ಗುಬ್ಬಿ: ಬಸವಾದಿ ಶರಣರ ತತ್ವ ಅಳವಡಿಸಿಕೊಂಡಿರುವ ಲಿಂಗಾಯತ ಧರ್ಮ ಕೇವಲ ಲಿಂಗಾಯಿತರಿಗೆ ಸೀಮಿತವಾಗಿಲ್ಲ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಉಪಾಧ್ಯಕ್ಷ ಶಂಕರ ಮಹಾದೇವ ಬೀದರಿ ತಿಳಿಸಿದರು.
ನಿಟ್ಟೂರು ಹೋಬಳಿ ಬಾಗೂರು ಗೇಟ್ ನ ಅನುಭವ ಮಂಟಪದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಮತ್ತು ತಾಲ್ಲೂಕು ಘಟಕಗಳ ವತಿಯಿಂದ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ, ಕುಮಾರೇಶ್ವರ ಸ್ವಾಮಿಗಳ ಜಯಂತಿ ಹಾಗೂ ಭೀಮಣ್ಣ ಖಂಡ್ರೆಯವರ ಜನ್ಮ ಶತಮಾನೋತ್ಸವ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಶರಣರು ಅರಿವನ್ನ ಬೆಳಕನ್ನು ನೀಡುವ ಮೂಲಕ ಸಮಾಜ ಕಟ್ಟುವ ಕೆಲಸ ಮಾಡಿದ್ದಾರೆ, ತ್ರಿವಿಧ ದಾಸೋಹದ ಪರಿಕಲ್ಪನೆ ನೀಡುವ ಮೂಲಕ ಎಲ್ಲಾ ಸಮುದಾಯಗಳಿಗೂ ಮಾದರಿ ಯಾಗಿದೆ ಎಂದರು.
ಧರ್ಮ ಗುರುಗಳು ಸಮಾಜವನ್ನು ಎಚ್ಚರಿಸುವ ಕೆಲಸ ಮಾಡುವ ಜೊತೆಗೆ ಸಂಸ್ಕೃತದ ಬದಲಾಗಿ ಜನ ಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ಮಂತ್ರೋಚ್ಚರಣೆ ಮಾಡುತ್ತಾ ಜನ ಸಾಮಾನ್ಯರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ನಟರಾಜ್ ಸಾಗರನಹಳ್ಳಿ ಮಾತನಾಡಿ, ವೀರಶೈವ ಲಿಂಗಾಯತರು ರಾಜ್ಯದಲ್ಲಿ ಬಹು ಸಂಖ್ಯಾತರಾಗಿದ್ದರೂ ಒಗ್ಗಟ್ಟಿನ ಕೊರತೆಯಿಂದಾಗಿ ಸೌಲಭ್ಯಗಳಿಂದ ವಂಚಿತವಾಗುತ್ತಿದೆ, ಸಮುದಾಯವು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಮಕ್ಕಳಲ್ಲಿ ಸಂಸ್ಕಾರ ಬೆಳೆಸಿ ಉತ್ತಮ ವ್ಯಕ್ತಿಗಳನ್ನಾಗಿ ಮಾಡಬೇಕಾದ ಜವಾಬ್ದಾರಿ ಸಮುದಾಯದ ಮೇಲಿದೆ ಎಂದ ಅವರು ಕೇಂದ್ರ ಸರ್ಕಾರವು ವೀರಶೈವ ಲಿಂಗಾಯತರನ್ನು ಓಬಿಸಿ ಪಟ್ಟಿಯಲ್ಲಿ ಸೇರಿಸುವ ಮೂಲಕ ನ್ಯಾಯ ಒದಗಿಸಿ ಕೊಡಬೇಕು ಎಂದು ಒತ್ತಾಯಿಸಿದರು.
ಬೆಟ್ಟದಹಳ್ಳಿ ಗವಿಮಠದ ಚಂದ್ರಶೇಖರ ಸ್ವಾಮೀಜಿ ಮಾತನಾಡಿ, ಸಮಾಜವು ತಂದೆ ತಾಯಿಗಳ ಸ್ಥಾನದಲ್ಲಿ ನಿಂತು ಗುರುಗಳಿಗೂ ಸಲಹೆ ನೀಡಲು ಸಾಧ್ಯವಿದೆ ಎಂದ ಅವರು ಒಳ ಪಂಗಡಗಳನ್ನು ಬಿಟ್ಟು ಒಗ್ಗಟ್ಟಿನಿಂದ ಇದ್ದಲ್ಲಿ ಸಮುದಾಯದ ಅಭಿವೃದ್ಧಿ ಸಾಧ್ಯವಾಗುವುದು ಎಂದು ತಿಳಿಸಿದರು.
ದೊಡ್ಡಗುಣಿ ಹಿರೇಮಠದ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಅಪರೂಪವಾಗಿರುವ ಮನುಷ್ಯ ಜನ್ಮದಲ್ಲಿ ಗ್ರಹಣ ಸ್ಮರಣ ಚಿಂತನ ಶಕ್ತಿ ರೂಢಿಸಿಕೊಂಡು ಸಮಾಜದಲ್ಲಿ ಬದುಕು ಕಟ್ಟಿಕೊಳ್ಳಬೇಕು ಎಂದ ಅವರು ಸಾರ್ಥಕ ಕೆಲಸ ಮಾಡುವ ಮೂಲಕ ಸಾವಿನ ನಂತರವೂ ಚಿರಾಯುವಾಗಿ ಉಳಿಯುವಂತಹ ಕಾರ್ಯಕ್ಕೆ ಸಮುದಾಯ ಮುನ್ನುಡಿ ಬರೆಯಬೇಕಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಮುದಾಯದ ಸಾಧಕರನ್ನು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ತೆವಡೇಹಳ್ಳಿ ಮಠದ ಚನ್ನಬಸವೇಶ್ವರ ಶಿವಾಚಾರ್ಯ ಸ್ವಾಮಿ, ಗೊಲ್ಲಹಳ್ಳಿ ಮಠದ ವಿಭವ ವಿದ್ಯಾಶಂಕರ ಸ್ವಾಮಿ, ಕೋಡಿಹಳ್ಳಿ ಮಠದ ಬಸವ ಭೃಂಗೀಶ್ವರ ಸ್ವಾಮಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷ ಮೋಹನ್ ಕುಮಾರ್ ಪಾಟೀಲ್, ಉಪಾಧ್ಯಕ್ಷ ಎಸ್.ಡಿ.ದಿಲೀಪ್ ಕುಮಾರ್, ಆರ್.ಬಿ.ಜಯಣ್ಣ, ಜಯದೇವ್, ರಾಜ್ಯ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಮುಕ್ತಾಂಬ ಬಸವರಾಜು, ತಾಲ್ಲೂಕು ಘಟಕದ ಅಧ್ಯಕ್ಷ ರಮೇಶ್, ಯುವ ಘಟಕದ ಅಧ್ಯಕ್ಷ ಯತೀಶ್, ಜಿಲ್ಲೆಯ ಎಲ್ಲಾ ತಾಲ್ಲೂಕು ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಸಮುದಾಯದ ಮುಖಂಡರು ಭಾಗವಹಿಸಿದ್ದರು.
Comments are closed.