ಮಾತ್ರ ಅಕ್ಷರ ಜ್ಞಾನ ಒಲಿಯಲಿದೆ, ಮನುಷ್ಯರಾಗಿ ಹುಟ್ಟಿದ ಮೇಲೆ ಏನಾದರೂ ಸಾಧಿಸಬೇಕು, ವಿದ್ಯೆಯನ್ನು ಶ್ರದ್ಧೆಯಿಂದ ಅಭ್ಯಾಸ ಮಾಡಿದವರಿಗೆ ಮಾತ್ರ ಸರಸ್ವತಿ ಒಲಿಯುತ್ತಾಳೆ, ವಿದ್ಯೆ ಸಾಧಕರ ಸ್ವತ್ತೇ ಹೊರತು ಸೋಮಾರಿಗಳ ಸ್ವತ್ತಲ್ಲ, ಹಳ್ಳಿಗಾಡಿನ ಮಕ್ಕಳಲ್ಲೂ ಪ್ರತಿಭೆಯಿದೆ, ಕೀಳರಿಮೆ ತೊರೆದಾಗ ಮಾತ್ರ ಯಶಸ್ಸು ದೊರೆಯಲಿದೆ, ಕಲಿಕೆಗೆ ಅಂತ್ಯವಿಲ್ಲ, ಎಲ್ಲಾ ಜಾತಿಯ ಬಡವರು ವಿದ್ಯಾವಂತರಾದಾಗ ಮಾತ್ರ ಬಡತನ ಅಂತ್ಯವಾಗಲಿದೆ, ವಿದ್ಯೆಗೆ ಸಮನಾದ ವಸ್ತು ಪ್ರಪಂಚದಲ್ಲಿ ಯಾವುದೂ ಇಲ್ಲ. ವಿದ್ಯಾಭ್ಯಾಸಕ್ಕೆ ಏನೇ ತೊಂದರೆಗಳಿದ್ದರೂ ನನ್ನನ್ನು ಸಂಪರ್ಕಿಸಿ, ಎಷ್ಟೇ ಜನ ವಿದ್ಯಾರ್ಥಿಗಳಾದರೂ ನಾನು ನನ್ನ ಸ್ವಂತ ಖರ್ಚಿನಲ್ಲಿ ಶಿಕ್ಷಣದ ವೆಚ್ಚ ಭರಿಸುತ್ತೇನೆ, ಶಿಕ್ಷಣಕ್ಕಾಗಿ ನಾನು ನಿಮ್ಮ ನೆರವಿಗೆ ಧಾವಿಸುತ್ತೇನೆ ಎಂದು ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು.

ಹುಟ್ಟು ಸಾವು ಸಹ ಆಕಸ್ಮಿಕ, ಹುಟ್ಟು ಸಾವುಗಳ ನಡುವೆ ನಾವು ಬಿಟ್ಟು ಹೋಗುವ ಹೆಜ್ಜೆ ಗುರುತುಗಳು ನಮ್ಮ ನಂತರವೂ ಜನತೆ ಸ್ಮರಿಸಬೇಕು, ಮನುಷ್ಯ ದೇಶದ, ಸಂಸ್ಕೃತಿಯ ಇತಿಹಾಸ ತಿಳಿದಾಗ ಮಾತ್ರ ಇತಿಹಾಸ ಸೃಷ್ಟಿಸಲು ಸಾಧ್ಯ, ಇತಿಹಾಸ ತಿಳಿಯದವರು ಇತಿಹಾಸ ಸೃಷ್ಟಿಸಲಾರರು, ಪೋಷಕರು ಮಕ್ಕಳಿಗೆ ಜೀವ ನೀಡಿದರೆ, ಶಿಕ್ಷಕರು ಜೀವನ ನೀಡುತ್ತಾರೆ, ಇದೊಂದು ಪುಣ್ಯದ ಕೆಲಸ, ಕಾಲೇಜಿನಲ್ಲಿ ವ್ಯಾಸಂಗ ಮಾಡುವ ಮಕ್ಕಳೆಲ್ಲರೂ ನನ್ನ ಮಕ್ಕಳೇ ಎಂದು ಭಾವಿಸಿಕೊಂಡು ಶಿಕ್ಷಣ ನೀಡಿದವರು ಪ್ರೊ.ಮುನೀಂದ್ರ ಕುಮಾರ್, ಇಂತಹ ಪ್ರಾಧ್ಯಾಪಕರು ಬಹಳ ವಿರಳ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪಾವಗಡ ತಾಲೂಕಿನ ನಿಡಗಲ್ ಸಂಸ್ಥಾನ ಮಹರ್ಷಿ ವಾಲ್ಮೀಕಿ ಆಶ್ರಮದ ಪೀಠಾಧ್ಯಕ್ಷ ಸಂಜಯ್ ಕುಮಾರ್ ಸ್ವಾಮಿಜಿ ಮಾತನಾಡಿ, ದೇಶಕ್ಕೆ ಉತ್ತಮ ವಿದ್ಯಾರ್ಥಿಯನ್ನು ನೀಡಲು ಶಿಕ್ಷಕರಿಂದ ಮಾತ್ರ ಸಾಧ್ಯ, ಎಲ್ಲರನ್ನೂ ಪ್ರೀತಿಸುವ ಗೌರವಿಸುವ ಕೆಲಸ ಎಲ್ಲರಿಗೂ ಸಾಧ್ಯವಿಲ್ಲ, ವೃತ್ತಿಗೆ ನಿವೃತ್ತಿಯಿದೆ, ಬರವಣಿಗೆಗೆ, ಸಾಹಿತ್ಯಕ್ಕೆ, ಜ್ಞಾನಕ್ಕೆ ನಿವೃತ್ತಿಯಿಲ್ಲ, ತಮ್ಮ ಜೀವನದುದ್ದಕ್ಕೂ ಶ್ರೇಷ್ಠತೆಯ ಕಾರ್ಯ ನಿರ್ವಹಿಸಿ ವೃತ್ತಿಯಿಂದ ನಿವೃತ್ತರಾಗುತ್ತಿರುವ ಪ್ರೊ.ಮುನೀಂದ್ರ ಕುಮಾರ್ ಅವರ ಸೇವೆ ಶ್ಲಾಘನೀಯ ಎಂದರು.

ಅಭಿನಂದನೆ ಸ್ವೀಕರಿಸಿ ಪ್ರೊ.ಮುನೀಂದ್ರ ಕುಮಾರ್ ಮಾತನಾಡಿ, ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 19 ವರ್ಷಗಳ ಕಾಲ ಅಧ್ಯಾಪಕನಾಗಿ, ಪ್ರಾಂಶುಪಾಲನಾಗಿ ಸೇವೆ ಸಲ್ಲಿಸಿ ನನ್ನ ಋಣಭಾರ ತೀರಿಸಿದ್ದೇನೆ ಎಂದರು.

ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಸದಸ್ಯ ಎಂ.ಎಸ್.ಮಲ್ಲಿಕಾರ್ಜುನಯ್ಯ, ಪುರಸಭೆ ಮಾಜಿ ಅಧ್ಯಕ್ಷ ಎಂ.ಕೆ.ನಂಜುಂಡಯ್ಯ, ತಿಮ್ಮರಾಯಪ್ಪ, ಬಿಇಓ ಹನುಮಂತರಾಯಪ್ಪ, ಪ್ರಧಾನ ಭಾಷಣಕಾರ ಡಾ.ಕರಿಯಪ್ಪ ಮಾಳಗಿ, ಕೆ.ಸಿ.ಬಸವರಾಜ, ಎನ್.ಮಹಾಲಿಂಗೇಶ್, ಉಮಾ ಮುನೀಂದ್ರ ಕುಮಾರ್, ಡಿವೈಎಸ್ಪಿ ರಾಮಚಂದ್ರ, ಹಿರಿಯ ಸಾಹಿತಿ ಪ್ರೊ.ಮ.ಲನ.ಮೂರ್ತಿ ಇನ್ನಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!