ಸದಾಶಿವ ಆಯೋಗದ ವರದಿ ಅಂಗೀಕರಿಸಿ

55

Get real time updates directly on you device, subscribe now.


ತುಮಕೂರು: ಬೆಳಗಾವಿಯಲ್ಲಿ ನಡೆಯುವ ಈ ವರ್ಷದ ಚಳಿಗಾಲದ ಅಧಿವೇಶನದಲ್ಲಿ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಅಂಗೀಕರಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು, ಸಂವಿಧಾನದ ಅನುಚ್ಚೇದ 341ಕ್ಕೆ ತಿದ್ದುಪಡಿ ತಂದು ಷೆಡ್ಯೂಲ್ 9ಕ್ಕೆ ಸೇರಿಸಬೇಕು ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.

ಜಿಲ್ಲಾಧಿಕಾರಿಗಳ ಕಚೇರಿ ಬಳಿ ಸಮಾವೇಶಗೊಂಡ ದಸಂಸ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಡಿಎಸ್ಎಸ್ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ, ಕಳೆದ ಮೂವತ್ತು ವರ್ಷಗಳಿಂದ ಒಳ ಮೀಸಲಾತಿಗಾಗಿ ಹೋರಾಟ ನಡೆಸುತಿದ್ದರೂ ಆಡಳಿತ ನಡೆಸಿದ ಸರಕಾರಗಳು ಒಳ ಮೀಸಲಾತಿ ವಿಚಾರ ಕಡೆಗಣಿಸಿವೆ, ಎಸ್.ಎಂ.ಕೃಷ್ಣ ಸರಕಾರದಲ್ಲಿ ನೇಮಕವಾಗಿದ್ದ ನ್ಯಾ.ಎ.ಜೆ.ಸದಾಶಿವ ಆಯೋಗ 2011ರಲ್ಲಿ ವರದಿ ನೀಡಿದ್ದರೂ ಇದುವರೆಗೂ ಸರಕಾರಗಳು ಸದರಿ ವರದಿಯನ್ನು ಸದನದಲ್ಲಿ ಮಂಡಿಸಿ ಕೇಂದ್ರಕ್ಕೆ ಶಿಫಾರಸ್ಸು ಕಳುಹಿಸುವ ಕೆಲಸ ಮಾಡಿಲ್ಲ, ಚುನಾವಣಾ ಸಂದರ್ಭದಲ್ಲಿ ಈ ವಿಚಾರವನ್ನು ಮುನ್ನೆಲೆಗೆ ತಂದು ಮತ ಪಡೆದು, ನಂತರ ಅದರ ಬಗ್ಗೆ ಮಾತನಾಡಲು ಸರಕಾರಗಳು ಹಿಂಜರಿಯುತ್ತಿವೆ, ಪರಿಶಿಷ್ಟ ಜಾತಿ ಪಟ್ಟಿಯಲ್ಲಿ 101 ಜಾತಿಗಳಲ್ಲಿ ಕೆಲವು ಜಾತಿಗಳು ಇಂದಿಗೂ ಮೀಸಲಾತಿಯ ಮುಖ ನೋಡಿ, ಶಿಕ್ಷಣವೆಂಬುದು ಮರೀಚಿಕೆಯಾಗಿದೆ, ಹಾಗಾಗಿ ಸರಕಾರ ಈ ವರ್ಷದ ಚಳಿಗಾಲದ ಅಧಿವೇಶದಲ್ಲಿ ಮಂಡಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕೆಂದು ಆಗ್ರಹಿಸಿದರು.

ರಾಜ್ಯ ಸರಕಾರ 2022ರಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಇದ್ದ ಶೇ.18ರ ಮೀಸಲಾತಿಯನ್ನು ಶೇ.24ಕ್ಕೆ ಹೆಚ್ಚಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡಿದೆ, ಆದರೆ ಇದುವರೆಗೂ ಕೇಂದ್ರ ಸರಕಾರ ಅದನ್ನು ಸಂವಿಧಾನದ 9ನೇ ಷಡ್ಯೂಲ್ ಗೆ ಸೇರಿಸುವ ಪ್ರಕ್ರಿಯೆ ಮಾಡಿಲ್ಲ, ಉಷಾಮೆಹ್ರಾ ಸಮಿತಿ ನೀಡಿದ ವರದಿಯಂತೆ ಕೇಂದ್ರ ಸರಕಾರ ಕೂಡಲೇ ಮೀಸಲಾತಿ ಹೆಚ್ಚಳವನ್ನು ಸಂವಿಧಾನದ 9 ಷೆಡ್ಯೂಲ್ ಗೆ ಸೇರಿಸಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದರು.

ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ವಿಂಗಡಿಸಬೇಕೆಂಬ ವಿಚಾರದಲ್ಲಿ ಏಳು ನ್ಯಾಯಾಧೀಶರ ಸಮಿತಿಯ ಮುಂದೆ ಸರಕಾರ ಬಲವಾಗಿ ವಾದ ಮಂಡಿಸಿ ಮೀಸಲಾತಿ ವರ್ಗೀಕರಣಕ್ಕೆ ಮುಂದಾಗಬೇಕು, ರಾಜ್ಯದ ಜನರ ಸ್ಥಿತಿಗತಿ ಅರಿಯುವ ಸಲುವಾಗಿ ನ್ಯಾಯವಾದಿ ಕಾಂತರಾಜ್ ವರದಿಯನ್ನು ಸದನದಲ್ಲಿ ಚರ್ಚಿಸಿ ಅಂಗೀಕರಿಸಿ, ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹಂಚಿಕೆ ಮಾಡಬೇಕೆಂದು ಒತ್ತಾಯಿಸಿದರು.

ಈ ಸಂಬಂಧ ಮನವಿ ಸಲ್ಲಿಸಲಾಯಿತು. ದಲಿತ ಮುಖಂಡರಾದ ಹಬ್ಬತ್ತನಹಳ್ಳಿ ಶ್ರೀನಿವಾಸ್, ಪುಟ್ಟಸ್ವಾಮಿ, ಸುನೀಲ್, ಅಟ್ಟಯ್ಯ, ನಾಗೇಶ್.ಎ, ಗಂಗರಾಜು, ಮಧು.ಟಿ.ಎನ್, ಲಕ್ಷ್ಮಮ್ಮ, ಎಸ್.ಆರ್.ರಘು, ಪುಜಾ ಹನುಮಯ್ಯ, ಶಿವಣ್ಣ, ಚಂದ್ರಶೇಖರ್, ಗೌರಮ್ಮ, ಪುಟ್ಟಸ್ವಾಮಿ, ದೊಡ್ಡಯ್ಯ, ಜಗದೀಶ್, ಸುಪ್ರೀಮ್ ಮಂಜುನಾಥ್ ಮತ್ತಿತತರು ಇದ್ದರು.

Get real time updates directly on you device, subscribe now.

Comments are closed.

error: Content is protected !!