ತುಮಕೂರು: ಕನ್ನಡ ಭಾಷೆಯ ಸಮಗ್ರ ಅಧ್ಯಯನಕ್ಕೆ ವಿದ್ಯಾರ್ಥಿಗಳನ್ನು ಉಪನ್ಯಾಸಕರು ಪ್ರೇರೇಪಿಸಬೇಕು, ಪಠ್ಯದ ಜೊತೆಗೆ ಸಾಮಾಜಿಕ ಮೌಲ್ಯಗಳನ್ನು ವಿದ್ಯಾರ್ಥಿಗಳಿಗೆ ಬೋಧಿಸುವ ಮೂಲಕ ಅವರು ಜವಾಬ್ದಾರಿಯುತ ಪ್ರಜೆಗಳನ್ನು ರೂಪಿಸುವ ಅವಕಾಶ ಕನ್ನಡ ಉಪನ್ಯಾಸಕರಿಗೆ ಇರುತ್ತದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಗಂಗಾಧರ್ ಹೇಳಿದರು.
ಮಂಗಳವಾರ ನಗರದ ಎಂಪ್ರೆಸ್ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ, ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಕನ್ನಡ ಉಪನ್ಯಾಸಕರ ವೇದಿಕೆ ಆಶ್ರಯದಲ್ಲಿ ನಡೆದ ಕನ್ನಡ ಭಾಷಾ ವಿಷಯದ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಉಪನ್ಯಾಸಕರು ತಮ್ಮ ಬೋಧನಾ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕು, ವಿದ್ಯಾರ್ಥಿಗಳ ಜ್ಞಾನ ಮಟ್ಟ ತಿಳಿದು ಬೋಧನೆ ಮಾಡಬೇಕು ಎಂದು ಸಲಹೆ ಮಾಡಿದರು.
ವಿದ್ಯಾರ್ಥಿಗಳಿಗೆ ಪಠ್ಯ ವಿಷಯದ ಬೋಧನೆಗೆ ಸೀಮಿತವಾಗದೆ ಸಾಮಾಜಿಕ ಮೌಲ್ಯಗಳನ್ನು ಸಾರುವ ವಿಚಾರಗಳನ್ನು, ಸಮಾಜ ಸಾಧಕರ ಬದುಕಿನ ಆದರ್ಶಗಳನ್ನು ತಿಳಿಸಿ ಹೇಳಲು ಕನ್ನಡ ಉಪನ್ಯಾಸಕರಿಗೆ ಅವಕಾಶವಿದೆ, ಇಂತಹ ಅವಕಾಶ ಸಾರ್ಥಕ ಪಡಿಸಿಕೊಂಡು ಬೋಧಿಸಿದರೆ ವಿದ್ಯಾರ್ಥಿಗಳು ಜ್ಞಾನವಂತರು, ಸಾಮಾಜಿಕ ಜವಾಬ್ದಾರಿವಂತರಾಗಿ ರೂಪುಗೊಳ್ಳುತ್ತಾರೆ, ಅಂತಹ ಕಳಕಳಿ ಉಪನ್ಯಾಸಕರಿಗೆ ಇರಬೇಕು ಎಂದರು.
ಉಪನ್ಯಾಸಕರು ತಾವು ಮಾದರಿ ವ್ಯಕ್ತಿತ್ವ ರೂಪಿಸಿಕೊಂಡರೆ ವಿದ್ಯಾರ್ಥಿಗಳಿಗೆ ತಾವು ಬೋಧಿಸುವ ಪಾಠ, ತಿಳಿಸುವ ಆದರ್ಶ ವಿಚಾರಗಳು ಅವರಲ್ಲಿ ಹೆಚ್ಚು ಪರಿಣಾಮ ಬೀರುತ್ತದೆ, ಮುಂದಿನ ತಲೆಮಾರಿಗೆ ನೀವು ಆದರ್ಶ ವ್ಯಕ್ತಿಯಾಗಿ ಉಳಿಯಲು ಸಾಧ್ಯವಾಗುತ್ತದೆ ಎಂದು ಡಿಡಿಪಿಐ ಹೇಳಿದರು.
ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಪ್ರಭಾಕರ ರೆಡ್ಡಿ ಮಾತನಾಡಿ, ಇಲಾಖೆಯಲ್ಲಿ ಬದಲಾಗುತ್ತಿರುವ ಶಿಕ್ಷಣ ನೀತಿ, ನಿಯಮಗಳು, ಪರೀಕ್ಷಾ ಪದ್ಧತಿ ಬಗ್ಗೆ ಉಪನ್ಯಾಸಕರು ತಿಳುವಳಿಕೆ ಹೊಂದಬೇಕು, ಇಂತಹ ಕಾರ್ಯಾಗಾರಗಳಲ್ಲಿ ವಿಷಯ ಪರಿಣತರೊಂದಿಗೆ ಸಂವಾದ ನಡೆಸುವ ಮೂಲಕ ಅಂತಹ ಮಾಹಿತಿ ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕನ್ನಡ ಉಪನ್ಯಾಸಕರ ವೇದಿಕೆಯ ಅಧ್ಯಕ್ಷ ಹೆಚ್.ಗೋವಿಂದಯ್ಯ ಪ್ರಾಸ್ತಾವಿಕ ನುಡಿಗಳನ್ನಾಡಿ, ಶೈಕ್ಷಣಿಕ ಗುಣಮಟ್ಟ ಕಾಪಾಡಲು ಇಲಾಖೆಯಲ್ಲಿ ಆಗಿಂದಾಗ್ಗೆ ಬದಲಾವಣೆ ಆಗುತ್ತಿರುವ ಬೋಧನೆ, ಪರೀಕ್ಷಾ ಮಾದರಿ ಪದ್ಧತಿಗಳ ಬಗ್ಗೆ ಉಪನ್ಯಾಸಕರು ಕಡ್ಡಾಯವಾಗಿ ತಿಳಿಯಬೇಕು, ಪರೀಕ್ಷೆ ಪದ್ಧತಿ ಬಗ್ಗೆ ವಿದ್ಯಾರ್ಥಿಗಳಿಗೆ ಸಮರ್ಪಕ ಮಾಹಿತಿ ನೀಡಬೇಕು, ಪ್ರಶ್ನೆ ಪತ್ರಿಕೆ ಮಾದರಿ, ಅಂಕ ನೀಡುವ ಕ್ರಮದ ಬಗ್ಗೆ ಇಲಾಖೆಯ ಸುಧಾರಣಾ ನಿಯಮಗಳ ಬಗ್ಗೆಯೂ ತಿಳಿಯಲು ಇಂತಹ ಕಾರ್ಯಾಗಾರಗಳು ಉಪನ್ಯಾಸಕರಿಗೆ ಉಪಯೋಗವಾಗಲಿವೆ ಎಂದು ಹೇಳಿದರು.
ಎಂಪ್ರೆಸ್ ಬಾಲಕಿಯರ ಸ.ಪ.ಪೂ. ಕಾಲೇಜು ಪ್ರಾಂಶುಪಾಲ ಹೆಚ್.ಮಲ್ಲಯ್ಯ, ಪ್ರಾಂಶುಪಾಲರ ಸಂಘದ ಕಾರ್ಯದರ್ಶಿ ಚಂದ್ರಶೇಖರ ಆರಾಧ್ಯ, ಪ್ರಾಂಶುಪಾಲ ಚಂದ್ರಯ್ಯ, ನೇ.ರಂ.ನಾಗರಾಜು, ಎಸ್.ರವಿಕುಮಾರ್, ಉಪನ್ಯಾಸಕ ರಾಮಚಂದ್ರಯ್ಯ ಹಾಗೂ ಜಿಲ್ಲೆಯ ವಿವಿಧ ಕಾಲೇಜುಗಳ ಕನ್ನಡ ಉಪನ್ಯಾಸಕರು ಭಾಗವಹಿಸಿದ್ದರು. ನಂತರ ವಿಷಯ ಪರಿಣಿತ ಸಂಪನ್ಮೂಲ ವ್ಯಕ್ತಿಗಳು ವಿವಿಧ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.
Comments are closed.