ಕುಣಿಗಲ್: 15ಲಕ್ಷ ಅಕೌಂಟ್ ಗೆ ಹಾಕುತ್ತೇವೆ ಎಂದು ನಾಮ ಹಾಕಿದ ಬಿಜೆಪಿ ಪಕ್ಷದ ರೀತಿಯಲ್ಲ ಕಾಂಗ್ರೆಸ್, ನುಡಿದಂತೆ ನಡೆದು ಐದು ಗ್ಯಾರಂಟಿಯನ್ನು ಕಾಂಗ್ರೆಸ್ ಪಕ್ಷ ನೀಡುತ್ತಿದೆ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದರು.
ಶನಿವಾರ ತಾಲೂಕಿನ ಹುಲಿಯೂರು ದುರ್ಗ ಹೋಬಳಿಯ ಡಿ.ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಜನರಿಂದ ಅಹವಾಲು ಸ್ವೀಕರಿಸಿ ಮಾತನಾಡಿ, ಹಿಂದಿನ ಬಿಜೆಪಿ ಸರ್ಕಾರದ ಪೊಳ್ಳು ಭರವಸೆ, ಮಿತಿ ಮೀರಿದ ಭ್ರಷ್ಟಾಚಾರದಿಂದ ನೊಂದು ಹೋಗಿದ್ದ ರಾಜ್ಯದ ಬಡ ರೈತರು, ಕೂಲಿ ಕಾರ್ಮಿಕರು, ಮಧ್ಯಮ ವರ್ಗದ ಜನರು ಬದಲಾವಣೆ ಬಯಸಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ, ಜನರ ನಂಬಿಕೆಗೆ ಧಕ್ಕೆ ಬಾರದ ಹಾಗೆ ಚುನಾವಣೆ ಪೂರ್ವದಲ್ಲಿ ನೀಡಿದ್ದ ಐದು ಗ್ಯಾರಂಟಿಯ ಪೈಕಿ ನಾಲ್ಕು ಗ್ಯಾರಂಟಿಯನ್ನು ಜನತೆಗೆ ತಲುಪಿಸಿದ್ದೇವೆ, ಇನ್ನೊಂದು ಗ್ಯಾರಂಟಿಯನ್ನು ಮುಂದಿನ ತಿಂಗಳಿನಲ್ಲಿ ನೀಡುತ್ತೇವೆ ಎಂದರು.
ತಾಲೂಕಿನಾದ್ಯಂತ ಬಗರ್ ಹುಕುಂ ರೈತರಿಗೆ ಜಮೀನು ನೀಡಲು ನಮೂನೆ 50.53 ರಲ್ಲಿ ಅರ್ಜಿ ಸಲ್ಲಿಸಿರುವವರಿಗೆ ಮೊದಲ ಆದ್ಯತೆ ಮೇರೆಗೆ ಜಾಗ ಗುರುತಿಸಿ ಕಂದಾಯ ಇಲಾಖೆ ದಾಖಲೆ ನಿರ್ವಹಣೆ 1-5 ಮಾಡುವಂತೆ ಸೂಚಿಸಿದ್ದು ಈಗಾಗಲೆ ಶೇ.40 ರಷ್ಟು ಆಗಿದೆ, ಇನ್ನೊಂದು ವರ್ಷದಲ್ಲಿ ಅರ್ಹ ರೈತರಿಗೆ ನೀಡಲು ಕ್ರಮ ಕೈಗೊಳ್ಳಲಾಗುವುದು, ನಂತರ ನಮೂನೆ 57ರಲ್ಲಿ ಅರ್ಜಿ ಸಲ್ಲಿಸಿರುವವರಿಗೆ ಭೂ ಮಂಜೂರಾತಿಗೆ ಕ್ರಮ ಕೈಗೊಳ್ಳಲಾಗುವುದು, ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಮಾರ್ಕೋನಹಳ್ಳಿ ಜಲಾಶಯದಿಂದ ಬಹುಗ್ರಾಮ ಕುಡಿಯುವ ನೀರು ಯೋಜನೆಯನ್ನು 416ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನ ಮಾಡಲಾಗುವುದು ಎಂದರು.
ಡಿ.ಹೊಸಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಅರ್ಹ ವಸತಿ ರಹಿತರಿಗೆ ನಿವೇಶನ ನೀಡಲು 40 ಎಕರೆ ಜಾಗ ಗುರುತಿಸಿದ್ದು, ಕುಣಿಗಲ್ ಪಟ್ಟಣದಲ್ಲಿ 25 ಎಕರೆ ಜಾಗ ಗುರುತಿಸಲಾಗಿದೆ, ಗೊಲ್ಲರಹಟ್ಟಿ ಗ್ರಾಮದಲ್ಲಿ ಚರಂಡಿ ಸೇರಿದಂತೆ ಸಿಸಿ ರಸ್ತೆ ನಿರ್ಮಾಣ ಶೀಘ್ರದಲ್ಲೆ ಕೈಗೆತ್ತಿಕೊಳ್ಳಲಾಗುವುದು, ಸರ್ಕಾರದ ಗ್ಯಾರಂಟಿ ಯೋಜನೆಯಿಂದ ವಂಚಿತರಾಗಿರುವ ಅರ್ಹ ಫಲಾನುಭವಿಗಳಿಗೆ ಈ ತಿಂಗಳಲ್ಲಿ ಗುರುತಿಸಿ ಸೌಲಭ್ಯ ನೀಡಲು ಕ್ರಮ ಕೈಗೊಳ್ಳಲಾಗುವುದು, ತಾಲೂಕಿನ ನೀರಾವರಿ ಸಮಸ್ಯೆಗೆ ಪರಿಹಾರವಾಗಿ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿಯನ್ನು ಚುನಾವಣೆ ಪೂರ್ವದಲ್ಲಿ ಡಿ.ಕೆ.ಶಿವ ಕುಮಾರ್ ತಾಲೂಕಿನ ಜನತೆಗೆ ನೀಡಿದ ಭರವಸೆ ಈಡೇರಿಸಲಾಗುವುದು, ಎಲ್ಲಾ ಅಗತ್ಯ ಪ್ರಕ್ರಿಯೆ ಪೂರ್ಣಗೊಂಡು ಟೆಂಡರ್ ಕರೆಯಲು ಸಿದ್ಧತೆ ನಡೆಸಲಾಗುತ್ತಿದೆ, ಯೋಜನೆ ಜಾರಿಗೊಂಡಲ್ಲಿ ತಾಲೂಕಿನ ಪಾಲಿನ ನೀರು ಪಡೆಯಲು ಸಹಕಾರಿಯಾಗುತ್ತದೆ ಎಂದರು.
ಶಾಸಕ ಡಾ.ರಂಗನಾಥ್ ಮಾತನಾಡಿ, ವಿರೋಧ ಪಕ್ಷಗಳ ಟೀಕೆಗಳ ನಡುವೆ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಗ್ಯಾರಂಟಿ ಯೋಜನೆಯನ್ನು ರಾಜ್ಯದ ಕೋಟ್ಯಾಂತರ ಮಹಿಳೆಯರು ಪಡೆಯುತ್ತಿದ್ದಾರೆ, ಸರ್ಕಾರದ ಇತರೆ ಯೋಜನೆಗಳು ಅನುಷ್ಠಾನಗೊಳ್ಳುತ್ತಿವೆ, ಕಾಂಗ್ರೆಸ್ ಸರ್ಕಾರದ ಸಾಧನೆಯನ್ನು ರಾಜ್ಯದ ಜನತೆ ಮೆಚ್ಚಿಕೊಂಡಿದ್ದಾರೆ, ಯೋಜನೆಯಿಂದ ವಂಚಿತರಾಗುವ ಅರ್ಹರಿಗೆ ಯೋಜನೆಯ ಸವಲತ್ತು ಒದಗಿಸಲು ಇಲಾಖಾಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು, ನಿರ್ಲಕ್ಷ್ಯ ಧೋರಣೆ ಬೇಡ ಎಂದರು.
ಗ್ರಾಪಂ ಅಧ್ಯಕ್ಷ ಹುಲ್ಲೂರಯ್ಯ, ಉಪಾಧ್ಯಕ್ಷೆ ಕಲಾವತಿ, ಸದಸ್ಯರಾದ ಹನುಮಂತ, ಗಿರೀಶ್, ಭಾಗ್ಯಮ್ಮ, ಮಹಾಲಿಂಗಪ್ಪ, ಉಮೇಶ, ನಾರಾಯಣ, ಪಿಡಿಒ ಮಧುಸೂಧನ್, ತಹಶೀಲ್ದಾರ್ ವಿಶ್ವನಾಥ, ತಾಪಂ ಇಒ ಜೋಸೆಫ್, ಪ್ರಮುಖರಾದ ವೆಂಕಟರಾಮು, ಸುಮತಿ, ಕೆಂಪರಾಜು ಇತರರು ಇದ್ದರು.
Comments are closed.