ಬೆಳಗಾವಿಯಲ್ಲಿ ಉಪನ್ಯಾಸಕ ಧರಣಿಗೆ ನಿರ್ಧಾರ

76

Get real time updates directly on you device, subscribe now.


ತುಮಕೂರು: ರಾಜ್ಯದ 430 ಸರಕಾರಿ ಪದವಿ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಅತಿಥಿ ಉಪನ್ಯಾಸಕರು ತಮ್ಮ ಸೇವೆ ಖಾಯಂ ಗೊಳಿಸುವಂತೆ ಒತ್ತಾಯಿಸಿ ಕಳೆದ 9 ದಿನಗಳಿಂದ ತರಗತಿ ಬಹಿಷ್ಕರಿಸಿ ಧರಣಿ ನಡೆಸುತ್ತಿದ್ದರೂ ಸರಕಾರ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ, ಡಿಸೆಂಬರ್ 04 ರೊಳಗೆ ಸರಕಾರ ಸೂಕ್ತ ನಿರ್ಧಾರ ಕೈಗೊಳ್ಳದ್ದರೆ ಬೆಳಗಾವಿಯ ಸುವರ್ಣ ಸೌಧದ ಮುಂದೆ ಉಗ್ರ ಪ್ರತಿಭಟನೆ ನಡೆಸುವುದಾಗಿ ರಾಜ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಗಳ ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಡಾ.ಧರ್ಮವೀರ್.ಕೆ.ಹೆಚ್. ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಎರಡು ದಶಕಗಳಿಂದ ಅತಿಥಿ ಉಪನ್ಯಾಸಕರು ಸೇವಾ ಖಾಯಂಗಾಗಿ ಹೋರಾಟ ನಡೆಸುತ್ತಾ ಬಂದಿದ್ದಾರೆ, ಇದುವರೆಗೂ ಆಡಳಿತ ನಡೆಸಿದ ಸರಕಾರಗಳು ಕೇವಲ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಾ ಬಂದಿವೆ, 2021ರಲ್ಲಿ ಇದೇ ವಿಚಾರವಾಗಿ ಅತಿಥಿ ಉಪನ್ಯಾಸಕರು ಬೆಳಗಾವಿಯ ಸುವರ್ಣ ಸೌಧದ ಎದುರು ಪ್ರತಿಭಟನೆ ನಡೆಸುವ ವೇಳೆ ಅಂದಿನ ವಿರೋಧ ಪಕ್ಷದ ನಾಯಕರಾಗಿದ್ದ ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದನದಲ್ಲಿ ನಮ್ಮ ಪರವಾಗಿ ಮಾತನಾಡಿ, ಅತಿಥಿ ಉಪನ್ಯಾಸಕರ ಸೇವೆ ಖಾಯಂ ಗೊಳಿಸುವಂತೆ ಆಗ್ರಹಿಸಿದ್ದರು, ಆದರೆ ಈಗ ಅವರೇ ಮುಖ್ಯಮಂತ್ರಿಯಾಗಿದ್ದರೂ ಈ ವಿಚಾರವಾಗಿ ಚಕಾರ ಎತ್ತಿಲ್ಲ, ಕನಿಷ್ಠ ಸೌಜನ್ಯಕ್ಕೂ ಪ್ರತಿಭಟನಾಕಾರರನ್ನು ಭೇಟಿಯಾಗಿ ಮನವಿ ಪಡೆದಿಲ್ಲ ಎಂದು ಆರೋಪಿಸಿದರು.

ಅತಿಥಿ ಉಪನ್ಯಾಸಕರು, ಖಾಯಂ ಉಪನ್ಯಾಸಕರ ರೀತಿಯಲ್ಲಿಯೇ ಎಲ್ಲಾ ಕೆಲಸ ಮಾಡುತ್ತಿದ್ದೇವೆ, ವಾರದಲ್ಲಿ ಖಾಯಂ ಉಪನ್ಯಾಸಕರು 16 ಗಂಟೆ ಕೆಲಸ ಮಾಡಿದರೆ, ಅತಿಥಿ ಉಪನ್ಯಾಸಕರು 15 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದೇವೆ, ಪರೀಕ್ಷಾ ಮೇಲ್ವಿಚಾರಕರಾಗಿ, ಮೌಲ್ಯ ಮಾಪಕರಾಗಿ ಇಲಾಖೆ ನೀಡುವ ಎಲ್ಲಾ ಕೆಲಸಗಳನ್ನು ಲೋಪ ದೋಷವಿಲ್ಲದೆ ನಡೆಸಿಕೊಂಡು ಬರುತ್ತಿದ್ದರು, ವೇತನದಲ್ಲಿ ಅಜಗಜಾಂತರ ವ್ಯತ್ಯಾಸವಿದೆ, ನಮ್ಮನ್ನು ಜೀತದಾಳುಗಳಂತೆ ಇಲಾಖೆ ನಡೆಸಿಕೊಳ್ಳುತ್ತಿದೆ, ಕೆಲವೊಂದು ಕಡೆ ಪ್ರಾಂಶುಪಾಲರು ಹಾಗೂ ಖಾಯಂ ಸಿಬ್ಬಂದಿಯಿಂದ ಕಿರುಕುಳ ಅನುಭವಿಸುತ್ತಲೇ ನಾವುಗಳು ನಮ್ಮ ಕೆಲಸ ಮಾಡುತ್ತಿದ್ದೇವೆ, ಹೀಗಿದ್ದರೂ ಕಾನೂನು ತೊಡಕಿನ ನೆಪ ಹೇಳಿ ನಮ್ಮನ್ನು ಖಾಯಂ ಮಾಡಲು ಹಿಂದೇಟು ಹಾಕಲಾಗುತ್ತಿದೆ, ಇದು ಖಂಡನೀಯ, ಹಿಮಾಚಲ ಪ್ರದೇಶ ಇನ್ನಿತರ ರಾಜ್ಯಗಳಲ್ಲಿ ಕಾನೂನು ತೊಡಕು ನಿವಾರಿಸಿ ಅತಿಥಿ ಉಪನ್ಯಾಸಕರ ಸೇವೆ ಖಾಯಂ ಗೊಳಿಸಲಾಗಿದೆ, ಅದೇ ರೀತಿ ನಮ್ಮನ್ನು ಖಾಯಂಗೊಳಿಸಬೇಕೆಂಬುದು ನಮ್ಮಗಳ ಆಗ್ರಹವಾಗಿದೆ ಎಂದು ತಿಳಿಸಿದರು.

ಅತಿಥಿ ಉಪನ್ಯಾಸಕರ ಸಂಘದ ಕಾರ್ಯಾಧ್ಯಕ್ಷ ಡಾ.ಶಿವಣ್ಣ ತಿಮ್ಮಲಾಪುರ ಮಾತನಾಡಿ, ಈ ಹಿಂದೆ ಅರೆಕಾಲಿಕ ಉಪನ್ಯಾಸಕರು ಎಂದ ಇದ್ದ ಹೆಸರನ್ನು ಅತಿಥಿ ಎಂದು ಬದಲಾಯಿಸಿ ಶೋಷಣೆ ಮಾಡಲಾಗುತ್ತಿದೆ, ಸರಕಾರ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಪೌರಕಾರ್ಮಿಕರು, ಸಹಕಾರ ಇಲಾಖೆಯ ಸಿಬ್ಬಂದಿ ಹಾಗೂ ಗ್ರಾಮ ಪಂಚಾಯಿತಿ ನೌಕರರನ್ನು ಖಾಯಂಗೊಳಿಸಿದೆ, ಹಾಗೆಯೇ 2021ರ ನವೆಂಬರ್ 23 ರಂದು ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಮಾತನಾಡಿದಂತೆ ಕಾಲೇಜು ಶಿಕ್ಷಕರ ನೇಮಕಾತಿ ನಿಯಮಕ್ಕೆ ತಿದ್ದುಪಡಿ ತಂದು ರಾಜ್ಯದ 430 ಸರಕಾರಿ ಪದವಿ ಕಾಲೇಜುಗಳಲ್ಲಿ ದುಡಿಯುತ್ತಿರುವ ಅತಿಥಿ ಉಪನ್ಯಾಸಕರ ಸೇವೆ ಖಾಯಂಗೊಳಿಸುವ ಕೊಟ್ಟ ಮಾತನ್ನು ಸಿದ್ದರಾಮಯ್ಯ ಉಳಿಸಿಕೊಳ್ಳಲಿ ಎಂದು ಒತ್ತಾಯಿಸಿದರು.

ಸಂಘದ ಮಹಿಳಾ ಘಟಕದ ಉಪಾಧ್ಯಕ್ಷೆ ಡಾ.ಸವಿತ.ಕೆ. ಮಾತನಾಡಿ, ರಾಜ್ಯದ 430 ಸರಕಾರಿ ಪದವಿ ಕಾಲೇಜುಗಳಲ್ಲಿ ದುಡಿಯುತ್ತಿರುವ ಸುಮಾರು 14 ಸಾವಿರ ಅತಿಥಿ ಉಪನ್ಯಾಸಕರಲ್ಲಿ ಶೇ.50 ರಷ್ಟು ಮಹಿಳೆಯರಿದ್ದೇವೆ, ಖಾಯಂ ಶಿಕ್ಷಕರ ರೀತಿ ಕೆಲಸ ಮಾಡಿದರೂ ನಮಗೆ ಯಾವುದೇ ಸವಲತ್ತುಗಳಿಲ್ಲ, ಕಳೆದ 15- 20 ವರ್ಷಗಳಿಂದ ಅತಿ ಕಡಿಮೆ ಗೌರವ ಧನಕ್ಕೆ ದುಡಿಯುತ್ತಾ ಬಂದಿರುವ ಮಹಿಳೆಯರು ತಾಯ್ತನದ ಖರ್ಚು ಭರಿಸಲಾಗದೆ, ತಾಯ್ತನವನ್ನೇ ಮುಂದೂಡಿದ್ದೇವೆ, ಇದು ಒಂದು ರೀತಿಯಲ್ಲಿ ಅಧುನಿಕ ಜೀತ ಪದ್ಧತಿ, ಇದರಿಂದ ನಮಗೆ ಮುಕ್ತಿ ಸಿಗಬೇಕೆಂದರೆ ನಮ್ಮ ಸೇವೆಯನ್ನು ಖಾಯಂ ಮಾಡುವುದೊಂದೇ ದಾರಿ, ಸರಕಾರ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗದಿದ್ದರೆ ಹೋರಾಟ ತೀವ್ರಗೊಳ್ಳಲಿದೆ ಎಂದರು.

ಅತಿಥಿ ಉಪನ್ಯಾಸಕರ ಸಂಘದ ಕಾನೂನು ಸಲಹೆಗಾರ ಡಾ.ಹನುಮಂತರಾಯಪ್ಪ ಪಾಲಸಂದ್ರ, ಸದಸ್ಯರಾದ ಜಲಜಾಕ್ಷಿ, ಕಾರ್ಯದರ್ಶಿ ಡಾ.ಕುಮಾರ್.ಸಿ, ಗೌರವಾಧ್ಯಕ್ಷ ಡಾ.ಮಲ್ಲಿಕಾರ್ಜುನಯ್ಯ.ಎಂ.ಟಿ, ಖಜಾಂಚಿ ಕಾಂತರಾಜು, ಶಂಕರ್ ಹಾರೋಗೆರೆ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!