ಗುಬ್ಬಿ: ಜಿಲ್ಲಾ ಪಂಚಾಯಿತಿ ಸದಸ್ಯರ ಅನುದಾನ ಕಡಿತಗೊಂಡ ಹಿನ್ನಲೆ ಅಭಿವೃದ್ಧಿ ಕೆಲಸಗಳಿಗೆ ಸಾಕಷ್ಟು ಹಿನ್ನಡೆಯಾಗಿತ್ತು. ಈ ಹಿನ್ನಲೆ ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿ ವಿಶೇಷ ಅನುದಾನ 7.15 ಕೋಟಿ ರೂ. ಮಂಜೂರು ಮಾಡಿಸಿ ಕಳೆದ 30 ವರ್ಷದಿಂದ ಮುಕ್ತಿ ಕಾಣದ ಗ್ರಾಮೀಣ ರಸ್ತೆಗಳಿಗೆ ಡಾಂಬರೀಕರಣ ಮಾಡಲಾಗುತ್ತಿದೆ ಎಂದು ಜಿಪಂ ಸದಸ್ಯೆ ಡಾ.ನವ್ಯಾಬಾಬು ತಿಳಿಸಿದರು.
ತಾಲ್ಲೂಕಿನ ಕಸಬ ಹೋಬಳಿ ನಡುವಲಪಾಳ್ಯ ಗ್ರಾಮದಲ್ಲಿ 20 ಲಕ್ಷ ರೂ. ಗಳ ಸಿಸಿ ರಸ್ತೆಗೆ ಚಾಲನೆ ನೀಡಿ ಮಾತನಾಡಿ, ಕೊರೋನಾ ಮತ್ತು ನೆರೆಹಾವಳಿ ಹೊಡೆತದಲ್ಲಿ ಸರ್ಕಾರ ಆರ್ಥಿಕ ಸಂಕಷ್ಟ ಎದುರಿಸಿತ್ತು. ಈ ಸಂದರ್ಭದಲ್ಲಿ ಜಿಪಂ ಸದಸ್ಯರ ಅನುದಾನ ಕೂಡಾ ಹೆಚ್ಚುವರಿ ಮಾಡುವುದನ್ನು ತಡೆ ಹಿಡಿಯಲಾಗಿತ್ತು. ಪರಿಸ್ಥಿತಿ ಅರಿತು ಮುಖ್ಯಮಂತ್ರಿಗಳ ಬಳಿ ತೆರಳಿ ವಾಸ್ತವ ಸ್ಥಿತಿ ವಿವರಿಸಿ ವಿಶೇಷ ಅನುದಾನ ತಂದಿರುವುದಾಗಿ ತಿಳಿಸಿದರು.
ಸಾಕಷ್ಟು ತೊಂದರೆ ಎದುರಿಸಿದ್ದ ಗ್ರಾಮಗಳ ಪಟ್ಟಿ ತಯಾರಿಸಿಕೊಂಡು ರಸ್ತೆ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಿ ಕೆಲಸ ಮಾಡಲಾಗುತ್ತಿದೆ, ಹೇಮಾವತಿ ನೀರು ಹರಿದು ವರ್ಷದ ನಾಲ್ಕು ತಿಂಗಳ ರಸ್ತೆ ಇಲ್ಲದಂತಾಗುತ್ತಿದ್ದ ಬೆಣಚಿಗೆರೆ ಹಾರನಹಳ್ಳಿ ಮಧ್ಯೆ ಇರುವ ರಸ್ತೆ ಅಭಿವೃದ್ಧಿ ಪಡಿಸಿ ಜನರ ಓಡಾಟಕ್ಕೆ ಅನುವು ಮಾಡಲಾಗಿದೆ, ಮೊದಲ ಹಂತದ ಕೆಲಸ ಚಾಲನೆಯಲ್ಲಿದೆ. ಎರಡನೇ ಪಟ್ಟಿಯ ಗ್ರಾಮಗಳಿಗೆ ಉಪಚುನಾವಣೆ ನಂತರ ಕಾಮಗಾರಿ ಆರಂಭಿಸಲಾಗುವುದು ಎಂದ ಅವರು ವಿಶೇಷ ಅನುದಾನ ತರುವಲ್ಲಿ ಸಂಸದರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಸಹಕಾರ ಸಾಕಷ್ಟಿದೆ. ನಿಟ್ಟೂರು ಜಿಪಂ ಕ್ಷೇತ್ರದ ಮತದಾರರು ಬಿಜೆಪಿ ಸರ್ಕಾರಕ್ಕೆ ವಿಶೇಷ ಅಭಿನಂದನೆ ಸಲ್ಲಿಸುತ್ತಿದ್ದಾರೆ ಎಂದರು.
ಜಿಪಂ ಮಾಜಿ ಸದಸ್ಯ ಪಿ.ಬಿ.ಚಂದ್ರಶೇಖರಬಾಬು ಮಾತನಾಡಿ ನಡುವಲಪಾಳ್ಯ ಗ್ರಾಮದಲ್ಲಿ 20 ಲಕ್ಷ ರೂ. ಗಳ ಸಿಸಿ ರಸ್ತೆಗೆ ಚಾಲನೆ ನೀಡಿದ್ದು ಈ ಗ್ರಾಮದಲ್ಲೇ ಇನ್ನೂ ಮೂರು ರಸ್ತೆಗಳಿಗೆ ಕಾಂಕ್ರಿಟ್ ಹಾಕುವ ಕೆಲಸ ಶೀಘ್ರದಲ್ಲಿ ಆರಂಭವಾಗಲಿದೆ. ವಿಶೇಷ ಅನುದಾನದಿಂದ ಪುರ ಗ್ರಾಮ ಸಂಪೂರ್ಣ ಕಾಂಕ್ರಿಟ್ ರಸ್ತೆಯಾಗಿದೆ. ನಿಟ್ಟೂರು ಗ್ರಾಮದಲ್ಲಿ ಸಂತೇಮೈದಾನ, ಕೆಇಬಿ ರಸ್ತೆ ಅಭಿವೃದ್ಧಿ ಜತೆಗೆ ನಂದಿಹಳ್ಳಿ, ಅಂಬಾರಪುರ ಗ್ರಾಮದ ರಸ್ತೆಗೆ ಡಾಂಬಾರು ಹಾಕಲಾಗುತ್ತಿದೆ. ಕರೇಗೌಡನಹಳ್ಳಿ ರಸ್ತೆಗೆ 70 ಲಕ್ಷ ರೂ., ಎನ್.ಹೊಸಹಳ್ಳಿಯಿಂದ ಮತ್ತಿಕೆರೆ ಗ್ರಾಮದ 3 ಕಿ.ಮೀ ರಸ್ತೆಗೆ 1.80 ಕೋಟಿ ರೂ. ನೀಡಲಾಗಿದೆ. ಈ ಜೊತೆಗೆ ಕುಡಿಯುವ ನೀರಿನ ಘಟಕಗಳ ನಿರ್ವಹಣೆಯಲ್ಲಿ ವಿಫಲಗೊಂಡ ಸಂಸ್ಥೆ ಅಥವಾ ಕಂಪೆನಿಗಳಿಂದ ಸ್ಥಳೀಯ ಗ್ರಾಮ ಪಂಚಾಯಿತಿಗೆ ವಹಿಸುವ ಕೆಲಸ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಬಲರಾಮಯ್ಯ, ಗ್ರಾಪಂ ಸದಸ್ಯರಾದ ರೇಣುಕಪ್ಪ, ಶೋಭಾ, ಮುಖಂಡರಾದ ಲಕ್ಷ್ಮೀನರಸಯ್ಯ, ಸಿದ್ದಯ್ಯ, ಸುರೇಶ್, ರಾಮು ಇತರರು ಇದ್ದರು.
ಗ್ರಾಮೀಣ ರಸ್ತೆಗಳಿಗೆ ಡಾಂಬರೀಕರಣ
Get real time updates directly on you device, subscribe now.
Comments are closed.