ಆಕರ್ಷಕ ಚಿತ್ತಾರ ಬಿಡಿಸಿ ಸಂಭ್ರಮಿಸಿದ ಮಕ್ಕಳು

ಎಸ್ಎಸ್ ಐಟಿಯಲ್ಲಿ ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆ- 5 ಸಾವಿರ ಮಕ್ಕಳು ಭಾಗಿ

64

Get real time updates directly on you device, subscribe now.


ತುಮಕೂರು: ಕೈಯಲ್ಲಿ ಕುಂಚ ಹಿಡಿದ ಮಕ್ಕಳು ತದೇಕಚಿತ್ತದಿಂದ ಬಿಳಿ ಹಾಳೆಯ ಮೇಲೆ ಬಣ್ಣ ಬಣ್ಣದ ಚಿತ್ತಾರ ಮೂಡಿಸುತ್ತಿದ್ದ ಪರಿ ನೋಡೋದೆ ಆನಂದ, ತಮಗೆ ಇಷ್ಟವಾದ ಚಿತ್ರ ಬಿಡಿಸಿ ಅದಕ್ಕೆ ಬಣ್ಣದ ರಂಗು ನೀಡುತ್ತಿದ್ದ ದೃಶ್ಯ ನೋಡುಗರನ್ನು ಸೆಳೆಯುವಂತಿತ್ತು, ಎತ್ತ ನೋಡಿದರೂ ಮಕ್ಕಳೇ, ಚಿತ್ರ ಬಿಡಿಸುತ್ತಿದ್ದ ಸಾವಿರಾರು ಮಕ್ಕಳ ಚಿತ್ರವೇ ಕಲಾವಿದನ ಕುಂಚದಲ್ಲಿ ಅರಳಿದ್ದರೆ ನಿಜಕ್ಕೂ ಅದ್ಭುತ ಎನಿಸುವಂತಿರುತ್ತಿತ್ತು.
ಇಂಥ ಮನಮೋಹಕ ದೃಶ್ಯ ಕಂಡು ಬಂದಿದ್ದು ತುಮಕೂರು ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾ ವಿದ್ಯಾಲಯದ ಆವರಣದಲ್ಲಿ, ಶಾಲಾ ಸಮವಸ್ತ್ರ ಧರಿಸಿ ಆವರಣದ ಹುಲ್ಲು ಹಾಸಿನ ಮೇಲೆ ಕುಳಿತು ಮಕ್ಕಳು ಚಿತ್ರ ಬಿಡಿಸುತ್ತಿದ್ದರೆ ಆಕಾಶದ ನಕ್ಷತ್ರಗಳೇ ಧರೆಗಿಳಿದಂತೆ ಭಾಸವಾಗುತ್ತಿತ್ತು, ಅಕ್ಕರೆಯ ಮಕ್ಕಳು ಬಹಳ ಉತ್ಸುಕರಾಗಿ ತಮಗೆ ನೀಡಿದ್ದ ವಿಷಯದ ಕುರಿತಾದ ಚಿತ್ರಗಳನ್ನು ಬಿಡಿಸಿದರು.
ಶಿಕ್ಷಣ ಭೀಷ್ಮ ಡಾ.ಹೆಚ್ ಎಂ.ಗಂಗಾಧರಯ್ಯನವರ ಸ್ಮರಣಾರ್ಥವಾಗಿ ಪ್ರತಿ ವರ್ಷದಂತೆ ಈ ಬಾರಿಯೂ ಶ್ರೀಸಿದ್ಧಾರ್ಥ ತಾಂತ್ರಿಕ ಮಹಾ ವಿದ್ಯಾಲಯದ ಆವರಣದಲ್ಲಿ ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಸ್ಪರ್ಧೆ ಆಯೋಜಿಸಲಾಗಿತ್ತು.

ತುಮಕೂರಿನ ರವೀಂದ್ರ ಕಲಾನಿಕೇತನ ಪ್ರಾಂಶುಪಾಲ ಕೆ.ಸಿ.ಎಸ್ ಪ್ರಸನ್ನ ಅವರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಂತರ ಮಾತನಾಡಿ, ಪ್ರತಿಯೊಬ್ಬ ಚಿತ್ರಕಾರನು ತನ್ನ ಕಲಾಕೃತಿಯ ಗುರುತಿಗೆ ಒಂದು ಗುರುತನ್ನು ಇಟ್ಟುಕೊಂಡಿರುತ್ತಾನೆ, ಅದೇ ರೀತಿ ನನ್ನ ಕಲಾಕೃತಿಯ ಗುರುತು ಮೀನಾಗಿದೆ, ಸಿದ್ಧಾರ್ಥ ಸಂಸ್ಥೆ ದೊಡ್ಡ ಆಲದ ಮರವಾಗಿ ಬೆಳೆದು ನಿಂತಿದೆ, ಆ ಆಲದಮರದ ಕೆಳಗೆ ಇಂದು ನಾವಿದ್ದೇವೆ, ಪ್ರತಿಯೊಬ್ಬ ಮಗುವೂ ತನ್ನ ಕಲಾಕೃತಿಯನ್ನು ಪೇಪರ್ ಅಥವಾ ಬೇರೆ ಮಾಧ್ಯಮದ ಮೂಲಕ ಚುರುಕಾಗಿ ಚೆಂದವಾಗಿ ಬಿಡಿಸುತ್ತಿವೆ, ಪ್ರತಿಯೊಂದು ಮಗುವಲ್ಲೂ ವಿಶೇಷ ಕಲೆ ಅಡಗಿರುತ್ತದೆ, ಕೆಲವು ಬಾರಿ ಮಕ್ಕಳು ಬಿಡಿಸಿದ ಕಲಾಕೃತಿಗಳಿಂದ ನಾವೂ ಕಲಿಯುತ್ತೇವೆ ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯೆಕನ್ನಿಕಾ ಪರಮೇಶ್ವರಿ ಮಾತನಾಡಿ, ಪ್ರತಿ ವರ್ಷ ಈ ಕಾರ್ಯಕ್ರಮ ಯಾವುದೇ ಅಡೆತಡೆ ಇಲ್ಲದೆ ನಡೆಯುತ್ತಾ ಬರುತ್ತಿದೆ, ವರ್ಷದಿಂದ ವರ್ಷಕ್ಕೆ ಹೆಚ್ಚು ಮಕ್ಕಳು ಆಗಮಿಸುತ್ತಿದ್ದಾರೆ, ಇಂದು 5000 ಸಾವಿರ ಮಕ್ಕಳು ಆಗಮಿಸಿರುವುದು ಹೆಚ್ಚು ಸಂತಸ ತಂದಿದೆ ಎಂದರು.

ಸಾಹೇ ವಿಶ್ವ ವಿದ್ಯಾಲಯದ ಉಪ ಕುಲಪತಿ ಡಾ. ಕೆ ಬಿ ಲಿಂಗೇಗೌಡ ಎಲ್ಲಾ ಮಕ್ಕಳಿಗೂ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀಸಿದ್ಧಾರ್ಥ ತಾಂತ್ತಿಕ ಮಹಾ ವಿದ್ಯಾಲಯದ ಪ್ರಾಂಶುಪಾಲ ಡಾ.ಎಂ.ಎಸ್.ರವಿಪ್ರಕಾಶ್ ಮಾತನಾಡಿ, ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ಆನಂದಿಸಲು ಸಿಗುವ ಇಂತಹ ಸಂದರ್ಭ ಸದಾ ಹರ್ಷ ತರುವಂಥದ್ದು ಎಂದರು.

ನಗರದ 50 ಕ್ಕೂ ಹೆಚ್ಚು ಶಾಲೆಗಳಿಂದ ಸುಮಾರು 5 ಸಾವಿರ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಪಾಲ್ಗೊಂಡಿದ್ದರು.
ಶ್ರೀ ಸಿದ್ಧಾರ್ಥ ತಾಂತ್ತಿಕ ಮಹಾ ವಿದ್ಯಾಲಯದ ಐ ಎಸ್ ಇ ವಿಭಾಗದ ಮುಖ್ಯಸ್ಥೆ ಮತ್ತು ಕಾರ್ಯಕ್ರಮದ ಮುಖ್ಯ ಸಂಯೋಜಕಿ ಡಾ.ಹೆಚ್.ಎಸ್.ಅನ್ನಪೂರ್ಣ, ಡೀನ್ ಡಾ.ರೇಣುಕಲತಾ.ಎಸ್, ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!