ತುಮಕೂರು: ವಿಶ್ವದ ಅತ್ಯಂತ ಶ್ರೀಮಂತ ಸಂಸ್ಕೃತಿ ಮತ್ತು ಇತಿಹಾಸ ನಾಗರಿಕತೆ ಹೊಂದಿರುವ ದೇಶದಲ್ಲಿ ಜನಿಸಿರುವ ನಾವು, ಜೀವನದಲ್ಲಿ ಎದುರಾಗುವ ಸವಾಲುಗಳಿಗೆ ಕುಗ್ಗದೆ ನಿಶ್ಚಿತ ಗುರಿ ತಲುಪಬೇಕು ಎಂದು ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಕೊರಟಗೆರೆಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನೆ ಯುವ ರೆಡ್ ಕ್ರಾಸ್ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹರಪ್ಪ ಮತ್ತು ಮಹಂಜೋದಾರೋ ನಾಗರಿಕತೆ ವಿಶ್ವದ ಅತ್ಯಂತ ಹಳೆಯ ಶ್ರೀಮಂತ ನಾಗರಿಕತೆಯಾಗಿದೆ, ಆಗಿನ ಕಾಲದಲ್ಲಿಯೇ ಕೃಷಿ ಪದ್ಧತಿ, ಹೈನುಗಾರಿಕೆ, ಬಂಗಾರದಿಂದ ಒಡವೆ, ವಸ್ತ್ರಗಳನ್ನು ತಯಾರಿಸುವ ಕೌಶಲ್ಯ ಹೊಂದಿದ್ದರು, ಸುಸಜ್ಜಿತ ನಗರಗಳ ನಿರ್ಮಾಣ, ಚರಂಡಿ ವ್ಯವಸ್ಥೆ, ದವಸ ಧಾನ್ಯಗಳ ಸಂಗ್ರಹಣೆ ಪದ್ಧತಿ ಮಾಡುತ್ತಿದ್ದರು, ಇಂತಹ ವೈಶಿಷ್ಟ್ಯ ಪೂರ್ಣ ನಾಗರಿಕತೆ ಹೊಂದಿರುವ ನಾವು ವಿಶ್ವಕ್ಕೆ ಮಾದರಿಯಾಗಿ ಬಾಳಬೇಕು ಎಂದು ಹೇಳಿದರು.
ಹಳ್ಳಿಯಿಂದ ಒಗ್ಗೂಡಿದ ದೇಶ ನಮ್ಮದು, ನಗರದ ವಿದ್ಯಾರ್ಥಿಗಳಿಗೆ ಹೋಲಿಸಿಕೊಂಡು, ಕಲಿಕೆಯಲ್ಲಿ ಹಿಂದುಳಿಯುವುದು ಬೇಡ, ನಮ್ಮ ಜಿಲ್ಲಾಧಿಕಾರಿ, ಪೊಲೀಸ್ ಅಧೀಕ್ಷಕರು, ತಹಶೀಲ್ದಾರ್ ಸೇರಿದಂತೆ ಬಹುತೇಕ ಅಧಿಕಾರಿಗಳು ಸರ್ಕಾರಿ ಶಾಲೆಗಳಲ್ಲೇ ಕಲಿತವರಿದ್ದಾರೆ, ನಾನು ಸಹ ಹಳ್ಳಿಯಲ್ಲಿ ಬೆಳೆದು, ಸರ್ಕಾರಿ ಶಾಲೆಯಲ್ಲಿ ಕಲಿತು ಈ ಹಂತ ತಲುಪಿದ್ದೇನೆ, ಕೀಳರಿಮೆ ಬಿಟ್ಟು, ಸಂಕಲ್ಪ ಮಾಡಿ ವಿದ್ಯಾಭ್ಯಾಸದಲ್ಲಿ ತೊಡಗಿದರೆ ಯಶಸ್ಸು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.
ಶೂನ್ಯ ಅಂಕಿ ಕಂಡು ಹಿಡಿದವರು ಭಾರತೀಯರು, ಶೂನ್ಯದ ಮಹತ್ವ ವಿಶ್ವಕ್ಕೆ ಪರಿಚಯಿಸಿದ್ದೇವೆ, ಇದು ಸಾಧ್ಯವಾಗದಿದ್ದರೆ ವಿಜ್ಞಾನ ಮತ್ತು ತಂತ್ರಜ್ಞಾನ ಈ ಮಟ್ಟಕ್ಕೆ ಬೆಳೆಯುತ್ತಿರಲಿಲ್ಲ, ವಿಶ್ವದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಭಾರತೀಯರ ಕೊಡುಗೆ ಬಹು ದೊಡ್ಡದು, ಬಲಿಷ್ಠ ರಾಷ್ಟ್ರಗಳಿಂದ ಚಂದ್ರಯಾನ ಯಶಸ್ವಿ ಸಾಧ್ಯವಾಗದಿರುವುದನ್ನು ನಮ್ಮ ದೇಶ ಸಾಧಿಸಿ ತೋರಿಸಿದೆ ಎಂದು ಹೇಳಿದರು.
ಕಂಪ್ಯೂಟರ್ ವ್ಯವಸ್ಥೆ: ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಬಿಸಿಎ ಪದವಿ ಆರಂಭಿಸಲಾಗಿದೆ, ಈ ವಿಭಾಗಕ್ಕೆ 10 ಕಂಪ್ಯೂಟರ್ ಗಳನ್ನು ಒದಗಿಸಲಾಗುವುದು, ಕಾಲೇಜಿನಲ್ಲಿ ಮಹಿಳಾ ವಿಶ್ರಾಂತಿ ಕೊಠಡಿ ನಿರ್ಮಿಸಲಾಗುತ್ತದೆ, ಕಾಲೇಜಿನಲ್ಲಿ ಇನ್ನಿತರ ಮೂಲಭೂತ ಸೌಲಭ್ಯ ಕಲ್ಪಿಸುವ ಇಚ್ಛೆ ಇದೆ, ಇದನ್ನು ಪಟ್ಟಿ ಮಾಡಿ ಅಂದಾಜು ವೆಚ್ಚ ನೀಡುವಂತೆ ಕಾಲೇಜಿನ ಮುಖ್ಯಸ್ಥರಿಗೆ ಸೂಚಿಸಿದರು.
ಕೊರಟಗೆರೆ ಪ್ರಥಮದರ್ಜೆ ಕಾಲೇಜಿನಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಎಂಕಾಂ ಸ್ನಾತಕೋತ್ತರ ಪದವಿ ತರಗತಿಯನ್ನು ಆರಂಭಿಸುವಂತೆ ತುಮಕೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ ನಾಹಿದಾ ಜಮ್ ಜಮ್ ಅವರಿಗೆ ಕರೆ ಮಾಡಿ ನಿರ್ದೇಶಿಸಿದರು, ಇದಕ್ಕೆ ರಿಜಿಸ್ಟ್ರಾರ್ ನಾಹಿದಾ ಜಮ್ ಜಮ್ ಒಪ್ಪಿಗೆ ಸೂಚಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶ್ರೀನಿವಾಸ್, ಸಿಇಓ ಪ್ರಭು, ಪೊಲೀಸ್ ವರಿಷ್ಠಾಧಿಕಾರಿ ಅಶೋಕ್, ತಹಶೀಲ್ದಾರ್ ಮಂಜುನಾಥ್, ಪ್ರಾಂಶುಪಾಲ ವೀರಪ್ಪ ನಾಯಕ್ ಹಾಜರಿದ್ದರು.
Comments are closed.