ಗ್ರಾಪಂ ಸಿಬ್ಬಂದಿ ದೌರ್ಜನ್ಯ ಖಂಡಿಸಿ ಪ್ರತಿಭಟನೆ

109

Get real time updates directly on you device, subscribe now.


ಕುಣಿಗಲ್: ಗ್ರಾಮ ಪಂಚಾಯಿತಿ ಸಿಬ್ಬಂದಿಯೊಬ್ಬರಿಂದ ತಮ್ಮ ಮೇಲೆ ದೌರ್ಜನ್ಯ ಪ್ರಕರಣದ ಬೆದರಿಕೆ ಹಾಕಿ ಮಾನಸಿಕ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಗ್ರಾಪಂ ಮಾಜಿ ಅಧ್ಯಕ್ಷೆ, ಆಕೆಯ ಪತಿ ಸಂಬಂಧಿಕರು ನ್ಯಾಯಕ್ಕಾಗಿ ತಾಲೂಕು ಪಂಚಾಯಿತಿ ಕಚೇರಿ ಮುಂದೆ ವಿಷದ ಬಾಟಲಿ ಸಮೇತ ಶುಕ್ರವಾರ ಪ್ರತಿಭಟನೆ ನಡೆಸಿದರು.

ತಾಲೂಕಿನ ಉಜ್ಜಿನಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷೆ, ಹಾಲಿ ಸದಸ್ಯೆ ಸುಮಲತ, ಪತಿ ಚನ್ನೇಗೌಡ ಇತರರು ಶುಕ್ರವಾರ ತಾಪಂ ಕಚೇರಿಗೆ ಆಗಮಿಸಿ ಕಚೇರಿ ಮುಖ್ಯ ದ್ವಾರದಲ್ಲಿ ವಿಷದ ಬಾಟಲಿ ಹಿಡಿದು ಪ್ರತಿಭಟನೆ ಆರಂಭಿಸಿದರು, ಚನ್ನೇಗೌಡ ಮಾತನಾಡಿ ಈ ಹಿಂದೆ ಉಜ್ಜಿನಿ ಗ್ರಾಪಂನಲ್ಲಿ ಕೆಲಸ ಮಾಡುತ್ತಿದ್ದ ಪ.ಜಾತಿ ಜನಾಂಗಕ್ಕೆ ದ್ವಿತೀಯ ದರ್ಜೆ ಸಹಾಯಕಿ ಭಾಗ್ಯಲಕ್ಷ್ಮೀ ಎಂಬಾಕೆ ಗ್ರಾಪಂನಲ್ಲಿ ವ್ಯಾಪಕ ಅಕ್ರಮ ನಡೆಸಿದ್ದು ಇಲಾಖೆಗೆ ಹೆಚ್ಚುವರಿ ಹಣ ಪಡೆದಿದ್ದಲ್ಲದೆ, ಗ್ರಾಪಂಗೆ ಹಣ ಕಡಿಮೆ ಸಂದಾಯ ಮಾಡಿದ್ದು ಈಬಗ್ಗೆ ತಾವು ದಾಖಲೆ ಸಮೇತ ಕ್ರಮಕ್ಕೆ ಒತ್ತಾಯಿಸುತ್ತೇನೆ ಎಂದು ತಿಳಿದು ಗ್ರಾಮದ ಕೆಲ ಕಾಂಗ್ರೆಸ್ ಮುಖಂಡರೊಂದಿಗೆ ಶಾಮೀಲಾಗಿ ನನ್ನ ತೇಜೋವಧೆ ಮಾಡಲು, ಮಾನಸಿಕ ಕಿರುಕುಳ ನೀಡಲು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ಕಳೆದ ಜೂನ್ ನಲ್ಲಿ ದೂರು ನೀಡಿದ್ದರು, ಅದರ ವಿಚಾರಣೆ ಪೂರ್ಣಗೊಂಡಿತ್ತು, ಆದರೆ ಕಳೆದ ಬುಧವಾರ ತಾವು ಚನ್ನಪಟ್ಟಣದಲ್ಲಿದ್ದು ಈಕೆಗೆ ಕೊಲೆ ಬೆದರಿಕೆ ಹಾಕಿರುವುದಾಗಿ ತಾಪಂ ಇಒ ಮೂಲಕ ನನಗೆ ಕರೆ ಮಾಡಿಸಿದ್ದು ಅನಗತ್ಯವಾಗಿ ನನ್ನ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿ ತೇಜೋವಧೆ ಮಾಡಲು ಮುಂದಾಗಿದ್ದಾರೆ, ಪ್ರಕರಣ ಸತ್ಯಾಸತ್ಯತೆ ತನಿಖೆ ನಡೆಸಿ ವಿನಾಕಾರಣ ಗೊಂದಲ ಸೃಷ್ಟಿಸಿರುವ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳಬೇಕು, ಅಲ್ಲಿವರೆಗೂ ಇಲ್ಲಿಯೇ ಧರಣಿ ಮಾಡುತ್ತೇನೆ, ನ್ಯಾಯ ಸಿಗದೆ ಇದ್ದಲ್ಲಿ ವಿಷ ಕುಡಿಯುತ್ತೇನೆ ಎಂದು ಧರಣಿ ಮುಂದುವರೆಸಿದರು.

ನರೇಗ ಸಹಾಯಕ ನಿರ್ದೇಶಕ ಸುರೇಶ್ ಆಗಮಿಸಿ ಧರಣಿ ನಿರತರ ಮನಒಲಿಸಲು ಯತ್ನಿಸಿದರೂ ಭಾಗ್ಯಲಕ್ಷ್ಮಿಯನ್ನು ಕರೆಸಿ ವಿಚಾರಣೆ ಮಾಡುವಂತೆ ಪಟ್ಟು ಹಿಡಿದರು, ಸಮಸ್ಯೆ ಇತ್ಯರ್ಥಕ್ಕೆ ಭಾಗ್ಯಲಕ್ಷ್ಮಿಯನ್ನು ಕಚೇರಿಗೆ ಕರೆಸಿದಾಗ ಚನ್ನೇಗೌಡರು ಮಾಡಿರುವ ಅರೋಪವನ್ನು ಸಾರಸಗಾಟಾಗಿ ತಳ್ಳಿಹಾಕಿ ತಾವು ಉಜ್ಜಿನಿ ಗ್ರಾಪಂನಲ್ಲಿ ಕೆಲಸ ಮಾಡುವಾಗ ಅಂದಿನ ಅಧ್ಯಕ್ಷರ ಪತಿ ಇ- ಖಾತೆಗೆ ಹೆಚ್ಚುವರಿಗೆ ಹಣ ಕೇಳುವಂತೆ, ವಸೂಲು ಮಾಡಿ ಕೊಡುವಂತೆ ಹೇಳುತ್ತಿದ್ದರು, ನಾವು ಕೇಳದ ಕಾರಣ ವಿನಾಕಾರಣ ನಮಗೆ ಮಾನಸಿಕ ಕಿರುಕುಳ ನೀಡಿದ್ದರು, ತಾಪಂ ಇಒ ಗಮನಕ್ಕೆ ತಂದು ಬೇರೆ ಕಡೆಗೆ ವರ್ಗಾಯಿಸುವಂತೆ ಹಾಗೂ ನಮಗೆ ವಹಿಸಿದ ಕೆಲಸವನ್ನು ನ್ಯಾಯ ಯುತವಾಗಿ ಮಾಡುವ ವಾತಾವರಣ ಕಲ್ಪಿಸಿ, ಅಧ್ಯಕ್ಷರ ಪತಿ ಹಸ್ತಿಕ್ಷೇಪ ತಪ್ಪಿಸಬೇಕೆಂದು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿದ್ದೆ, ಇದಕ್ಕೆ ಕಳೆದ ಬುಧವಾರ ಸಂಜೆ ಹು.ದುರ್ಗದಲ್ಲಿ ಸಿಕ್ಕ ಮಾಜಿ ಅಧ್ಯಕ್ಷೆಯ ಪತಿ ಬೆದರಿಕೆ ಹಾಕಿದ್ದರು, ಇದನ್ನು ಇಒ ಗಮನಕ್ಕೆ ತಂದಿದ್ದೇನೆ ಎಂದರು.

ಸ್ಥಳಕ್ಕೆ ಆಗಮಿಸಿದ ಇಒ ಜೋಸೇಫ್, ಎರಡೂ ಕಡೆಯವರೊಂದಿಗೆ ಸಭೆ ಸೇರಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಮೇರೆಗೆ ಪ್ರತಿಭಟನೆ ಹಿಂಪಡೆದರು.

Get real time updates directly on you device, subscribe now.

Comments are closed.

error: Content is protected !!