ಮಧುಗಿರಿ: ಸತ್ತವರ ಹೆಸರಿನಲ್ಲಿ ವಯಸ್ಸಿನ ಧೃಡೀಕರಣ ಪತ್ರ ನೀಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಹಿರಿಯ ವೈದ್ಯರಿಬ್ಬರನ್ನು ಸರ್ಕಾರದ ಅಧೀನ ಕಾರ್ಯದರ್ಶಿ ಪಿ.ಚಂದ್ರಕಾಂತ ಅವರು ಅಮಾನತು ಮಾಡಿ ಆದೇಶಿಸಿದ್ದಾರೆ.
ಸಾರ್ವಜನಿಕ ಆಸ್ಪತ್ರೆಯ ಹಿರಿಯ ಕೀಲು ಮೂಳೆ ತಜ್ಞ ಡಾ.ಮಹೇತ್ ಸಿಂಗ್ ಮತ್ತು ಫಿಜಿಷಿಯನ್ ಡಾ.ಬಿ.ಪುರುಷೋತ್ತಮ್ ಅಮಾನತುಗೊಂಡ ವೈದ್ಯರು, ಇವರು ಹಣ ಪಡೆದು ಅಂಗವಿಕಲ ಪ್ರಮಾಣ ಪತ್ರ ಮತ್ತು ವಯಸ್ಸಿನ ದೃಢೀಕರಣ ಪ್ರಮಾಣ ಪತ್ರಗಳನ್ನು ನೀಡುತ್ತಿರುವುದಾಗಿ 2022ರ ಡಿ.27 ರಂದು ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, 2022 ನ. 05 ಮತ್ತು 29 ರಂದು ಹನುಮಂತರಾಯಪ್ಪ ಎಂಬುವವರಿಗೆ ವಯಸ್ಸಿನ ದೃಢೀಕರಣ ಪತ್ರ ನೀಡಿದ್ದು, ಮಧುಗಿರಿ ಸಾರ್ವಜನಿಕ ಆಸ್ಪತ್ರೆ ಕಚೇರಿಯಲ್ಲಿ ವಯಸ್ಸಿನ ದೃಢೀಕರಣ ಪತ್ರ ವಿತರಿಸುವ ಹಾಗೂ ಪ್ರಮಾಣ ಪತ್ರದ ನಕಲು ಪ್ರತಿಯಲ್ಲಿನ ಸಹಿ, ವೈದ್ಯರ ಸಹಿಯೊಂದಿಗೆ ಮೇಲ್ನೋಟಕ್ಕೆ ತಾಳೆ ಹೊಂದುತ್ತಿರುವುದರಿಂದ ಸದರಿ ವೈದ್ಯರ ಕರ್ತವ್ಯ ಲೋಪ ಮೇಲ್ನೋಟಕ್ಕೆ ಕಂಡು ಬರುತ್ತಿರುವುದರಿಂದ ಮುಖ್ಯ ಜಾಗೃತಾಧಿಕಾರಿಗಳ ತನಿಖಾ ವರದಿ ಆಧರಿಸಿ ಡಾ.ಮಹೇಶ್ ಸಿಂಗ್ ಹಾಗೂ ಡಾ.ಬಿ.ಪುರುಷೋತ್ತಮ್ ಇವರ ವಿರುದ್ಧ ಶಿಸ್ತು ಕ್ರಮ ಬಾಕಿ ಇರಿಸಿ ಸೇವೆಯಿಂದ ಅಮಾನತುಗೊಳಿಸುವಂತೆ
ಆಯುಕ್ತರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ಬೆಂಗಳೂರು ರವರು ಶಿಫಾರಸ್ಸಿನೊಂದಿಗೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿರುತ್ತಾರೆ, ಇವರ ಮೇಲಿನ ಆರೋಪವು ಸರ್ಕಾರಿ ನೌಕರರಿಗೆ ತಕ್ಕದಲ್ಲದ ವರ್ತನೆಯಾಗಿರುವುದು ಮೇಲ್ನೋಟಕ್ಕೆ ಕಂಡು ಬರುವುದರಿಂದ ಇವರನ್ನು ಅಮಾನತು ಮಾಡಲಾಗಿದ್ದು, ಡಾ.ಮಹೇಶ್ ಸಿಂಗ್ ಅವರನ್ನು ಹಾವೇರಿ ಜಿಲ್ಲೆಯ ಸವಣೂರು ಸಾರ್ವಜನಿಕ ಆಸ್ಪತ್ರೆಗೆ ಮತ್ತು ಡಾ.ಬಿ.ಪುರುಷೋತ್ತಮ್ ಅವರನ್ನು ಕೆಜಿಎಫ್ ಸಾರ್ವಜನಿಕ ಆಸ್ಪತ್ರೆಗೆ ವರ್ಗಾವಣೆ ಮಾಡಿ ಆದೇಶಿಸಲಾಗಿದೆ.
Comments are closed.