ಕನಕದಾಸರು ಎಂದೆಂದಿಗೂ ಆದರ್ಶ ಪುರುಷ

ಕೀರ್ತನೆಗಳಲ್ಲಿನ ಮೌಲ್ಯ ಅಳವಡಿಸಿಕೊಳ್ಳಿ: ಡಾ.ಜಿ ಪರಮೇಶ್ವರ್

88

Get real time updates directly on you device, subscribe now.


ತುಮಕೂರು: ಜಾತಿ ವ್ಯವಸ್ಥೆ ಈ ದೇಶದ ದೌರ್ಭಾಗ್ಯ. ಈ ವ್ಯವಸ್ಥೆಯನ್ನು ತೊಡೆದು ಹಾಕಲು ಅನೇಕ ಪ್ರಯತ್ನಗಳು ನಡೆದಿದ್ದರೂ ಸಹ ಜಾತಿ ವ್ಯವಸ್ಥೆ ನಿರ್ಮೂಲನೆಯಾಗಿಲ್ಲ.
ಸುಮಾರು 536 ವರ್ಷಗಳ ಹಿಂದೆಯೇ ಸಂತ ಶ್ರೇಷ್ಠ ಕನಕದಾಸರು ‘ಕುಲ ಕುಲ ಕುಲವೆಂದು ಹೊಡೆದಾಡಿದಿರಿ’ ಎಂಬ ಸಂದೇಶವನ್ನು ಇಡೀ ವಿಶ್ವಕ್ಕೆ ನೀಡಿದ್ದರು. ಸಂತ ಶ್ರೇಷ್ಠರ ಈ ಸಂದೇಶ ಇಂದಿಗೂ ಪ್ರಸ್ತುತ ಮತ್ತು ಇನ್ನೂ ಸಾವಿರ ವರ್ಷಕ್ಕೂ ಸಹ ಪ್ರಸ್ತುತವಾಗಿರುತ್ತದೆ ಎಂದು ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಅವರು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತುಮಕೂರು ಮಹಾನಗರ ಪಾಲಿಕೆ, ಕಾಳಿದಾಸ ವಿದ್ಯಾವರ್ಧಕ ಸಂಘ ಮತ್ತು ಜಿಲ್ಲೆಯ ಸಮಸ್ತ ಕುರುಬ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಗುಬ್ಬಿ ವೀರಣ್ಣ ಕಲಾಮಂದಿರದಲ್ಲಿ ಏರ್ಪಡಿಸಲಾಗಿದ್ದ ಸಂತ ಶ್ರೇಷ್ಠ ಕನಕದಾಸರ 536ನೇ ಜಯಂತ್ಯೋತ್ಸವವನ್ನು ಉದ್ಘಾಟಿಸಿ ಮಾತನಾಡಿ, ಈ ದೇಶದಲ್ಲಿ ಅನೇಕ ಸಂತರು ದಾರ್ಶನಿಕರು ಬಹಳ ಜನ ಹುಟ್ಟಿದ್ದಾರೆ. ಬಹಳ ಜನ ಅವರ ಆದರ್ಶಗಳನ್ನು ನಮಗೆ ಬಿಟ್ಟು ಹೋಗಿದ್ದಾರೆ. ನಮ್ಮ ಇತಿಹಾಸ 5 ಸಾವಿರ ವರ್ಷ ಎಂದು ಅಂದಾಜಿಸಬಹುದಾಗಿದೆ.
5 ಸಾವಿರ ವರ್ಷಗಳ ಇತಿಹಾಸದಲ್ಲಿ ಮನುಷ್ಯ ಹೇಗೆ ಬಾಳಿದ್ದ ಎಂಬುದನ್ನು ನಾವು ವಿಶ್ಲೇಷಣೆ ಮಾಡಿ ನೋಡಬೇಕಾಗುತ್ತದೆ. ಒಂದೊಂದು ಕಾಲಘಟ್ಟದಲ್ಲೂ ಕೂಡ ಒಬ್ಬೊಬ್ಬರು ದಾರ್ಶನಿಕರು ಹುಟ್ಟಿ ಅವರ ಅನಿಸಿಕೆಗಳನ್ನ ಬಿಟ್ಟು ಹೋಗಿದ್ದಾರೆ. ಇದೇ ನಮ್ಮಗಳಿಗೆ ಆದರ್ಶವಾಗಿದೆ. 2500 ವರ್ಷಗಳ ಹಿಂದೆ ಭಗವಾನ್ ಬುದ್ಧ ಈ ದೇಶದಲ್ಲಿ ಹುಟ್ಟುತ್ತಾನೆ. ಮನುಷ್ಯ ಮನುಷ್ಯನಲ್ಲಿ ವ್ಯತ್ಯಾಸವಿರಬಾರದು, ಎಲ್ಲ ಮಾನವರು ಒಂದೇ, ಅಸಮಾನತೆ ಇರಬಾರದು, ಆಸೆಯೇ ದುಃಖಕ್ಕೆ ಮೂಲ ಎಂಬ ಸಂದೇಶವನ್ನು ಭಗವಾನ್ ಬುದ್ಧ ಬಿಟ್ಟು ಹೋಗುತ್ತಾರೆ.
ಆಸೆಯಿಂದಲೇ ದುಃಖ ಬರುತ್ತದೆ ಎಂಬುದನ್ನು ಭಗವಾನ್ ಬುದ್ಧ ಹೇಳಿ ಹೋಗಿದ್ದಾರೆ. ವಿಶ್ವಕ್ಕೆ ಕೊಟ್ಟಂತಹ ಈ ಸಂದೇಶ ಇಂದಿಗೂ ಪ್ರಸ್ತುತ ಎಂದು ಅವರು ತಿಳಿಸಿದರು.

ತದನಂತರದಲ್ಲಿ ಅನೇಕ ಜನ ಬಂದು ಹೋಗಿದ್ದಾರೆ, ಕರ್ನಾಟಕದಲ್ಲಿ ಹೇಳಬೇಕೆಂದರೆ 830 ವರ್ಷಗಳ ಹಿಂದೆ ಬಸವಣ್ಣನವರು ಬ್ರಾಹ್ಮಣರಾಗಿ ಹುಟ್ಟುತ್ತಾರೆ. ಸಮಾಜದ ವರ್ಗೀಕರಣದಲ್ಲಿ ಬ್ರಾಹ್ಮಣರಾಗಿ ಹುಟ್ಟಿದಂತಹ ಬಸವಣ್ಣನವರು ಸಮಾಜದ ಅಸಮಾನತೆಯನ್ನು ತಡೆದುಕೊಳ್ಳಲಾರದೆ ತಾವೇ ಒಂದು ಒಂದು ವರ್ಗವನ್ನು ಹುಟ್ಟಿ ಹಾಕಿ ಸಮಾನತೆಯ ಸಂದೇಶವನ್ನು ಸಾರಿ ಹೋಗುತ್ತಾರೆ. ಇದು ಕೂಡ ಇಂದು ನಮಗೆ ಆದರ್ಶವಾಗಿದೆ ಎಂದರು.

ಹುಟ್ಟು ಆಕಸ್ಮಿಕ ಯಾರು ಸಹ ಕುರುಬ ಅಥವಾ ದಲಿತ ಸಮಯದ ಸಮಾಜದಲ್ಲಿ ಹುಟ್ಟಬೇಕು ಎಂದು ಅರ್ಜಿಯನ್ನು ಹಾಕಿಕೊಂಡು ಹುಟ್ಟುವುದಿಲ್ಲ. ಆದರೆ ಸಮಾಜದ ವರ್ಗೀಕರಣದ ವ್ಯವಸ್ಥೆಯ ಯಾವುದೋ ಒಂದು ಮೂಲೆಯಲ್ಲಿ ನಾವಿಂದು ಸಿಲುಕಿಕೊಂಡಿದ್ದೇವೆ. 536 ವರ್ಷಗಳ ಹಿಂದೆ ಕನಕದಾಸರು ಸಹ ಹೀಗೆ ಜನಿಸಿದ್ದರು. ಸಮಾಜದ ಅಂಕುಡೊಂಕುಗಳನ್ನು ಅರ್ಥೈಸಿಕೊಳ್ಳುವ ಬುದ್ಧಿವಂತಿಕೆ ಅವರಿಗೆ ಬಂದ ಮೇಲೆ ಅವರಿಗೆ ಅರ್ಥವಾಗುತ್ತದೆ ಈ ಸಮಾಜ ಅಸಮಾನತೆಯಿಂದ ಕೂಡಿದೆ ಎಂದು.
ಇಂದು ವಿಶ್ವಸಂಸ್ಥೆಯು ಕೂಡ ಕರಿಯ ಬಿಳಿಯ ಎಂಬ ಯಾವುದೇ ಅಸಮಾನತೆ ಇರಬಾರದು ಎಂಬ ನಿರ್ಣಯವನ್ನು ಕೈಗೊಂಡಿರುತ್ತದೆ. ಸುಪ್ರೀಂ ಕೋರ್ಟು ಶೇ. 50ರ ಮೇಲೆ ಮೀಸಲಾತಿ ನೀಡಬಾರದು ಎಂದು ಹೇಳಿದ್ದರೂ ಸಹ ಎಲ್ಲಾ ರಾಜ್ಯಗಳು ವರ್ಗೀಕರಣದ ವ್ಯವಸ್ಥೆಯ ಮೇರೆಗೆ ಮೀಸಲಾತಿಯ ಪ್ರಮಾಣವನ್ನು ಹೆಚ್ಚಿಸುತ್ತಲೇ ಹೋಗುತ್ತಿವೆ. ಸಮಾಜದಲ್ಲಿ ಅಸ್ತಿತ್ವದಲ್ಲಿರುವ ಈ ಜಾತಿಯ ವ್ಯವಸ್ಥೆ ಅಡಿ ಎಲ್ಲರಿಗೂ ಮೀಸಲಾತಿ ಬೇಕು ಎಲ್ಲರೂ ಮೀಸಲಾತಿ ಬಳಸಿಕೊಂಡು ಮೇಲೆ ಬರಬೇಕು ಎಂಬ ಪ್ರಯತ್ನ ಎಲ್ಲ ರಾಜ್ಯಗಳದ್ದಾಗಿದೆ ಎಂದರು.

ಒಂದು ಧರ್ಮ ಒಂದು ಜಾತಿ ವ್ಯವಸ್ಥೆ ಇರುವಂತಹ ದೇಶಗಳು ಇಂದು ಬಹಳಷ್ಟು ಮುಂದುವರೆದಿದೆ. ಆದರೆ ಭಾರತದಲ್ಲಿ ಜಾತಿಯ ವ್ಯವಸ್ಥೆ ಅಡಿ ಜನರು ನೋವನ್ನು ಸಹಿಸುತ್ತಲೇ ಇದ್ದಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಕನಕದಾಸರ ಇತಿಹಾಸದ ಬಗ್ಗೆ, ಸಾಹಿತ್ಯದ ಬಗ್ಗೆ ಚಿಂತನೆಗಳ ಬಗ್ಗೆ ಅನೇಕ ಸಾಹಿತಿಗಳು ವಿಶ್ಲೇಷಣೆ ಮಾಡಿದ್ದಾರೆ. ಕನಕದಾಸರ ಚರಿತ್ರೆ, ಅವರ ಹುಟ್ಟು, ಅವರು ಕೊಟ್ಟಂತಹ ಸಂದೇಶಗಳನ್ನು ಪಠ್ಯ ಪುಸ್ತಕಗಳಲ್ಲಿ ಕಾಣಬಹುದಾಗಿದೆ ಎಂದು ತಿಳಿಸಿದರು.
ನಾವೆಲ್ಲರೂ ಏಕೆ ಈ ಜಯಂತಿಯನ್ನು ಆಚರಿಸುತ್ತಿದ್ದೇವೆ ಎಂಬುದನ್ನು ಸರಿಯಾಗಿ ಅರ್ಥೈಸಿಕೊಂಡು ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಸಂದೇಶವನ್ನು ನೀಡುವಂತಾಗಬೇಕು ಎಂದು ತಿಳಿಸಿದರು.
ಪ್ರೊ.ನಾಗಭೂಷಣ್ ಬಗ್ಗನಡು ಅವರು ಕನಕದಾಸರ ಜೀವನ, ಅವರ ಚಿಂತನೆಗಳು ಮತ್ತು ತತ್ವಾದರ್ಶಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಪಾಲಿಕೆ ಆಯುಕ್ತೆ ಅಶ್ವಿಜ , ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಮಾಜಿ ಎಂಎಲ್ಸಿ ಹುಲಿ ನಾಯ್ಕರ್, ಪತ್ರಿಕೋದ್ಯಮಿ ನಾಗಣ್ಣ, ಕುರುಬ ಸಂಘದ ಅನೇಕ ಪದಾಧಿಕಾರಿಗಳು ಹಾಗೂ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!