ವಕೀಲರ ಮೇಲಿನ ಹಲ್ಲೆ ಖಂಡಿಸಿ ಆಕ್ರೋಶ

ನ್ಯಾಯಾಲಯ ಕಲಾಪ ಬಹಿಷ್ಕರಿಸಿ ವಕೀಲರ ಪ್ರತಿಭಟನೆ

80

Get real time updates directly on you device, subscribe now.


ಕುಣಿಗಲ್: ಚಿಕ್ಕಮಗಳೂರಿನಲ್ಲಿ ವಕೀಲರ ಮೇಲೆ ಹಲ್ಲೆ ಹಾಗೂ ಪ್ರಕರಣ ದಾಖಲು ಮಾಡಿರುವುದನ್ನು ವಿರೋಧಿಸಿ ತಾಲೂಕು ವಕೀಲರ ಸಂಘದ ನೇತೃತ್ವದಲ್ಲಿ ಪಟ್ಟಣದಲ್ಲಿ ವಕೀಲರು ನ್ಯಾಯಾಲಯ ಕಲಾಪಗಳಿಂದ ಹೊರಗುಳಿದು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ರಾಜ್ಯಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಸಂಘದ ಅಧ್ಯಕ್ಷ ಶಿವಪ್ರಸಾದ್ ನೇತೃತ್ವದಲ್ಲಿ ಕಲಾಪಗಳಿಂದ ಹೊರಗುಳಿದ ವಕೀಲರು, ನ್ಯಾಯಾಲಯ ಮುಖ್ಯದ್ವಾರದ ಬಳಿ ಪ್ರತಿಭಟನಾ ಸಭೆ ನಡೆಸಿದರು, ಸಭೆಯಲ್ಲಿ ಮಾತನಾಡಿದ ಹಿರಿಯ ವಕೀಲ ಕೆ.ಎಂ.ತಿಮ್ಮಪ್ಪ, ಪೊಲೀಸರ ಅವೈಜ್ಞಾನಿಕ ನಡೆ ಸಂವಿಧಾನ ಬಾಹಿರವಾಗಿದೆ, ಕೊಲೆ ಪ್ರಕರಣದ ಆರೋಪಿಗೆ ಪೊಲೀಸರೆ ಜಾಮೀನು ನೀಡುವ ಹೊಸ ವ್ಯವಸ್ಥೆ ರಾಜ್ಯದಲ್ಲಿ ಜಾರಿಯಾಗುವ ಮೂಲಕ ಸಂವಿಧಾನ, ಕಾನೂನು, ನ್ಯಾಯಲಯ ವಿರೋಧಿ ನಡೆಯಾಗಿದೆ, ಚಿಕ್ಕಮಗಳೂರು ಪೊಲೀಸ್ ಅಧಿಕಾರಿಗಳ ನಡೆ ಖಂಡನೀಯ ಎಂದರು.

ಪೊಲೀಸರನ್ನು ಎತ್ತಿಕಟ್ಟಿ ವಕೀಲರ ವಿರುದ್ಧ ಧರಣಿ ನಡೆಸುವ ಮಟ್ಟಕ್ಕೆ ನಡೆದುಕೊಂಡಿದ್ದಾರೆ, ನ್ಯಾಯಾಲಯದ ಪ್ರಕರಣಗಳನ್ನು ಪೊಲೀಸ್ ಠಾಣೆಯಲ್ಲಿ ಅಕ್ರಮವಾಗಿ ಇತ್ಯರ್ಥ ಮಾಡುತ್ತಾ ಕಾಸಿದ್ದವರಿಗೆ ನ್ಯಾಯ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಮಾಜಿ ಅಧ್ಯಕ್ಷ, ಹಿರಿಯ ವಕೀಲ ರಾಮಚಂದ್ರಯ್ಯಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪೊಲೀಸರು ಮೈಮೇಲೆ ದೆವ್ವ ಬಂದಂತೆ ಆಡುತ್ತಾರೆ, ಗ್ರಾಮಾಂತರ ಪ್ರದೇಶದಲ್ಲಿ ಮೈಮೇಲೆ ದೆವ್ವ ಬಂದವರಿಗೆ ಬಿಡಿಸಲು ಪೊರಕೆ ಪೂಜೆ ಮಾಡುತ್ತಾರೆ, ಸಾಲದೆ ಇದ್ದರೆ ಚಪ್ಪಲಿ ಪೂಜೆಯೂ ಮಾಡುತ್ತಾರೆ, ಹಾಗೇಯೆ ಇಂದು ಕಾನೂನು ಮೀರಿ ನಡೆದು ಕೊಳ್ಳುವ ಪೊಲೀಸ್ ಅಧಿಕಾರಿಗಳಿಗೆ ಜನತೆ ಪಾಠ ಕಲಿಸುವ ದಿನ ದೂರ ಇಲ್ಲ, ಪೊಲೀಸರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು, ಇಲ್ಲವಾದಲ್ಲಿ ಕಾನೂನಿನ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ವಕೀಲೆ ವಿಜಯಲಕ್ಷ್ಮೀ ಮಾತನಾಡಿ, ಪೊಲೀಸರು ತಮ್ಮ ಕುಟುಂಬದವರನ್ನು ಕರೆತಂದು ನಡುರಾತ್ರಿ ಪ್ರತಿಭಟನೆ ನಡೆಸುವುದು ಸರಿಯಲ್ಲ, ಇದಕ್ಕೆ ಪ್ರತಿಯಾಗಿ ವಕೀಲರಿಗೂ ಕುಟುಂಬ ಇರುತ್ತದೆ, ವಕೀಲರು ಕುಟುಂಬ ಸಮೇತ ಬೀದಿಯಲ್ಲಿ ಧರಣಿ ಕುಳಿತರೆ ಏನಾಗುತ್ತದೆ ಎಂದು ಯೋಚಿಸಬೇಕು ಎಂದರು.

ವಕೀಲರ ಸಂಘದ ಅಧ್ಯಕ್ಷ ಶಿವಪ್ರಸಾದ್ ಮಾತಣಾಡಿ, ರಾಜ್ಯದ ಮುಖ್ಯಮಂತ್ರಿಗಳು ಸಹ ವಕೀಲರಾಗಿದ್ದಾರೆ, ಅವರಿಗೆ ವಕೀಲರ ಭಾವನೆ ಏನೆಂದು ಗೊತ್ತು, ಪೊಲೀಸರ ಅವೈಜ್ಞಾನಿಕ ನಡೆಗೆ ತಕ್ಷಣ ಕ್ರಮ ಕೈಗೊಳ್ಳಬೇಕು, ಇಲ್ಲವಾದಲ್ಲಿ ವಕೀಲರು ಉಗ್ರ ಪ್ರತಿಭಟನೆಗೆ ಇಳಿಯಬೇಕಾಗುತ್ತದೆ, ಕಾನೂನು ಪಾಲಕರಾದ ವಕೀಲರು ಪ್ರಾರಂಭಿಕ ಹಂತದಲ್ಲಿ ಉಗ್ರ ಪ್ರತಿಭಟನೆ ಬೇಡ ಎಂದು ಸರ್ಕಾರದ ಕ್ರಮವನ್ನು ಎದುರು ನೋಡುತ್ತಿದ್ದೇವೆ, ಸರ್ಕಾರ ಶೀಘ್ರದಲ್ಲೆ ಅಗತ್ಯ ಕ್ರಮ ಜರುಗಿಸಬೇಕು, ಜಿಲ್ಲೆಯವರಾದ ಗೃಹಮಂತ್ರಿಗಳು ಈ ನಿಟ್ಟಿನಲ್ಲಿ ಸ್ಪಂದಿಸಬೇಕು, ಅಗತ್ಯ ಕ್ರಮವಾಗದೆ ಇದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದರು. ವಕೀಲರಾದ ಗುಡ್ಡಯ್ಯ, ರವಿಚಂದ್ರ, ಸತ್ಯನಾರಾಯಣ ಒಡೆಯರ್, ಹುಚ್ಚೇಗೌಡ, ರೆಹಮಾನ್, ಲಿಂಗರಾಜು, ಸಿಂಗಯ್ಯ, ಕುಮಾರ ಸ್ವಾಮಿ, ರಂಗಸ್ವಾಮಿ, ತನ್ವೀರ್ ಅಹಮದ್, ಮಂಜುನಾಥ, ಲೋಕೇಶ ಇತರರು ಇದ್ದರು. ಗ್ರೇಡ್-2 ತಹಶೀಲ್ದಾರ್ ಯೋಗೀಶ್ ಮೂಲಕ ರಾಜ್ಯಸರ್ಕಾರಕ್ಕೆ ಮನವಿ ಸಲ್ಲಿಸಿದರು.

Get real time updates directly on you device, subscribe now.

Comments are closed.

error: Content is protected !!