45 ಸಾವಿರ ಪುಸ್ತಕಗಳ ಉಳಿವಿಗೆ ಬೇಕಿದೆ ಲೈಬ್ರರಿ

ಕೊರಟಗೆರೆ ಪಟ್ಟಣದಲ್ಲಿ ಸೌಲಭ್ಯಗಳಿಲ್ಲದೆ ನರಳುತ್ತಿದೆ ಗ್ರಂಥಾಲಯ

79

Get real time updates directly on you device, subscribe now.


ನರಸಿಂಹಮೂರ್ತಿ
ಕೊರಟಗೆರೆ: ಮಾಹಿತಿ ಮತ್ತು ತಂತ್ರಜ್ಞಾನ ಯುಗದಲ್ಲಿ ಗ್ರಂಥಾಲಯದತ್ತ ಯುವ ಜನತೆ ಆಕರ್ಷಿತರಾಗುತ್ತಿದ್ದಾರೆ, ಇಂತಹ ಸಂದರ್ಭದಲ್ಲಿ ಜ್ಞಾನರ್ಜನೆ ಕೇಂದ್ರವಾಗಬೇಕಿದ್ದ ಸಾರ್ವಜನಿಕ ಗ್ರಂಥಾಲಯಗಳು ಸರ್ಕಾರದ ನಿರ್ಲಕ್ಷ್ಯದಿಂದ ತನ್ನ ಅಸ್ತಿತ್ವ ಕಳೆದುಕೊಳ್ಳುವಂತಾಗಿದೆ.
ಕೊರಟಗೆರೆ ಪಟ್ಟಣದ ಅಂಬೇಡ್ಕರ್ ಭವನ ಪಕ್ಕದಲ್ಲಿರುವ ಸಾರ್ವಜನಿಕ ಗ್ರಂಥಾಲಯಕ್ಕೆ ಒಮ್ಮೆ ಭೇಟಿ ನೀಡಿದರೆ ಇಲ್ಲಿನ ಅವ್ಯವಸ್ಥೆಗಳ ಸಾಕ್ಷಾತ್ ದರ್ಶನವಾಗುತ್ತದೆ, ಹೆಸರಿಗೊಂದು ಕಟ್ಟಡವಿದ್ದು, ಅದು ಕೂಡ ಶಿಥಿಲವಾಗಿದೆ, ಗ್ರಂಥಾಲಯದ ಕಟ್ಟಡ ಪುರಾತನ ಕಾಲದ ಅವಧಿಯಲ್ಲಿ ನಿರ್ಮಾಣಗೊಂಡಿದ್ದು, ತಾಲ್ಲೂಕು ಕೇಂದ್ರವಾದ ಕೊರಟಗೆರೆ ನಗರದಲ್ಲಿ ಸುಸಜ್ಜಿತ ಕಟ್ಟಡ ಇಲ್ಲದಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿ ಎಂಬುದು ಸಾರ್ವಜನಿಕರು ಮಾತಾಗಿದೆ.

ಈ ಗ್ರಂಥಾಲಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮತ್ತು ಕಥೆ, ಕಾದಂಬರಿ, ಇನ್ನೂಇತರೆ ವಿಷಯದ ಸಾವಿರಾರು ಪುಸ್ತಕಗಳು ಸೇರಿದಂತೆ ಅನೇಕ ಕನ್ನಡ, ಇಂಗ್ಲಿಷ್ ಸೇರಿದಂತೆ ಇತರೆ ದಿನಪತ್ರಿಕೆಗಳು ಇದ್ದರು ಸಹ ಗ್ರಂಥಾಲಯ ಕಿರಿದಾಗಿರುವುದು ಒಂದೆಡೆಯಾದರೆ ಕಬೋರ್ಡ್ ಸಮಸ್ಯೆಯಿಂದ ಲಕ್ಷಾಂತರ ಪುಸ್ತಕಗಳು ಚೀಲದಲ್ಲೇ ಉಳಿದಿದೆ, ಆದ್ದರಿಂದ ಓದುಗರು ಗ್ರಂಥಾಲಯದತ್ತ ಮುಖ ಮಾಡಲು ಹಿಂಜರಿಯುವಂತಾಗಿದೆ.
ಸಾರ್ವಜನಿಕ ಗ್ರಂಥಾಲಯ ಮಳೆಯಿಂದ ಅಸ್ತಿತ್ವಕ್ಕಾಗಿ ಹೋರಾಟ ನಡೆಸುತ್ತಿದೆ, ಮತ್ತೊಂದೆಡೆ ಮಳೆ ಜೋರಾಗಿ ಬಿದ್ದರೆ ಎಲ್ಲಿ ಕುಸಿದು ಬೀಳುತ್ತದೆ ಎಂಬ ಆತಂಕ ಬಂದೊದಗಿದೆ, ಮಳೆ ಬಂದರೆ ಗ್ರಂಥಾಲಯ ಬಹುತೇಕ ಸೋರುತ್ತದೆ, ಇಲ್ಲಿರುವ ಬೆಲೆ ಬಾಳುವ ಪುಸ್ತಗಳನ್ನು ಸಂರಕ್ಷಣೆ ಮಾಡುವುದೇ ಸಿಬ್ಬಂದಿಗೆ ದೊಡ್ಡ ಸವಾಲಿನ ಕೆಲಸವಾಗಿದೆ.
ನಗರ ಪ್ರದೇಶದಲ್ಲೇ ಶೋಚನೀಯ

ಉತ್ತಮ ಸಾಹಿತಿಗಳು, ಬರಹಗಾರರ ಪುಸ್ತಕಗಳು ಇಂಟರ್ ನೆಟ್ ನಲ್ಲಿ ದೊರೆಯುತ್ತಿರುವುದರಿಂದ ಕಾಲ ಕ್ರಮೇಣ ಸಾರ್ವಜನಿಕ ಗ್ರಂಥಾಲಯಗಳನ್ನು ಗ್ರಾಮ ಪಂಚಾಯಿತಿಗಳಿಗೆ ನಿರ್ವಹಣೆಗೆ ನೀಡಿ ಅದರ ಮೂಲಕ ಅಭಿವೃದ್ಧಿಗೊಳಿಸುವ ಪ್ರಯತ್ನ ನಡೆಯುತ್ತಿದೆ, ಸಾರ್ವಜನಿಕರ ಗ್ರಂಥಾಲಯಗಳನ್ನು ಆಕರ್ಷಿಸಲು ಡಿಜಿಟಲ್ ಲೈಬ್ರರಿ ಮಾಡಲು ಪ್ರಯತ್ನಗಳು ಸಾಗಿದೆ, ಆದರೆ ನಗರ ಪ್ರದೇಶದಲ್ಲಿ ಸಾರ್ವಜನಿಕ ಗ್ರಂಥಾಲಯದ ಸ್ಥಿತಿ ಮಾತ್ರ ಬದಲಾವಣೆ ಆಗದಿರುವುದು ದುರಂತವೇ ಸರಿ.
ಶಿಥಿಲವಾಗಿರುವ ಸೀಲಿಂಗ್

ಒಂದೆಡೆ ಮಳೆಯಿಂದ ಸಾರ್ವಜನಿಕ ಗ್ರಂಥಾಲಯದ ಗೋಡೆಗಳು ನೆನೆದು ತನ್ನ ಸ್ವರೂಪ ಕಳೆದುಕೊಂಡಿದ್ದು, ಚಾವಣಿಯಲ್ಲಿ ನಿರುಪಯುಕ್ತ ಗಿಡ ಗೆಂಟೆಗಳು ಬೆಳೆದು ನಿಂತಿದೆ, ಹೊರಭಾಗ ಪಾಚಿ ಆವರಿಸಿ ಕಟ್ಟಡ ಯಾವ ಕ್ಷಣದಲ್ಲಿ ಕುಸಿದು ಬೀಳುತ್ತದೆ ಎಂಬ ಆತಂಕ ಓದುಗರಲ್ಲಿ ಮನೆ ಮಾಡಿದೆ, ಗ್ರಂಥಾಲಯದಲ್ಲಿ ಸೇವೆ ಸಲ್ಲಿಸುವ ಸಿಬ್ಬಂದಿ ಸಹ ಶಿಥಿಲ ವ್ಯವಸ್ಥೆಯಲ್ಲಿರುವ ಗ್ರಂಥಾಲಯ ನೋಡಿಕೊಂಡು ಆತಂಕದಲ್ಲಿ ಕರ್ತವ್ಯ ನಿರ್ವಹಿಸುವಂತಾಗಿದೆ.
ಮೀನಮೇಷ ಏಕೆ

ರಾಜ್ಯ ಸೇರಿದಂತೆ ಜಿಲ್ಲೆಯಲ್ಲಿ ವ್ಯಾಪಾಕವಾಗಿ ಮಳೆ ಬೀಳುತ್ತಿದೆ, ಮಳೆಯ ಆರ್ಭಟಕ್ಕೆ ಕಳೆದ ವರ್ಷ ತಾಲ್ಲೂಕಿನಲ್ಲಿ ಹಲವು ಮನೆಗಳು ಕುಸಿದು ದಿನ ಬಳಕೆ ವಸ್ತುಗಳು ಮಣ್ಣು ಪಾಲಾಗಿತ್ತು, ಇಷ್ಟೆಲ್ಲಾ ಅನಾಹುತ ಸಂಭವಿಸಿದ್ದರು ಸಾರ್ವಜನಿಕ ಗ್ರಂಥಾಲಯ ಅಭಿವೃದ್ಧಿಗೊಳಿಸಲು ಸರ್ಕಾರ ಮತ್ತು ಸಂಬಂಧಿಸಿದ ಇಲಾಖಾಧಿಕಾರಿಗಳು ಯಾಕೆ ವಿಳಂಬ ಮಾಡುತಿದ್ದಾರೆ ಎಂದು ಪ್ರಶ್ನಿಸುವಂತಾಗಿದೆ.

ಅಧಿಕಾರಿಗಳಿಗೆ ಕಾಣದ ಗ್ರಂಥಾಲಯ
ರಾಜ್ಯ ಸೇರಿದಂತೆ ಜಿಲ್ಲೆಯಲ್ಲಿ ವ್ಯಾಪಾಕವಾಗಿ ಮಳೆ ಬೀಳುತ್ತಿದೆ, ಮಳೆಯ ಆರ್ಭಟಕ್ಕೆ ಕಳೆದ ವರ್ಷ ತಾಲ್ಲೂಕಿನಲ್ಲಿ ಹಲವು ಮನೆಗಳು ಕುಸಿದು ದಿನಬಳಕೆ ವಸ್ತುಗಳು ಮಣ್ಣು ಪಾಲಾಗಿತ್ತು, ಇಷ್ಟೆಲ್ಲಾ ಅವಾಂತರ ಸೃಷಿಯಾದರೂ ಅಧಿಕಾರಿಗಳು ಮಾತ್ರ ಗಾಢ ನಿದ್ರೆಗೆ ಜಾರಿರುವುದು ಅವರ ಈ ನಿರ್ಲಕ್ಷ್ಯತೆಗೆ ಹಿಡಿದ ಕೈಗನ್ನಡಿಯಾಗಿದೆ, ಸಾರ್ವಜನಿಕ ಗ್ರಂಥಾಲಯ ಅಭಿವೃದ್ಧಿಗೊಳಿಸಲು ತಾಲ್ಲೂಕು ಮಟ್ಟದ ಇಲಾಖಾಧಿಕಾರಿಗಳ ಗಮನಕ್ಕೆ ಬಂದಿಲ್ವಾ? ಈ ಸಮಸ್ಯೆ ತಿಳಿದಿದ್ದರೂ ಕೂಡ ಜಾಣ ಕುರುಡು ವರ್ತನೆ ಮಾಡುತ್ತಿದ್ದಾರಾ ಎಂಬುದು ಸಾರ್ವಜನಿಕ ವಲಯದಲ್ಲಿ ಮೂಡಿ ಬಂದ ಯಕ್ಷ ಪ್ರಶ್ನೆಯಾಗಿದೆ.

ಮೂಲಭೂತ ಸೌಕರ್ಯ ಒದಗಿಸಲು ಮನವಿ
ಪಟ್ಟಣದ ಸಾರ್ವಜನಿಕ ಗ್ರಂಥಾಲಯ ಪ್ರಾರಂಭಿಸಿ 4 ದಶಕ ಕಳೆದಿದೆ, ಈ ಕಟ್ಟಡ ಶಿಥಿಲಾವ್ಯವಸ್ಥೆ ತಲುಪಿದೆ, ಕೊಠಡಿ ಕಿರಿದಾಗಿರುವ ಕಾರಣ ಓದುಗರಿಗೆ ಸಮಸ್ಯೆಯಾಗುತ್ತಿರುವುದು ಒಂದೆಡೆಯಾದರೆ ಕಬೋರ್ಡ್ನಲ್ಲಿ ಅವಶ್ಯಕ ಪುಸ್ತಕಗಳನ್ನು ಜೋಡಿಸಲು ಸ್ಥಳವಕಾಶವಿಲ್ಲ, ಜೊತೆಗೆ ಇಲ್ಲಿನ ಗ್ರಂಥಾಲಯದಲ್ಲಿ ಶೌಚಾಲಯ ಸಹ ಇಲ್ಲ, ನೂತನ ಗ್ರಂಥಾಲಯ ಕಟ್ಟಡ ನಿರ್ಮಿಸಿ ಕೊಡಬೇಕೆಂದು ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಲಾಗಿದೆ.
-ಎಚ್.ಆರ್.ಲಕ್ಷ್ಮೀ, ಗ್ರಂಥ ಪಾಲಕಿ, ಕೊರಟಗೆರೆ.

ಡಿಜಿಟಲ್ ಗ್ರಂಥಾಲಯದ ಅವಶ್ಯಕತೆ ಇದೆ
ಶೈಕ್ಷಣಿಕ ಜಿಲ್ಲೆಗೆ ಹೊಂದಿ ಕೊಂಡಿರುವ ಗೃಹ ಸಚಿವರ ಕ್ಷೇತ್ರದಲ್ಲಿಯೇ ಅಗತ್ಯ ಮೂಲ ಸೌಕರ್ಯವಿಲ್ಲದೆ ಗ್ರಂಥಾಲಯ ದುಸ್ಥಿತಿಗೆ ತಲುಪಿದೆ, ಪದವಿ ಪಡೆದು ಅದೆಷ್ಟೋ ಭವಿಷ್ಯದ ಕನಸು ಹೊತ್ತ ಯುವಕ, ಯುವತಿಯರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ಉಪಯುಕ್ತ ಪುಸ್ತಕಗಳು ದೊರೆಯದೆ ಹತಾಶರಾಗಿದ್ದಾರೆ, ಸಂಬಂಧಪಟ್ಟ ಇಲಾಖೆ ಇತ್ತ ಗಮನ ಹರಿಸಿ ಸುಸಜ್ಜಿತ ಡಿಜಿಟಲ್ ಗ್ರಂಥಾಲಯದ ಸೌಲಭ್ಯ ನಿರ್ಮಿಸಿಕೊಟ್ಟರೆ ಅನೇಕ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೆ, ಓದುಗರಿಗೆ ಅನುಕೂಲವಾಗಲಿದೆ.
ಮಾರುತಿ.ಎನ್.ಸಿ, ಯುವ ಮುಖಂಡ, ಕೊರಟಗೆರೆ.

Get real time updates directly on you device, subscribe now.

Comments are closed.

error: Content is protected !!